Thursday, June 7, 2012

ಈ ನೋವು ನನಗಿರಲಿ


ಪಟ ಪಟ ಎಂದು ಶುರುವಾಗಿ ಧೋ ಎಂದು ಸುರಿಯುತ್ತಿರುವ ಮಳೆ,  ಮೊದಲು ಒಂದು ಬಕೆಟ್ ತುಂಬಿತು ನಂತರ ಇನ್ನೊಂದು ಬೋಗಣಿ ಮತ್ತೆ ಇನ್ನೊಂದು ಹಂಡೆ ಮನೆಯಲ್ಲಿರುವ ಪಾತ್ರೆ ,ಪಗಡಗಳು ತುಂಬುತ್ತಲೇ ಹೋದವು ಸೋರುತ್ತಿರುವ  ಛತ್ತಿನಿಂದ ಮಳೆನೀರು ಬರುವುದು ಸಾಗಿಯೇ ಇತ್ತು. ಮನೆಯೆಲ್ಲಾ ಕಚಿಪಿಚಿ ಅಮ್ಮ  ಮೊದ ಮೊದಲು  ಸೋರುತ್ತಿರುವ ಜಾಗದೆಲ್ಲೆಡೆ ಪಾತ್ರೆ ಪಗಡಗಳನ್ನು ಇಡುತ್ತಾ ಹೋದವಳು ಈಗ ಅಸಹಾಯಕಳಾಗಿ ಸುಮ್ಮನೆ ನೋಡುತ್ತ ನಿಂತಳು. ಮಣ್ಣಿನ ಮಾಡಿ ಮನೆ ಮಳೆಗಾಲಕ್ಕೆ ಪ್ರತಿ ಸಲ ಈ ಕೆಲಸ ಹಚ್ಚಿಯೇ ತೀರುತ್ತದೆ. ಕೆಳಗೆ ನೆಲಕ್ಕೆ ಹಾಸಿದ್ದ ತಟ್ಟಿನ ಚೀಲಗಳು ಇನ್ನೂ ನೀರು ಹಿಂಗಿಸಲಾರೆ ಎಂದು ಸೋತವು. ಮಾಡಿಗೆ ಕಟ್ಟಿದ್ದ ಪ್ಲಾಸ್ಟಿಕ್ ಚೀಲಗಳು ಸೋರುತ್ತಿದ್ದ ಮಣ್ಣಿನ ಜೊತೆ ಬೀಳುತ್ತಿದ್ದ ಮಣ್ಣಿನ ಭಾರ ತಡೆಯಲಾರದೇ ತಾವೂ ಜೋತಾಡುತ್ತಿದ್ದವು.
ಒಲೆಯ ಮೇಲೆ ನೀರು ಬೀಳಬಾರದೆಂದು ಅಮ್ಮ ರೊಟ್ಟಿ ಹಂಚನ್ನು ಉಲ್ಟಾ ಹಾಕಿದ್ದಳು. ತೊಟ್ಟಿಲಲ್ಲಿ  ಮಲಗಿದ್ದ ತಂಗಿ ದಡಲ್ ಎಂದು ಸದ್ದು ಮಾಡಿದ ಸಿಡಿಲಿಗೆ ಬೆಚ್ಚಿ ಬಿದ್ದು ಅಳತೊಡಗಿದಳು. ಅಮ್ಮನ ಕಂಕುಳಲ್ಲಿದ್ದ ತಮ್ಮ, ತಂಗಿ ಅಳುವುದನ್ನು ಕಂಡು ತಾನೂ ಶುರುಮಾಡಿದ. ನಾನು ತಟ್ಟನೆ ತೊಟ್ಟಿಲ ಕಡೆ ಜಿಗಿದು ತಂಗಿಯ ತೂಗಹತ್ತಿದೆ. ಆದರೂ ಶಬ್ಬೂ ಅಳುವುದನ್ನು ನಿಲ್ಲಿಸಲಿಲ್ಲ.
