ದೇವರು ಮಸೀದಿ, ಮಂದಿರದಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಗುರು ಖಾದರಿಪೀರಾ ಅವರ ಆಶಯವಾಗಿತ್ತು. ಆದ್ದರಿಂದ ಅವರಿಗೆ ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ವೆನಿಸಿತ್ತು ಎನ್ನುತ್ತಾರೆ ಸಂಶೋಧಕ ರಂಜಾನ್ ದಗಾ೯.
ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ (1822-1896) ಅವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದವರು. ಕನ್ನಡದ ಮೊದಲ ಮುಸ್ಲಿಂ ತತ್ತ್ವಪದಕಾರರಾದ ಗುಲಬಗಾ೯ ಜಿಲ್ಲೆ ಜೇವಗಿ೯ ತಾಲ್ಲೂಕಿನ ಚೆನ್ನೂರು ಜಲಾಲಸಾಹೇಬರು ಇವರ ಹಿರಿಯ ಸಮಕಾಲೀನರು. (1770-1850) ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜನಮನ ಸೂರೆಗೊಂಡ ತತ್ತ್ವಪದಕಾರ ಶಿಶುನಾಳ ಶರೀಫರು (1819-1889) ಇವರ ಸಮಕಾಲೀನರು. ಈ ಮೂವರು ಕನ್ನಡದಲ್ಲಿ ಬರೆದ ಮೊದಲ ಮುಸ್ಲಿಂ ಕವಿಗಳಾಗಿದ್ದಾರೆ.
ಚೆನ್ನೂರ ಜಲಾಲಸಾಹೇಬರ ಮೂರು ತತ್ತ್ವಪದಗಳು ಸಿಕ್ಕಿವೆ. ಹಿಂದುಗಳು ಮತ್ತು ಮುಸಲ್ಮಾನರನ್ನು ಅವರು ಭಾವೈಕ್ಯದ ಕಡೆಗೆ ಸೆಳೆದರು. ಮಾನವಕುಲದ ಮೂಲ ಒಂದೇ ಎಂದು ತಿಳಿಸಿದರು. ಸೂಫಿ ಇಸ್ಲಾಂ ತತ್ತ್ವ, ಶರಣರ ನಡೆ ನುಡಿ ಸಿದ್ಧಾಂತ ಮತ್ತು ಕಳಸದ ಗುರು ಗೋವಿಂದಭಟ್ಟರಿಂದ ಸಂಪಾದಿಸಿದ ಉಪನಿಷತ್ ಜ್ಞಾನದ ಮೂಲಕ ಶಿಶುನಾಳ ಶರೀಫರು ನಿಗು೯ಣ ನಿರಾಕಾರ ಬ್ರಹ್ಮನೆನಿಸಿದ ಪರಮಾತ್ಮನನ್ನು ಅನುಭಾವಿಸಿದರು. ಬೋಧ ಒಂದೇ ಬ್ರಹ್ಮನಾದ ಒಂದೇ ಎಂದು ಸಾರಿದರು. ಗುರು ಖಾದರಿ ಪೀರಾ ಅವರು ಶರಣ ಮತ್ತು ಸೂಫಿ ತತ್ತ್ವದ ಮೂಲಕ ಅದ್ವೈತವನ್ನು ಸಾಧಿಸಿದರು. ಮಾನವಕುಲದ ಏಕತೆ ಮತ್ತು ಮಾನವರ ಒಳಗೇ ದೇವರಿದ್ದಾನೆ ಎಂಬುದರ ಕುರಿತು ಅವರು ಮನ ಮುಟ್ಟುವಂತೆ ಬರೆದ 255 ತತ್ತ್ವಪದಗಳು ಸಿಕ್ಕಿವೆ. ಅವುಗಳಲ್ಲಿ ಕೆಲವೊಂದು ಉದು೯ ಭಾಷೆಯಲ್ಲಿವೆ ಕೆಲವೊಂದು ಉದು೯ ಮಿಶ್ರಿತ ಕನ್ನಡ ಭಾಷೆಯಲ್ಲಿವೆ. ಉಳಿದ ಬಹುಪಾಲು ತತ್ತ್ವ ಪದಗಳು ರಾಯಚೂರು ಭಾಗದ ಜನಪದ ಕನ್ನಡದಲ್ಲಿವೆ. ನಿಜಾಂ ಆಡಳಿತದಿಂದಾಗಿ ಅಂದಿನ ದಿನಗಳಲ್ಲಿ ಉದು೯ ಭಾಷೆಯ ಪ್ರಭಾವವಿರುವ ಆ ಪ್ರದೇಶದಲ್ಲಿ ಈ ಸೂಫಿಸಂತ ಕನ್ನಡದಲ್ಲಿ ಬರೆದದ್ದು ಕನ್ನಡವನ್ನು ಕಡೆಗಣಿಸುವವರ ಕಣ್ಣು ತೆರೆಸುವಂಥದ್ದಾಗಿದೆ.
ಈ ಮೂವರು ತತ್ತ್ವಪದಕಾರರ ಆಶಯ ಒಂದೇ ಆಗಿ ತ್ತು. ಆದರೆ ಗುರು ಖಾದರಿಪೀರಾ ಅವರು ಇಸ್ಲಾಂ ತತ್ತ್ವಗಳ ರಹಸ್ಯವನ್ನು ಭೇದಿಸಿ ಕನ್ನಡಿಗರಿಗೆ ಮಾನವ ಏಕತೆಯ ಮಹತ್ವವನ್ನು ತಿಳಿಸಿದ್ದು ವಿಶಿಷ್ಟವಾಗಿದೆ. ಅಹಂ ಬ್ರಹ್ಮಾಸ್ಮಿ (ನಾನೇ ದೇವರು) ಎಂದು ಶಂಕರಾಚಾರ್ಯರು ಹೇಳಿದರೆ. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಬಸವಣ್ಣನವರು ತಿಳಿಸಿದರು. ನಾನು ದೇವರಲ್ಲ ಆದರೆ ನನ್ನೊಳಗಿನ ದೇವರ ದಾಸ ನಾನು ಎಂಬದು ಇದರ ಅರ್ಥ. ಇದೇ ವಿಚಾರವನ್ನು ಪವಿತ್ರ ಕುರಾನ್ ತಿಳಿಸುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟವರು ಮತ್ತು ಆ ಮೂಲಕ ಸೂಫಿಗಳ ಪ್ರೇಮತತ್ತ್ವವನ್ನು ಸಾರಿದವರು ಗುರು ಖಾದರಿ ಪೀರಾ ಅವರು.
ವನಹನು ಅಕ್ರಬಮಿನ್ ಹಬ್ಲಿಲ್ ವರೀದ್ ಎಂಬ ಕುರಾನ್ ವಾಕ್ಯ ದೇವರು ಕಾಯದಲ್ಲಿ ಇದ್ದಾನೆ ಎಂಬ ಭಾವಾರ್ಥವನ್ನು ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೇ ಗುರು ಪೀರಾ ಅವರು ಕನ್ನಡದಲ್ಲಿ ಹೀಗೆ ಹೇಳಿ ದ್ದಾರೆ: ನನ್ನ ಮನೆಯಲ್ಲಿ ಇದ್ದಾನೊ ನಲ್ಲಾ; ಇವನೇ ಅವನೆಂದು ತಿಳಿಯಲಿಲ್ಲಾ
ಗುರು ಖಾದರಿಪೀರಾ ಅವರು ಕನ್ನಡ, ಹಿಂದಿ, ಉದು೯, ಸಂಸ್ಕೃತ, ಪಾಸಿ೯ ಮತ್ತು ಅರಬಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಣತರಾಗಿದ್ದರು. ಆದರೆ ಕನ್ನಡದಲ್ಲಿ ಸೂಫಿ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಬಹಳ ಆಸಕ್ತಿ ವಹಿಸಿದರು.
ಅನ ಅಲ್ ಹಖ್ (ನಾನೇ ಸತ್ಯ) ಎಂದು ಹೇಳಿದ ಇರಾನಿನ ಸೂಫಿ ಸಂತ ಮನಸೂರ್ ಅಲ್ ಹಲ್ಲಾಜ್ (858-922) ನನ್ನು ದೈವನಿಂದನೆಯ ಆರೋಪ ಹೊರಿಸಿ ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿ ಗಲ್ಲಿಗೇರಿಸಲಾಯಿತು. ಸತ್ಯ ಎಂಬುದು ಅಲ್ಲಾಹನ 99 ಹೆಸರುಗಳಲ್ಲಿ ಒಂದಾಗಿರುವು ದರಿಂದ ಮನಸೂರ್ ಹೇಳುವ ಸಾಲಿನ ಅರ್ಥ ನಾನೇ ದೇವರು ಎಂದು ಆಗುತ್ತದೆ ಎಂದು ಮೂಲಭೂತವಾದಿಗಳು ಪ್ರತಿಪಾ ದಿಸಿದರು. ಈ ಕಾರಣದಿಂದಲೇ ಅವನನ್ನು ಗಲ್ಲಿಗೇರಿಸ ಲಾಯಿತು. ಗುರು ಖಾದರಿಪೀರಾ ಕೂಡ ಇಂಥ ಪರಂಪರೆಗೆ ಸೇರಿದ ಸೂಫಿಸಂತ. ಈ ಹಿನ್ನೆಲೆಯಲ್ಲೇ ಅವರು ಇಸ್ಲಾಂ ತತ್ತ್ವಜ್ಞಾನವನ್ನು ವ್ಯಾಖ್ಯಾನಿಸಿದರು.
ಒಬ್ಬನೇ ದೇವರು. ಆದರೆ ಮಾನವರೆಲ್ಲರಲ್ಲಿ ಆತ ಇರುವುದರಿಂದ ಎಲ್ಲರೂ ದೇವರು. ಎಲ್ಲರಲ್ಲಿ ದೇವರಿರುವುದರಿಂದ ಅವನನ್ನು ಸ್ವರ್ಗದಲ್ಲಿ, ಕಾಬಾ-ಕಾಶಿಯಲ್ಲಿ ಅಥವಾ ಮಂದಿರ-ಮಸೀದಿಗಳಲ್ಲಿ ಹುಡುಕಬೇಕಿಲ್ಲ. ಆತ ಇರುವುದು ದೇಹ ಎಂಬ ಮಂದಿರದೊಳಗೆ ಎಂಬುದು ಖಾದರಿಪೀರಾ ಅವರ ಅಚಲ ನಂಬಿಕೆಯಾಗಿತ್ತು. ಹೀಗೆ ಅವರ ಏಕದೇವೋಪಾಸನೆಯ ಪರಿಕಲ್ಪನೆ ಪ್ರತಿಯೊಬ್ಬ ಮಾನವನೊಳಗಿನ ಘನದ ಮೂಲಕ ಮಾನವನ ಘನತೆಯನ್ನು ಎತ್ತಿಹಿಡಿಯುವಂಥದ್ದಾಗಿದೆ.
ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಮಹಮ್ಮದ್ ಪೈಗಂಬರರ ವಚನಗಳಾದ ಹದೀಸ್ ಅನ್ನು ಅವರು ಕೂಲಂಕಷವಾಗಿ ಅಧ್ಯಯನ ಮಾಡಿದರು. ಇಸ್ಲಾಮಿನ ಮಾನವೀಯ ಪರಂಪರೆಯ ವಕ್ತಾರರಾದರು. ಆ ಮೂಲಕ ಸೂಫಿ ಜೀವಕಾರುಣ್ಯ ಮತ್ತು ಪ್ರೇಮತತ್ತ್ವವನ್ನು ತಮ್ಮ ತತ್ತ್ವಪದಗಳ ಮೂಲಕ ಸಾರಿದರು. ಶರಣರ ವಚನಗಳ ಅಧ್ಯಯನದೊಂದಿಗೆ ವೇದೋಪನಿಷತ್ತುಗಳ ಅಧ್ಯಯನವನ್ನೂ ಮಾಡಿದರು. ವೈದಿಕರ ಜಡ ವಿಚಾರಗಳನ್ನು ದೂರ ಸರಿಸಿ, ಮಾನವೀಯ ಚಿಂತನೆಗಳನ್ನು ಸ್ವೀಕರಿಸಿ, ಶರಣರ ತತ್ವಕ್ಕೆ ಮಾರುಹೋಗಿ ಸೂಫಿ ತತ್ವದ ಜೊತೆ ಸಮೀಕರಿಸಿದರು. ಸೂಫಿ, ಶರಣ, ಸಂತ ಮತ್ತು ದಾಸರ ತತ್ತ್ವಗಳೊಳಗಿನ ಜೀವಪರ ನಿಲುವನ್ನು ಎತ್ತಿಹಿಡಿದ ಗುರು ಖಾದರಿಪೀರಾ ಅವರು ಈ ನಾಲ್ಕೂ ವಿಚಾರಧಾರೆಗಳನ್ನು ತತ್ತ್ವಪದಕಾರರಾಗಿ ಸ್ವೀಕರಿಸಿದ್ದಾರೆ. ಇವುಗಳ ಒಳತೋಟಿಯ ಪ್ರಜ್ಞೆಯೊಂದಿಗೆ ಅನೇಕ ಕಡೆಗಳಲ್ಲಿ ಇವುಗಳನ್ನು ಸಮಾನಾರ್ಥದಲ್ಲಿ ಬಳಸಿದ್ದಾರೆ. ಅಷ್ಟೇ ಅಲ್ಲದೆ ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ. ಹೀಗಾಗಿ ಅವರ ತತ್ವ್ವಪದಗಳು ಸೂಫಿ ಮತ್ತು ಶರಣ ತತ್ವಗಳ ಮಹಾ ಸಂಗಮವಾಗಿವೆ.
19ನೇ ಶತಮಾನದ ಅಂತ್ಯದವರೆಗೆ ಕನ್ನಡಿಗರಿಗೆ ವಚನಗಳು ಪ್ರಕಟಿತ ಗ್ರಂಥರೂಪದಲ್ಲಿ ಲಭ್ಯವಿರಲಿಲ್ಲ. ವಚನಕಟ್ಟುಗಳು ಪೂಜೆಯ ವಸ್ತುಗಳಾಗಿ ಪರಿಣಮಿಸಿದ್ದವು. ಇಂಥ ಸ್ಥಿತಿಯಲ್ಲಿ ಗುರು ಖಾದರಿಪೀರಾ ಅವರು ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ತತ್ವ ಎಲ್ಲ ದೃಷ್ಟಿಯಿಂದಲೂ ಸೂಫಿತತ್ತ್ವಕ್ಕೆ ಸಮನಾಗಿದೆ ಎಂಬುದನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ತಾವೊಬ್ಬ ಬಸವಣ್ಣನ ಅನುಯಾಯಿಯಾಗಿದ್ದು ಬಸವಣ್ಣನೇ ತಮ್ಮ ಪ್ರಾಣ ಎಂದು ಸಾರಿದ್ದಾರೆ. ಅವರ ವಿಚಾರಗಳು ಮುಖ್ಯವಾಗಿ ಬಸವಣ್ಣನವರ ವಿಚಾರಗಳೊಂದಿಗೆ ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ನಮ್ಮೊಳಗಿನ ಘನದ ಪೂಜೆ ಮಾತ್ರ ನಿಜವಾದ ಪೂಜೆ ಎಂಬುದು ಇವರಿಬ್ಬರ ನಿಲುವಾಗಿದೆ.
ಖಾದರಿಪೀರಾ ಅವರ ಪೂರ್ವಜರು ಪೈಗಂಬರರ ಅಳಿಯ ಹಜರತ್ ಅಲಿ ಅವರ ವಂಶಸ್ಥರು.700 ವರ್ಷಗಳಷ್ಟು ಹಿಂದೆ ಇರಾಕ್ ರಾಜಧಾನಿ ಬಾಗ್ದಾದ್ನಿಂದ ಖ್ಯಾತ ಸೂಫಿಸಂತ ಮಹಬೂಬೇ ಸುಬಹಾನಿ ಅವರ ಮೊಮ್ಮಗ ಸೈಯ್ಯದ್ ವಲಿ ಉಲ್ಲಾ ಷಾ ಖಾದರಿ ಅವರು ತಮ್ಮ 13ನೇ ವಯಸ್ಸಿನಲ್ಲಿ ಒಂಟಿಯಾಗಿ ಭಾರತಕ್ಕೆ ಬಂದರು...
ಸಾಲಗುಂದಾ ಗ್ರಾಮದಲ್ಲಿ ಸೈಯದ್ ಷಾ ಮೊಹಿಯುದ್ದೀನ್ ಖಾದರಿ ಮತ್ತು ಬಿಜಾಪುರದ ಸೂಫಿ ಹಾಷಂಪೀರ ಸಂತತಿಯ ಯೂಸುಫ್ ಹುಸೇನಿಯವರ ಪುತ್ರಿ ಸೈಯದಾ ಸೋಗರಾಬೀ ಸಾಹೇಬ ಬೀಬಿ ಪುಣ್ಯ ದಂಪತಿಗಳ ಉದರದಲ್ಲಿ ದಿನಾಂಕ 11.5.1822 ಸೋಮವಾರದಂದು ಆಲಾ ಹಜರತ್ ಇಮಾಮ್ ಸೈಯದ್ ಅಬ್ದುಲ್ ಖಾದಿರ್ ಖಾದರಿ ಹಸನಿ ಉಲ್ ಹುಸೈನಿ ಹಾಷಮಿ (ಗುರು ಖಾದರಿಪೀರಾ) ಅವರು ಜನಿಸಿದರು ಸಹಾ ನುಭೂತಿ, ಮಾನವತಾವಾದ, ಸರ್ವಧರ್ಮ ಸಮಾನತೆ ಮತ್ತು ಜಾತ್ಯತೀತತೆಯನ್ನು ಮೈಗೂಡಿಸಿಕೊಂಡ ಜ್ಞಾನಾಕಾಂಕ್ಷಿಗಳಾದ ಇವರು ತಂದೆಯವರಿಂದ ಖಿಲಾಪತ್ (ಜ್ಞಾನದೀಕ್ಷೆ) ಪಡೆದು ಗುರುಪೀಠವನ್ನು ಅಲಂಕರಿಸಿದರು.
ತಮ್ಮ 22ನೇ ವಯಸ್ಸಿನಲ್ಲಿ ಬಿಜಾಪುರದ ಮಹಾನ್ ಸೂಫಿ ಯಾದ ಅಮೀನುದ್ದೀನ್ ಆಲಾ ಶೇರ್ ಏ ಖುದಾ ಬಿಜಾಪುರಿ ಅವರ ಸಂತತಿಯ ಅಸದುಲ್ಲಾ ಹುಸೈನಿಯವರ ಪುತ್ರಿ ಸೈಯದಾ ಬೀಬಿ ಜೈನಬ್ ಅವರ ಸಂಗಡ ಇವರ ವಿವಾಹ ನೆರವೇರಿತು..
