Thursday, June 7, 2012

ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಶೇಖರಗೌಡ


ಬ್ಯಾಂಕಿಂಗ್ ಮತ್ತು ಸಾಹಿತ್ಯಕ್ಕೆ ಅಜಗಜಾಂತರ ವ್ಯತ್ಯಾಸ. ಬರೀ ಅಂಕಿಸಂಖ್ಯೆಗಳಿಂದ ಕೂಡಿರುವ ಬ್ಯಾಂಕಿಂಗ್ಗೂ, ಅಕ್ಷರ ಜೋಡಣಿಗಳಿಂದ ಹೊರಬರುವ ಸಾಹಿತ್ಯಕ್ಕೂ ಎಲ್ಲಿಯೂ ನಂಟಿಲ್ಲ. ಅಂತಹ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಕ್ಷರ ಪ್ರೇಮವನ್ನು ಮರೆಯದೇ ನೂರಾರು ಕಥೆಗಳನ್ನು ಗ್ರಾಮೀಣ ಸಾಹಿತ್ಯಿಕ ಭಾಷೆಯಲ್ಲಿ ಶೇಖರಗೌಡರು ಕಟ್ಟಿಕೊಟ್ಟಿದ್ದಾರೆ. ಅಂತವರ ಪರಿಚಯ ಸಾಹಿತ್ಯ ಜಗತ್ತಿಗೆ ಅತ್ಯವಶ್ಯವಾದದ್ದು ಎನ್ನುತ್ತಾರೆ ಪ್ರಹ್ಲಾದ್ ಗುಡಿ.

ಸದಾ ರಷ್, ಡೆಬಿಟ್, ಕ್ರೆಡಿಟ್, ಬ್ಯಾಲೆನ್ಸ್ ಶೀಟ್, ಟ್ಯಾಲಿ, ಅನುತ್ಪಾದಕ ಸಾಲಗಳ ವಸೂಲಿ, ವ್ಯವಹಾರ ಅಭಿವೃದ್ಧಿ ಎನ್ನುವ ಪರಸ್ಥಿತಿಯಲ್ಲಿರುವ ಬ್ಯಾಂಕಿಂಗ್ ಉದ್ಯೋಗಿಗಳು ಕಥಾ ಸಾಹಿತ್ಯದಲ್ಲಿ ತೊಡಗಿಕೊಳ್ಳುವುದು ತೀರಾ ಅಪರೂಪ. ಆದರೆ ಬ್ಯಾಂಕಿನ ಕೆಲಸಗಳ ಒತ್ತಡದ ಮಧ್ಯೆಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ, ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರಗಳ ಮೂಲಕ ಜೀವ ನೀಡುತ್ತಾ ಕಥೆ ಹೆಣೆಯುವ ಕೆಲಸ ಸಾಮಾನ್ಯವಾದುದಲ್ಲ. ನಮ್ಮ ಮಧ್ಯೆದಲ್ಲಿಯೇ ಇದ್ದು ಗುಪ್ತವಾಗಿ ಬರವಣಿಗೆಯನ್ನು ರೂಢಿಸಿಕೊಂಡಿರುವ ಶೇಖರಗೌಡ ವೀರನಗೌಡ ಸರನಾಡಗೌಡರ್ ಸದ್ದಿಲ್ಲದಂತೆ ಕೇವಲ ಎರಡು ವರ್ಷಗಳಲ್ಲಿ ಸುಮಾರು 75ಕ್ಕೂ ಹೆಚ್ಚು ಕಥೆಗಳನ್ನು ಬರೆಯುವ ಮೂಲಕ ಒಬ್ಬ ಭರವಸೆಯ ಕಥೆಗಾರರಾಗಿ ಹೊರಹೊಮ್ಮಿರುವುದು ಹೆಮ್ಮೆ ಪಡುವ ಸಂಗತಿ.
ಶೇಖರಗೌಡರು ಮೂಲತಃ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದವರು. ಕಿತ್ತು ತಿನ್ನುವ ಬಡತನದಲ್ಲಿ ಬೆಳೆದು ಬಂದ ಇವರು ತಮ್ಮ ಕುಟುಂಬ ವರ್ಗದವರೊಂದಿಗೆ ಹೊಲ, ಮನೆಗಳಲ್ಲಿ ಕೆಲಸ ಮಾಡುತ್ತಾ, ಶಾಲೆ ಕಲಿತರು. ಧೈರ್ಯ, ಆತ್ಮಾಭಿಮಾನ, ಕಠಿಣ ಪರಿಶ್ರಮ ಇದ್ದರೆ ಬಡತನದಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಶೇಖರಗೌಡರೇ ಸಾಕ್ಷಿಯಾಗಿದ್ದಾರೆ.