ಜೋರಾಗಿ ತೂಗೋ ಶಬ್ಬೂ ಅಳೋದು ಕೆಳ್ಸೋದಿಲ್ಲೇನು? ಅಮ್ಮ ನನಗೆ ಹೇಳಿದವಳೇ ತಮ್ಮನ್ನ ನನ್ನ ತೊಡೆ ಮೇಲೆ ಮಲಗಿಸಿ  ಮನೆ ಸ್ವಚ್ಚ  ಮಾಡುತ್ತ  ಕುಳಿತಳು.
***
ನಮ್ಮ ಮನೇಲಿ ನಮ್ಮ ಅಬ್ಬಾ, ಅಮ್ಮಿಗೆ  ನಾವು ಮೂವರು ಮಕ್ಕಳು. ನಾನೇ ದೊಡ್ಡವನು.  ಅಬ್ಬಾನಿಗೆ ನಾನು ಪ್ರೀತಿಯ ರಾಜಕುಮಾರ ಹಂಗಾಗೇ ನನಗೆ ಶಹಜಹಾನ್ ಎಂದೆಸರಿಟ್ಟಿದ್ದ . ನಮ್ಮ ಪುಟ್ಟ ರಾಜ್ಯಕ್ಕೆ ನಾನೇ ರಾಜಕುಮಾರ. ನಾನು ಹುಟ್ಟಿದಾಗ ಹುಲಕೋಟಿ ಮಿಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದ ಅಬ್ಬಾ ರಂಜಾನ್, ಬಕ್ರೀದ್  ಹಬ್ಬದೂಟಕ್ಕೆ ಮನೆಗೆ ಬರುತ್ತಿದ್ದ. ಅಬ್ಬಾನ ಗೆಳೆಯರು ವರ್ಷವೆಲ್ಲಾ ಸುರ್ಕುಂಬಾದ ಬಗ್ಗೆ ಹೊಗಳುತ್ತಿದ್ದರು.
ನನ್ನ ನೆನಪಿನ ಮೊದಲ ರಂಜಾನ್ ಅದು ಮನೆಯ ತುಂಬೆಲ್ಲಾ ಸಡಗರ. ಅಬ್ಬಾ ಹಚ್ಚಿದ್ದ ಅತ್ತರಿನ ಸುವಾಸನೆ ಮನೆಯ ತುಂಬೆಲ್ಲಾ ಹರಡಿಕೊಂಡಿತ್ತು. ಅಮ್ಮಿ  ರಾತ್ರಿಯೆಲ್ಲಾ ಕುಳಿತು ನನ್ನ ಕೈಗೆ ಮೆಹಂದಿ ಹಚ್ಚಿ ತಾನೂ ಚೆಂದದ ಚಿತ್ತಾರವನ್ನು ಬಿಡಿಸಿಕೊಂಡಿದ್ದಳು. ಅಮ್ಮಿ  ಮಿರ ಮಿರನೆ ಮಿಂಚುವ ಕೆಂಪು ಸೀರೆ ಉಟ್ಟುಕೊಂಡಿದ್ದಳು. ಅಮ್ಮಿಯ ಕೈಬಳೆಯ ಸದ್ದು ಮನೆಯ ತುಂಬೆಲ್ಲಾ ತುಂಬಿತ್ತು. ಅಮ್ಮಿ ಆಗಾಗ ನಮ್ಮ ಷಹಜಾನ ಹುಡುಗಿಯಾಗಿದ್ರೆ ಚೆಂದಿತ್ತು. ಅವಾಗ ಚೆಂದದ ಬಟ್ಟೆ ಹಾಕಿ ಕೈತುಂಬಾ ಬಳೆ ಹಾಕಿ ಆಭರಣಗಳನ್ನು ಹಾಕಿ ನನ್ನ ಮಗಳನ್ನು ಸಿಂಗರಿಸುತ್ತಿದ್ದೆ ಎನ್ನುತ್ತಿದ್ದಳು. ಹಾಗೆಲ್ಲ ಅಂದಾಗ ನಾನು ಸಿಟ್ಟಾಗಿ  ದೂರ ಸರಿಯುತ್ತಿದ್ದರೆ ನಾಚ್ಕೋಂತಾನೇ ನನ್ನ ಷಾಜು ಅನ್ನುತ್ತಾ  ಮುದ್ದುಮಾಡುತ್ತಿದ್ದಳು.