ಉದು೯ ಭಾಷೆಯಲ್ಲಿ ಫೈಜುಲ್ ಹೈದರಿಯಾ, ಕನ್ನಡ ಭಾಷೆಯಲ್ಲಿ ಜ್ಞಾನಸಮುದ್ರ ಮತ್ತು ಹಿಂದಿ ಭಾಷೆಯಲ್ಲಿ ಸಾಕ್ಷಾ ತ್ಕಾರ ಎಂಬ ಪದ್ಯರೂಪದ ಮಹಾನ್ ಕೃತಿಗಳನ್ನು ರಚಿಸಿದರು. ಈ ಗ್ರಂಥಗಳಲ್ಲಿ ವ್ಯಕ್ತವಾದ ಎಲ್ಲಾ ಪದ್ಯಗಳ ಕೊನೆಯಲ್ಲಿ ಗುರುಪೀರಾ ಎಂಬ ಅಂಕಿತನಾಮದಿಂದ ಮಹಬೂಬೇ ಸುಬ ಹಾನಿ ಪೀರಾನೇಪೀರ್ ದಸ್ತಗೀರ್ ಅವರಿಗೆ ಅರ್ಪಣೆ ಮಾಡಿ ಕೊನೆಗೊಳಿಸಿದ್ದಾರೆ. ಎಂದು ಅವರ ಮೊಮ್ಮಗ ಡಾ. ಎಸ್.ಎ. ಖಾದರಿ (ಹಾಷಮಿ) ಅವರು ಜ್ಞಾನಸಮುದ್ರ ಗ್ರಂಥದ ಆರಂಭ ದಲ್ಲಿ ಗ್ರಂಥಕರ್ತ ಶ್ರೀಗುರು ಖಾದರಿಪೀರಾ ಅವರ ಕುರಿತು ಬರೆದ ಪರಿಚಯ ಲೇಖನದಲ್ಲಿ ತಿಳಿಸಿದ್ದಾರೆ.
ಜ್ಞಾನಸಮುದ್ರ ಗ್ರಂಥದಲ್ಲಿನ ತತ್ತ್ವಪದಗಳನ್ನು ಗುರು ಖಾದರಿಪೀರಾ ಅವರ ಶಿಷ್ಯರಾಗಿದ್ದ ದಿವಂಗತ ಮದಿರೆ ತಿಮ್ಮಪ್ಪ ಮತ್ತು ಅವರ ಮಗ ರಂಗಪ್ಪ ಸಾಲಗುಂದ ಅವರು ಏಕತಾರ ದೊಂದಿಗೆ ಸುಶ್ರಾವ್ಯವಾಗಿ ಹಾಡುವುದನ್ನು 1971ರಲ್ಲಿ ಕಂಡು ಎಸ್.ಎ. ಖಾದರಿರವರು ಆಕಷ೯ತರಾದರು. 1973ರಲ್ಲಿ ಶಿಷ್ಯ ವೃಂದದ ಸಹಕಾರದಿಂದ ಭಜನಾ ಮಂಡಳಿ ರಚಿಸಿ ಈ ತತ್ತ್ವ ಪದಗಳನ್ನು ಸಿಂಧನೂರು, ಆಲೂರು, ಆದವಾನಿ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲಿ ಜನಪ್ರಿಯಗೊಳಿಸಿದರು. ಕ್ರಿಸ್ತ ಶಕ 2000ದಲ್ಲಿ ಜ್ಞಾನಸಮುದ್ರ ಗ್ರಂಥವನ್ನು ಪ್ರಕಟಿಸಿದರು ಎಂದು ಆರ್. ಅಬ್ದುಲ್ ವಾಹಬ್ ಖಾದರಿ ಅವರು ಜ್ಞಾನಸ ಮುದ್ರ ಗ್ರಂಥದ ಬೆನ್ನುಡಿಯಲ್ಲಿ ಬರೆದಿದ್ದಾರೆ.
ಇಸ್ಲಾಂ ಎಂದರೆ ಶಾಂತಿಯೊ ಜಾಣ
ತಿಳಿದು ನುಡಿಯುವುದೇ ಸುಜ್ಞಾನ
ಹುರುಫೆ ಮುಖತ್ತಿಯಾತ ತಿಳಿಯದೆ
ಹೆಂಗ ತಿಳಿಯತೈತೊ ಖುರಾನ
ಎಂದು ಗುರು ಖಾದರಿಪೀರಾ ಅವರು ಬರೆದು ಮುಲ್ಲಾ ಮೌಲ್ವಿಗಳಿಗೆ ಸವಾಲು ಹಾಕಿದ್ದಾರೆ. ಮೌಲ್ವಿಗಳಿಗೆ ಗೊತ್ತಿದೆ; ಖುರಾನಿನಲ್ಲಿ ಹುರುಫೇ ಮುಖತ್ತಿಯಾತ ಎನ್ನುವ 29 ಸಂಕೇತ ಅಕ್ಷರಗಳಿವೆ. ಅಲೀಫ್, ಲಾಮ್, ಮೀಂ, ಯಾಸೀನ್ ಮುಂತಾ ದ ಈ ಸಂಕೇತ ಅಕ್ಷರಗಳಿಗೆ ಎಲ್ಲಿಯೂ ಅರ್ಥ ಸಿಗುವುದಿಲ್ಲ. ಸೂಫೀಜಂನಲ್ಲಿ ಇವುಗಳಿಗೆ ಗೌಪ್ಯವಾಗಿ ಅರ್ಥ ತಿಳಿಸಲಾಗುವುದು. ಇದರಿಂದ ನಮಗೆ ತಿಳಿಯುವುದೇನೆಂದರೆ ಗುರುಪೀರಾರವರಿಗೆ ಇವುಗಳ ಅರ್ಥ ತಿಳಿದಿದೆ ಎಂದು. ಆದುದರಿಂದ ಹುರಫೇ ಮುಕತ್ತಿಯಾತ ತಿಳಿಯದೆ ಖುರಾನ ತಿಳಿಯುವುದಿಲ್ಲಾ ಎಂದು ಸಾಧಿಕ್ ಹುಸೇನ್ ಖಾದರಿ ಅಲ್ ಅನ್ಸಾರಿ ಅವರು ಜ್ಞಾನಸಮುದ್ರಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಮಾನವಧರ್ಮಕ್ಕೆ ಜಯವಾಗಲಿ; ಮಾನವರಿಂದ ಮಾನ ವರು ಉದ್ಧಾರವಾಗಲಿ ಎಂಬ ಸಂದೇಶದೊಂದಿಗೆ ಗುರು ಖಾದರಿಪೀರಾ ಅವರು ಗ್ರಾಮ್ಯಭಾಷೆಯಲ್ಲಿ ತತ್ತ್ವಪದಗಳನ್ನು ಬರೆದು ಖುರಾನ್ ತಿರುಳನ್ನು ಮತ್ತು ಶರಣರ ವಚನಗಳ ತಿರುಳನ್ನು ಒಂದಾಗಿಸಿ ಲೋಕಾರ್ಪಣೆ ಮಾಡಿದ್ದಾರೆ.
ತತ್ತ್ವಪದಗಳು ಜನಪದ ತತ್ತ್ವಜ್ಞಾನವನ್ನೂ ಒಳಗೊಂಡಿರುತ್ತವೆ. ವಿಶ್ವಮಾನ್ಯವಾದ ಧರ್ಮತತ್ತ್ವಗಳನ್ನು ಜನಪದ ತತ್ತ್ವ ಜ್ಞಾನದೊಂದಿಗೆ ಕೂಡಿಸುವುದರ ಮೂಲಕ ರಾಯಚೂರು ಭಾಗದ ಕನ್ನಡ ಜನರ ಆಡುಭಾಷೆಯಲ್ಲಿ ಸಾಮರಸ್ಯದ ಸಾಹಿತ್ಯ ಸೃಷ್ಟಿಸಿದ ಕೀತಿ೯ ಗುರು ಖಾದರಿಪೀರಾ ಅವರಿಗೆ ಸಲ್ಲುತ್ತದೆ. ಆ ಮೂಲಕ ಮೂಲಭೂತವಾದಿಗಳು ಅರಿಯದಂಥ ಧರ್ಮದ ತಿರುಳನ್ನು ಜನಸಾಮಾನ್ಯರಿಗೆ ನೀಡಿ ಅವರ ಬದುಕನ್ನು ಅರ್ಥಪೂರ್ಣಗೊಳಿಸಿದ್ದಾರೆ.
ಗುಡಿಗುಂಡಾರದ ಜಗಳವ್ಯಾಕೊ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ
ಶಿವ ಕಾಣಲಿಲ್ಲ ನೀ ಶಿವನು; ನಿನ್ನ ದೇಹದ ಗುಡಿಯೊಳಗೆ ಕುಂತಾನು ಅವನು
ನೀನೆ ಗುಡಿಯಾಗಿ ಗುಡಿ ಕಟ್ಟುವದ್ಯಾಕೊ ಸಾಕಪ್ಪ ಸಾಕು ನಿನ್ನ ಗುಡಿಜನಗಳ ಸಾಕು
ನಿರಾಕಾರ ನಿರಾಹಾರ ಶಿವಗ ಯಪ್ಪ ನಿನ್ನಂತೆ ರೂಪ ಮಾಡಿ ಅವಗ
ಎಲ್ಲ ನಿನ್ನ ಲಾಭಕ್ಕಾಗಿ ಮಾಡಿಟ್ಟು ಅವಗ ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೊ
ಎಲ್ಲರಿಗೆ ಗುರು ಒಬ್ಬ ಸಾಕೊ ಭೇದ ಮಾಡುವ ಕೆರಗುರು ನಮಗ್ಯಾಕಬೇಕು
ಭೇದ ಮಾಡುವ ಜಗದ್ಘಾತಕರ್ಯಾಕೊ ಮಾನವ ಪ್ರೀತಿಯೆ ಮಾನವ ತಿಳಿಯಬೇಕು
ಪ್ರೀತಿಯ ರೂಪಧಾರಿ ಅವನು; ನೀವು ಪ್ರೀತಿ ಮಾಡಿರಿ ಸಿಗುವನವನು
ಪ್ರೀತಿಯಿಂದಲೇ ಭಕುತಿ, ಪ್ರೀತಿಯಿಂದಲೇ ಮುಕುತಿ, ಪ್ರೀತಿ ಇಲ್ಲದ ಬದುಕು ಬಾಳುವುದ್ಯಾಕೊ
ಜಾತಿಭೇದಗಳಿಲ್ಲ ಶಿವಗ ಯಪ್ಪಾ ಹೆಂಡರಿಲ್ಲ ಮಕ್ಕಳಿಲ್ಲ ಅವಗ
ನೋಡಿಬಂದವರಿಲ್ಲಿ ಹೇಳಲಿಲ್ಲ ನಮಗ: ಕರುಣಾಳು ಗುರುಪೀರ ಭೇದಬುದ್ಧಿ ನಮಗ್ಯಾಕೊ
ಸಾಲಗುಂದಿಪುರದೊಳಗೆ ಖಾತ್ರಿ ನೀವು ಮರಿಯದೆ ಮಾಡಬೇಕು ಪ್ರೀತಿ
ಗುರುಪೀರ ಖಾದರಿಯ ಪ್ರೀತಿಯೇ ಬಲು ಖಾತ್ರಿ; ಪ್ರೀತಿ ಇಲ್ಲದ ಬದುಕು ಬಾಳುವದ್ಯಾಕೊ
ಭೇದ ಮೂಡಿಸುವ ಯಾವುದನ್ನೂ ಖಾದರಿಪೀರಾ ಅವರು ಸ್ವೀಕರಿಸುವುದಿಲ್ಲ. ಸೌಹಾರ್ದಕ್ಕಾಗಿ ಅವರು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಪ್ರೀತಿಯಿಂದ ಮಾತ್ರ ಸೌಹಾ ರ್ದ ಸಾಧ್ಯ ಎಂಬುದನ್ನು ಅವರು ಪದೆ ಪದೆ ಒತ್ತಿ ಹೇಳಿದ್ದಾರೆ. ಕುಲ, ಗೋತ್ರ, ಜಾತಿಗಳು ಮಾನವನ ಏಕತೆಗೆ ಬಹುದೊಡ್ಡ ಕಂಟಕಗಳಾಗಿವೆ ಎಂಬುದನ್ನು ಮನಂಬುಗುವಂತೆ ತಿಳಿಸಿದ್ದಾರೆ.
150 ವರ್ಷಗಳಷ್ಟು ಹಿಂದೆಯೇ ಅವರು ಗುಡಿಗುಂಡಾ ರಗಳ ಜಗಳಗಳ ಕುರಿತು ಪ್ರಸ್ತಾಪಿಸಿದ್ದಾರೆ. ಗುಡಿವಿವಾ ದಗಳಿಂದ ಈ ದೇಶ ಇನ್ನೂ ಮುಕ್ತವಾಗಿಲ್ಲ. ಸಾವಿರಾರು ಜನರು ಈ ಘರ್ಷಣೆಗಳಿಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾನಿಯಾಗಿದೆ. ವಿವಿಧ ಸಮಾಜಗ ಳನ್ನು ಒಂದುಗೂಡಿಸದೆ ದೇಶದ ಉದ್ಧಾರವಾಗುವುದಿಲ್ಲ. ಅದಕ್ಕಾಗಿ ಗುರು ಖಾದರಿಪೀರಾ ಅವರಂತೆ ಪ್ರತಿಯೊಬ್ಬರಲ್ಲಿ ದೇವರನ್ನು ಕಂಡು ಪ್ರತಿಯೊಬ್ಬರ ಘನತೆ ಗೌರವಗಳನ್ನು ಮಾನ್ಯಮಾಡುತ್ತ ಮಾನವಕುಲ ಒಂದೇ ಎಂದು ದಯಾ ಭಾವ ಮತ್ತು ಪ್ರೇಮಭಾವ ದೊಂದಿಗೆ ಬದುಕುವುದರಿಂದ ಮಾತ್ರ ಈ ದೇಶ ಔನ್ನತ್ಯಕ್ಕೆ ಏರಲು ಸಾಧ್ಯ.
ಬಂಗಾರ ಗಟ್ಟಿಯಿಂದ ತಮ್ಮ ಇಲ್ಲಿ ವಸ್ತ ಮಾಡ್ಯಾರಲ್ಲ
ಬಂಗಾರ ಬ್ಯಾರೆ ವಸ್ತ ಬ್ಯಾರೆ ಎಂದು ಹೇಳತಾರ ಜನರೆಲ್ಲ
ಬಂಗಾರವೆ ವಸ್ತ ವಸ್ತವೆ ಬಂಗಾರ ಮೂಲ ತಿಳಿಯಲಿಲ್ಲ
ಸಾಲಗುಂದಿಪುರದೊಳಗೆ ಸೇರಿ ನೀ ನೋಡು ನಿನ್ನ ಮೊದಲ
ಗುರುಪೀರಖಾದರಿ ಕೇಳಿ ತಿಳಿದು ತಾವು ನೋಡಿ ಹೇಳ್ಯಾರಲ್ಲಾ
ಮನುಷ್ಯರೇ ದೇವರು, ದೇವರೇ ಮನುಷ್ಯರು ಬಿಚ್ಚಿ ಹೇಳಿದರೆಲ್ಲ
ಮನುಷ್ಯರೊಳಗೆ ದೇವರಿದ್ದಾನೆ. ಆ ದೇವರು ಮನುಷ್ಯ ರೂಪದಲ್ಲಿದ್ದಾನೆ. ಇದನ್ನು ತಿಳಿದವ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಹೀಗೆ ಒಂದಾದಾಗ ಆತ ಅಂತಃ ಕರಣ ಮತ್ತು ಪ್ರೇಮ ಭಾವವನ್ನು ತಾಳುತ್ತಾನೆ. ಆ ಮೂಲಕ ದೇವಸ್ವರೂಪನೇ ಆಗುತ್ತಾನೆ. ಈ ಪ್ರಕ್ರಿಯೆಯನ್ನು ಅನುಭವಿ ಸುವ ಮೊದಲು ಮಾನವ ರೂಪದಲ್ಲಿರುವ ನಾವು ನಿಜ ಮಾನವರಾಗಬೇಕಾಗುತ್ತದೆ. ನಿಜಮಾನವರಾದ ಮನುಷ್ಯರೇ ದೇವರು. ಹೀಗೆ ದೇವರೇ ಮನುಷ್ಯರೂಪದಲ್ಲಿರುವ ಕ್ರಮವನ್ನು ಗುರು ಖಾದರಿಪೀರಾ ಅವರು ತಿಳಿಸಿದ್ದಾರೆ.
ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕಂಡು
ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕೂಡಿ
ಸತ್ಯವನು ನಾ ತಿಳಕೊಂಡೆ ಜನರಿಗೆ ನಾ ಕೆಟ್ಟವ ಕಂಡೆ
ಪ್ರೀತಿ ಮಾಡಿ ಎಲ್ಲ ಪಡಕೊಂಡೆ ಸದ್ಗುರುವಿನ ಕಂಡೆ
ಮಾನವರು ಉನ್ನತಿಯನ್ನು ಸಾಧಿಸಬೇಕಾದರೆ ತಮ್ಮೊಳಗಿನ ದೇವರಲ್ಲಿ, ಅಂದರೆ ತಮ್ಮ ಆತ್ಮಸಾಕ್ಷಿಯಲ್ಲಿ ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಬೇಕು. ಅಲ್ಲದೆ ತಮ್ಮೊಳ ಗಿನ ದೇವರು ಹೇಳಿದಂತೆ ಕೇಳುವುದರ ಮೂಲಕ ಆ ದೇವರೊಡನೆ ಕೂಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸಕಲಜೀವಾತ್ಮರಿಗೆ ಲೇಸನೇ ಬಯಸುವಂಥ ಮನಸ್ಸು ರೂಪು ಗೊಳ್ಳುವುದು. ಆಗ ಜಾತಿ, ವರ್ಣ, ಮೇಲು, ಕೀಳು ಮುಂತಾ ದ ಮಾನಸಿಕ ಹೊಲಸು ಮಾಯವಾಗುವವು. ಹೀಗೆ ಮಾನವ ಉದಾತ್ತವಾಗುವನು. ಆದರೆ ವರ್ಣವ್ಯವಸ್ಥೆಯಿಂದ ಲಾಭ ಪಡೆಯುವವರು ಇಂಥ ಮಾನಸಿಕ ಸ್ಥಿತಿಗೆ ವಿರುದ್ಧವಾಗಿರು ತ್ತಾರೆ. ಎಲ್ಲರೂ ಸಮಾನರಾದಾಗ ಅವರ ಅಸ್ತಿತ್ವವೇ ಉಳಿಯು ವುದಿಲ್ಲ. ಹೀಗಾಗಿ ಅಂಥವರ ದೃಷ್ಟಿಯಲ್ಲಿ ಇಂಥ ಉತ್ತಮರು ಕೆಟ್ಟವರಾಗಿ ಕಾಣುತ್ತಾರೆ. ಆದರೆ ಉತ್ತಮರು ಯಾವುದಕ್ಕೂ ಎದೆಗುಂದದೆ ಜಗತ್ತನ್ನು ಪ್ರೀತಿಸುತ್ತಲೇ ಮುಂದೆ ಮುಂದೆ ಸಾಗುತ್ತ ತಮ್ಮೊಳಗಿನ ಅರಿವೆಂಬ ಸದ್ಗುರುವಾದ ದೇವರನ್ನು ಕಾಣುತ್ತಾರೆ. ಅರಿವು ಎಂದರೆ ಬೇರೆ ಅಲ್ಲ. ನಮ್ಮೊಳಗೇ ದೇವರಿದ್ದಾನೆ ಎಂಬುದೇ ಅರಿವು. ಸಕಲ ಜೀವಿಗಳಲ್ಲಿ ದೇವರಿ ದ್ದಾನೆ ಎಂಬುದೇ ಅರಿವು. ಈ ಕಾರಣದಿಂದ ಸಕಲಜೀವಾ ತ್ಮರಿಗೆ ಲೇಸನ್ನೇ ಬಯಸಬೇಕು. ಸಕಲರ ಜೊತೆ ಪ್ರೇಮಭಾ ವದಿಂದ ಇರಬೇಕು. ದಯೆಯೇ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕು ಎಂದು ನಾವು ನಿರ್ಧರಿಸುವಂತೆ ಮಾಡುವುದೇ ಅರಿವು.
ದೇವರು ಒಬ್ಬನಲ್ಲೊ ಯಪ್ಪ ಬಹಳ ಬಹಳ ಮಂದಿ ಹಾರ
ದೇವರು ಅಲ್ಲೆ ಅಲ್ಲೊ ಜಾಣ ಅವರು ಇಲ್ಲೆ ಇಲ್ಲೆ ಹಾರ
ತೆತ್ತೀಸ ಕೋಟಿ ಎಣಿಸಿ ಹೇಳಿದರು; ಎಲ್ಲರೂ ಇಲ್ಲೇ ಹಾರ ಅವರೆ
ನಾವಾಗಿ ಇರುತಾರ; ಹೇಳಬ್ಯಾಡ ಸತ್ಯ ಹೊಡಿಯುತಾರ
ಹೂವಿನೊಳ್ ವಾಸನೆ, ಹಾಲಿನೊಳಗೆ ತುಪ್ಪ ಎಲ್ಲರೂ ಒಪ್ತಾರ
ಗುರುಪೀರಾ ಖಾದರಿ ಬಿಚ್ಚಿ ಹೇಳಿದರೆ ಎಗರಿ ಬೀಳತಾರ
ದೇವರು ಬಹಳ ಮಂದಿ ಇದ್ದಾರೆ ಎಂದರೆ ಬಹುದೇ ವೋಪಾಸನೆ ಮಾಡಬೇಕೆಂದಲ್ಲ. ಪ್ರತಿಯೊಬ್ಬರು ತಮ್ಮೊಳಗಿನ ದೇವರನ್ನು ಆರಾಧಿಸಬೇಕು ಎಂದು ಅರ್ಥ. ಪ್ರತಿಯೊಬ್ಬರು ತಮ್ಮೊಳಗಿನ ದೇವರ ಜೊತೆ ಬದುಕಲು ಕಲಿತರೆ ಇಡೀ ವಿಶ್ವ ಸುಲಿಗೆಯಿಂದ, ಮೇಲುಕೀಳು ಭಾವನೆಯಿಂದ, ಹಿಂಸೆ, ಅತ್ಯಾಚಾರ, ಕೊಲೆ ಮತ್ತು ಯುದ್ಧಗಳಿಂದ ಮುಕ್ತವಾಗುತ್ತದೆ. ಹೂವಿನಲ್ಲಿ ವಾಸನೆ ಇರುವಂತೆ, ಹಾಲಿನೊಳಗೆ ತುಪ್ಪ ಇರುವಂತೆ ದೇವರು ನಮ್ಮೊಳಗೆ ಇರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಅವರವರ ಒಳಗಿರುವ ದೇವರ ಉಪಾಸನೆ ಮಾಡಬೇಕು ಮತ್ತು ಕೊನೆಗೆ ಆ ದೇವರೇ ಆಗಬೇಕು. ಆದರೆ ವಿಶ್ವಮಾನವರಾಗದೇ ಎಲ್ಲರೀತಿಯ ಶೋಷಣೆಯನ್ನು ಮಾಡುತ್ತ ಬದುಕ ಬಯಸುವವರು ಈ ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಇಂಥ ನಿಜತತ್ತ್ವಕ್ಕೆ ವಿರೋಧ ವ್ಯಕ್ತಪ ಡಿಸುತ್ತಲೇ ಇರುತ್ತಾರೆ.
ಹೇ ತೊಗಲಿನ ಕಾಯ ಭೇದವೇಕೊ ಮಹಾರಾಯ
ಮೈಯಲ್ಲಾ ನಿನಗೆ ಗಾಯ ನಿನ್ನಂತೆ ಅವರ ಕಾಯ
ಶಿವನಿರುವ ಗುಡಿಯೇ ತೊಗಲು ಮುಂದೆ ಕುಂತ ನಂದಿಯೇ
ತೊಗಲು; ಇವನು ತೊಗಲು, ಶಿವನು ತೊಗಲು, ಅರಿವು ಎಂಬ
ಗುರುಪೀರನೆ ತೊಗಲು
ಇಲ್ಲಿ ಗುರು ಖಾದರಿಪೀರಾ ಅವರು ತೊಗಲನ್ನು ನಶ್ವರ ವಸ್ತುವಿನ ಸಂಕೇತವಾಗಿ ಬಳಸಿದ್ದಾರೆ. ದೇಹ ಎಂಬುದು ವಸ್ತು, ಅರಿವಿನ ಮೂಲಕ ಆ ದೇಹದೊಳಗಿನ ಚೈತನ್ಯವನ್ನು ದೇವರೆಂಬುದನ್ನು ಮನಗಾಣಬೇಕು ಎಂದು ಸೂಚಿಸಿದ್ದಾರೆ. ಈ ಸತ್ಯವನ್ನು ಹೇಳುವ ಗುರು ಕೂಡ ಇತರರಂತೆ ವಸ್ತುವೇ ಆಗಿದ್ದಾನೆ. ಆದರೆ ಪ್ರತಿಯೊಂದು ವಸ್ತುವಿನ ಒಳಗೆ ದೇವರಿದ್ದಾನೆ.
ಪರಮ ಸುಂದರ ನೀನು, ನಿನ್ನ ಮಂದಿರ ನಾನು
ಸುಂದರ ಮಂದಿರವು ಎರಡು ಒಂದಾಗಿರಲು
ಕಲ್ಲು ಮೂರುತಿ ಮಾಡಿ ನಲ್ಲನೆಂದೆನುತಿರಲು
ನಲ್ಲ ಬಂದೊಡೆ ಕಲ್ಲು ಮೂರುತಿ ಸರಿಸಲು
ನಿನ್ನ ರಥವು ನಾನು, ರಥಕೆ ಸಾರಥಿ ನೀನು
ಎರಡು ಚಕ್ರದ ಆಟ ಇರಿಸು ಒಂದಾಗಿರಲು
ವಸ್ತುವೆಂಬುದು ಮಂದಿರ; ಅದರೊಳಗಿನ ಚೈತನ್ಯವೇ ಪರಮ ಸುಂದರ. ಅದುವೇ ಸತ್ಯ. ಅದುವೇ ಶಿವ. ಆ ಚೈತನ್ಯವೇ ಎಲ್ಲ ದೇವರುಗಳ ಮೂಲ. ಅದುವೇ ಪರಮ ಸುಂದರ. ವಸ್ತು ಎಂಬದು ಮತ್ತು ಮಾನವಕುಲ ಎಂಬುದು ರಥ ಮಾತ್ರ. ಆ ಪರಮ ಸುಂದರ ಚೈತನ್ಯವೇ ಸಾರಥಿ. ಈ ವಸ್ತು ಮತ್ತು ಚೈತನ್ಯದ ಅಭೇದ್ಯ ಸಂಬಂಧವೇ ಅದ್ವೈತ.
ಪಂಚಭೂತ ರಂಗಮಂಟಪ ರಚಿಸಿ; ಇದರೊಳು ಆತ್ಮದ ಪೀಠವ ಇರಿಸಿ ಕುಂತು
ಕಾಣದಂತೆ ನನ್ನೊಳು ಸೂತ್ರಧಾರಿಯಾಗಿ ನೀನು ನಾನಾಗಿ ಪಾತ್ರ ಮಾಡಿದ್ಯಾ
ಪ್ರತಿಯೊಂದು ಜೀವ ಪಂಚಮಹಾಭೂತಗಳಿಂದಲೇ ಸೃಷ್ಟಿಯಾಗಿದೆ. ಆ ಜೀವಿಗಳೊಳಗಿನ ಆತ್ಮದ ಪೀಠದ ಮೇಲೆ ಚೈತನ್ಯವೆಂಬ ದೇವರು ಕಾಣದಂತೆ ಆತ್ಮಸಾಕ್ಷಿಯಾಗಿ ಕುಳಿತು ಬದುಕಿನ ಸೂತ್ರಧಾರಿಯಾಗಿದ್ದಾನೆ. ಆತ ಆ ಜೀವಿಯ ಪಾತ್ರ ಮಾಡುತ್ತಿದ್ದಾನೆ. ಆದ್ದರಿಂದ ಆತ್ಮಸಾಕ್ಷಿಯೇ ದೇವರು. ಜೀವಿಯು ತನ್ನ ಆತ್ಮಸಾಕ್ಷಿಯ ಆದೇಶವನ್ನು ಪಾಲಿಸಿದರೆ ದುಃಖಕ್ಕೆ ಈಡಾಗುವುದಿಲ್ಲ.
ಎಲ್ಲ ಮಾನವರು ಒಂದೇ ಎಂಬ ನಿಜತತ್ತ್ವ ನೀ ತಿಳಿಬೇಕು
ಭೇದ ಮಾಡದೆ ಸರ್ವಜನರಲ್ಲಿ ರಬ್ಬಿಲಾಲನ ನೀ ಕಾಣಬೇಕು
ಹೀಗೆ ಎಲ್ಲರೊಳಗೂ ಒಂದೇ ತೆರನಾದ ಆತ್ಮಸಾಕ್ಷಿ ಇರು ತ್ತದೆ. ಆ ಮೂಲಕ ಎಲ್ಲರಲ್ಲೂ ಒಬ್ಬನೇ ದೇವರಿದ್ದಾನೆ. ಆ ದೇವರನ್ನು ನಮ್ಮ ಅರಿವಿನ ಕಣ್ಣುಗಳಿಂದ ಕಾಣುವುದರ ಮೂಲ ಕ ಎಲ್ಲ ಮಾನವರು ಒಂದೇ ಎಂಬ ಸತ್ಯವನ್ನು ಅರಿಯಬೇಕು. ಈ ನಿಜತತ್ತ್ವವನ್ನು ಅರಿತವನು ಜಾತಿ, ಧರ್ಮ, ದೇಶ ಮತ್ತು ಭಾಷೆಗಳ ಹೆಸರಿನಲ್ಲಿ ಜನರಲ್ಲಿ ಭೇದಭಾವ ಮಾಡದೆ ಎಲ್ಲ ರಲ್ಲೂ ದೇವರನ್ನೇ ಕಾಣುವನು. ತಾನು ಎಲ್ಲರೊಳಗೆ ಎಲ್ಲರೂ ತನ್ನೊಳಗೆ ಎಂದು ಬದುಕುವನು. ಹೀಗೆ ಬದುಕುವ ಅರಿವನ್ನು ಮೂಡಿಸುವುದೇ ನಮಾಜ (ಪ್ರಾರ್ಥನೆ) ಎಂದು ಖಾದರಿಪೀರಾ ತಿಳಿಸಿದ್ದಾರೆ. ಪ್ರಾರ್ಥನೆ ಎಂಬುದು ಸಕಲಜೀವಾತ್ಮರನ್ನು ಪ್ರೀತಿಸುವ ಮನಸ್ಸನ್ನು ರೂಪಿಸುವಂಥದ್ದು.
ಹೊಂದಿಕೊಂಡು ಒಂದಾಗಿರಲಿಲ್ಲಾ; ಕೂಡಿ ಬಾಳಲಿಲ್ಲಾ
ಶಾಂತಿ ಎಂಬುದೇ ಸಿಗಲಿಲ್ಲಾ ಪ್ರೀತಿ ಮಾಡಲಿಲ್ಲಾ
ಭೇದ ಮಾಡುವರೆಲ್ಲಾ ಬಲವಿದ್ದಲ್ಲಿ ಬಾಗುವರೆಲ್ಲಾ
ಪ್ರೀತಿ ಏನೆಂಬುದು ತಿಳೀಲಿಲ್ಲಾ ಹಾಳಾದರೆಲ್ಲಾ
ಪ್ರೀತಿ ಇಲ್ಲದೆ ಮಾನವನ ಮನಸ್ಸಿನಲ್ಲಿ ಶಾಂತಿ ಲಭಿಸದು. ಭಾವೈಕ್ಯದಿಂದ ಬದುಕುವ ಪ್ರಜ್ಞೆ ಮೂಡದು. ಭೇದಭಾವ ದಿಂದಾಗಿ ಬಲವುಳ್ಳವರು ಬಲಹೀನರನ್ನು ಗುಲಾಮಗಿರಿಗೆ ತಳ್ಳುವರು. ಲೋಕದಲ್ಲಿ ಅಶಾಂತಿಯ ವಾತಾವರಣ ನಿಮಾ೯ಣವಾಗುವುದು. ಹೀಗೆ ಪ್ರೀತಿಯ ಮಹತ್ವವನ್ನು ಅರಿಯದೇ ಜನರು ಹಾಳಾಗಿಹೋಗುವರು ಎಂದು ಖಾದರಿಪೀರಾ ಅವರು ಖೇದ ವ್ಯಕ್ತಪಡಿಸುತ್ತಾರೆ.
ರಾಜಭೋಗದ ದರ್ಪ ಸಿರಿ ಸಂಪತ್ತಿನ ದರ್ಪ
ಬುದ್ಧಿವಂತಿಕೆಯ ದರ್ಪ ದೊಡ್ಡವನೆಂಬುವ ದರ್ಪ
ಜೀವ ಹೋದಮ್ಯಾಲೆ ಏನಿಲ್ಲೊ ಮರುಳೆ
ಪ್ರತಿಯೊಬ್ಬರು ಪ್ರತಿಕ್ಷಣವೂ ಸಾವಿನ ದವಡೆಯ ಕಡೆಗೆ ಸಾಗುತ್ತಿರುತ್ತಾರೆ. ಇದನ್ನು ಅರಿಯದೆ ಅಧಿಕಾರ, ಶ್ರೀಮಂತಿಕೆ, ಬುದ್ಧಿವಂತಿಕೆ ಮತ್ತು ದೊಡ್ಡಸ್ತಿಕೆಯ ದರ್ಪದಿಂದ ಬದುಕು ವವರು ಕೂಡ ಎಲ್ಲವನ್ನೂ ಇಲ್ಲೇ ಬಿಟ್ಟು ಸಾಯುವರು. ಅವರ ಸೊಕ್ಕು ಧಿಮಾಕುಗಳೆಲ್ಲ ಅರ್ಥಹೀನವಾಗುತ್ತವೆ ಎಂಬುದನ್ನು ಆ ಧಿಮಾಕಿನವರು ಅರಿಯುವಂತೆ ಎಚ್ಚರಿಸುತ್ತಾರೆ.
ಸಾಧು ಆಗಿ ನೀ ಸಾಧನೆ ಇಲ್ಲದೆ ಭೋಗವ ಭೋಗಸೈತಿ ನಿನ್ನ ಮನ
ಯೋಗದ ತೋರಿಕೆ, ಜಾಗದ ಮಹಿಮೆ ಮನಸೆಲ್ಲಿ ಜಾರೈತಿ
ಹೇಳು ನಿನ್ನ ಮನಸೆಲ್ಲಿ ಜಾರೈತಿ
ಇಂಥ ವಿಷಮಸ್ಥಿತಿಯಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ತತ್ತ್ವದರ್ಶನ ಮಾಡಿಸಬೇಕಾದ ಧರ್ಮಗುರುಗಳು ಕೂಡ ಯಾವುದೇ ಸಾಧನೆ ಇಲ್ಲದೆ ಭೋಗಕ್ಕೆ ಮನಸೋತು ಅದರಲ್ಲೇ ನಿತ್ಯಾನಂದವನ್ನು ಕಾಣುತ್ತಿದ್ದಾರೆ. ತೋರಿಕೆಯ ಯೋಗ ಮತ್ತು ಧ್ಯಾನ ಹಾಗೂ ತಾವು ಪ್ರತಿನಿಧಿಸುತ್ತಿರುವ ಸುಕ್ಷೇತ್ರದ ಮಹಿಮೆ ಯಿಂದಾಗಿ ಇಂಥ ಧರ್ಮಗುರುಗಳು ವರ್ಚಸ್ಸನ್ನು ಬೆಳೆಸಿ ಕೊಂಡು ಮನೋ ಕಾಮನೆಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಇಂಥವರನ್ನು ಪ್ರಶ್ನಿಸುವ ಕ್ರಮವಿದು.