ವೀರನಗೌಡ ಮತ್ತು ಲಕ್ಷ್ಮಮ್ಮ ಎಂಬ ಸಾಧಾರಣ ಕೃಷಿಕ ದಂಪತಿಗಳ ಮಗನಾಗಿ 01-06-1955ರಲ್ಲಿ ಜನಿಸಿದ ಇವರು ಸ್ವಗ್ರಾಮದಲ್ಲಿಯೇ ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮಾಡಿ, ಎಸ್.ಎಸ್.ಎಲ್.ಸಿ. ಯಲ್ಲಿ ಆ ಶಾಲೆಗೆ ಮೊದಲ ಸ್ಥಾನ ಪಡೆದು ಶಾಲೆಗೆ ಮತ್ತು ಕಲಿಸಿದ ಗುರುಗಳಿಗೆ ಕೀತರ್ಿ ತಂದರು.
ಇಲಕಲ್ನಲ್ಲಿ ಪ್ರಥಮ ಪಿ.ಯು.ಸಿ. ಶಿಕ್ಷಣವನ್ನು ಪೂರೈಸಿದರೆ, ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಮುಗಿಸಿ, ಧಾರವಾಡದ ಕೃಷಿ ಕಾಲೇಜಿನಲ್ಲಿ ಬಿ.ಎಸ್ಸಿ.ಕೃಷಿ ಪದವಿಯನ್ನು ಪಡೆದು ಕೊಂಡರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶೇಖರಗೌಡರು ತಾವರಗೇರಿಯ ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿಯೇ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾಥರ್ಿ ಎಂಬ ಹೆಸರು ಪಡೆದುಕೊಂಡಿದ್ದರು. ಪದವಿ ಪರೀಕ್ಷೆಯವರೆಗೂ ಅವರು ಉನ್ನತ ದಜರ್ೆಯಲ್ಲಿಯೇ ಉತ್ತೀರ್ಣರಾದರು.
ಪದವಿ ಓದುತ್ತಿರುವಾಗಲೇ ಕಥೆ ಬರೆಯುವ ಗೀಳನ್ನು ಹಚ್ಚಿಕೊಂಡಿದ್ದ ಅವರು ಬದುಕಿಗಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ಆಯ್ದುಕೊಂಡರು. ಕೃಷಿ ಪದವಿ ಮುಗಿಯುತ್ತಿದ್ದಂತೆ ಧಾರವಾಡಕ್ಕೆ ಹತ್ತಿರಕ್ಕಿರುವ ಮುಗದ ಕೃಷಿ ಕೇಂದ್ರದಲ್ಲಿ ಸಂಶೋಧನಾ ಸಹಾಯಕ ಎಂದು ಒಂದು ವರ್ಷದವರೆಗೆ ಕೆಲಸ ಮಾಡಿದರು. ನಂತರ ತುಂಗಭದ್ರಾ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿ ಎಂದು ಸೇರಿ ನಾಲ್ಕು ವರ್ಷಗಳವರೆಗೆ ಹಿರೇಹಡಗಲಿ ಮತ್ತು ಹಚ್ಚೊಳ್ಳಿಯಲ್ಲಿ ಕೆಲಸ ಮಾಡಿದರು. ಹಚ್ಚೊಳ್ಳಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ತಮ್ಮ ಕಠಿಣ ಪರಿಶ್ರಮದಿಂದ ಸ್ಟೇಟ್ ಬ್ಯಾಂಕಿನ ಸ್ಪಧರ್ಾತ್ಮಕ ಪರೀಕ್ಷೆ ಬರೆದು ಪಾಸಾಗಿ ಈಗಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿನಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ಎಸ್.ಬಿ.ಎಚ್.ದ ಕೃಷಿ ಅಭಿವೃದ್ಧಿ ಶಾಖೆ ಮಾನ್ವಿ ಅವರ ಮೊದಲ ಶಾಖೆ. ತಮ್ಮ ಪ್ರಾಮಾಣಿಕ, ದಕ್ಷ ಕಾರ್ಯ ತತ್ಪರತೆಯಿಂದ ಉದ್ಯೋಗದಲ್ಲಿ ಮೇಲೇರುತ್ತಾ ಅವರು ಈಗ ಮುಖ್ಯ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಬ್ಯಾಂಕಿನ ಕೆಲಸದ ಒತ್ತಡದಲ್ಲಿ ಅವರ ಕಥಾ ಸಾಹಿತ್ಯ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಸಿಂಧನೂರಿನ ಕೃಷಿ ಅಭಿವೃದ್ಧಿ ಶಾಖೆಯಿಂದ ಲಿಂಗಸೂಗೂರಿನ ಆರ್.ಸಿ.ಪಿ.ಸಿ., ಆಫೀಸಿಗೆ ಮುಖ್ಯ ವ್ಯವಸ್ಥಾಪಕರು ಎಂದು ವಗರ್ಾವಣೆಯಾಗಿ ಹೋದ ನಂತರ ಶೇಖರಗೌಡರು ಹಿಂತಿರುಗಿ ನೋಡದೇ ಸುಮಾರು 75ಕ್ಕೂ ಹೆಚ್ಚು ಕಥೆಗಳನ್ನು ಬರೆದದ್ದು ಆಶ್ಚರ್ಯವಾದರೂ ಸತ್ಯ.