ಅಬ್ಬಾ ಮತ್ತು ನಾನು ನಮಾಜಿಗೆ  ಈದ್ಗಾಕ್ಕೆ ಆಟೋದಲ್ಲಿ ಹೋಗುತ್ತಿದ್ದರೆ ನಮ್ಮ ಪಕ್ಕದ ಮನೆಯ ಅಬ್ಬಾಸ್ ತನ್ನಪ್ಪನ ಜೊತೆ ಸೈಕಲ್ನಲ್ಲಿ ಹೋಗುತ್ತಿದ್ದ. ಈದ್ಗಾದಲ್ಲಿ ಬಣ್ಣ ಬಣ್ಣದ ಬಲೂನ್ಗಳನ್ನು  ಮಾರ್ತಾ ಇದ್ರು, ನಮಾಜ್ ಮುಗಿಸಿದ ನಂತರ ಅಬ್ಬಾನಿಗೆ  ಹೇಳಿದೆ.
ಅಬ್ಬಾ ನನ್ನ  ಮೊಣಕಾಲು ಬಹಳ ನೋಯ್ತಾ ಇದೆ.
ಹೌದಾ ಏನಾಯ್ತು ? ಅಬ್ಬಾ ಕೇಳಿದ.
ನನಗೊತ್ತಿಲ್ಲ..
ಆಯ್ತು  ಇವತ್ತೇ ಡಾಕ್ಟರ್ ಗೆ ತೋರಿಸೋಣ.
ಮನೆಗೆ ಬಂದ ಮೇಲೆ ಹಬ್ಬದ ಸಡಗರದಲ್ಲಿ ನೋವು ಮರೆತೋಯ್ತು.
ಮುಂದಿನ ರಮಜಾನ್ ಹೊತ್ತಿಗೆ  ನನ್ನ ತಮ್ಮ ಸಮೀರ್ ಹುಟ್ಟಿದ್ದ. ಆದರೆ ಈ ಸಲದ ರಮಜಾನ್ ನಲ್ಲಿ ಅಬ್ಬಾನ ಗೆಳೆಯರು ಯಾರೂ ಬರಲಿಲ್ಲ. ಮಿಲ್ ನ ಮುಚ್ತಾರಂತೆ ಅಂತ ಅಬ್ಬಾ ಅಮ್ಮಿಯ ಮುಂದೆ ಹೇಳೋದು ಕೇಳಿಸುತ್ತಿತ್ತು. ಅದ್ಯಾಕೆ ಮುಚ್ತಾರೆ ನನಗಂತೂ ಗೊತ್ತಾಗಲಿಲ್ಲ. ಅಮ್ಮಿ ಅಬ್ಬಾಗೆ ಸಮಾಧಾನ ಮಾಡ್ತಾನೇ ಇದ್ದಳು. ಅಲ್ಲಾ ನಮ್ಮ ಕೈ ಬಿಡೋದಿಲ್ಲ. ಯಾಕ ಚಿಂತಿ ಮಾಡ್ತೀರಿ? ಬಂದಿದ್ದನ್ನ ಎದುರಿಸೋಣ ಅಂದಳು. ಆದರೂ, ಅಪ್ಪ ಗೊಣಗಾಡ್ತಲೇ ಇದ್ದ. ಇನ್ನೊಂದು ದಿನ ನಾನು ಅಮ್ಮಿ, ಅಬ್ಬಾ ಸಿನಿಮಾ ನೋಡೋದಿಕ್ಕೆ ಹೋಗ್ತಾ ಇದ್ವಿ. ಆಟೋ ಸಿಗಲಿಲ್ಲ ಅಂತಾ ಅಬ್ಬಾ ಟಾಂಗಾದಲ್ಲಿ ಕರೆದುಕೊಂಡು ಹೊಂಟಿದ್ದರು. ಅವತ್ತೂ ಹೇಳಿದೆ ಅಬ್ಬಾ ನನ್ನ  ಮೊಣಕಾಲು ನೋಯ್ತಾ ಇದೆ. ಅಬ್ಬಾ ಹೇಳಿದ ಮರತೇ ಹೋಗಿತ್ತು ಇನ್ನೊಂದು ದಿನ ಡಾಕ್ಟರ್ಗೆ ತೋರಿಸಿ  ಎಕ್ಸ್ರೇ ತೆಗೆಸೋಣ ಎಂದ.
