Thursday, June 7, 2012

ಇನ್ನೂ ಮುಟ್ಟಿಸಿಕೊಳ್ಳದ ಭಾರತೀಯ ಮಾಧ್ಯಮಗಳು


(ರಾಬಿನ್ ಜೆಫ್ರಿ ನ್ಯಾಷನಲ್ ಯೂನಿವಸರ್ಿಟಿ ಆಫ್ ಸಿಂಗಪೂರ್ನ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಮತ್ತು ಏಷ್ಯಾ ಸಂಶೋಧನಾ ಸಂಸ್ಥೆಯಲ್ಲಿ ಸಂದರ್ಶಕ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನ ಜೆಫ್ರಿಯವರು 31ನೇ ಮಾಚರ್್ 2012ರಂದು ನವದೆಹಲಿಯ ರಾಜೇಂದ್ರ ಮಾಥೂರ್ ನೆನಪಿನ ಕಾರ್ಯಕ್ರಮದಲ್ಲಿ ಮಂಡಿಸಿದ ಭಾಷಣದ ಬರಹರೂಪ.)

        1992ರಲ್ಲಿ ಹಾಗೆ ಸುಮ್ಮನೆ ಇಣುಕಿ ನೋಡಿದ್ದೆ, ಅವತ್ತೂ ಅಲ್ಲೊಬ್ಬ ದಲಿತ ಸಿಗಲಿಲ್ಲ; ಇವತ್ತೂ ಅಲ್ಲಿ ಸಿಗಲಾರ. ಅದು ಭಾರತೀಯ ಮಾಧ್ಯಮ ರಂಗ. ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳಲು ಹೆಣಗುತ್ತಿರುವ ಬೃಹತ್ ಮಾಧ್ಯಮ. ಇಂಡಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟಿರುವ ದಲಿತರ ಬದುಕನ್ನು ಸಣ್ಣ ಕುತೂಹಲಕ್ಕಾದರೂ ನೋಡುವುದಿರಲಿ, ಭಾರತೀಯ ಮಾಧ್ಯಮ ತನ್ನ ಸುದ್ದಿಮನೆಗಳಿಂದಲೇ ದಲಿತರನ್ನು ದೂರವಿಟ್ಟಿದೆ.
ದಲಿತರನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ದೂರವಿಡಲು ಕಾರಣಗಳೇನು? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂವಿಧಾನದ ಮೂಲಧರ್ಮವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಈ ದೇಶದ ಎಲ್ಲ ರಂಗಗಳು ನಿರಾಕರಿಸಿರುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ನಿರಾಕರಿಸಿದೆ. ಹೀಗಾಗಿಯೇ ಮಾಧ್ಯಮದ ಮಂದಿ ಮಾಧ್ಯಮದಲ್ಲಿ ಭ್ರಾತೃತ್ವ ಎಂದರೆ ದೂರ ಸರಿಯುತ್ತಾರೆ. ಎರಡನೆಯದು, ಸುದ್ದಿಮನೆಗಳಲ್ಲಿರುವ ಮಂದಿ ಸದಾ ರೋಚಕತೆಗೆ ಮಣೆಹಾಕಿ ಹೆಚ್ಚು ಜನರನ್ನು ಆಕಷರ್ಿಸುವುದರತ್ತಲೇ ಗಮನಕೊಡುವುದರಿಂದ, ಮಾಧ್ಯಮದ ವ್ಯಾಪಾರಿ ಜಗತ್ತಿಗೆ ದೇಶದ ಕಾಲುಭಾಗದಷ್ಟಿರುವ ದಲಿತರು ಯಾವತ್ತೂ ಮಾರಾಟದ ಸರಕಾಗುವುದಿಲ್ಲ. ಸದಾ ಸಾರ್ವಜನಿಕ ಸಮ್ಮತಿ ಉತ್ಪಾದಿಸುವುದರತ್ತಲ್ಲೇ ಹೆಚ್ಚು ಚಡಪಡಿಸುವ ಈ ಮಾಧ್ಯಮ, ಸಮಾಜದ ಅಂಚಿನಲ್ಲಿದ್ದು ದಿವ್ಯನಿರ್ಲಕ್ಷ್ಯಕ್ಕೊಳಗಾಗಿರುವ ದಲಿತರ ತಾರತಮ್ಯದ ಪ್ರಶ್ನೆಗಳನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೂರ್ವ ಮತ್ತು ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ದೊಡ್ಡಪ್ರಮಾಣದಲ್ಲಿ ಜನಪರ ಹೋರಾಟಗಳು ನಡೆದರೂ ಇಂಡಿಯಾದ ಪತ್ರಿಕೆಗಳಿಗೆ ಅವು ಸುದ್ದಿಯೇ ಅನ್ನಿಸಿಲ್ಲ.