ದುಷ್ಟಶಕ್ತಿ ಹೇಳಿದಾ ಮಾತು ವೇದವಾಕ್ಯ ಬಡವನಿಗಾಯ್ತು
ಬಡವ ಹೇಳಲಾರದಂಗಾಯ್ತು ಹೇಳಿದರೆ ಹೆಣ ಸಿಗದಂಗಾಯ್ತು
ಶಕ್ತಿಶಾಲಿ ನೀನಾಗಬೇಕು ಸತ್ಸಂಗ ನಿನ್ನ ಉಸಿರಾಗಬೇಕು
ಮಾನವಂತರ ಮಾನ ನಿನ್ನಯ ಮಾನವಾಗಿ ತಿಳಿಯಬೇಕೊ
ಈ ದುಷ್ಟಶಕ್ತಿಗಳೆಲ್ಲ ಕೂಡಿ ಬಡವರ ಜೀವ ತಿನ್ನುತ್ತವೆ. ಇಂಥ ಅಧಿಕಾರಬಲ, ಧನಬಲ, ಅಂತಸ್ತುಬಲ ಮತ್ತು ಧರ್ಮ ಬಲ ಇದ್ದವರು ಹೇಳಿದ ಮಾತುಗಳನ್ನು ಬಡವರು ವೇದವಾ ಕ್ಯವೆಂಬಂತೆ ಸ್ವೀಕರಿಸುವುದು ಅನಿವಾರ್ಯವಾಗಿದೆ. ಒಂದುವೇಳೆ ಸ್ವೀಕರಿಸದೆ ಇದ್ದರೆ ಆತನ ಹೆಣವೂ ಸಿಗದಂಥ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಇಂದಿಗೂ ಮುಂದುವರಿದಿದೆ. ಇಂಥ ಸ್ಥಿತಿಯಲ್ಲಿ ಬಡವರು ಸತ್ಸಂಗ ಮಾಡುತ್ತ ದುಷ್ಟಶಕ್ತಿಗಳನ್ನು ಎದುರಿಸುವ ಕ್ರಮವನ್ನು ಅವರು ಬಹಳ ಮಾಮಿ೯ಕವಾಗಿ ಸೂಚಿಸಿದ್ದಾರೆ. ಸದಾ ನೋವು ಮತ್ತು ಅಪಮಾನಕ್ಕೆ ಒಳಗಾಗುವ ಬಡವರು ಒಂದಾಗದೆ ಇದ್ದಾಗ ಅವರನ್ನು ಬಲವುಳ್ಳವರು ಬಹಳ ಹೀನಾ ಯವಾಗಿ ಕಾಣುತ್ತಾರೆ ಎಂಬುದನ್ನು ಗುರು ಖಾದರಿಪೀರಾ ಅವರು ಕೋತಿ ಕರಡಿ ರಾಕ್ಷಸರು ತತ್ತ್ವಪದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕೋತಿ ಕರಡಿ ರಾಕ್ಷಸರು ನಾವು ಹಿಂದೆ ಉಳಿದವರು
ದೇವಿ ದೇವತರೆಲ್ಲ ಮುಂದೊರೆದ ಹಾರುವರು
ಗುಡಿಗಳು ಹುಟ್ಟಲು ಕಾರಣರ್ಯಾರು; ಅದಕೆ ಪೂಜಾರಿ ಅವರು
ದಾನ ನೀಡಲು ಹಿಂದುಳಿದವರು; ಬೇಡುವವರೇ ಹಿರಿಯರು
ಸಹಾಯ ಮಾಡಿದ ಜಾಂಬುವಂತಗೆ ಕರಡಿಯೆಂದು ಕರೆದವರ್ಯಾರು
ಅಪಕಾರ ಮಾಡಿದವರು ದೇವರಾಗಿ ಮೆರಿತಿಹರು
ಜಾನಕಿಯ ತಂದವರ್ಯಾರು; ಕಪಿಸೈನ್ಯ ನಮ್ಮವರ ಹೆಸರು
ಕಷ್ಟದಿಂದ ಪಾರು ಮಾಡಲು ನಾವೇ ಪ್ರಜೆಗಳು, ಅವರೆ ರಾಜರು
ಯಲ್ಲಮ್ಮ ಯಾರವರು; ಹಿಂದುಳಿದ ನಾವೇ ಜೋಗಮ್ಮನವರು
ಕೊರಳಲ್ಲಿ ಕೆರು ಕಟ್ಟಿಕೊಂಡು ಬೆತ್ತಲಾಗಿ ನಮ್ಮವರು
ದೇವರ ಹೆಸರಿನಲ್ಲಿ ವ್ಯಭಿಚಾರ ಮಾಡುವರ್ಯಾರು; ಯಾಗದ ನೆಪದಲ್ಲಿ
ಕುರಿಕೋಣಕೋಳಿ ನುಂಗಿ ಮಂತ್ರ ಹೇಳಿದವರ್ಯಾರು
ಹಕ್ಕು ಕೇಳಬಾರದು ಯಾರು, ಹಿಂದುಳಿದ ನಾವೇ ಶೂದ್ರ ಜನರು
ಸತ್ತರೆ ಸುಡುವರ್ಯಾರು ನಾವೆ ಸಂಕಟರಮಣರು
ಗುರುಪೀರ ನಮ್ಮವರು ಬೈಲುಮಾಡಿ ತೋರಿದರು ಶೂದ್ರರಲ್ಲಾ
ನಾವೇ ರಾಜರು ಎಂದು ಸತ್ಯ ಹೇಳಿದವರು ಇವರೆ ನಮ್ಮ ಗುರುಗಳು
ದುಡಿಯುವ ಬಹುಪಾಲು ಶೂದ್ರ ಜನರೇ ರಾಜರು ಎಂಬ ಸತ್ಯವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಗುರು ಖಾದರಿ ಪೀರಾ ಅವರು ಕಾಲ೯ ಮಾಕ್ಸ೯ರ ಮತ್ತು ಸ್ವಾಮಿ ವಿವೇಕಾನಂದರ ಸಮಕಾಲೀನರು ಕೂಡ ಆಗಿದ್ದಾರೆ. ಕಾಲ೯ ಮಾಕ್ಸ೯ರ ಅವರು ಕಾಮಿ೯ಕ ಸವಾ೯ಧಿಕಾರದ ಬಗ್ಗೆ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಶೂದ್ರರು ಈ ಜಗತ್ತನ್ನು ಆಳಬೇಕು ಎಂದು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಖಾದರಿ ಪೀರಾ ಅವರು ಶೂದ್ರರಲ್ಲಾ; ನಾವೇ ರಾಜರು ಎಂದು ಹೇಳಿದ್ದು ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತ ಬಂದ ಶೂದ್ರ ಜನಾಂಗದ ಬಗ್ಗೆ ಅವರಿಗೆ ಇರುವ ಕಾಳಜಿ ಯನ್ನು ತೋರಿಸುತ್ತದೆ.
ಸೌಹಾರ್ದ ಎಂಬುದು ತೋರಿಕೆಯ ಮಾತುಗಳಿಂದ ಸೃಷ್ಟಿ ಯಾಗುವಂಥದ್ದಲ್ಲ. ಮೇಲ್ಜಾತಿ ಮತ್ತು ಮೇಲ್ವರ್ಗದ ದೌರ್ಜನ್ಯ ವನ್ನು ಅಲ್ಲಗಳೆಯುತ್ತ, ಕೆಳಜಾತಿ ಮತ್ತು ಕೆಳವರ್ಗಗಳ ಜನಸ ಮುದಾಯಗಳ ಬಗ್ಗೆ ಅಂತಃಕರಣದ ವಾತಾವರಣ ಸೃಷ್ಟಿಸುತ್ತ ಸರ್ವಧರ್ಮ ಸಮಭಾವದ ಪ್ರಜ್ಞೆಯೊಂದಿಗೆ ಮಾನವೀಯ ಚಿಂತನೆಗಳನ್ನು ಹರಡಿದಾಗ ಸೌಹಾರ್ದದ ವಾತಾವರಣ ಸೃಷ್ಟಿಯಾಗುತ್ತದೆ. ಸೌಹಾರ್ದ ಸೃಷ್ಟಿಯಲ್ಲಿ ಕಾಳಜಿ, ಹೋರಾಟ, ಇದ್ದದ್ದನ್ನು ಇದ್ದ ಹಾಗೆ ಹೇಳುವ ನೈತಿಕ ಶಕ್ತಿ, ಸರ್ವಧರ್ಮ ಸಮಭಾವ ಮತ್ತು ಮಾನವ ಏಕತೆಯ ಪ್ರಜ್ಞೆ ಹೆಚ್ಚಿನ ಪಾತ್ರ ವಹಿಸುತ್ತವೆ. ಗುರು ಖಾದರಿಪೀರಾ ಅವರು ತಮ್ಮ ಬದುಕಿನಲ್ಲಿ ಸಾಧಿಸಿದ್ದು ಇದನ್ನೇ. ಅವರ ಸಾಧನೆಯ ಸಂಕೇತವಾಗಿ ಜ್ಞಾನಸಮುದ್ರ ನಮ್ಮ ಕಣ್ಣೆದುರಿಗಿದೆ.
ಶಿಶುನಾಳ ಶರೀಫರು ನಮಗೆ ಭಾವಪೂರ್ಣ ತತ್ತ್ವಪದ ಕಾರರಾಗಿ ಕಂಡುಬಂದರೆ ಸೂಫಿ ದೃಷ್ಟಿಕೋನದ ಧರ್ಮಗುರು ಖಾದರಿಪೀರಾ ಅವರು ಪ್ರಜ್ಞಾಪೂರ್ಣ ತತ್ತ್ವಪದಕಾರರಾಗಿ ಕಂಡುಬರುತ್ತಾರೆ. ದೇವರು ಎಲ್ಲರಲ್ಲಿ ಇದ್ದಾನೆ ಎಂದು ಪ್ರತಿಪಾದಿಸುವ ಅವರು ಗುಡಿ ಮಸೀದಿಗಳ ಬಗ್ಗೆ ಉದಾಸೀನ ಭಾವ ತಾಳುತ್ತಾರೆ. ನಮ್ಮ ದೇಹಗಳೇ ಗುಡಿ ಮಸೀದಿಗಳು ಎಂದು ಸಾರುವ ಅವರು ಜಾತಿ, ವರ್ಣ, ಶೋಷಣೆ ಮುಂತಾದ ಅನಿಷ್ಟಗಳ ಬಗ್ಗೆ ಸಾತ್ವಿಕ ಕೋಪವನ್ನು ವ್ಯಕ್ತಪಡಿ ಸುತ್ತಾರೆ. ಅಸ್ಪೃಶ್ಯರ ಮತ್ತು ಶೂದ್ರರ ಪರವಾಗಿ ನಿಲ್ಲುತ್ತಾರೆ. ತೋರಿಕೆಯ ದೇವರುಗಳನ್ನು ನಿರಾಕರಣೆ ಮಾಡುವ ಅವರು ಗಣಪತಿ, ದೇವಿ ಮುಂತಾದ ದೇವತೆಗಳನ್ನು ಕೂಡ ಸಂಕೇತಾ ರ್ಥದಲ್ಲಿ ನೋಡಿ ಪ್ರೇಮಭಾವದಿಂದಲೇ ಬರೆದಿದ್ದಾರೆ. ಸೂಫಿ ಪ್ರೇಮತತ್ತ್ವವು ಯಾವುದನ್ನೂ ನಿರಾಕರಿಸುವುದಿಲ್ಲ. ಆದರೆ ಮಾನವಘನತೆಗೆ ಕುಂದು ತರುವ ಯಾವುದನ್ನೂ ಸ್ವೀಕರಿಸುವುದಿಲ್ಲ.
ದಾನಧರ್ಮದ ನೆಪಕಾಗಿ ಜನರಲ್ಲಿ ತನ್ನಯ ಹಿತಕ್ಕಾಗಿ
ಕ್ವಾಣ ಕಡಿಯುವ ಧರ್ಮವೆ ಅಲ್ಲಾ; ಮಾರೆಮ್ಮನಿಗೆ ಅದು
ಬೇಕಿಲ್ಲಾ
ಪ್ರಾಣಿಬಲಿ ಕೊಡುವುದು ಧರ್ಮ ಅಲ್ಲ ಎಂದು ಹೇಳುವ ಅವರು, ಇದ್ದವರು ಜನರಿಂದ ತಮಗೆ ಲಾಭವಾಗುವ ಉದ್ದೇ ಶದಿಂದಲೇ ದಾನಧರ್ಮದ ನೆಪದೊಂದಿಗೆ ಇಂಥ ಸಂಪ್ರದಾ ಯಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅವರ ಸೂಕ್ಷ್ಮಪ್ರಜ್ಞೆಯ ಪ್ರತೀಕವಾಗಿದೆ.
ಮಾರೆಮ್ಮಾ ಅಲ್ಲಾ ತಮ್ಮಾ ಮಾ ಅಮ್ಮ ಎಂದು ತಿಳಿಸುತ್ತಾರೆ. ಅಮ್ಮನಿಗೆ ನೀ ತಿಳಿ ತಮ್ಮ; ಮನ್ಯಾಗ ಐದಾಳ ನಿಮ್ಮಮ್ಮ ಎಂದು ಹೇಳಿ ಮನೆಯೊಳಗಿನ ಅಮ್ಮನ ಸೇವೆ ಮಾಡಬೇಕೆನ್ನುತ್ತಾರೆ. ಅಮ್ಮನಂಥ ದೇವರು ಇಲ್ಲಾ; ಅಮ್ಮ ನಿಂದಲೇ ದೇವರು ಎಲ್ಲಾ ಎಂದು ಸಾರುತ್ತಾರೆ. ಹೀಗೆ ಮಾನವೀಯತೆ ಮತ್ತು ದೈವತ್ವದ ಮಧ್ಯೆ ಅಭೇದ್ಯ ಕಲ್ಪಿಸುವ ಅವರ ಕ್ರಮ ವಿಶಿಷ್ಟವಾಗಿದೆ.
ಅವರು ಮಾನವೀಯ ತತ್ತ್ವವನ್ನು ಸಾರುತ್ತಲೇ ಸಮಾ ಜದ ನಿಜಸ್ವರೂಪವನ್ನು ಅನಾವರಣಗೊಳಿಸುತ್ತ ಕಾವ್ಯರಚನೆ ಮಾಡಿದ್ದಾರೆ. ಒಳಗಿನ ಮಾತು ಸಂಗಯ್ಯನೇ ಬಲ್ಲ ಎಂಬ ತತ್ತ್ವಪದದಲ್ಲಿ ಅವರು ನಮ್ಮ ಸಮಾಜದ ನಿಜಸ್ವರೂಪವನ್ನು ಹೀಗೆ ತೋರಿಸಿದ್ದಾರೆ.
ಒಳಗಿನ ಮಾತು ಸಂಗಯ್ಯನೇ ಬಲ್ಲ; ಲಿಂಗಯ್ಯ ತಾನಾಗಿ ನೋಡ್ಯಾನ
ಲಿಂಗಸಂಗದ ಕೂನಾವು ತಾನಾಗಿ ಗುರುಪೀರಾ ಖಾದರಿ ಹೇಳ್ಯಾನ
ಸುಳ್ಳರಂಗ ನಿ ಇರದಿದ್ದರ ಇಲ್ಲಿ ಹುಚ್ಚನೆನ್ನುವರು ತಿಳಿ ನೀನಾ
ಬಟ್ಟೆತೊಟ್ಟು ಬಿಚ್ಚಿಡುವ ಜನರಿಗೆ ಸತ್ಯ ಕೆಟ್ಟ ಸಂಕಟರಮಣ
ಪ್ರೀತಿ ಮಾಡುವ ಜನರಿಗೆ ಜಗದಲ್ಲಿ ಅಸುರರೆಂದರು ತಿಳಿ ನೀನಾ
ಕುಡಿತ ಕಡಿತ ಜಡಿತೆಲ್ಲಾ ಮಾಡಿ ಇಲ್ಲಿ ದೇವರಾದರು ತಿಳಿ ಜಾಣಾ
ಕಾಲಿಗೆ ತಲೆಯೆಂದು ತಲೆಗೆ ಕಾಲೆಂದು ಪಂಡಿತರಾಗ್ಯಾರೊ ತಿಳಿ ನೀನಾ
ಸುರ ಅಸುರರ ಮೂಲಾ ಗುಟ್ಟು ತಿಳಿದ ಶರಣರಿಗಾಯಿತು ಅವಮಾನ
ಎಲ್ಲ ಧರ್ಮದಲ್ಲಿ ಮಣ್ಣಿಗೆ ಸುಣ್ಣ ಹೊಡೆದು ಸುಳ್ಳು ಹೇಳಿದವರಿಗೆ ಘನಸ್ಥಾನ
ಸತ್ಯ ಹೇಳಿದ ಸೂಫಿಸಂತರಿಗೆ ಗಲ್ಲಿಗೇರಿಸ್ಯಾರೊ ತಿಳಿ ನೀನಾ
ಮೂರು ಕಾಲದೊಳು ಬದಲಾಗುವ ಜನ ನೋಡಿ ತಿಳಿಯೊ ನೀ ಅವರ ಗುಣ
ಸಾಲಗುಂದಿಪುರದೊಳು ನೀ ಹಸನಾಗಿ ವೆಸನ ಮಾಡಿ ತಿಳಿ ನಿನ್ನ ನೀನಾ
ಗುರುವೇ ಖಾದರಿ ಪೀರನಾಗಿ ಹೇಳೋ ಇದ್ದದ್ದು ಇದ್ದಾಂಗ ಜಗದ ಗುಣ
ಸತ್ಯಶರಣರಿಗೆ ಕಾಡಿಸಿ ಕೊಲೆಮಾಡಿ ಬೆಂಕಿಯಂಥ ಶರಣೆಂದ ಜನ
ಇನ್ನೊಂದು ತತ್ತ್ವಪದದಲ್ಲಿ ಇಲ್ಲಿ ಧರ್ಮ ಎಂಬುದು ಬಂದೀಖಾನೆ ಅಲ್ಲಿ ನರಕ ಎಂಬುವ ಬಂದೀಖಾನೆ.. .. ಪ್ರೀತಿಯೇ ನಿಜಧರ್ಮ ನನ್ನ ಗುರುವಿನಾಣೆ ಎಂದು ಪ್ರೇಮದ ಉತ್ಕಟ ಭಾವವನ್ನು ಮೆರೆದಿದ್ದಾರೆ. ಎಲ್ಲ ಸೂಫಿ ಗಳಂತೆ ಅವರಿಗೆ ಪ್ರೇಮವೇ ಧರ್ಮವಾಗಿತ್ತು. ಬಸವಣ್ಣನವರ ದಯೆ ಮತ್ತು ಭಕ್ತಿಯನ್ನು ಅವರು ಪೇಮದ ಆದಿ ಮತ್ತು ಅಂತ್ಯವಾಗಿ ಕಾಣುತ್ತಾರೆ. ಅವರ ಬಡವರ ಬಸವ ಕವನ ಇದಕ್ಕೆ ಸಾಕ್ಷಿ.