ಸರಳತೆ, ದಕ್ಷತೆ, ಪ್ರಾಮಾಣಿಕತೆಗಳನ್ನು ರೂಢಿಸಿಕೊಂಡಿರುವ ಇವರು ತಮ್ಮ ಬ್ಯಾಂಕಿಂಗ್ ವೃತ್ತಿಯ ಜೊತೆಗೆ ಸಾಹಿತ್ಯದ ಸೇವೆಯಲ್ಲಿಯೂ ತೊಡಗಿರುವುದು ವಿಶೇಷವಾಗಿದೆ.
ಶೇಖರಗೌಡರು ಆಸರೆ ಎಂಬ ತಮ್ಮ ಪ್ರಥಮ ಕಥೆಯನ್ನು 1995-96ರಲ್ಲಿ ಬರೆದಿದ್ದರು. ಮಂದಾರ ಎಂಬ ಎರಡನೇ ಕಥೆಯನ್ನು ಆವಾಗಲೇ ಅರ್ಧ ಬರೆದು ಹಾಗೇ ಇಟ್ಟಿದ್ದರು. ಸಿಂಧನೂರಿನಿಂದ ಲಿಂಗಸೂಗೂರಿಗೆ ಹೋಗುವಾಗ ಸಿಂಧನೂರಿನ ಅವರ ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ  ಆತ್ಮೀಯ ಗೆಳೆಯ ಹಾಗೂ ಹವ್ಯಾಸಿ ಪತ್ರಕರ್ತ ಶ್ರೀನಿವಾಸ ಗಟ್ಟು ಅವರಿಗೆ ಕಥೆಗಳನ್ನು ಕೊಟ್ಟು ಹೋಗಿದ್ದರು. ಅವುಗಳನ್ನು ಓದಿದ ಗಟ್ಟು ಅವರು ಶೇಖರಗೌಡರಿಗೆ ದೂರವಾಣಿ ಮೂಲಕ ಮಾತನಾಡಿ, ನಿಮ್ಮಲ್ಲಿ ಒಬ್ಬ ಉತ್ತಮ ಕಥೆಗಾರನಿದ್ದಾನೆ. ಆತನನ್ನು ಸಮರ್ಥವಾಗಿ ಬಳಸಿಕೊಳ್ಳಿ. ಮುಂದೆ ನೀವು ಉತ್ತಮ ಕಥೆಗಾರರಾಗಿ ಹೊರಹೊಮ್ಮುತ್ತೀರಿ ಎಂದು ಪ್ರೋತ್ಸಾಹ ಮತ್ತು ಧೈರ್ಯ ತುಂಬಿದರು. ಅವರ ಮಾತುಗಳೇ ಶೇಖರಗೌಡರಿಗೆ ಪ್ರೇರಕ ಶಕ್ತಿಯಾದವು. ಅಪೂರ್ಣಗೊಂಡಿದ್ದ ಮಂದಾರ ಕಥೆಯನ್ನು ಪೂರ್ಣಗೊಳಿಸಿ ಮತ್ತೇ ಶ್ರೀನಿವಾಸ ಗಟ್ಟು ಅವರಿಗೆ ಕಳುಹಿಸಿದರು. ರಾಯಚೂರು ವಾಣಿಯ ಸಾಪ್ತಾಹಿಕ ಪುರವಣಿಯನ್ನು ನೋಡಿಕೊಳ್ಳುತ್ತಿರುವ ಗಟ್ಟು ಅವರು ಭಾನುವಾರದ ಸಾಪ್ತಾಹಿಕದಲ್ಲಿ ಮಂದಾರ ಕಥೆಯನ್ನು ದಿನಾಂಕ 17-09-2010ರಂದು ಪ್ರಕಟಿಸಿದರು. ಅಲ್ಲಿಂದ ಅವರ ಕಥಾ ಪ್ರಪಂಚ ವಿಸ್ತಾರವಾಗುತ್ತಾ ಸಾಗಿತು.