ಮುಂದೊಂದು ದಿನ ಸಂಜೆ ಅಬ್ಬಾ ಬೇಗನೆ ಮನೆಗೆ ಬಂದ. ಅಮ್ಮ ಅಡಿಗೆ ಮಾಡ್ತಾ ಇದ್ಲು. ಏನ್ ಮಾಡ್ತಾ ಇದಿಯಾ? ಬಾ ಇಲ್ಲಿ  ಎಂದು ಅಮ್ಮಿನ ಕರೆದ.  ಅಡಿಗೆ ಮನೇಲಿ ಇದ್ದ ಅಮ್ಮಿಗೆ ಅದು ಕೇಳಿಸಲಿಲ್ಲ. ಸಿಟ್ಟಿಗೆದ್ದ  ಅಬ್ಬಾ ಜೋರಾಗಿ ಕೂಗಿ ಕರೆದ. ನಮ್ಮ ಮನೇಲಿ ಅಷ್ಟು ಜೋರಾಗಿ ಯಾರೂ ಮಾತನಾಡಿರಲಿಲ್ಲ. ಅಮ್ಮಿ ದ್ವನಿ ಕೇಳಿದವಳೇ  ಓಡಿ ಬಂದಳು. ಯಾಕ?  ಏನಾಯ್ತು? ಅಮ್ಮನ ಪ್ರಶ್ನೆಗೆ ಮಿಲ್ ಬಂದಾಯ್ತು ಎಂದ ಅಬ್ಬಾ.
***
ಶಾಲೇಲಿ ಪುಟ್ಬಾಲ್ ಆಡ್ತಾ ಇದ್ರು. ನಾನೂ ಹೋದೆ ಆದರೆ ನನ್ನ ಅವರು ಸೇರಿಸಿಕೊಳ್ಳಲಿಲ್ಲ. ನನಗೂ ಆಡುವ ಆಸೆ ಇತ್ತು. ಅದು ಅವರೇ ತಂದ  ಪುಟ್ಬಾಲ್   ಆಗಿತ್ತು. ಅವರಿಗಿಷ್ಟ ಬಂದವರಷ್ಟೇ ಸೇರಿಕೊಂಡು ಆಡ್ತಾ ಇದ್ರು. ನಾನಂದುಕೊಂಡೆ ನಾನೂ ಒಂದು ಪುಟ್ಬಾಲ್ ತರ್ತೀನಿ ಆಗ ನೀವೂ ನನ್ನ  ಜೊತೆ ಆಡೋಕೆ ಬಂದೇ ಬರ್ತೀರಿ ಅಂತ.
ಮನೆಗೆ ಬಂದ ಮೇಲೆ ಅಮ್ಮಿಗೆ ಪುಟ್ಬಾಲ್ ಕೊಡಿಸು ಅಂತ ಗಂಟು ಬಿದ್ದೆ. ನೋಡೋಣ ಶಾಜು, ಅಬ್ಬಾ ಬಂದ ಮೇಲೆ ಕೊಡಿಸ್ತಾರೆ. ಶಾಣ್ಯಾ ಹುಡುಗಾ, ಓದ್ತಾ ಕೂಡು ಅಬ್ಬಾ ಬಂದ ಮೇಲೆ ತರೋವಂತಿ ಅದ್ಲು ಅಮ್ಮಿ. ಪುಸ್ತಕ ಹಿಡಿದು ಕುಂತರೂ ದೃಷ್ಟಿಯೆಲ್ಲಾ ಬಾಗಿಲಕಡೆಗೆ ಇತ್ತು. ಅಬ್ಬಾ ಬಂದ ಮೇಲೆ ಪುಟ್ಬಾಲ್ ತರೋದು ಅನ್ನೋ ಖುಷಿಯಲ್ಲಿ ಅಬ್ಬಾನ ದಾರಿ ಕಾಯುತಾ ಕುಳಿತಿದ್ದೆ.