ಮೂರನೆಯದು, ಬಹಳ ಹಿಂದೆ ಅಮೆರಿಕಾದ ಕಟ್ಟಾ ಮಾಧ್ಯಮದ ಮಂದಿ ಸುದ್ದಿ ಅನ್ನಿಸುವುದೆಲ್ಲ ಪ್ರಿಂಟಾಗಬೇಕು ಎನ್ನುವ ನ್ಯೂ ಯಾಕರ್್ ಟೈಮ್ಸ್ ಪತ್ರಿಕೆಯ ಟ್ಯಾಗ್ಲೈನನ್ನು ಹೆಚ್ಚು ನಂಬಿಕೊಂಡಿದ್ದರು. ಆದರೆ ದೇಶದ ಕಾಲುಭಾಗದಷ್ಟು ಜನರನ್ನು ಅವರ ಮೇಲೆ ಯಾವುದಾದರೂ ಹಿಂಸೆ, ಬರ್ಬರ ಅನ್ನಿಸುವ ಕೃತ್ಯಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಮುಟ್ಟಿ ನಂತರ ಅವರನ್ನು ಮಾಧ್ಯಮದ ಗಡಿಗಳಿಂದಲೇ ದೂರ ನೂಕುವ ಪತ್ರಿಕೆಗಳು ಹೆಚ್ಚುಕಾಲ ನೆಲೆನಿಲ್ಲಲಾರವು ಎಂಬ ಪರಮಸತ್ಯ ಇದೇ ಮಾಧ್ಯಮದ ಮಂದಿಗೆ ಬಹುಬೇಗ ಗೊತ್ತಾಯಿತು.
       ಭಾರತೀಯ ಮಾಧ್ಯಮಗಳಲ್ಲಿ ದಲಿತರ ಗೈರುಹಾಜರಿ ಕುರಿತ ಚಚರ್ೆಗಳು 1996ರಿಂದ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಖುದ್ದು ಒಬ್ಬ ಆಫ್ರೋ-ಅಮೆರಿಕನ್ ಆಗಿರುವ ವಾಷಿಂಗ್ಟನ್ ಪೋಸ್ಟ್ನ ವರದಿಗಾರರಾದ ಕೆನ್ನೆತ್ ಜೆ.ಕೂಪರ್ ಮೊದಲಿಗೆ ದೆಹಲಿಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದರು. ಅವರ ಹುಡುಕಾಟದಲ್ಲಿ ಅಂಥ ಲಾಭವೇನೂ ಆಗಲಿಲ್ಲ. ಕಡೆಗೆ ಅವರು ಬೇಸತ್ತು ಪಯನೀಯರ್ ಪತ್ರಿಕೆಗೆ ಬರೆದ ತನಿಖಾ ಲೇಖನವನ್ನು ಬಿ.ಎನ್.ಉನಿಯಾಲ್ ಪ್ರಕಟಿಸಿದರು. ಲೇಖನದ ಕೊನೆಗೆ ಕೂಪರ್ ನೊಂದು ಬರೆದಿದ್ದರು: ನನ್ನ ಮೂವತ್ತು ವರ್ಷಗಳ ಜರ್ನಲಿಸ್ಟ್ ಬದುಕಿನಲ್ಲಿ ಒಬ್ಬೇ ಒಬ್ಬ ದಲಿತನನ್ನು ಇಂಡಿಯಾದ ಸುದ್ದಿಮನೆಗಳಲ್ಲಿ ನೋಡಲು ಸಾಧ್ಯವೇ ಆಗಲಿಲ್ಲ.