ಮಂದಾರ ಎಂಬ ಹೆಸರಿನ 22 ಕಥೆಗಳುಳ್ಳ ಮೊದಲ ಕಥಾ ಸಂಕಲನವನ್ನು ಲಿಂಗಸೂಗೂರಿನಲ್ಲಿ ದಿನಾಂಕ 11-03-2012ರಂದು ಶೇಖರಗೌಡರು ಅವರ ಪ್ರೌಢ ಶಾಲೆಯ ವಿದ್ಯಾ ಗುರುಗಳಾದ ಪರಮೇಶಪ್ಪ ವೈ ದಂಡಿನ್ ಅವರ ಅಮೃತ ಹಸ್ತದಿಂದ ಬಿಡುಗಡೆ ಮಾಡಿಸಿದರು. ದಂಡಿನ್ ಅವರೇ ಆ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಗೌಡರನ್ನು ಹರಸಿದ್ದಾರೆ.
ಆ ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಅಯ್ಯಪ್ಪ ತುಕ್ಕಾಯಿ, ಬೆನ್ನುಡಿ ಬರೆದ ಉಪನ್ಯಾಸಕರಾದ ಡಾ. ಅಮರೇಶ್ ಯತಗಲ್, ಲಿಂಗಸೂಗೂರಿನ ಕಸಾಪ ಅಧ್ಯಕ್ಷರಾದ ಮಂಜುನಾಥ ಕಾಮಿನ್, ಹಟ್ಟಿಯ ಪ್ರಜಾ ಸಮರ ಪತ್ರಿಕೆ ಸಂಪಾದಕ ಎಂ.ಲಿಂಗರಾಜು, ಎಸ್.ಬಿ.ಎಚ್.ದ ಕಾನೂನು ಸಲಹೆಗಾರರಾದ ಬಸವರಾಜ್ ಮಾಲೀಪಾಟೀಲ್, ಪತ್ರಕರ್ತ ಡಿ.ಎಚ್.ಕಂಬಳಿ, ಅನೇಕ ಸಾಹಿತಿಗಳು, ಪತ್ರಕರ್ತರು ಸಾಕ್ಷಿಯಾಗಿದ್ದರು.
ಪ್ರೀತಿ, ಕರುಣೆ, ಸೌಂದರ್ಯ, ಬದುಕಿನ ಸಮಸ್ಯೆಗಳು-ಪರಿಹಾರ, ಮಾನವೀಯ ಮೌಲ್ಯಗಳು, ಸಾಮಾಜಿಕ ಮೌಢ್ಯಗಳು, ದಕ್ಷತೆ, ಪ್ರಾಮಾಣಿಕತೆ, ಕಾರ್ಯತತ್ಪರತೆ, ಸೇವಾ ಮನೋಭಾವನೆಯಂಥಹ ಗುಣಗಳ ಮೇಳೈಸುವಿಕೆಯ ತಂತ್ರಗಾರಿಕೆಯ ಮುಖೇನ ಶೇಖರಗೌಡರು ಓದುಗರಲ್ಲಿ ಭರವಸೆಯ ಸಾಫಲ್ಯತೆಯನ್ನು ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು. ವಿಧವಾ, ಮರುವಿವಾಹದಂಥಹ ಸುಧಾರಣೆಗಳನ್ನು ಇವರ ಕಥೆಗಳು ಒಳಗೊಂಡು, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿವೆ.
ವರ್ಗ, ಜಾತಿ, ಧರ್ಮದ ಸಂಕೋಲೆಗಳನ್ನು ಕಿತ್ತೆಸೆದು ಬಾಂಧವ್ಯ ಬೆಸೆಯುತ್ತಾ ಸಮಾಜಕ್ಕೆ ಮಾರ್ಗದಶರ್ಿಯಾಗಿವೆ ಅವರ ಕಥೆಗಳು. ಇವರ ಆಕರ್ಷಕ ಶೈಲಿ, ಕುತೂಹಲಕಾರಿಯಾದ ಕಥಾವಸ್ತುವಿನ ವೈವಿಧ್ಯತೆಗಳು ಶೇಖರಗೌಡರನ್ನು ಉತ್ತಮ ಕಥೆಗಾರೆಂದು ಸಾಬೀತುಪಡಿಸಿವೆ.