ಅಬ್ಬಾ ಬಂದರು. ಅಬ್ಬಾ. ಎಂದೇ, ಎನೋ? ಎಂದಿದ್ದಕ್ಕೆ, ನನಗೆ ಪುಟಬಾಲ್ ಕೊಡಿಸು ನಮ್ಮ ಶಾಲೇಲಿ ಹುಡುಗರು ತಮ್ಮ ಬಾಲ್ನಲ್ಲಿ ಆಡ್ತಾರೆ ನನಗೆ ಕರೆದುಕೊಳ್ಳಲ್ಲ ಅಂದೆ. ಆಯ್ತು ಮುಂದೆ ಕೊಡಿಸ್ತೀನಿ ಅಂದರು. ಅವತ್ತೇ ಬೇಕಿದ್ದರಿಂದ ಗಂಟು ಬಿದ್ದೆ. ಅಬ್ಬಾ ಸಿಟ್ಟಿನಿಂದ ಬೈದವರೇ ಬೆನ್ನಿಗೆ ಒಂದೇಟು ಹಾಕಿದರು. ಅವತ್ತು ರಾತ್ರಿ ಬಹಳ ಹೊತ್ತಿನ ತನಕ ಅಳುತ್ತಿದ್ದೆ. ಮೊಣಕಾಲಿನ ನೋವು ಜಾಸ್ತಿಯಾಗಿತ್ತು.  
***
ಮಿಲ್ ಬಂದಾದ ನಂತರ ಅಬ್ಬಾ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡ್ತಾ ಇದ್ರು. ಆದರೂ ಎಲ್ಲಿಯೂ ಕೆಲಸ ಸಿಗಲಿಲ್ಲ. ಮನೆಯಲ್ಲಿ ದಿನನಿತ್ಯವೂ ಅಬ್ಬಾ ಅಮ್ಮಿಯ ಜಗಳ ಶುರುವಾಗುತ್ತಿತ್ತು. ಸಣ್ಣ ಸಣ್ಣ ಮಾತಿಗೂ ಅಬ್ಬಾ ಸಿಟ್ಟಿಗೇಳುತ್ತಿದ್ದ ಅಮ್ಮಿಯ ಜೊತೆ ಜಗಳಕ್ಕೆ ನಿಲ್ಲುತ್ತಿದ್ದ. ಈ ಸಲದ ರಮಜಾನ್ಗೆ ನಮಗಿಬ್ಬರಿಗೂ ಹೊಸ ಬಟ್ಟೆ ತಂದಿದ್ದ ಅಬ್ಬಾ, ತನ್ನ ಹಳೆಯ ಬಟ್ಟೆಗಳನ್ನೇ ಇಸ್ತ್ರೀ ಮಾಡಿಸಿಕೊಂಡು ಹಾಕಿಕೊಂಡಿದ್ದ. ಅಮ್ಮಿಗೂ ಸಹ ಹೊಸ ಸೀರೆ ತಂದಿರಲಿಲ್ಲ್ಲ. ಅಬ್ಬಾ ನನ್ನ ಮತ್ತು ಸಮೀರನ್ನ ಸೈಕಲ್ನಲ್ಲಿ ಕೂಡಿಸಿಕೊಂಡು ಈದ್ಗಾಕ್ಕೆ ಕರೆದೊಯ್ದ.
ಬಣ್ಣದ ಬಲೂನ್ಗಳತ್ತ ನಮ್ಮ ದೃಷ್ಟಿ.
ಅಬ್ಬಾ ಹೇಳಿದ ನನ್ನ ಹತ್ತಿರ ಇವತ್ತು ದುಡ್ಡಿಲ್ಲ, ಏನೂ ಕೇಳಬೇಡಿ ನಾಳೆ ಕೊಡಿಸ್ತಿನಿ ಅಂದ.
ನಾವು ಹೂಂ ಅಂದೆವು..