ಒಬ್ಬ ದಲಿತನೂ ಸಿಗಲಿಲ್ಲ?
ನಾನು 2000ದಲ್ಲಿ ಇಂಡಿಯಾದ ಪತ್ರಿಕಾ ಕ್ರಾಂತಿ ಎಂಬ ಪುಸ್ತಕ ಬರೆದಾದ ನಂತರವೂ ಇಲ್ಲಿ ಅಂಥ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಕೂಪರ್-ಉನಿಯಾಲ್ ತನಿಖಾ ವರದಿಯಲ್ಲಿ ಹೇಳಿರುವಂತೆ ಭಾರತದ ಮೂನ್ನೂರಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬೇ ಒಬ್ಬ ಪತ್ರಕರ್ತ ಸಿಗುವುದಿಲ್ಲ. ಆ ವರದಿಗೆ 2006ರಲ್ಲಿ ಹತ್ತು ವರ್ಷಗಳು ತುಂಬಿದವು. ಕಳೆದ ವರ್ಷವಷ್ಟೇ ತಮಿಳು ಪತ್ರಕರ್ತ ಜೆ.ಬಾಲಸುಬ್ರಹ್ಮಣ್ಯಮ್ ಇಂಗ್ಲಿಷ್ ದೈನಿಕವೊಂದರ ಸಂದರ್ಶನದಲ್ಲಿ ತಮಗಾದ ಹಸಿಹಸಿ ಅನುಭವಗಳನ್ನು ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದುಕೊಂಡಿದ್ದರು. ಬಾಲಸುಬ್ರಹ್ಮಣ್ಯಮ್ ದಲಿತ ಅನ್ನುವ ಕಾರಣಕ್ಕೆ ಹಾಗೂ ಅವರು ಸಂದರ್ಶನಕ್ಕೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ದಲಿತರ ಪರವಾದ ಲೇಖನಗಳು ಅವರ ಪಾಲಿಗೆ ಆ ಇಂಗ್ಲಿಷ್ ದೈನಿಕದ ಬಾಗಿಲು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತು.
ಕೆನೆತ್ ಕೂಪರ್ ಈ ಸದ್ಯ ಬೋಸ್ಟನ್ನಲ್ಲಿ ನೆಲೆಗೊಂಡಿದ್ದು, ಆಫ್ರಿಕನ್-ಅಮೆರಿಕನ್ ಜನರ ಬದುಕನ್ನು ಬಿಂಬಿಸುತ್ತಿರುವ ಸೆಂಟ್ ಲೂಯಿಸ್ ಅಮೆರಿಕನ್ ಎಂಬ ಯಶಸ್ವಿ ಪತ್ರಿಕೆಗೆ ಸಂಪಾದಕರಾಗಿದ್ದಾರೆ. ಇಂಡಿಯಾದ ದಲಿತರು, ಆಫ್ರಿಕಾ-ಅಮೆರಿಕಾ ದೇಶಗಳ ಕಪ್ಪು ಜನಾಂಗದವರು ಒಂದೇ ಬಗೆಯ ತಾರತಮ್ಯ ಮತ್ತು ಅವಮಾನಗಳನ್ನು ಸಾಮಾಜಿಕವಾಗಿ ಅನುಭವಿಸಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಎಬೋನಿ, ಎಸ್ಸೆನ್ಸ್, ಸೆಂಟ್ ಲೂಯಿಸ್ ಅಮೆರಿಕನ್ ಮತ್ತು ಚಿಕಾಗೋ ಡಿಫೆಂಡರ್ ತರಹದ ಪತ್ರಿಕೆಗಳು ಅಲ್ಲಿನ ಶೋಷಿತರನ್ನು ಹತ್ತಿರಕ್ಕೆ ಬಿಟ್ಟು ಕೊಂಡಂತೆ ಇಂಡಿಯಾದ ಪತ್ರಿಕೆಗಳಿಗೇಕೆ ಸಾಧ್ಯವಾಗ ಲಿಲ್ಲ ಎಂಬ ಪ್ರಶ್ನೆ ಕಣ್ಣೆದುರು ಬಂದು ನಿಲ್ಲುತ್ತದೆ.