ಜೂನ್ 2010ರಿಂದ ಶೇಖರಗೌಡರ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಿದೆ. ಕೆಲಸಗಳ ಒತ್ತಡದಲ್ಲಿಯೂ ಸಿಗುವ ಸಮಯವನ್ನೇ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷ್ಸಿ ಎಂಬಂತೆ ಇವರ ಮೂರು ಕಥಾ ಸಂಕಲನಗಳು ಅಚ್ಚಿನಲ್ಲಿವೆ. ಬೆಂಗಳೂರಿನ ಅಕ್ಕ ಪ್ರಕಾಶನದವರು ಹುಚ್ಚು ಮನಸೇ ನೀ ಹಿಂಗ್ಯಾಕ ಎಂಬ 20 ಕಥೆಗಳುಳ್ಳ ಸಂಕಲನವನ್ನು ಹೊರತರುತ್ತಿದ್ದಾರೆ. ಗದುಗಿನ ಪಿ.ಸಿ.ಶಾಬಾದಿಮಠ ಪ್ರಕಾಶನದವರು ಒಲವೇ ಜೀವನ ಸಾಕ್ಷಾತ್ಕಾರ, ಹೊಸ ಬೆಳಕು ಎಂಬ ಎರಡು ತಲಾ 15 ಕಥೆಗಳುಳ್ಳ ಸಂಕಲನಗಳನ್ನು ಹೊರತರುತ್ತಿದ್ದಾರೆ. ಹಾಗೇ ಅವರೇ ಪ್ರೀತಿಯೆಂಬ ಆಯಸ್ಕಾಂತ ಎಂಬ ಕಾದಂಬರಿ ಕೂಡ ಸಧ್ಯದಲ್ಲಿ ಹೊರತರುತ್ತಿದ್ದಾರೆ.
ಸ್ಟೇಟ್ ಬ್ಯಾಂಕ್ ಹೈದರಾಬಾದಿನ ಮುಖ್ಯ ಕಚೇರಿಯವರು ಏರ್ಪಡಿಸಿದ್ದ ಎಸ್.ಬಿ.ಎಚ್.ರಚನಾ-2012 ಸಾಹಿತ್ಯಿಕ ಸ್ಪಧರ್ೆಯಲ್ಲಿ ಕನ್ನಡ ಕಥಾ ವಿಭಾಗದಲ್ಲಿ ಶೇಖರಗೌಡರ ಇಂಚರ-ಸದ್ಭವ್-ಅಂಕಿತಾ ಎಂಬ ಕಥೆ ಪ್ರಥಮ ಬಹುಮಾನ ಪಡೆದುಕೊಂಡಿದೆ. ದಿನಾಂಕ 05-05-2012 ರಂದು ಹೈದರಾಬಾದಿನ ರವೀಂದ್ರ ಭಾರತಿ ಕಲಾ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿದರ್ೇಶಕರಾದ ಎಂ.ಭಗವಂತರಾವ್ ಅವರು ಶೇಖರಗೌಡ ದಂಪತಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ, ಫಲಕ ಮತ್ತು ಐದು ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಬೆಂಗಳೂರಿನ ಶೈಲಜಾ ಸುರೇಶ್ ಎನ್ನುವವರು ಏರ್ಪಡಿಸಿದ್ದ ಲೇಖಿಕಾ ಕಥಾ ಸ್ಪಧರ್ೆಯಲ್ಲಿ ಶೇಖರಗೌಡರ ದೀಪಾವಳಿ ಎಂಬ ಕಥೆಗೆ ತೃತೀಯ ಬಹುಮಾನ ಲಭಿಸಿದೆ.