ಬಸವ ಬಡವರ ಬಸವ ಕರುಣಾಸಾಗರ ಬಸವ
ಅಲ್ಲಮನ ಪ್ರಾಣ ಬಸವ ಅಕ್ಕನ ಮಾನ ಬಸವ
ಸರ್ವರೊಳು ಗುರುಸಂಗನ ಕಂಡ ಕಲ್ಯಾಣ ಬಸವ
ಬಸವ ನಿನ್ನಯ ವಾಸ ಕೂಡಲಸಂಗನ ಧ್ಯಾಸ
ಸತ್ಯ ಸಾರುವ ಧೀಶ ನಿನ್ನ ನೆನೆಯುವ ಧ್ಯಾಸ
ಮರೆತು ಬಾಳೆನಯ್ಯಾ ಬಸವ ನನ್ನುಸಿರು ನನ್ನ ಬಸವ
ಭೇದ ಅಳಿದವನೆ ಬಸವ ಪ್ರೀತಿ ತಿಳಿಸಿದವನೆ ಬಸವ
ಜಾತಿ ಧರ್ಮಕೆ ಅತೀತನಾಗಿ ಮಾನವತೆಯ ಪ್ರಾಣ ಬಸವ
ಎಲ್ಲಾ ನನ್ನವರೆಂದು ಭೇದವಿಲ್ಲದ ಬಂಧು
ಎಲ್ಲಾ ಮಾನವರೊಂದು ಎಲ್ಲರೂ ಶರಣರೆಂದು
ಎಲ್ಲರೊಳು ತಾ ಕಿರಿಯನೆಂದು ತನ್ನ ತಾನು ತಿಳಿದ ಬಸವ
ಬಿಜ್ಜಳನಿಗೆ ಬಸವನೇ ಮಂತ್ರ; ಹಾರವನ ಸ್ಥಾನ ಅತಂತ್ರ
ಕೊಂಡಿ ಮಂಚಣ್ಣನ ಕುತಂತ್ರ ಮಂತ್ರಿಪದವಿ ಬಿಟ್ಟುನಿಂತ
ದೀನರಾ ಮಾನ ಬಸವ ಬಡವರ ಪ್ರಾಣ ಬಸವ
ಬಡಜಂಗಮರು ಶಿವನೆಂದು ಸಾರಿದ ಧೀರಬಸವ
ಸಾಲಗುಂದಿಪುರದ ಜನರ ಪ್ರೀತಿಪ್ರಾಣವೆ ಬಸವ
ಗುರುಪೀರಾ ಖಾದರಿಯ ಜೀವದಾಜೀವ ಬಸವ
19ನೇ ಶತಮಾನದಲ್ಲಿ ಬಸವಣ್ಣ ಎಂದರೆ ಎತ್ತು ಎಂದು ತಿಳಿದಂಥ ವಾತಾವರಣವಿತ್ತು. ಕನ್ನಡಿಗರಲ್ಲಿ ವಚನಪ್ರಜ್ಞೆಯೇ ಮೂಡಿರಲಿಲ್ಲ. ಇಂಥ ಸ್ಥಿತಿಯಲ್ಲಿ ಖಾದರಿಪೀರಾ ಅವರು ಬಸವಣ್ಣನವರ ಬಗ್ಗೆ ಸೂಕ್ಷ್ಮ ವಿವರಣೆಗಳೊಂದಿಗಿನ ಒಳನೋಟವನ್ನು ಹೊಂದಿದ ಪದರಚನೆ ಮಾಡಿದ್ದು ಇಂದಿನ ವಚನತಜ್ಞರನ್ನು ಕೂಡ ಬೆರಗುಗೊಳಿಸುವಂಥದ್ದಾಗಿದೆ.
ಬಸವಣ್ಣ ಹುಟ್ಟಿದ ವಿಜಾಪುರದಲ್ಲೇ ಹುಟ್ಟಿದ ಪ್ರಖ್ಯಾತ ಸೂಫಿ ಸಂತರಾಗಿದ್ದ ಹಾಗೂ ತಮ್ಮ ಪತ್ನಿ ಸಯ್ಯದಾ ಬೀಬಿ ಜೈನಬ್ರವರ ಪೂರ್ವಜರಾಗಿದ್ದ ಖಾಜಾ ಅಮೀನುದ್ದೀನ ಆಲಾ (1597-1675) ಅವರ ಬಗ್ಗೆ ಖಾದರಿಪೀರಾ ಅವರು ಬರೆದದ್ದು ಶರಣ ಮತ್ತು ಸೂಫಿ ಬದುಕಿನಲ್ಲಿ ಯಾವುದೇ ಭೇದವಿಲ್ಲ ಎಂಬುದನ್ನು ಸೂಚಿಸುತ್ತದೆ.
ಸದ್ಗುರು ಅಮೀನ್ ಆಲಾ ಭೇದ ತೊರೆದು ನಿನೇ ಮೌಲಾ
ಕರುಣಿಸಿ ನನ್ನ ಮ್ಯಾಲೆ ನೀನಾದಿ ನನ್ನ ಶೀಲಾ
ಅಜ್ಞಾನಿಗಳಿಗೆ ನೀನು ಜ್ಞಾನದಾನ ಮಾಡುವಾತ
ಧರ್ಮಜಾತಿಭೇದ ಅತೀತಾ ಖ್ವಾಜಾ ಅಮೀನ್ ಆಲಾ
ದೊರೆಗಳಿಗೆ ದೊರೆಯಾದಾತ ಬಡವರಿಗೆ ನೀ ವಿಧಾತ
ಸರ್ವರಲಿ ನೀನೆ ಪ್ರಾಣ ಆಖಾ ಅಮೀನ್ ಆಲಾ
ಪ್ರೀತಿ ಒಂದೇ ನಿನ್ನ ಮಾತ; ಸಿದ್ಧ ನಾಥರಿಗೆ ನೀ ನಾಥ
ಭೇದವಿಲ್ಲೊ ನಿನಗೆ ತಾತಾ ಮೌಲಾ ಅಮೀನ್ ಆಲಾ
ಶೂನ್ಯ ಮರ್ಮ ತಿಳಿಸಿದಾತ ಭಯ ಬಯಲು ಮಾಡುವಾತ
ಧ್ಯಾನ ಜಪತಪಿಲ್ಲದಂತೆ ಮಮಾ ಮೋಕ್ಷ ಅಮೀನ್ ಆಲಾ
ಶಿರಹಟ್ಟಿ ಫಕೀರಸ್ವಾಮಿಗಳು ಖಾಜಾ ಅಮೀನುದ್ದೀನ ಅವರ ಶಿಷ್ಯರಾಗಿದ್ದರು. ಫಕೀರಸ್ವಾಮಿಗಳು ಹುಟ್ಟಿದಾಗ ಖಾಜಾ ಅಮೀ ನರು ಇಟ್ಟ ಹೆಸರೇ ಭಾವೈಕ್ಯದ ಪ್ರತೀಕವಾದ ಫಕೀರಸ್ವಾಮಿ. ಈ ಹೆಸರಿನಲ್ಲಿ ಸೂಫಿ ಮತ್ತು ಶರಣ ತತ್ತ್ವದ ಸಂಗಮವಾಗಿದೆ. ಇದು ಅಮೀನರ ಕನಸಾಗಿತ್ತು.
ತಮ್ಮ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರ ತತ್ತ್ವಗಳ ಜೊತೆ ಬಸವಣ್ಣ ಮತ್ತು ಖಾಜಾ ಅಮೀನರ ತತ್ತ್ವಗಳನ್ನು ಒಂದಾಗಿಸಿ ಮಾನವ ಏಕತೆಯ ತತ್ತ್ವಪದಗಳನ್ನು ಬರೆದ ಖಾದರಿಪೀರಾ ಅವರು ಈ ಧರ್ಮ ವ್ಯಾಕೊ ಈ ಜಾತಿಯಾಕೊ ಎಂಬ ಪದ್ಯದಲ್ಲಿ ಮೊದಲು ಮಾನವನಾಗು ಎಂಬುದನ್ನು ಒತ್ತಿಹೇಳಿದ್ದಾರೆ.
ಈ ಧರ್ಮವ್ಯಾಕೊ ಈ ಜಾತಿಯಾಕೊ
ಮೊದಲಿಗೆ ಮಾನವ ನೀನಾಗು ಸಾಕು
ಸ್ನೇಹದಿ ನೀ ಸನಹ ಬರಲಿಲ್ಲವ್ಯಾಕೊ ಮೊದಲಿಗೆ ಮಾನವ ನೀನಾಗು ಸಾಕು
ತಿಳಿಯದೆ ಏನೇನು ನೀ ಮಾಡಿ ಕೆಟ್ಟಿ; ದೇವರ ಹೆಸರೇಳಿ ನೀನೆ ತಿಂದಿಟ್ಟಿ
ನಿರಾಕಾರ ನಿರಾಹಾರ; ಇಲ್ಲದವನಗ್ಯಾಕೊ, ಕಲ್ಲಿಗೆ ಎಡೆಮಾಡಿ ಕೆಡಿಸುವುದ್ಯಾಕೊ
ಮಾನವರೆಲ್ಲರೊಂದೆ ಎಂದ್ಹೇಳುವುದ್ಯಾಕೊ; ನಾಲ್ಕು ವರ್ಣದ ಭೇದ ಬಿಡುನೀ ಸಾಕು
ಮಾನವನೇ ನಿಜಧರ್ಮ ತಿಳಿದರೆ ಸಾಕೊ; ಸತ್ಯವೇ ಶಿವರೂಪ ನೀನಾಗಬೇಕು
ಹಸಿದ ಹೊಟ್ಟಿಗೆ ಹಿಟ್ಟು ಕೊಡಲಿಲ್ಲವ್ಯಾಕೊ ಕಲ್ಲುದೇವರಿಗೆಂದು ಯಡೆ ಮಾಡುವದ್ಯಾಕೊ
ಬೇಡುವವನಿಗೆ ನೀಡು ಕೆಡಸುವುದ್ಯಾಕೊ; ಉಡುವ ತಿನ್ನುವ ವಸ್ತು ನೀ ಸುಡುವುದ್ಯಾಕೊ
ಈ ಗೊಳ್ಳು ಧರ್ಮ ಈ ಜೊಳ್ಳು ಜಾತಿ: ಪ್ರೀತಿ ತಿಳಿಯದೆ ನೀನು ಹೀಂಗ್ಯಾಕ ಸಾಯ್ತಿ
ಈ ಕ್ರೋಧವ್ಯಾಕೊ ಈ ಭೇದ ಸಾಕೊ; ಮೊದಲಿಗೆ ಮಾನವ ನೀನಾಗು ಸಾಕು
ಕೈಯೊಳಗಿನ ಗಂಟೆ ನೋಡಲಿಲ್ಲವ್ಯಾಕೊ; ಆರತಿ ಬೆಳಕಲ್ಲಿ ಶಿವ ಕಾಣಲಿಲ್ಯಾಕೊ
ನೀ ದೇವನಾಗಿರುವಿ ತಿಳಿದರೆ ಸಾಕೊ; ಕಣ್ಣು ಮುಚ್ಚಿ ಬೆಕ್ಕಿನಂತೆ ಹಾಲು ಕುಡಿಯುವುದ್ಯಾಕೊ
ಪುರ ಸಾಲಗುಂದದೊಳಗೆ ಕೂಡಲಿಲ್ಲವ್ಯಾಕೊ; ತಿಳಿದು ಮತ್ತಿದರೊಳಗೆ ಬೆರಿಲಿಲ್ಲವ್ಯಾಕೊ
ಗುರುಪೀರ ಖಾದರಿಯ ದಯವೊಂದೇ ಸಾಕೊ; ಪ್ರೀತಿಯೆ ನಿಜಧರ್ಮ ತಿಳಿದೆಡುವೂದ್ಯಾಕೊ
ಮಾನವೀಯತೆ ಇಲ್ಲದ್ದು ಏನೇ ಇದ್ದರೂ ಅರ್ಥಹೀನ ಎಂಬ ಅವರ ದೃಢನಿಲುವು ಸದಾಕಾಲ ಮಾನವರನ್ನು ಎಚ್ಚರ ಗೊಳಿಸುವಂಥದ್ದಾಗಿದೆ. ಮಾನವೀಯತೆಯ ಅಭಾವದಿಂದಾ ಗಿಯೇ ನಮಗೆ ಮಂದಿರ ಮಸೀದಿ ವಿವಾದಗಳು ದೊಡ್ಡದಾ ಗುತ್ತವೆ. ಅಂದಿನ ದಿನಗಳಲ್ಲೇ ಇಂಥ ಸಮಸ್ಯೆಗಳು ಕುರಿತು ಗುಡಿಗುಂಡಾರದ ಜಗಳವ್ಯಾಕೊ ಯಪ್ಪ; ಮಾನವಗೆ ಮಾನ ವನು ತಾ ತಿಳಿಯಬೇಕು.
ಎಲ್ಲರೊಳಗೆ ಜೀವಶಿವನಿರುವಾಗ ಗುಡಿಕಟ್ಟಿ ಅವನಿಗೆ ಬಂಧ ನವ್ಯಾಕೊ ಎಂದು ಬುದ್ದಿ ಹೇಳಿದ್ದಾರೆ. ಈ ಬುದ್ಧಿ ನಮಗೆಲ್ಲ ಬಂದಿದ್ದರೆ ರಾಮಜನ್ಮಭೂಮಿ ವಿವಾದದಲ್ಲಿ ಸಹಸ್ರಾರು ಜನರು ಪ್ರಾಣ ಕಳೆದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗುವ ಪ್ರಸಂಗ ಬರುತ್ತಿರಲಿಲ್ಲ.
ಇವನ ಎಲ್ಲೆಲ್ಲಿ ಹುಡುಕಿದೆನಲ್ಲ ಅವನು ನನ್ನೊಳಗೆ ತಾನಿದ್ದನಲ್ಲ
ಸುಮ್ಮಸುಮ್ಮನೆ ತಿರುಗಿ ಸತ್ತೆನಲ್ಲ; ನನ್ನ ಒಡೆಯನ ನಾ ತಿಳಿಯ ಲಿಲ್ಲ
ಯವ್ವ ನನ್ನ ಗಂಡನ ನಾ ತಿಳಿಯಲಿಲ್ಲ
ಕಾಬಾ ಕಾಶಿಯೊಳಗೆ ಕಾಣಲಿಲ್ಲ; ವ್ಯರ್ಥ ಕಲ್ಲುಪೂಜೆ ಮಾಡಿ ಸತ್ತೆನಲ್ಲ
ಭೇದ ನಾ ಮಾಡಿ ಮೋಸ ಹೋದೆನಲ್ಲ; ನನ್ನ ಪ್ರಿಯಕರನ ನಾ ತಿಳಿಯಲಿಲ್ಲ
ದೇವರನ್ನು ಮಂದಿರ ಮಸೀದಿಗಳಲ್ಲಿ ಹುಡಕದೆ ನಮ್ಮೊಳಗೆ ಹುಡುಕಿದ್ದರೆ ಈ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ.
ಈ ಸೃಷ್ಟಿಗೆ ನೀನೊಡೆಯನಂತ ಸೃಷ್ಟಿಕರ್ತನ ಪ್ರತಿರೂಪವಂತ
ಕಲ್ಲುದೇವರು ಹೆಂಗ ಹುಟ್ಯಾರಂತ ಇವರಪ್ಪ ಅಮ್ಮ ಯಾರಂತ
ಈ ದೇವರಿಗೆ ನೀ ದೇವರಂತ ನಿನ್ನ ಬಿಟ್ಟು ದೇವರಿಲ್ಲಂತ ಭಗವಂತ
ಎಂಬ ತೀಕ್ಷ್ಣ ಮಾತುಗಳಿಂದ ಖಾದರಿಪೀರಾ ಅವರು ನಮ್ಮನ್ನು ಜಾಗೃತಗೊಳಿಸುತ್ತಾರೆ. ಕಣ್ಣಿಗೆ ಕಾಣುವ ಎಲ್ಲ ದೇವರು ಗಳನ್ನು ಮಾನವನೇ ಸೃಷ್ಟಿ ಮಾಡಿದ್ದಾನೆ. ಅವು ಕಾಲದ ತುಳಿತಕ್ಕೆ ಒಳಗಾಗುವ ದೇವರುಗಳು! ಆದರೆ ಆತ ತನ್ನೊಳಗಿನ ಅಗಮ್ಯ ಅಗೋಚರ ಮತ್ತು ಅಪ್ರತಿಮನಾದ ದೇವರನ್ನು ಕಾಣುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಹೀಗಾಗಿ ಜಾತಿ ಧರ್ಮಗಳ ಹೆಸರಿನಲ್ಲಿ ಭೇದಭಾವ ಮಾಡುವುದರಲ್ಲೇ ಮಾನವ ಆಯು ಷ್ಯವನ್ನು ಕಳೆದುಕೊಳ್ಳುತ್ತಾನೆ.