ಇದಕ್ಕೆ ಉತ್ತರವೂ ಇದೆ. ಇಂಡಿಯಾದ ದಲಿತರು ಮುಟ್ಟದ ಜಗತ್ತೊಂದನ್ನು ಅಮೆರಿಕಾದ ಶೋಷಿತರು 1920ರಲ್ಲಿ ಮುಟ್ಟಿದರು. ಬಹಳ ಮುಖ್ಯವಾಗಿ ಈ ದಶಕದಲ್ಲಿ ಕಪ್ಪು ಜನಾಂಗದಿಂದ ಮಧ್ಯಮ ವರ್ಗವೊಂದು ರೂಪುಗೊಂಡು ಅನೇಕ ಅಂಗಡಿ, ವ್ಯಾಪಾರ-ವಹಿವಾಟುಗಳ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಮಧ್ಯಮ ವರ್ಗದ ಈ ಪುಟ್ಟ ಕಪ್ಪು ಜನಾಂಗವೇ ಮುಂದೆ ಕಪ್ಪು ಅಮೆರಿಕವಾಗಿ ತನ್ನ ಹೊಸ ಹುಟ್ಟನ್ನು ಪಡೆದುಕೊಂಡಿತು. ಈ ವರ್ಗ ತನ್ನ ಆಥರ್ಿಕ ಯಶಸ್ಸಿಗೆ ಆಯ್ದುಕೊಂಡದ್ದು ಪತ್ರಿಕೆಗಳ ಜಾಹೀರಾತು. ಜಾಹೀರಾತು ಪಡೆಯುವ ಸಲುವಾಗಿಯಾದರೂ ಅಮೆರಿಕಾದ ಪತ್ರಿಕೆಗಳು ಈ ಕಪ್ಪು ಮಧ್ಯಮ ವರ್ಗದ ಎದುರು ಮಂಡಿಯೂರಿ ನಿಂತಿತು. ಇಡೀ ಅಮೆರಿಕಾ ಉಸಿರಾಡುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಅಲ್ಲಿನ ಶೋಷಿತರು ಕಷ್ಟಪಟ್ಟು ತಮ್ಮದಾಗಿಸಿಕೊಂಡರು. ಆ ಭಾಷೆಯ ಸಂಪರ್ಕದಿಂದಾಗಿ ಚಚರ್್ನ ಒಳಗೆ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಹೊರಗಿದ್ದ ಶೋಷಿತರಿಗೆ ತಲುಪಿತು. ಇಂಥ ಹೊತ್ತಲ್ಲೇ ಅಲ್ಲೊಬ್ಬ ಮಾಟರ್ಿನ್ ಲೂಥರ್ ಕಿಂಗ್ ಹುಟ್ಟಿಕೊಂಡದ್ದು. ತಮ್ಮ ಚರ್ಮಗಳು ಎಷ್ಟೇ ಭಿನ್ನ ದನಿ ಹೊರಡಿಸಿದರೂ ಕಪ್ಪು ಅಮೆರಿಕಾದ ಆಳದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳಲಿಲ್ಲ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಈಗ ಜನಾಂಗೀಯ ತಾರತಮ್ಯ ಅನ್ನುವುದು ಮೊದಲಿನಂತೆ ಗುಣಪಡಿಸಲಾಗದ ಗಾಯದಂತೇನೂ ಇಲ್ಲ.