ರಾಯಚೂರು ವಾಣಿ ಸಾಪ್ತಾಹಿಕದಲ್ಲಿ ಹದಿನೈದಕ್ಕೂ ಹೆಚ್ಚು ಕಥೆಗಳು, ಕರ್ಮವೀರ ವಾರಪತ್ರಿಕೆಯಲ್ಲಿ ಮೂರು ಕಥೆಗಳು ಮತ್ತು ತಮ್ಮ ಪ್ರಜಾಸಮರದಲ್ಲಿಯೂ ಐದಾರು ಕಥೆಗಳು ಪ್ರಕಟಗೊಂಡಿವೆ. ಬಸವ ಮಾರ್ಗ, ಹೊಸದಿಗಂತ ಪತ್ರಿಕೆಗಳಲ್ಲೂ ಆದ್ಯಾತ್ಮಿಕ ಲೇಖನಗಳು, ಪ್ರತಿಕ್ರಿಯೆಗಳು ಪ್ರಕಟವಾಗಿವೆ.
ತಮ್ಮ ಕಥೆಗಳ ನೇಯುವಿಕೆಗೆ ಅನೇಕ ಹಿರಿಯ ಸಾಹಿತಿಗಳು, ಸ್ನೇಹಿತರು, ವಕೀಲ ಮಿತ್ರರು, ಬ್ಯಾಂಕಿನ ಸಿಬ್ಬಂದಿವರ್ಗದವರು ಬೆಂಬಲಿಸಿದ್ದಾರೆ ಎಂದು ವಿನಯದಿಂದಲೇ ಹೇಳುವ ಇವರು ರಾಯಚೂರು ವಾಣಿ ಪತ್ರಿಕೆ ತಮ್ಮ ಮಂದಾರ ಕಥೆಯನ್ನು ಪ್ರಕಟಿಸುವ ಮೂಲಕ ತಮಗೆ ಮತ್ತೇ ಮತ್ತೇ ಬರೆಯಲು ಪ್ರೇರೇಪಿಸಿತು ಎಂದು ನೆನಪಿಸಿಕೊಳ್ಳುತ್ತಾ ಪತ್ರಿಕೆಯ ಆಡಳಿತ ಮಂಡಳಿಗೆ ಕೃತಜ್ಞತೆ ಅಪರ್ಿಸುತ್ತಾರೆ.
ತಮ್ಮ ಧರ್ಮಪತ್ನಿ ಅಕ್ಕಮಹಾದೇವಿ ತಮ್ಮ ಬರವಣಿಗೆಗೆ ಮತ್ತೊಂದು ಸ್ಫೂತರ್ಿ ಎನ್ನುವ ಇವರು ಕಿರಣ್, ಸಂತೋಷ್ ಮತ್ತು ಅನುಪಮಾ ಎಂಬ ಮಕ್ಕಳನ್ನು ಹೊಂದಿದ್ದಾರೆ. ಎಂ.ಬಿ.ಎ. ಪಡೆದಿರುವ ಕಿರಣ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಸಂತೋಷ್ ಎಂ.ಬಿ.ಎ. ಸ್ನಾತಕೋತ್ತರ ಪದವೀಧರನಾದರೂ ತೋಟಗಾರಿಕೆ ಮಾಡುತ್ತಿದ್ದಾರೆ. ಮಗಳು ಅನುಪಮಾ ಇದೇ ವರ್ಷ ಎಂ.ಟೆಕ್.(ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್) ದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾಂಕ್ ಪಡೆದು ಬಂಗಾರದ ಪದಕ ಪಡೆದಿರುವರು. ದಿನಾಂಕ 08-04-2012ರಂದು ಜರುಗಿದ ಘಟಿಕೋತ್ಸವದಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸದಾನಂದ ಗೌಡರಿಂದ ಪ್ರಶಸ್ತಿ ಪತ್ರ ಮತ್ತು ಬಂಗಾರದ ಪದಕ ಪಡೆದರು.
ಬಡತನದಲ್ಲಿ ಬೆಳೆದು ಬಂದ ಇವರು ತಮ್ಮ ವೃತ್ತಿ ಜೀವನದಲ್ಲಿಯೇ ಸಂತುಷ್ಟರಾಗಿ ಸಂತೋಷದ ದಿನಗಳನ್ನು ಕಳೆಯಬಹುದಾಗಿತ್ತು. ಆದರೆ ಕಥಾ ಸಾಹಿತ್ಯದಲ್ಲಿಯೇ ಸಂತೋಷವನ್ನು ಕಾಣುತ್ತಿರುವ ಇವರು ರಾಯಚೂರು ಜಿಲ್ಲೆಯಲ್ಲಿ ಒಬ್ಬ ಉತ್ತಮ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವುದು ಒಳ್ಳೆಯ ಬೆಳವಣಿಗೆ.

No comments:

Post a Comment

Thanku