ಅಲ್ಲಾಕೇ ಬಂದೇ ತೊಗಲೆಲ್ಲ ಒಂದೆ; ಯೋಚಿಸು ನೀನ್ಯಾರು ಎಲ್ಲಿಂದ ಬಂದೆ. ನಿನ್ನ ನೀನು ತಿಳಿದುಕೊಂಡು ನಡಿಯಬೇಕು ಮುಂದೆ ಎಂದು ಅವರು ಮುಸ್ಲಿಮರಿಗೆ ಹೇಳಿದರೆ, ಹಿಂದು ಗಳಿಗೆ ಹೀಗೆ ಹೇಳುತ್ತಾರೆ:
ಬ್ರಾಹ್ಮಣ ವೈಶ್ಯ ಕ್ಷತ್ರಿಯ ಶೂದ್ರ ನಾಲ್ಕರಿಂದ ವೇದ ಭದ್ರ
ಶೂದ್ರ ಸಣ್ಣ ವಸ್ತು ಎಂದು ತಿಳಿಯಬ್ಯಾಡೊ ನೀ ದರಿದ್ರ
ತಿನ್ನುವ ಅನ್ನ ಶೂದ್ರ, ಕುಡಿಯುವ ನೀರು ಶೂದ್ರ
ತಿಳಿದು ಹೇಳಿದವನು ಇದ್ರ ಕೇಳಿದವನು ಬಲು ಭದ್ರ
ಹನಿಯಾಗಿ ಇರು ನೀ ಇದ್ರ ಸಾಲಗುಂದಿ ಬಲು ಭದ್ರ
ಪಿಂಡ ಅಂಡದೊಳಗೆ ಸೇರಿ ಒಳಗಿನಿಂದ ಬಂದ ಶೂದ್ರ
ಈ ಎಲ್ಲ ತಾರತಮ್ಯಗಳು ದೇಹದಲ್ಲಿ ಜೀವವಿರುವವರೆಗೆ ಮಾತ್ರ. ಆ ಜೀವವೇ ಪರಮಾತ್ಮ. ಆ ಪರಮಾತ್ಮ ನಮ್ಮಿಂದ ದೂರ ಹೋದ ಮೇಲೆ ನಾವು ಹೆಣವಾಗುವೆವು. ಅವ ನಿನ್ನಲ್ಲಿರುವತನಕ ಆನಂದ ಸಿಗುವುದು ನಿನಗ. ಅವ ಬಿಟ್ಟು ಹೋದ ಮ್ಯಾಗ ಹೆಣವೆಂದು ಕರಿವರು ನಿನಗ ಎಂದು ಖಾದರಿಪೀರಾ ಅವರು ಮಾನವದೇಹದ ನಶ್ವರತೆಯ ಬಗ್ಗೆ ಹೇಳುತ್ತಾರೆ. ನಮ್ಮ ಎಲ್ಲ ಮೇಲುಕೀಳುಗಳು ದೇಹಕ್ಕೆ ಅಂಟಿ ಕೊಂಡು ಮನಸ್ಸಿಗೆ ಕಿರಿಕಿರಿ ಮಾಡುತ್ತವೆ. ದೇಹವು ಐಹಿಕ ಸುಖವನ್ನು ಬಯಸುತ್ತದೆ. ಐಹಿಕ ಸುಖ ನೀಡುವ ವಸ್ತು ಮೋಹದಿಂದಾಗಿ ವರ್ಗಗಳು ಮತ್ತು ವರ್ಣಗಳು ಸೃಷ್ಟಿ ಯಾಗಿವೆ. ಮಾನವ ಐಹಿಕ ಸುಖವನ್ನು ಮೀರಿ ಒಳನೋಟದ ಅರಿವನ್ನು ಪಡೆದು ಜೀವಪರವಾದಾಗ ಸಹಜವಾಗಿಯೇ ಸರ್ವರಿಗೂ ಸಮಾನವಾದ ಬದುಕನ್ನು ಬಯಸುತ್ತಾನೆ. ಹೀಗೆ ಮಾನವರು ಸರ್ವಸಮತ್ವದಿಂದ ಬದುಕಬೇಕೆನ್ನುವುದೇ ಖಾದರಿಪೀರಾ ಅವರ ಆಶಯವಾಗಿದೆ.
ಇರಬೇಕವ್ವಾ ಇರಬೇಕು ಗುರು ಎಲ್ಲರಿಗಿರಬೇಕು. ಜಾತಿಧರ್ಮಗಳಿಗತೀತನಾದ ಸದ್ಗುರು ನಮಗೆ
ಇರಬೇಕು ಇರಬೇಕು ಗುರು ಇರಬೇಕು
ಎಂದು ಅವರು ಇಂಥ ಸದುದ್ದೇಶದಿಂದಲೇ ಹೇಳಿದ್ದಾರೆ.
ನಮ್ಮ ದೇಶಕ್ಕೆ ಮತ್ತು ನಮ್ಮ ಜನಗಳಿಗೆಲ್ಲ ಸೌಖ್ಯವಾಗಿರುವಂಥ ಸುಬುದ್ಧಿ ಕೊಡು ಅಲ್ಲಾ; ಈಶ್ವರನು ನೀನಾಗಿ ರಕ್ಷಿಸು ನಮಗೆಲ್ಲಾ ಎಂದು ಅವರು ಪ್ರಾತಿ೯ಸಿದ್ದಾರೆ. ಅವರ ದೇಶಪ್ರೇಮ ಅನುಕ ರಣೀಯವಾಗಿದೆ. ಅವರು ಬದುಕಿದ್ದ ಕಾಲದಲ್ಲಿ ಭಾರತ ಎಂಬುದು ಅನೇಕ ದೇಶಗಳ ದೇಶವಾಗಿತ್ತು. ಇಂದಿನ ಭಾರತ ದೇಶದ ಕಲ್ಪನೆ ಅಂದು ಇರಲಿಲ್ಲ. ಆದರೆ ಖಾದರಿಪೀರಾ ಅವರು ಭವ್ಯಭಾರತದ ಕನಸುಕಂಡಿದ್ದರು.
ನಮಿಸುವೆ ಭಾರತಿ ತಾಯಿಗೆ ಸಿರಬಾಗಿ ತಲೆಬಾಗಿ ಮಮತೆಯ ಮೂರುತಿ ನೀನೆಂದ
ಪುಣ್ಯ ಬೇಕು ಈ ಭೂಮಿಯಲು ಹುಟ್ಟಲು ಭಾಗ್ಯವಂತರು ನಾವೆಂದ
ಸೂಫಿಸಂತನ ಈ ದೇಶಪ್ರೇಮ ನಮಗೆಲ್ಲ ಮಾರ್ಗದಶಿ೯ಯಾಗಬೇಕಲ್ಲವೆ? ಅಷ್ಟೇ ಅಲ್ಲ ಮುಹಮ್ಮದ್ ಪೈಗಂಬರರು ಕೂಡ ಭಾರತದೇಶವನ್ನು ಪ್ರೀತಿಸಿದ್ದರು ಎಂಬುದನ್ನು ನಮ್ಮ ನೆನಪಿಗೆ ತರುತ್ತಾರೆ.
ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ
ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ
ಅಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛಂದ
ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್ನಲ್ಲಿ ಹಿಂದ್ (ಭಾರತ) ದೇಶದ ಬಗ್ಗೆ ಪ್ರಸ್ತಾಪವಿದೆ. ಹಿಂದ್ನಿಂದ ತಂಪುಗಾಳಿ ಬೀಸುತ್ತಿದೆ. ನಾನು ಹಿಂದ್ನಲ್ಲಿ ಇಲ್ಲ; ಹಿಂದ್ ನನ್ನೊಳಗೆ ಇದೆ ಎಂದು ಮುಂತಾಗಿ ಪೈಗಂಬರರು ಹೇಳಿದ ವಿಚಾರಗಳು ಹದೀಸ್ನಲ್ಲಿ ಇವೆ. ಈ ತಂಪುಗಾಳಿ ಶಾಂತಿ ತತ್ತ್ವದ ಪ್ರತೀಕವಾಗಿದೆ. ಉಪನಿಷತ್ತಿನ ಶಾಂತಿಮಂತ್ರಗಳು ಮತ್ತು ನಿಗು೯ಣ ನಿರಾಕಾರ ಬ್ರಹ್ಮತತ್ತ್ವ 1400 ವರ್ಷಗಳಷ್ಟು ಹಿಂದೆಯೆ, ಅಂದರೆ ಪೈಗಂಬರರ ಜೀವಿತಾವಧಿಯಲ್ಲೇ ಅರಬ್ ದೇಶವನ್ನು ತಲುಪಿದ ಸಾಧ್ಯತೆಗಳಿವೆ. ಇಂಥ ಮಹತ್ವದ ಚಿಂತನೆಗಳನ್ನು ಖಾದರಿಪೀರಾ ಅವರು ನಮ್ಮ ಮುಂದೆ ಇಟ್ಟು ವಿಶ್ವಬಂಧು ತ್ವದಲ್ಲಿ ಭಾರತದೇಶದ ಮಹತ್ವವನ್ನು 19ನೇ ಶತಮಾನದಲ್ಲೇ ಸಾರಿದ್ದಾರೆ.
ಸುಳ್ಳುದೇವರುಗಳೆಲ್ಲ ನಾಶವಾಗಿ ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವ ಕುಲ ಎಂದು ಮಾನವರು ನಂಬುವುದರ ಮೂಲಕ ಎಲ್ಲ ಅಡ್ಡಗೋಡೆಗಳನ್ನು ಕೆಡವುತ್ತ ಒಂದಾಗುವ ಕಾಲ ಬರುತ್ತದೆ ಎಂಬುದರಲ್ಲಿ ಅವರಿಗೆ ನಂಬಿಕೆ ಇದೆ. ಸಾಲಗುಂದಾದಂಥ ಹಳ್ಳಿಯ ಮೂಲೆಯೊಂದರಲ್ಲಿ ಕುಳಿತಿದ್ದ ಅವರು, ಕೈಗಾರಿಕೀಕರಣದಿಂದಾಗಿ ಜಗತ್ತಿನ ರೂಪು ಬದಲಾಗುತ್ತಿರುವುದನ್ನು ಮಾಧ್ಯಮದ ಸಹಾಯವಿಲ್ಲದೆ ಅತಿ೯ಸಿಕೊಂಡಿದ್ದಾರೆ. ಟಿ.ವಿ. ಜನಕ ಲೋಗಿ ಬಿಯಾಡ೯ ಹುಟ್ಟುವ ಮೊದಲೇ ಟಿ.ವಿ. ಬರುವ ಬಗ್ಗೆ ಅವರು ನಿಖರವಾಗಿ ತಿಳಿಸಿ ದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸೃಷ್ಟಿ ಯಾಗುತ್ತಿರುವ ಹೊಸ ಕಾಲದ ಬಗ್ಗೆ ಮುನ್ಸೂಚನೆ ನಿಡಿದ್ದಾರೆ. ದೇವರು ಧರ್ಮಗಳ ಕುರಿತ ಆಚಾರ ವಿಚಾರಗಳಲ್ಲಿ, ಜಾತಿ ಮತ್ತು ವರ್ಗಗಳಲ್ಲಿ, ಆಹಾರ ಧಾನ್ಯಗಳ ಉತ್ಪಾದನಾ ಮತ್ತು ಸಂಸ್ಕರಣಾ ವ್ಯವಸ್ಥೆಯಲ್ಲಿ, ಹೆಣ್ಣು ಗಂಡಿನ ಸಂಬಂಧಗಳಲ್ಲಿ ಅಗಾಧ ಬದಲಾವಣೆಗಳಾಗುವ ಬಗ್ಗೆ ಅವರು ತರ್ಕಬದ್ಧವಾದ ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲ ಬಲುಬೇಗ ಬರುತೈತೆ ಎಂದು ಬರೆದ ತತ್ತ್ವಪದವಿದು.
ಕಾಲ ಬಲುಬೇಗ ಬರತೈತೆ ಈ ದೇವರೆಲ್ಲ ನಾಶವಾಗುವ ಕಾಲ
ಬಲುಬೇಗ ಬರತೈತೆ
ಗೊತ್ತಿಲ್ಲದೆ ಗಳಿಸಿದ ಆಸ್ತಿ ಬಡವರ ಪಾಲಾಗುವ ಕಾಲ
ಜಾತಿಭೇದಗಳು ನಾಶವಾಗಲು ದ್ವೇಷವಿಲ್ಲದೆ ಬದುಕುವ ಕಾಲ
ಮಠದಲ್ಲಿಯ ಘಟದ ದೇವರಿಗೆ ಹಟದಿಂದ ಕಡಿಯುವ ಕಾಲ
ಹೊಗಳುತಿದ್ದ ನಾಯಿಗಳೆಲ್ಲ ಹಡಪತ್ತಿ ಅವು ಸಾಯುವ ಕಾಲ
ಹೆಚ್ಚಿನ ಬೆಳೆಯನು ತಂತ್ರಜ್ಞಾನದಿ ಯಂತ್ರದಿಂದ ಬೆಳೆಯುವ ಕಾಲ
ಧಾನ್ಯ ರಸವನು ಮಾನ್ಯ ಮಾಡಿಸಿ ಗುಳಿಗೆ ಮಾಡಿ ನುಂಗಿ ಬದುಕುವ ಕಾಲ
ಗಂಡು ಹೆಣ್ಣುಗಳ ಭೇದ ಅಳಿಯುವುದು; ಹೆಣ್ಣು ತನ್ನ ತಾ
ತಿಳಿದು ಬಾಳುವುದು; ಕೃತಕ ಗರ್ಭಧಾರಣದಿಂದ ಮಕ್ಕಳು ಜನ್ಮಪಡೆಯುವ ಕಾಲ
ದೇವರಿಂದ ಆಗದ ಕೆಲಸಕೆ ಮಾನವ ಸಾಧಿಸಿ ತೋರುವ ಕಾಲ
ಒಂದೆ ಕ್ಷಣದಿ ನಿಜಿ೯ವ ಲೋಹದಿ ಅಲ್ಲೆ ವಸ್ತು ಇಲ್ಲಿ ಕಾಣುವ ಕಾಲ
ಬಡವರು ಶ್ರೀಮಂತರಾಗುವರು, ಶ್ರೀಮಂತರು ಬಡವರಾಗುವರು
ಕಷ್ಟ ಪಟ್ಟವರು ಸುಖಭೋಗಿಸುವ ಸತ್ಯವೆಂಬ ನಿತ್ಯದ ಕಾಲ
ಉತ್ತರದಿಂ ನಾಶವಾಗುವರು ದಕ್ಷಿಣದಿಂ ರಾಜ್ಯವಾಳುವರು
ಚಪಲ ಮೋಸ ವಂಚನೆಯಲ್ಲ ಹಾಳಾಗಿ ಹಲ್ ಕಿಸಿಯುವ ಕಾಲ
ಸತ್ಯ ಮಿಥ್ಯಕೆ ಜಗಳಾಗುವುದು ಮಿಥ್ಯ ನಿತ್ಯ
ನಾಶ ಆಗುವುದು ಸತ್ಯಗುರು ಖಾದರಿ ಪೀರನು
ಹೇಳಿದ ಸತ್ಯ ನೋಡುವ ಕಾಲ
ಇಂಥ ಬದಲಾವಣೆಗಳೊಳಗಿನ ವೈರುಧ್ಯಗಳನ್ನೂ ಅವರು ಗುರುತಿಸಿದ್ದಾರೆ. 150 ವರ್ಷಗಳಿಗೂ ಹಿಂದೆಯೆ ಪ್ರಜಾಪ್ರಭು ತ್ವದಲ್ಲಿನ ಸಮಸ್ಯೆಗಳನ್ನು ಗುರುತಿಸಿದ್ದಾರೆ.
ಪ್ರಜೆಗಳೆಲ್ಲ ಪ್ರಭುಗಳು ಎಂದು ಹೇಳುವರು ಜನರಲ್ಲಿ
ಸುಳ್ಳು ಮೋಸ ವಂಚನೆ ಮಾಡಿ ಪ್ರಭುಗಳು ಆಗುವರು ಇಲ್ಲಿ
ಸತ್ಯವೆಂಬಾ ಬಡತನದಲ್ಲಿ ಸುಳ್ಳಿಗೆ ಶ್ರೀಮಂತಿಕೆಯಿಲ್ಲಿ
ನೂರಾರು ಮನೆಗಳು ಮುರಿದು ಧರ್ಮಛತ್ರ ಕಟ್ಟುವರಲ್ಲಿ
ಎಂದು ಅವರು ಹೇಳುವಲ್ಲಿ ಇಂದಿನ ಭ್ರಷ್ಟಸಮಾಜದ ಬೇರುಗಳಿವೆ. ಎಷ್ಟೊಂದು ತರ್ಕಬದ್ಧ ಮುಂದಾಲೋಚನೆಯ ವಿಶಿಷ್ಟ ಸೂಫಿ ಈ ಖಾದರಿಪೀರಾ ಎಂಬುದು ಅವರ ತತ್ತ್ವಪದಗಳ ಓದುಗರಿಗೆ ಅನಿಸದೆ ಇರದು.
ಉಳಿಯದೊ ಯಪ್ಪಾ ಈ ದೇಶ ಹಿಂಗಾದರೆ ದಿವಸಾ
ಜಾತಿಯ ಜಗಳವೆದ್ದು ಬಿದ್ದಾರೊ ತಾವೆ ಎದ್ದು ದಿವಸಾ
ನ್ಯಾಯಾದ ಮೂಲ ಈ ಖೋಡಿ ಜಗಳ
ಹೀಗೆ ಅವರು ಜನಸಮುದಾಯಗಳ ಮಧ್ಯದ ವೈರು ಧ್ಯಗಳು ದೇಶದ ಏಕತೆಗೆ ಹೇಗೆ ಕಂಟಕವಾಗುತ್ತವೆ ಎಂಬುದನ್ನು ತಿಳಿಸಿಹೇಳಿದ್ದಾರೆ. ಜಾತಿ ಧರ್ಮಗಳ ಮಧ್ಯದ ವೈರುಧ್ಯ ಹೆಚ್ಚಾದಂತೆಲ್ಲ ಪರಿಸ್ಥಿತಿ ಉಲ್ಬಣಗೊಂಡು ಇಂದು ದೇಶ ಭಯೋತ್ಪಾದಕರ ಮತ್ತು ಕೋಮುಗಲಭೆಕೋರರ ಸ್ಥಾನವಾಗಿದೆ. ಈ ದೇಶ ದುದಿ೯ನಗಳನ್ನು ಕಾಣಬಾರದು ಎಂಬುದು ಅವರ ಕಳಕಳಿಯಾಗಿತ್ತು. ಸೌಹಾರ್ದ ಬದುಕಿನಿಂದ ಮಾತ್ರ ಈ ದುರಂತವನ್ನು ತಪ್ಪಿಸಲು ಸಾಧ್ಯ ಎಂಬುದು ತಮ್ಮ ಬಹುಪಾಲು ತತ್ತ್ವಪದಗಳಲ್ಲಿ ಸೂಚಿಸಿದ್ದಾರೆ.
ಎಲ್ಲಾ ನೀನೇ ಮಾಡಿ ಅವನ ಹೆಸರು ಹೇಳಬೇಕು ಪುಣ್ಯವಂತನವನು
ಅವನೇ ನಾನೆಂದು ಹೇಳಿದ ಮನಸೂರಗೆ ಗಲ್ಲಿಗೇರಿಸಿಲ್ಲೇನು?
ಬ್ಯಾಡೆಂದು ಹೇಳಲಿಲ್ಲ ಕಾರಣೇನು?