ಮಾಧ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಪ್ರಶ್ನೆಗಳು ಬಂದಾಗಲೆಲ್ಲ ಇಂಡಿಯಾದ ಮಾಧ್ಯಮಗಳು ಎರಡು ಸಿದ್ಧ ಉತ್ತರಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುತ್ತವೆ: ಒಳ್ಳೆಯ ಪತ್ರಕರ್ತ ಸುದ್ದಿಯ ವಸ್ತುನಿಷ್ಠತೆಯನ್ನು ನೋಡುತ್ತಾನೆಯೇ ಹೊರತು ಜಾತಿಯನ್ನಲ್ಲ  ಮತ್ತು ಮೀಸಲಾತಿ ಎನ್ನುವುದು ಆಧುನಿಕ ಭಾರತಕ್ಕೆ ಮಾರಕ, ಜಾತಿಯನ್ನು ಪಕ್ಕಕ್ಕಿಟ್ಟು ಪ್ರತಿಭೆಯನ್ನಷ್ಟೆ ಪರಿಗಣಿಸಬೇಕು. ಬ್ರಿಟಿಷ್ ಆಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇಲ್ಲಿನ ಪುರಾತನ ಶ್ರೀಮಂತರು ದಿ ಸ್ಟೇಟ್ಸ್ಮ್ಯಾನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದೇನಾದರೂ ತಿಳಿದಿರುವಿರಾ? ಖಂಡಿತ ಇಲ್ಲ. ದಿ ಹಿಂದೂ, ಅಮೃತಾ ಬಜಾರ್ ಪತ್ರಿಕಾ, ಹಿಂದೂಸ್ತಾನ್ ಟೈಮ್ಸ್, ಯಂಗ್ ಇಂಡಿಯಾ ಮೊದಲಾದ ಪತ್ರಿಕೆಗಳು ಇಲ್ಲಿನ ಶೋಷಿತರನ್ನು ಅಷ್ಟಾಗಿ ಪ್ರತಿನಿಧಿಸಲಿಲ್ಲ ಎಂಬುದನ್ನು ಆ ಪತ್ರಿಕೆಗಳು ದಕ್ಕಿಸಿಕೊಂಡ ವ್ಯಾಪಾರಿ ಯಶಸ್ಸಿನಿಂದಲೇ ಅಂದಾಜಿಸಬಹುದು. ನಿಮ್ಮ ಕೈಯಲ್ಲೊಂದು ಪತ್ರಿಕೆ ಇದ್ದರೆ ನೀವು ರಾತ್ರೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಲ್ಲಿ ಹೆಚ್ಚು ಸತ್ಯವಿದೆ.
ಎರಡು ಸಲಹೆಗಳು?
ಹಾಗಿದ್ದರೆ ಇಂಡಿಯಾದ ಮಾಧ್ಯಮಗಳಲ್ಲಿ ದಲಿತರನ್ನು ಕಾಣುವುದು ಹೇಗೆ? ಎರಡು ಸಲಹೆಗಳಿವೆ. ಬಹುಶಃ ಇವು ಉತ್ತರವಾಗಲಾರವು; ಆದರೆ ಇವೆರಡು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬಹುದು. 1978ರಲ್ಲಿ ಸುದ್ದಿಮನೆಯೊಳಗಿನ ಭಿನ್ನತೆಯನ್ನು ಗಣತಿ ಮಾಡಲು ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟಸರ್್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಯಿತು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30 ರಷ್ಟಿದ್ದರೂ ಆ ವರ್ಷ ಶೇಕಡಾ 4ರಷ್ಟು ಕಪ್ಪು ವಣರ್ೀಯರು ಅಲ್ಲಿನ ಸುದ್ದಿಮನೆಗಳಲ್ಲಿ ಕೆಲಸಮಾಡುತ್ತಿದ್ದರು. 2000ದ ಹೊತ್ತಿಗೆ ಗುರಿ ಶೇಕಡಾ 20 ಮುಟ್ಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಗುರಿ ಮುಟ್ಟಲಿಲ್ಲ. 2011ರಲ್ಲಿ ಅಮೆರಿಕಾದ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಕಪ್ಪು ವಣರ್ೀಯರು ಶೇಕಡಾ 13ರಷ್ಟು ಹುದ್ದೆಗಳನ್ನು ಅಮೆರಿಕಾದ ಸುದ್ದಿಮನೆಗಳಲ್ಲಿ ಪಡೆದುಕೊಂಡಿದ್ದರು. ಈಗ ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿನ ಶೋಷಿತರು ಶೇಕಡಾ 36ರಷ್ಟಿದ್ದಾರೆ. ಇದರಲ್ಲಿ ಆಫ್ರಿಕನ್-ಅಮೆರಿಕನ್, ಲ್ಯಾಟಿನೋಸ್, ನೇಟಿವ್ ಅಮೆರಿಕನ್ಸ್ ಮತ್ತು ಏಷ್ಯಾ ದವರು ಸೇರಿದ್ದಾರೆ. ಈಗ ನ್ಯೂಸ್ ಎಡಿಟಸರ್್ ಸಂಸ್ಥೆ  ತನ್ನ ಗುರಿಯನ್ನು 2020ಕ್ಕೆ ನಿಗದಿಪಡಿಸಿಕೊಂಡಿದೆ.