ಅವತ್ತಿನ ನಮ್ಮ ರಮಜಾನ್ ಹಬ್ಬದೂಟದಲ್ಲಿ ಬಿರಿಯಾನಿ ಇರಲಿಲ್ಲ. ಅಮ್ಮ ಅನ್ನದ ಜೊತೆ ಮಜ್ಜಿಗೆ ಬಡಿಸಿದಳು. ಅವಳ ಕೈಗೆ ಮೆಹಂದಿ ಇರಲಿಲ್ಲ. ಅವಳ ಕಣ್ಣಲ್ಲಿ ನೀರಿತ್ತು. ಅಬ್ಬಾ ಮೂಲೆಯಲ್ಲಿ ಶೂನ್ಯದತ್ತ ದೃಷ್ಟಿಇಟ್ಟು ಕುಳಿತಿದ್ದ. ಸ್ವಲ್ಪ ಹೊತ್ತಿನ ನಂತರ ಈದ್ ಮುಬಾರಕ್ ಹೇಳಲು ಬರುವವರಿಗೆ  ಶುಭಾಶಯ  ಕೋರಲು ಮನೆಯ ಹೊರಗೆ ಹೋಗಿ ನಿಂತ.
ಅವರಿವರ ವಶೀಲಿಯಿಂದಾಗಿ ಊರಿನಲ್ಲಿಯೇ  ಶುರುವಾಗಿದ್ದ ಪ್ಯಾಕ್ಟರಿಗೆ ಕೆಲಸ ಸಿಕ್ಕಿತು. ಆದರೂ ಅಲ್ಲಿ ಇಲ್ಲಿ ಮಾಡಿದ್ದ ಸಾಲಕ್ಕೆ ಮನೆ ಮಾರಬೇಕಾಯಿತು. ಸೋರುವ ಮನೆಯನ್ನು ವತ್ತಿ ಹಾಕಿಕೊಂಡು ಈ ಮನೆಗೆ ಬಂದೆವು.
***
ಕಚಿಪಿಚಿ ಎನ್ನುತ್ತಿರುವ ಮನೆ ಸಾರಿಸುವುದರಲ್ಲಿ ಅಮ್ಮನಿಗೆ ಸಾಕುಸಾಕಾಯಿತು. ದೊಡ್ಡವನಾದ ಮೇಲೆ ನಾನು ಮಾಡಬೇಕೆಂದಿರುವ ಕೆಲಸಗಳಲ್ಲಿ ಒಂದು ಎಂದರೆ  ಮಳೆಗಾಲದಲ್ಲಿ ಮನೆ ಸೋರುವುದನ್ನು ತಡೆಗಟ್ಟುವುದು. ಈ ಮನೆಗೆ ಬಂದ ಮೇಲೆಯೇ ಶಬ್ಬೂ ಹುಟ್ಟಿದ್ದು. ಅಮ್ಮಿಯ ಆಸೆಯಂತೆ ಅವಳಿಗೆ ಹೆಣ್ಣು ಮಗಳು ಹುಟ್ಟಿದಳು. ಆದರೂ ಅವಳ ಕನಸಿನಂತೆ ಸಿಂಗರಿಸಿ ಉಡಿಸಿ ತೊಡಿಸಲು, ಸಂಭ್ರಮಿಸಲು ಅಮ್ಮಿಯ ಕೈಲಾಗುತ್ತಿಲ್ಲ. ಬರಡಾಗಿರುವ  ಕೊರಳು, ಕೈಗಳು, ಓಲೆ ಕಳೆದುಕೊಂಡ ಕಿವಿಗಳು ಅವಳನ್ನು ಅಣಕಿಸುತ್ತಿದ್ದವು. ಆದರೂ ಅಮ್ಮಿಯ ಕಣ್ಣುಗಳಲ್ಲಿ ನಾಳೆಯ ದಿನದ ಕನಸುಗಳು ಎಂದಿಗೂ ಹಾಗೇ ಇದ್ದವು. ಮುಂದೆ ದೊಡ್ಡವನಾದ ಮೇಲೆ ನಮ್ಮ ಶಾಜು ನನಗೆ ಎಲ್ಲ ಕೊಡಿಸ್ತಾನೆ ಅಂತಾ ಇರ್ತಾಳೆ.