ಸೂಫಿಸಂತ ಮನಸೂರ್ ನಾನೇ ಸತ್ಯ ಎಂದು ಹೇಳಿದ್ದಕ್ಕೆ ದೈವನಿಂದನೆಯ ಆರೋಪ ಹೊರಿಸಿ ಗಲ್ಲಿಗೇರಿಸಲಾಯಿತು. ಸಮಾಜ ಅದನ್ನು ವಿರೋಧಿಸಲಿಲ್ಲ. ಮನುಷ್ಯರು ತಮ್ಮೊಳಗಿನ ಶಕ್ತಿಸಾಮಥ್ರ್ಯದಿಂದ ಎಲ್ಲವನೂ ಸಾಧಿಸುತ್ತಾರೆ. ಆದರೆ ಅದೆಲ್ಲದಕ್ಕೆ ತಮ್ಮೊಳಗಿನ ದೇವರೇ ಕಾರಣ ಎಂದು ತಿಳಿಯದೆ ಇಲ್ಲದ ದೇವರ ಹೆಸರು ಹೇಳುತ್ತಾರೆ ಎಂದು ಖಾದರಿಪೀರಾ ಬೇಸರ ವ್ಯಕ್ತಪಡಿಸುತ್ತಾರೆ.
ದೇವರ ಹೆಸರೇಳಿ ನೀನು ಮಾಡಬ್ಯಾಡೊ ಕದನ
ಭೇದ ಅಳೆದು ಪ್ರೀತಿ ಮಾಡಿದರೆ ನಿನೆ ದೇವರು ಗೊತ್ತಿಲ್ಲೇನಾ
ಯೋಚಿಸಿ ನೋಡಪ್ಪಾ ನೀನಾ; ಬಿಡು ನಿನ್ನ ಕೆಟ್ಟ ಗುಣಾ
ನಮ್ಮ ದೇಶದ ದುರಂತವೆಂದರೆ ಮಾನವರು ತಮ್ಮ ದೇವರು ಮತ್ತು ಧರ್ಮದ ಹೆಸರಿನಲ್ಲೇ ಗಲಭೆಗಳನ್ನು ಸೃಷ್ಟಿ ಸುತ್ತಾರೆ. ಆದರೆ ಭೇದ ಅಳಿಸಿ ಪ್ರೀತಿ ಭಾವದ ಮೂಲಕ ತಾವೇ ದೇವ ರಾಗಬೇಕೆಂಬ ತೀವ್ರತೆಯನ್ನು ಅವರು ಹೊಂದಿರುವುದಿಲ್ಲ. ಅಂದರೆ ತಮ್ಮೊಳಗಿನ ಸದ್ಭಾವನೆಗಳ ಜೊತೆ ಬದುಕುವುದನ್ನು ಅವರು ಕಲಿಯಲು ಪ್ರಯತ್ನ ಮಾಡುವುದಿಲ್ಲ. ಇದೇ ಎಲ್ಲ ಭೇದಭಾವಗಳ ಮತ್ತು ಶೋಷಣೆಯ ಮೂಲವಾಗಿದೆ. ಈ ನೋವು ಖಾದರಿಪೀರಾ ಅವರಿಗೆ ಕಾಡುತ್ತಲೇ ಇದೆ. ಸತ್ಯ ಹೇಳಿದ ಹುತಾತ್ಮ ಸೂಫಿಸಂತ ಮನಸೂರರನ್ನು ಅವರು ಅನೇಕ ಕಡೆ ನೆನಪಿಸಿಕೊಳ್ಳುತ್ತಾರೆ. ಸತ್ಯ ಹೇಳಿದವರಿಲ್ಲಿ ಉಳೀ ಲಿಲ್ಲ ಮನಸೂರ್ಗ ಗಲ್ಲಿಗೇರಿ ಸ್ಯಾರಲ್ಲ ಎಂದು ದುಃಖ ಪಡುತ್ತಾರೆ.
ಯಾವುದೇ ಧರ್ಮ ತನ್ನತನವನ್ನು ಉಳಿಸಿಕೊಳ್ಳಬೇಕಾದರೆ ಅದು ಅಹಿಂಸೆ, ಸಮಾನತೆ ಮತ್ತು ಶಾಂತಿಯ ಮೇಲೆ ನಿಂತಿರಬೇಕಾಗಿರುತ್ತದೆ. ವಿಶ್ವಶಾಂತಿ ಮತ್ತು ಸತ್ಯದರ್ಶನಕ್ಕೆ ಇವೇ ಮೂಲವಾಗಿರುತ್ತವೆ. ಹಿಂಸೆಯನ್ನು ಮುಂದಿಟ್ಟುಕೊಟ್ಟು ಯಾವುದೇ ಧರ್ಮ ಸತ್ಯದರ್ಶನ ಮಾಡಿಸಲಾರದು. ಮಾನವ ಅಹಿಂಸೆಯನ್ನು ಪಾಲಿಸಬೇಕು. ಅಹಿಂಸೆಯು ಆತ್ಮಸಾಕ್ಷಾ ತ್ಕಾರದೆಡೆಗೆ ಒಯ್ಯುತ್ತದೆ. ಆತ್ಮಸಾಕ್ಷಾತ್ಕಾರದಿಂದ ಶಾಂತಿ ಲಭಿ ಸುತ್ತದೆ. ಈ ಒಳಗಿನ ಶಾಂತಿಯೇ ವಿಶ್ವಶಾಂತಿಗೆ ಮೂಲಾಧಾರ ವಾಗುತ್ತದೆ. ಆ ಮೂಲಕ ಸಮಾನತೆಯಿಂದ ಕೂಡಿದ ವಿಶ್ವ ಭ್ರಾತೃತ್ವ ಶಾಶ್ವತವಾಗುತ್ತದೆ. ಇಂಥ ವಾತಾವರಣದಲ್ಲಿ ಮಾನವ ರೇ ದೇವರಾಗುತ್ತಾರೆ. ಹೀಗೆ ಮಾನವರನ್ನು ಉದ್ಧರಿಸುವುದು ಧರ್ಮದ ಕಾರ್ಯವಾಗಿದೆ.
ಹಿಂಸೆ ಎಂಬುದು ಧರ್ಮಕ್ಕೆ ಅಂಟಿದ ಕಳಂಕ. ಅದು ಧರ್ಮ ನಿಂದನೆಯ ಆರೋಪದ ಮೇಲೆ ನಡೆಯಬಹುದು. ಧರ್ಮ ಯುದ್ಧದ ನೆಪದಲ್ಲಿ ನಡೆಯಬಹುದು. ಧರ್ಮರಕ್ಷಣೆಯ ನೆಪದಲ್ಲಿ ನಡೆಯಬಹುದು. ಈ ಹಿಂಸಾ ಪ್ರವೃತ್ತಿ ಕೊನೆಯಲ್ಲಿ ಕೋಮುಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ಕೊನೆಗೊ ಳ್ಳುವುದು. ಆದ್ದರಿಂದ ಧರ್ಮದ ಹೃದಯವನ್ನು ಅರಿಯುವುದು ಅವಶ್ಯವಾಗಿದೆ. ಆ ಹೃದಯವಂತಿಕೆಯ ಆಧಾರದ ಮೇಲೆ ಧರ್ಮದ ಬುದ್ಧಿಯ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಆದರೆ ಮೂಲಭೂತವಾದಿಗಳು ತಮ್ಮ ಧರ್ಮದ ಭುಜಭಲವನ್ನು ಮಾತ್ರ ನೋಡಲು ಬಯಸುತ್ತಾರೆ. ಹೀಗಾಗಿ ಅವರಿಗೆ ಅವರ ಧರ್ಮಗ್ರಂಥಗಳ ಅಂತರಾಳ ಗೊತ್ತೇ ಆಗುವುದಿಲ್ಲ. ಜಗತ್ತಿನ ದೇವರುಗಳಿಗೆ ಇಟ್ಟ ಹೆಸರುಗಳೆಲ್ಲ ಮನುಷ್ಯರು ಇಟ್ಟ ಹೆಸರುಗಳೇ ಆಗಿವೆ. ದೇವರು ಅಖಂಡ ಪ್ರೇಮಸ್ವರೂಪದಲ್ಲಿ ಮಾತ್ರ ಇರುತ್ತಾನೆ. ಅಲ್ಲಿ ಹಿಂಸೆ, ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ಗುಲಾಮಗಿರಿಗೆ ಅವಕಾಶವಿಲ್ಲ.
ಒಬ್ಬ ಗುರು ತನ್ನ ಕಿರಿಯ ಶಿಷ್ಯನಿಗೆ ಕುದುರೆಗೆ ನೀರು ತೋರಿಸಿಕೊಂಡು ಬಾ ಎಂದು ಹೇಳುತ್ತಾನೆ. ಆತ ಕುದುರೆ ಯನ್ನು ನದಿ ದಂಡೆಗೆ ಒಯ್ದು, ಕುದುರೆಗೆ ನೀರು ಕುಡಿಯಲು ಅವಕಾಶ ಕಲ್ಪಿಸದೆ ಬರಿ ತೋರಿಸಿಕೊಂಡು ಬರುತ್ತಾನೆ. ಇದನ್ನು ಅರಿತ ಗುರು ತನ್ನ ಹಿರಿಯ ಶಿಷ್ಯನನ್ನು ಕರೆದು ಕುದುರೆಗೆ ನೀರು ತೋರಿಸಿಕೊಂಡು ಬಾ ಎಂದು ಹೇಳುತ್ತಾನೆ. ಆ ಹಿರಿಯ ಶಿಷ್ಯ ಕುದುರೆಯನ್ನು ನದಿ ದಂಡೆಗೆ ಒಯ್ದು ಬಿಡು ತ್ತಾನೆ. ಆಗ ಕುದುರೆ ನೀರು ಕುಡಿಯುತ್ತದೆ. ಕುದುರೆಯು ಎಮ್ಮೆಯ ಹಾಗೆ ಅಲ್ಲ. ಅದು ನೀರು ಕಂಡಲ್ಲಿ ಮುಳುಗುವುದಿಲ್ಲ. ನೀರಡಿಕೆಯಾದಾಗ ಮಾತ್ರ ನೀರ ಬಳಿ ಹೋಗುತ್ತದೆ. ಕುದುರೆಗೆ ನೀರು ಕುಡಿಯಲು ಕೂಡ ಒತ್ತಾಯಿಸಬಾರದು. ನೀರು ತೋರಿಸಬೇಕು ಅಷ್ಟೆ. ಅಂದರೆ ಅದಕ್ಕೆ ನೀರಿನ ಬಳಿ ಬಿಡಬೇಕು. ಅದು ಕುಡಿಯಬಹುದು ಅಥವಾ ಬಿಡಬಹುದು, ಒತ್ತಾಯವಿಲ್ಲ.
ಕಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಮೂಲಭೂತವಾದಿಗಳು ಧರ್ಮಗ್ರಂಥಗಳನ್ನು ಅಥೈ೯ಸುತ್ತಾರೆ. ಆದರೆ ಸೂಫಿಗಳು, ಶರಣರು, ಸಂತರು, ದಾಸರು ಮತ್ತು ತತ್ತ್ವಪದಕಾರರು ಹಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥ ಮಾಡಿಕೊಂಡಂತೆ ಧರ್ಮದ ಮಾತನ್ನು ಅರ್ಥಮಾಡಿ ಕೊಳ್ಳು ತ್ತಾರೆ. ಹೀಗೆ ಎಲ್ಲ ಸೂಫಿಗಳ ಹಾಗೆ ಖಾದರಿಪೀರಾ ಅವರು ಪವಿತ್ರ ಖುರಾನ್ ಅನ್ನು ಅರ್ಥ ಮಾಡಿಕೊಂಡರು. ತುಳಿತಕ್ಕೊ ಳಗಾದವರು ಮತ್ತು ಅಪಮಾನಕ್ಕೆ ಒಳಗಾದವರು ಈ ಜಗತ್ತನ್ನು ಆಳಬೇಕೆಂದು ಖುರಾನ್ ಬಯಸುತ್ತದೆ. ಈ ಖುರಾನ್ ಆಶಯ ಗಳೊಂದಿಗೆ ಸಾಲಗುಂದಾದಲ್ಲಿ ಬದುಕಿದ ಖಾದರಿಪೀರಾ ಅವರು ಶರಣರ ಮಾರ್ಗದಲ್ಲಿ ನಡೆಯುತ್ತ ಜನರಿಗೆ ಹೊಸ ಬದುಕಿನ ಬೆಳಕನ್ನು ನೀಡಿದ್ದು ಒಂದು ಅಪೂರ್ವ ಸಾಧನೆ ಯಾಗಿದೆ. ಅಂತೆಯ ಅವ್ರು ಮೇಲೆ ತಿಳಿಸಿದ ಕಿರಿಯ ಶಿಷ್ಯನಂತಿ ರುವ ಮುಲ್ಲಾ ಮೌಲಾನರನ್ನು ಪ್ರಶ್ನಿಸುತ್ತಾರೆ.
ನಿನ್ನ ನೀನು ತಿಳಿಯೋ ಮುಲ್ಲಾ, ದಯವಿಲ್ಲದೆ ಧರ್ಮವಿಲ್ಲ
ನಲ್ಲನ ನೀ ಎಂದು ನೋಡಲಿಲ್ಲ, ಬರೆ ಕೂಗಿದೋ ಮುಲ್ಲಾ
ನೋಡಿ ನಿನಗೆ ನಗುತಾನ ಅಲ್ಲಾ, ನೀ ನೋಡಲಿಲ್ಲ
ಎಂದು ಹೇಳುವ ಮೂಲಕ ಅವರು ಮುಸ್ಲಿಂ ಮೂಲ ಭೂತವಾದಿಗಳನ್ನು ಎದುರು ಹಾಕಿಕೊಳ್ಳುತ್ತಾರೆ. ದೇವರಲ್ಲಿ ಅಚಲವಾದ ನಂಬಿಕೆ ಇರುವ ಅವರು ಆತನನ್ನು ಮನುಷ್ಯನ ಒಳಗೇ ಕಾಣಲು ಲೋಕಕ್ಕೆ ತಿಳಿಸುತ್ತಾರೆ. ಸೂಫಿಗಳಿಂದ ಆರಂಭ ವಾದ ಈ ಕ್ರಮ ಶರಣರಲ್ಲಿ ಅಂತಿಮ ಘಟ್ಟವನ್ನು ತಲುಪಿದೆ. ಇವೆರಡೂ ತತ್ತ್ವಗಳ ಸಂಗಮವಾಗಿರುವುದರಿಂದಲೇ ಖಾದರಿ ಪೀರಾ ಅವರಿಗೆ ಇಂಥ ಪ್ರಖರ ತಾತ್ತ್ವಿಕ ವೈಚಾರಿಕತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ.
ಅಲ್ಲಾ ನೀನೆಲ್ಲಾ ಸೃಷ್ಟಿ ಮಾಡಿದ್ಯೋ ನಮಗೆಲ್ಲಾ
ನಮ್ಮೊಳಗೆಲ್ಲಾ ನೀನೇ ಇರಲು ಹೇಗೆ ಹೇಳಲಿ ನೀನಿಲ್ಲಾ
ನಿನ್ನ ಹೆಸರಿಲೆ ಧರ್ಮವ ರಚಿಸಿ ಭೇದ ಮಾಡುವ ಜನರೆಲ್ಲಾ
ಭೇದ ಮಾಡುತಾ ಭವಿಗಳಾಗಿ ಅವು ತಿರುಗಿ ತಿರುಗಿ ಸಾಯುವರೆಲ್ಲಾ
ಎಂದು ಅವರು ಧರ್ಮಗಳ ಹೆಸರಲ್ಲಿ ಭೇದ ಸೃಷ್ಟಿಸುವ ಜನರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಶರಣರ ಹಾಗೆ ಸ್ವರ್ಗ ನರಕಗಳನ್ನು ತಿರಸ್ಕರಿಸುತ್ತ ಸ್ವರ್ಗ ನರ್ಕದ ಆಸೆಯ ಭಯದಲ್ಲಿ ಎಲ್ಲರೂ ಮುಳುಗ್ಯಾರ. ಸ್ವರ್ಗ ಎಲ್ಲೈತೆ ನರ್ಕ ಎಲ್ಲೈತೆ ಹೇಳದೆ ಸಾಯ್ತಾರ ಯಪ್ಪ ಎಂದು ಅವರು ಹೇಳುತ್ತಾರೆ.
ಮಸೀದಿ ಎಂಬುದು ಹಾಳಾದ ಜಾಗ ಅದರ ಗೊಡವಿ ನಿನಗ್ಯಾಕಂತೆ
ಮಾನವಗೆ ಮಾನವ ತಾ ತಿಳಿದರೆ ಎಲ್ಲ ನಿನ್ನೊಳಗಡಗೈತಂತೆ
ಎಂದು ಹೇಳಲು ಕೂಡ ಅವರು ಹಿಂಜರಿಯುವುದಿಲ್ಲ. ದೇವರು ಮಸೀದಿಯಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಅವರ ಆಶಯ ವಾಗಿದೆ. ಆದ್ದರಿಂದ ಅವರಿಗೆ ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ಎಂಬುದು ಸಿದ್ಧವಾಗುತ್ತದೆ.
ಯಾಕಬೇಕು ನಮಗೆ ಇಂಥ ಸ್ವಾರ್ಥದಿಂದ ಕೂಡಿದ ಧರ್ಮ
ಪಶು ನಾಯಿ ಹಂದಿಗಿಂತ ಕೀಳಾದ ಶೂದ್ರ ಧರ್ಮ
ನಾಲ್ಕು ವರ್ಣದ ವಿರುದ್ಧ ಹುಟ್ಟಿಬಂತು ಸತ್ಯ ಬಸವಧರ್ಮ
ಜನರು ಕೀಳಾಗಿರುವುದಿಲ್ಲ. ಆದರೆ ಜನರನ್ನು ಕೀಳು ಮಾಡು ವ ಧರ್ಮಗಳು ನಾಯಿ ಹಂದಿಗಳಿಗಿಂತಲೂ ಕೀಳಾಗಿರುತ್ತವೆ. ಇಂಥ ಕೀಳುವರ್ಣವ್ಯವಸ್ಥೆಯನ್ನು ಹೊಂದಿರುವ ಧರ್ಮದ ವಿರುದ್ಧ ಸತ್ಯ ಬಸವಧರ್ಮ ಹುಟ್ಟಿಬಂದಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಯಾವ ಪಂಚಮರನ್ನು ಮತ್ತು ಶೂದ್ರರನ್ನು ವರ್ಣವ್ಯವಸ್ಥೆಯ ಧರ್ಮ ಕೀಳಾಗಿ ಕಂಡಿತೋ ಅಂಥವರನ್ನು ಒಂದುಗೂಡಿಸಿದ ಬಸವಣ್ಣನವರು ಸತ್ಯಧರ್ಮ ವನ್ನು ಲೋಕಕ್ಕೆ ನೀಡಿದರು. ಪವಿತ್ರ ಖುರಾನ್ ಮತ್ತು ಪೈಗಂಬ ರರ ಹದೀಸ್ ಮೂಲಕ ಸೂಫಿಗಳು ಅಥರ್ೈಸಿದ ಇಸ್ಲಾಂ ಧರ್ಮಕ್ಕೂ ಬಸವಧರ್ಮಕ್ಕೂ ಅವರು ಭೇದವನ್ನೇ ಕಾಣುವುದಿಲ್ಲ. ಹೀಗಾಗಿ ಅವರು ತಮ್ಮ ತತ್ತ್ವಪದಗಳಲ್ಲಿ ಪೈಗಂಬ ರರನ್ನು ಮತ್ತು ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ.