ಬಹುಶಃ ಈ ತರಹದ ಗುರಿ ನಿಗದಿಪಡಿಸುವ ವಿಚಾರಗಳು ಇಂಡಿಯಾದಲ್ಲಿ ಕಷ್ಟ. (ನೆನಪಿಡಿ, ಇಲ್ಲಿ ಗುರಿಯನ್ನು ಕುರಿತು ಮಾತನಾಡುತ್ತಿದ್ದೇನೆ, ಮೀಸಲಾತಿ ಅಥವಾ ಕೋಟಾ ಕುರಿತಾಗಲಿ ಅಲ್ಲ). ಇಂಡಿಯಾದಲ್ಲಿ ಜಾತಿ ಅನ್ನುವುದು ತುಂಬಾ ಸೂಕ್ಷ್ಮವಾದ ಸಂಗತಿ. ಈ ದೇಶಕ್ಕೆ ಈಗ ಒಂದು ಸಾಮಾಜಿಕ ಅಕೌಂಟೆಬಲಿಟಿ ನಡೆಸುವ ಸಂಸ್ಥೆಯೊಂದರ ಅಗತ್ಯವಿದೆ. ಇದಕ್ಕೆ ದೊಡ್ಡ ಸಂಸ್ಥೆಯ ಅಗತ್ಯವಿದೆ. ಇಂಡಿಯಾದ ಸುದ್ದಿಮನೆಗಳಲ್ಲಿನ ಭಿನ್ನತೆ ಅಂದರೆ ಇಲ್ಲಿರುವ ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಬೇಕಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಇದನ್ನು ಖಂಡಿತ ಒಪ್ಪಲಾರವು. ಬೇಕಿದ್ದರೆ ಜಾತಿವಾರು ಪತ್ರಕರ್ತರ ಮಾಹಿತಿ ನೀಡಿದ ಮತ್ತು ನೀಡದ ಮಾಧ್ಯಮ ಸಂಸ್ಥಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಯಲಿ.
ಪಿರಮಿಡ್ ಆಕಾರದಲ್ಲಿರುವ ಇಂಡಿಯಾದ ಸಮಾಜದೊಳಗೆ ನಿಧಾನವಾಗಿಯಾದರೂ ಮಧ್ಯಮ ವರ್ಗವೆಂಬುದು ಬೆಳೆಯುತ್ತಿದೆ. ಪಿರಮಿಡ್ನ ತಳದಲ್ಲಿರುವ ದಲಿತರಿಗೆ ಅವರ ಜಗತ್ತನ್ನು ಅವರದೇ ಕಣ್ಣಿನಿಂದ ಪ್ರಕಟಪಡಿಸಲು ಅಮೆರಿಕಾದ ಎಬೋನಿ, ಎಸ್ಸೆನ್ಸ್ನಂತಹ ಪತ್ರಿಕೆಗಳ ಅಗತ್ಯವಿದೆ. ಈ ಎರಡು ಪತ್ರಿಕೆಗಳು ಕಪ್ಪು ಅಮೆರಿಕಾದ ಯಶಸ್ಸಿನ ಮುಖವಾಣಿಯಾಗಿವೆ.