ರಮಜಾನ್, ಮೊಹರಂ, ಬಕ್ರೀದಗಳು  ಬಂದು ಹೋಗುತ್ತಲೇ ಇದ್ದವು. ಬಂಧುಗಳು, ಅಪ್ಪನ ಮಿತ್ರರು ಈಗ ಹಬ್ಬಕ್ಕೆ ಬರುತ್ತಿಲ್ಲ.ಈಗ ನಾನೂ ಗ್ಯಾರೇಜ್ ಕೆಲಸಕ್ಕೆ ಹೋಗುತ್ತಿದ್ದೆ. ಮುಂದೊಂದು ರಮಜಾನ್ನ ತಿಂಗಳ ಮೊದಲ ರೋಜಾ ದಿನದಂದು  ಅಬ್ಬಾ ಇಹಲೋಕ ತ್ಯಜಿಸಿದರು.
***
ಕಾಲಚಕ್ರದ ಪ್ರವಾಹದಲ್ಲಿ ಯಾವುದು ನಿಂತಿದೆ. ಎಲ್ಲವನ್ನೂ ತನ್ನೊಂದಿಗೆ ಕೊಚ್ಚಿಕೊಂಡು ಹೋಗುತ್ತಲೇ ಇರುತ್ತದೆ. ಮುಂದೊಂದು ದಿನ ನನಗೂ ಮದುವೆಯಾಯಿತು. ಮಗ ಹುಟ್ಟಿದ. ಕಾಲಾನುಕ್ರಮದಲ್ಲಿ ತಮ್ಮ, ತಂಗಿಗೆ ಮದುವೆಯಾಯಿತು. ತಮ್ಮ ತಮ್ಮ ಬದುಕನ್ನು ಹುಡುಕಿಕೊಂಡು ಹೋದರು. ನನ್ನ ಮಗನಿಗೆ ಮದುವೆಯಾಯಿತು. ಮಗ ಹುಟ್ಟಿದ. ಮರಿ ಮೊಮ್ಮಗನನ್ನು ಕಂಡ ಅಮ್ಮಿ ಮುಂದೊಂದು ದಿನ ಕಣ್ಮುಚ್ಚಿದಳು.
ಶಾಲೆಗೆ ಹೋಗುತ್ತಿದ್ದ ನನ್ನ ಮೊಮ್ಮಗ ಒಂದು ದಿನ ಬಂದವನೇ ನನಗೆ ಕೇಳಿದ.
ದಾದಾಜಿ ನನಗೂ ಪುಟ್ಬಾಲ್ ಕೊಡಿಸು. ನನ್ನ ಕಣ್ಣಲ್ಲಿ ನೀರು.
ಯಾಕೆ ದಾದಾಜಿ ಕಣ್ಣಲ್ಲಿ ನೀರು ಕೇಳಿದ ಅವನು. ಪುಟ್ಬಾಲ್ ಬೇಡ ಬಿಡು ಅಂದ.
ಏನೂ ಇಲ್ಲಪ್ಪ  ಪುಟ್ಬಾಲ್ ತಾನೇ ಕೊಡಿಸ್ತೀನಿ ಎಂದೆ.
ಮತ್ಯಾಕೆ ಅಳ್ತಿದಿಯಾ ಅಂದ ನಾನಂದೆ ನನ್ನ ಮೊಣಕಾಲು ನೋವು ಕೊಡ್ತಾ ಇತ್ತಲ್ಲಾ ಅದಕ್ಕೆ ತಟ್ಟನೆ ಅವನೇಳಿದ. ಹೌದಾ ಡಾಕ್ಟರ್ ಹತ್ತಿರ ಹೋಗಿ ಎಕ್ಸರೇ ತೆಗಿಸು.
ಹಳೆಯ ನೋವನ್ನು ಕೆದಕಿದ್ದ ಮೊಮ್ಮಗನಿಗೆ ಪುಟ್ಬಾಲ್ ಕೊಡಿಸಿದೆ. ಅವನು ಆಡುತ್ತಾ  ಇರೋದನ್ನ ನೋಡುತ್ತಾ ಕುಳಿತೆ,
ಹೌದು ಎಕ್ಸರೇ ತೆಗಿಸಬೇಕು ಅಂದುಕೊಂಡೆ. ಮೊಣಕಾಲು ನೋವು ಕಡಿಮೆಯಾಗ್ತಾ ಇದೆ ಅಂತಾ ಅನಿಸಿತು.

No comments:

Post a Comment

Thanku