ಸಾಲಗುಂದಿಪುರ ಸೇರಿ ಹೇಳು ಅವ ಇಲ್ಲ ನಾನೇ ನಾನು
ಗುರುಪೀರಾ ಖಾದರಿ ಬೆಳಕಾಗಿ ತಾ ಬಂದು ಕತ್ತಲೋಡುವುದು ಇನ್ನೇನು?
ತಿಳಿದು ಎಲ್ಲಾ ನೋಡು ನೀನು
ಸಾಲಗುಂದಿಪುರ ಎಂಬುದು ಅವರಿಗೆ ಒಂದು ದರ್ಶನವಾಗಿ ಕಾಣುತ್ತದೆ. ಅವರ ದೃಷ್ಟಿಯಲ್ಲಿ ಗುರುಪೀರಾ ಖಾದರಿ ಎಂದರೆ ಅವರ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರೇ ಆಗಿದ್ದಾರೆ. ಅವರ ತತ್ತ್ವಪದಗಳಲ್ಲಿ ಬರುವ ಗುರುಪೀರಾ ಖಾದರಿ ಅಂಕಿತ ನಾಮವು ಮಹಬೂಬೇ ಸುಬಹಾನಿ ಅವರಿಗೇ ಸಂಬಂಧಿಸಿದೆ.
ಅಲ್ಲನಿಗೊಂದು ಮನೆಯೆಂದು ಹೇಳಿ ನಿನೆ ಕಟ್ಟಿ ಕೊಟ್ಟಿಲ್ಲೇನು?
ಕಲ್ಲಿನ ಮನೆಯೊಳು ಅಲ್ಲನಿಲ್ಲೆಂದು ಗುರುಪೀರ ಅಂದೇ ಹೇಳಲಿಲ್ಲೇನು
ಸಾಲಗುಂದಿಯೊಳು ಹೋಗಿ ನೋಡುನೀ ಕಂಡನು ಅವ ನೋಡಿಲ್ಲೇನೊ
ನಿನ್ನೊಳು ಅವ ತಾ ನೆಲೆಸ್ಯಾನಲ್ಲಾ ಇನ್ನೊರಿಗೆ ನೋಡಿಲ್ಲೇನು?
ಎಂದು ಹೇಳುವ ಅವರು ದೇವರು ನಮ್ಮೊಳಗೇ ಇರುವ ಈ ರಹಸ್ಯವನ್ನು ಮಹಬೂಬೇ ಸುಹಬಾನಿ ಅವರಿಂದ ಕಂಡು ಕೊಂಡಿರುವುದಾಗಿ ಸೂಚಿಸಿದ್ದಾರೆ. ನಿಮ್ಮೊಳಗಿನ ಆ ದೇವರನ್ನು ಇಲ್ಲಿಯವರೆಗೆ ನೋಡಿಲ್ಲೇನು ಎಂದು ನಮ್ಮನ್ನು ಪ್ರಶ್ನಿಸುತ್ತಾರೆ.
ಇಸ್ಲಾಂ ಮೂಲಭೂತವಾದಿಗಳು ಸೂಫಿ ಸಂತರ ಸಮಾ ಧಿಗಳ ಬಗ್ಗೆ ವಿಮುಖ ಧೋರಣೆ ಹೊಂದಿದ್ದಾರೆ. ಈ ಧೋರಣೆ ಯನ್ನು ಖಾದರಿಪೀರಾ ವಿರೋಧಿಸುತ್ತಾರೆ.
ಗೋರಿಯೊಳಗೆ ಏನಿಲ್ಲವೆಂದು ನೀ ಹೇಳತಿಯೊ ಮೌಲಾನಾ
ಮಸೀದಿಯಲ್ಲಿ ಅಲ್ಲನೆ ಇಲ್ಲ; ಹೆಂಗ್ ಹೇಳ್ತಿನೀ ಐದಾನ, ನೀನಾಗು ಮೋಮಿನೀನಾ
ನನ್ನ ಶರಣರು ನಿತ್ಯ ಬದುಕ್ಯಾರ ಹೇಳುತೈತಿ ಖುರಾನಾ
ತಪ್ಪು ಹೇಳಿದರೆ ಕಿವಿ ಹಿಡಿಯೊ ನೀನು ನಿಮ್ಮಪ್ಪ ಈಗ ಒಪ್ತಾನ
ಎಂದು ಅವರು ಮೂಲಭೂತವಾದಿ ಧರ್ಮಪಂಡಿತರಿಗೆ ಸವಾಲು ಹಾಕುತ್ತಾರೆ. ಖಾದರಿಪೀರಾ ಅವರು ಹಿಂದು ಮೂಲ ಭೂತವಾದಿಗಳನ್ನೂ ಬಿಟ್ಟಿಲ್ಲ.
ಯಾಕಪ್ಪ ಈ ಔತಾರ ಬೆತ್ತಲಾಗಿ ಹುಟ್ಟಿದರೆಲ್ಲಾರ
ಹುಟ್ಟಿದಾಗ ಇರಲಿಲ್ಲಪ್ಪೊ ಹಾರವನಿಗೆ ಜನಿವಾರ
ಎಲ್ಲರಿಗೆ ಒಬ್ಬನೆ ದೇವರ, ತಿಳಿದು ತಿಳಿಯಲಿಲ್ಲೊ ಜನರ
ನಿನ್ನೊಳಗಿನ 6 ಕಳ್ಳರ ಜೊತೆಗೂಡಿ ನೀ ಆದಿಯೊ ಚೋರಾ
ಎಂದು ಅವರು ಟೀಕಿಸಿದ್ದಾರೆ. ಈ ಟೀಕೆಯ ಹಿಂದೆ ಅಖಂ ಡ ಮಾನವಪ್ರೇಮ ಇದೆ. ತಪ್ಪು ಮಾಡುವವರಿಗೆ ತಿಳಿಸಿಹೇಳುವ ಕ್ರಮವಿದೆ. ಹಾಳಾಗಬೇಡಿರಿ ಎಂಬ ಎಚ್ಚರಿಕೆಯ ಮಾತಿದೆ.
ಗುರು ಖಾದರಿಪೀರಾ ಅವರ ದೃಷ್ಟಿಕೋನ ವಿಶಿಷ್ಟವಾಗಿದೆ. ಅವರು ಧರ್ಮ, ಸಮಾಜವನ್ನು, ಸಮಾಜದೊಳಿಗಿನ ವೈರು ಧ್ಯಗಳನ್ನು, ಮತ್ತು ಧರ್ಮವನ್ನು ಕಡೆಗಣಿಸಿ ನಿಲ್ಲುವ ಮಾನ ಸಿಕ ತುಮುಲಗಳನ್ನು ಬಹಳ ತೀಕ್ಷ್ಣವಾಗಿ ಗಮನಿಸಿದ್ದಾರೆ. ಆ ಕುರಿತು ಬಹಳ ಆಳವಾಗಿ ಚಿಂತಿಸಿದ್ದಾರೆ. ಭೌತಿಕ ಸ್ಥಿತಿಗತಿ ಗಳು ಮಾನವನನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವ ಕುಲದಲ್ಲಿಯ ಗುಟ್ಟು ನಮ್ಮನ್ನು ವಾಸ್ತವದ ಕಡೆಗೆ ಸೆಳೆಯುತ್ತದೆ.
ಮನುಕುಲದಲ್ಲಿಯ ಗುಟ್ಟು ಹೇಳತೀನಿ ಮಾಡಬ್ಯಾಡ್ರಿ
ತಾಸ್ಚಾರ ಚತುರ್ ವರ್ಣದ ಚಕ್ರದಿಂದ ಇದು ಹುಟ್ಯಾದ ಔತಾರಾ ಹಾಂ ಹಾಂ
ಬಲಸ್ಯ ಪೃಥ್ವಿ ಎಂಬುದು ತಿಳಿದರೆ ರಾಜರಾಗುತಾರ; ಸುಳ್ಳಿನ ಗುಟ್ಟು
ತಿಳಿದರೆ ಚೂಟಿಯ ಶ್ರೀಮಂತರಾಗುತಾರ ತಮ್ಮಾ ಶ್ರೀಮಂತರಾಗುತಾರ
ಸುಳ್ಳು ಮೋಸ ವಂಚನೆ ಮಾಡಲು ದೇವರಾಗುತಾರ
ಸತ್ಯಧರ್ಮದಿಂದ ಇದ್ದವರೆಲ್ಲ ಶೂದ್ರರಾಗುತಾರ ತಮ್ಮ ಶೂದ್ರರಾಗುತಾರ
ಇಲ್ಲದ್ದು ಇದ್ದಾಂಗ ಹೇಳಿದವರೆಲ್ಲ ಆರ್ಯರಾಗುತಾರ
ನ್ಯಾಯನೀತಿಯಿಂದ ಇದ್ದವರೆಲ್ಲ ದರಿದ್ರರಾಗುತಾರ ತಮ್ಮಾ
ಗೊಡವೆ ಇಲ್ಲದ ಜನರಿಗೆ ಹೊಡೆದರೆ ಕ್ಷತ್ರಿಯರಾಗುತಾರ
ಕೆಲಸವಿಲ್ಲದೆ ಗಳಿಕೆ ಮಾಡಿದವರು ವೈಶ್ಯರಾಗುತಾರ ತಮ್ಮ
ಕಂಗೆಟ್ಟು ವಲಸೆ ಬಂದವರೆಲ್ಲ ಸೂತ್ರ ಹಿಡಿಯತಾರ
ಅನುಕೂಲ ನೋಡಿ ಜೈ ಎಂದವರೆಲ್ಲ ಬ್ರಾಹ್ಮಣರಾಗುತಾರ ತಮ್ಮಾ
ಭೇದವಿಲ್ಲದೆ ಬೋಧ ಮಾಡುವವರು ಉಪವಾಸ ಸಾಯ್ತಾರ ದುಡಿದು
ದುಡಿದು ಮುಪ್ಪಾದ ಎತ್ತಿಗೆ ಸಂತಿಗೆ ಹೊಡಿತಾರ ತಮ್ಮಾ
ಶಾಸ್ತ್ರದ ಪಟ್ಟಿನ ಗುಟ್ಟು ತಿಳಿದರೆ ಜ್ಞಾನಿಗಳಾಗುತಾರ; ಅನ್ಯಾಯ
ನೋಡಿ ಸುಮ್ಮನಾಗಬೇಕು ತಮ್ಮ ಯೋಗ್ಯರಾಗುತಾರ ತಮ್ಮಾ
ಸತ್ಯ ಇದ್ದರೆ ಹಾಗೆ ಹೇಳಬೇಡ ಖೋಡಿ ದಡ್ಡರಾಗತಾರ
ಅನ್ಯಾಯ ತಡಿಯಲು ಹೋದವರೆಲ್ಲಾ ಸತ್ತುಹೋಗತಾರ
ಧರ್ಮದ ಸತ್ಯ ಮುಚ್ಚಿ ಹೇಳಿದರೆ ಋಷಿ ಮುನಿಗಳಾಗುತಾರ
ನ್ಯಾಯನೀತಿಯಿಂದ ಇದ್ದವರೆಲ್ಲಾ ಅಸ್ಪೃಶ್ಯರಾಗುತಾರ ತಮ್ಮಾ
ಗುರು ಖಾದರಿಪೀರಾ ಅವರಿಗೆ ಆ ಕಾಲದ ಬಹುಸಂ ಖ್ಯಾತ ಬಡನಿರಕ್ಷರಿಕನ್ನಡಿಗರ ಬಗ್ಗೆ ತೀವ್ರ ಕಾಳಜಿ ಇತ್ತು. ಅಂತೆಯೆ ಅವರು ತಮ್ಮ ಭಾಗದ ಹಳ್ಳಿಗರು ಆಡುವ ಕನ್ನಡ ದಲ್ಲಿ ಜ್ಞಾನ ಸಮುದ್ರ ಸೃಷ್ಟಿಸಿದರು. ತಾವು ಕಂಡುಕೊಂಡ ತತ್ತ್ವಜ್ಞಾನವನ್ನು ಹಳ್ಳಿಗಾಡಿನ ಕನ್ನಡಿಗರಿಗೆ ತಲುಪಿಸು ವುದಕ್ಕಾಗಿ ತಮ್ಮ ತತ್ತ್ವಪದಗಳನ್ನು ಅವರ ಮುಂದೆ ಹಾಡಿ ತೋರಿಸಿದರು. ಆ ಮೂಲಕ ಕನ್ನಡವನ್ನು ಎತ್ತಿ ಹಿಡಿದರು. ಆ ನಿರಕ್ಷರಿಕನ್ನಡಿಗರು ತಮ್ಮ ಸ್ಮೃತಿಯಲ್ಲಿ ಗುರು ಖಾದರಿ ಪೀರಾ ಅವರ ತತ್ತ್ವಗಳನ್ನು ಸಂರಕ್ಷಿಸಿದರು. ಅಂಥ ಬಡ ಕನ್ನಡಿಗರು 19ನೇ ಶತಮಾನದಿಂದ ಉಳಿಸಿಕೊಂಡು ಬಂದ ತತ್ತ್ವಪದಗಳೇ ಇಂದು ಜ್ಞಾನಸಮುದ್ರವಾಗಿ ಮುದ್ರಣಗೊಂಡು ನಮ್ಮ ಅರಿವಿನ ವಿಸ್ತಾರಕ್ಕೆ ಕಾರಣವಾಗಿವೆ.
ಕನ್ನಡಾಂಬೆಗೆ ರವಿಯು ತಾನಾಗಿ ಬೆಳಕು ನೀಡುತಿತ್ತ; ಅಜ್ಞಾನದ ಕತ್ತಲು
ತಾ ಕಳಿದು ದಾರಿ ತೋರಿಸಿತ್ತ ಭಕ್ತರ ಮನದಲಿ ತಾ ಕುಂತ
ಕನ್ನಡಾಂಬೆಗೆ ದರ್ಶನಸೂರ್ಯನು ಬೆಳಕಿನ ಸೇವೆ ಮಾಡುತ್ತಿದ್ದಾನೆ. ಆ ಮೂಲಕ ಕನ್ನಡಾಂಬೆಯ ಕಂಡು ಜನರ ಅಜ್ಞಾನದ ಕತ್ತಲು ಕಳೆಯುತ್ತಿದೆ. ಆ ದರ್ಶನದ ಬೆಳಕೇ ನಿಜದ ನಿಲವಿನ ಭಕ್ತರ ಮನದಲ್ಲಿ ಕುಳಿತು ವಿಶ್ವಮಾನವ ಪಥವನ್ನು ತೋರಿಸುತ್ತಿದೆ. ಭಕ್ತರೇ ದೇವರಾಗುವ ರಹಸ್ಯವನ್ನು ಬಯಲು ಮಾಡುತ್ತಿದೆ!
ಗುರು ಖಾದರಿಪೀರಾರವರು ಕನ್ನಡ ಜನಪದ ಪರಂಪರೆ ಯೊಂದಿಗೆ ಸೂಫಿಗಳ ಹಾಗೂ ಶರಣರ ಮಾನವಧರ್ಮ ಪರಂಪರೆಯನ್ನು ಒಂದಾಗಿಸಿ ಪ್ರೇಮತತ್ತ್ವವನ್ನು ಸಾರುತ್ತ ವಿಶ್ವಮಾನವನ ಕನಸುಕಂಡಿದ್ದು ಸರ್ವರಿಗೂ ಮಾರ್ಗದಶರ್ಿ ಯಾಗಿದೆ.
ತಾವು ಸಾಕ್ಷಾತ್ಕರಿಸಿಕೊಂಡ ಮಾನವರಿಂದ ಮಾನವ ರನ್ನು ಉದ್ಧಾರ ಮಾಡುವ ಮಾನವಧರ್ಮದ ಪ್ರಚಾರಕ್ಕಾಗಿ, ವಾಹನ ಸೌಲಭ್ಯವಿಲ್ಲದ ಅಂದಿನ ದಿನಗಳಲ್ಲಿ ಕುದುರೆ ಮೇಲೆ ಕುಳಿತು ಕನಾ೯ಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅನೇಕ ಕಡೆಗಳಲ್ಲಿ ಸುತ್ತಾಡಿದರು. ಲೋಕಕಲ್ಯಾಣದ ತತ್ತ್ವ ವನ್ನು ಪ್ರಚಾರ ಮಾಡಿದರು. ಅಲ್ಪಸಂಖ್ಯಾತರು, ಹಿಂದುಳಿದ ವರು ಮತ್ತು ದಲಿತರಷ್ಟೇ ಅಲ್ಲದೆ ಮಾನವತಾವಾದಿ ಬ್ರಾಹ್ಮ ಣರಿಗೂ ಅವರು ಸರ್ವ ಸಮತ್ವದಿಂದ ಕೂಡಿದ ಸೂಫಿ ಶರಣರ ಮಾನವಧರ್ಮದ ದೀಕ್ಷೆ ಕೊಟ್ಟರು. ವಂಶಪಾಯಂಪರ್ಯವಾಗಿ ಬಂದ ಜಹಗೀರನ್ನು ನಿರಾಕರಿಸಿದ್ದ ಅವರು ಕೊನೆಯವರೆಗೂ ಸಾಮಾನ್ಯರ ಮಧ್ಯೆಯೆ ಬದುಕುತ್ತ 25.7.1896ರಂದು ಗುರುವಾರ ಸಾಲ್ಗುಂದಾ ಗ್ರಾಮದಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರ ದಗಾ೯ (ಸಮಾಧಿ) ಸಾಲಗುಂದಾ ಗ್ರಾಮದಲ್ಲಿದೆ.
ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ ಪರಿಚಯ ಮಾಡಿಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು..
ReplyDeleteಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅವರ ಬಗೆಗೆ ತಿಳಿದು ಹೆಮ್ಮೆ ಎನಿಸಿತು...