ಭಾರತೀಯ ಮಾಧ್ಯಮಗಳು ದಲಿತರನ್ನು ಒಳಗೊಳ್ಳದ ಇದೇ ಸಂದರ್ಭದಲ್ಲಿ ದಲಿತಪರ ಕಾಳಜಿಯನ್ನು ಕೇಂದ್ರೀಕರಿಸಿ ನವಯಾನ ಪ್ರಕಾಶನ ಹೊರತರುತ್ತಿರುವ ಅನೇಕ ಪುಸ್ತಕಗಳ ಕುರಿತು ನಾವು ಗಂಭೀರವಾಗಿ ನೋಡಬೇಕಿದೆ. ಈ ತರಹದ ಪ್ರಕಾಶನ ಸಂಸ್ಥೆಗಳು ಮಧ್ಯಮ ವರ್ಗದ ದಲಿತರ ಆಥರ್ಿಕ ಬೆಂಬಲದಿಂದ ಟ್ರಸ್ಟ್ನಂತೆ ಬೆಳೆಯಬೇಕಾದ ಅನಿವಾರ್ಯವಿದೆ. ಆದರೂ ಇಂಥ ಸಂಸ್ಥೆ ಕಟ್ಟಲು ಬರೀ ದಲಿತರ ಹಣವೇ ಸಾಲದು. ತಳ ಸಮುದಾಯಗಳ ಕುರಿತು ನಿಜವಾದ ಪ್ರೀತಿ ಹೊಂದಿರುವ ಎಲ್ಲ ಜಾತಿ ಸಮುದಾಯಗಳಿಂದಲೂ ಹಣ ಸಂಗ್ರಹಿಸಿ, ಸಾಧ್ಯವಾದರೆ ಸಕರ್ಾರದಿಂದ ಹಣದ ಸೌಲಭ್ಯ ಸಿಗುವುದಾದರೆ ಅಲ್ಲಿಂದಲೂ ಪಡೆದು ಅದನ್ನು ಟ್ರಸ್ಟ್ನಲ್ಲಿ ಕಾರ್ಪಸ್ ರೂಪದಲ್ಲಿ ಸಂಗ್ರಹಿಸಿ ಇಡಬೇಕಿದೆ. ಹೀಗೆ ಕೂಡಿಟ್ಟ ಹಣದಿಂದ ಮಾತ್ರ ಪ್ರಕಾಶನದಂತಹ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಸಾಧ್ಯ.
ಮುದ್ರಣ ಮಾಧ್ಯಮವಾಯಿತು, ಈ ಟಿ.ವಿ. ಮಾಧ್ಯಮಗಳ ಕತೆ ಏನು? 1967ರಲ್ಲಿ ನಾನು ಮೊದಲ ಸಲ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ಟೆಲಿವಿಷನ್ ಮಾಧ್ಯಮದ ಕುರಿತು ಪಶ್ಚಿಮ ಕೆನಡಾದ ಸಣ್ಣ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಅಷ್ಟೊತ್ತಿಗಾಗಲೇ ನಾನು ಕೆನಡಾ ಮತ್ತು ಅಮೆರಿಕಾದ ಅನೇಕ ಟಿ.ವಿ. ಕಾರ್ಯಕ್ರಮಗಳನ್ನು ನೋಡಿದ್ದೆ. ಆಗ ಕಪ್ಪು ಮುಖಗಳೇ ನನಗೆ ಟಿ.ವಿ.ಯಲ್ಲಿ ಕಾಣಲಿಲ್ಲ. 1970ರಲ್ಲಿ ನಾನು ಉತ್ತರ ಅಮೆರಿಕಾಗೆ ಹಿಂತಿರುಗಿದಾಗ ಫ್ಲಿಪ್ ವಿಲ್ಸನ್ ಎಂಬ ಆಫ್ರಿಕನ್-ಅಮೆರಿಕನ್ ಹಾಸ್ಯ ಕಲಾವಿದ ಟಿ.ವಿ. ಶೋಗಳಲ್ಲಿ ಬಹಳ ಜನಪ್ರಿಯನಾಗಿರುವುದನ್ನು ಕಂಡೆ. ಮುಂದೆ ಅಮೆರಿಕಾ ನೆಲದಲ್ಲೇ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಕಪ್ಪು ಜನರನ್ನು ಟಿ.ವಿ.ಯಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಮೆರಿಕಾ ದೇಶವೇ 38 ವರ್ಷಗಳ ನಂತರ ಕಪ್ಪು ಜನಾಂಗಕ್ಕೆ ಸೇರಿದ ಅಧ್ಯಕ್ಷನನ್ನು ಪಡೆಯಿತು.
ಇಂಡಿಯಾದ ಟಿ.ವಿ. ಚಾನಲ್ಗಳಲ್ಲಿ ದಲಿತರು ಯಾವುದಾದರೂ ಕಾರ್ಯಕ್ರಮದ ನಿರೂಪಕರಾಗಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದ್ದಾರೆಯೇ? ನನ್ನ ಸಂಪರ್ಕದಲ್ಲಿದ್ದ ಅನೇಕರನ್ನು ವಿಚಾರಿಸಿದೆ. ಇಲ್ಲ ಎಂಬ ಉತ್ತರ ಬಂತು. ಮಾಧ್ಯಮಗಳು ದಲಿತರನ್ನು ಮುಟ್ಟಿಸಿಕೊಂಡ ದಿನ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತೆಂದೇ ಅರ್ಥ.
ನನಗನ್ನಿಸುತ್ತಿದೆ ಆಫ್ರಿಕನ್-ಅಮೆರಿಕನ್ ಕಪ್ಪು ಜನ ತುಳಿದ ಕಷ್ಟದ ಹಾದಿಗಿಂತಲೂ ಇಂಡಿಯಾದಲ್ಲಿ ದಲಿತರ ಹಾದಿ ಕಡುಕಷ್ಟದಲ್ಲಿದೆ. ಇಲ್ಲಿ ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾಣುವುದು ಅಷ್ಟ ಸಲೀಸಲ್ಲ. ಇಲ್ಲಿ ಎಲ್ಲವೂ ಛಿದ್ರಗೊಂಡಿದೆ, ದಲಿತರಿಗೆ ಇಲ್ಲಿ ದಕ್ಕುವ ಸಂಪನ್ಮೂಲ ಕಮ್ಮಿಯಾದರೆ ತಾರತಮ್ಯ ಮುಗಿಲು ಮುಟ್ಟಿದೆ. ಸಂವಿಧಾನದ ಆಶಯಗಳು ಅಷ್ಟು ಸುಲಭವಾಗಿ ಜಾರಿಯಾಗಲಾರವೇನೋ. ಸಾಮಾಜಿಕ ನ್ಯಾಯದ ಮೇಲೆ ರಾಷ್ಟ್ರದ ಸ್ವ-ಹಿತಾಸಕ್ತಿಗಳು ನಿಂತರೆ ಮಾತ್ರ ಮಾಧ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ದಲಿತರನ್ನು ನಾವೆಲ್ಲ ಕಾಣಬಹುದೇನೋ.

1 comment:

  1. ಮಾಧ್ಯಮ ಕ್ಷೇತ್ರದ ಮಡಿವಂತಿಕೆಯನ್ನು ನೋಡಿಯೇ ಕುವೆಂಪು ಅವರು ಪತ್ರಿಕೆಗಳಿಂದ ದೂರ ಇರಬಯಸಿದ್ದರು. ಸಮಾಜದಲ್ಲಿ ಗಣ್ಯ ಸ್ಥಾನ ಪಡೆದಿದ್ದ ತಮ್ಮ ಆಪ್ತ ವ್ಯಕ್ತಿಯೊಬ್ಬರು ನಿಧನರಾದ ಸುದ್ದಿ ಪತ್ರಿಕೆಗಳಲ್ಲಿ ಬರಲಿಲ್ಲ. ಅದಕ್ಕಾಗಿ ಅವರು ಪತ್ರಿಕೆಗಳನ್ನು ಶ್ಲಾಘಿಸಿದ್ದರು. ಗಣ್ಯರ ಸಾವು ಪತ್ರಿಕೆಗಳಲ್ಲಿ ದಾಖಲಾಗಿ ಪಾವಿತ್ರ್ಯ ಕಳೆದುಕೊಳ್ಳಲಿಲ್ಲ ಎಂಬ ಸಮಾಧಾನ ತಾಳಿದ್ದರು. ಅಪತ್ರಿಕಾವಾರ್ತೆ ಎಂಬುದು ಅವರೇ ಟಂಕಿಸಿದ ಪದ. ಭಾವ ಸತ್ಯ, ಲೋಕ ಸತ್ಯ ಇರುವಂತೆ ಪತ್ರಿಕಾ ಸತ್ಯ ಎಂಬುದು ವಾಸ್ತವ ಸಂಗತಿ...

    ReplyDelete

Thanku