ಹುಚ್ಚು ಮನಸ್ಸೇ.. ನೀ ಹೀಂಗ್ಯಾಕೆ..?
ಅಂದು ಸಾಯಂಕಾಲ ನಾ ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ರಾತ್ರಿ 8 ಗಂಟೆಯಾಗಿತ್ತು. ಮನೆಗೆ ಬರುತ್ತಲೇ, ನನ್ನ ಶ್ರೀಮತಿ ಪ್ರಣೀತಾ, ರೀ, ಈ ವೆಡ್ಡಿಂಗ್ ಕಾಡರ್್ ನೋಡಿರಿ. ಎಂದು ಹೇಳುವಷ್ಟರಲ್ಲಿ, ಯಾರದು ಎಂದು ನೀನೇ ಹೇಳಿ ಬಿಡೇ? ಎಂದೆ ನಾ. ಏಕೆಂದರೆ, ಮದುವೆ ಸೀಜನ್ನಲ್ಲಿ ಕೆಲವೊಂದು ದಿನ ಎಂಟು, ಹತ್ತು ಮದುವೆ ಆಮಂತ್ರಣ ಪತ್ರಿಕೆಗಳು ಬರುತ್ತಿವೆ. ಅದೇನೋ ಗೊತ್ತಿಲ್ಲ, ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನದ ಮುಹೂರ್ತದಲ್ಲಿ ಬಹಳಷ್ಟು ಜನ ಸಂಬಂಧಿಕರ ಮದುವೆಗಳು ಇರುವುದರಿಂದ ಯಾರ ಮದುವೆಗೆ ಹೋಗುವುದು, ಯಾರ ಮದುವೆಗೆ ಬಿಡುವುದು ಎಂಬ ಕನ್ಫ್ಯೂಜನ್ನಲ್ಲಿ ಇರುತ್ತೇವೆ ಗಂಡ-ಹೆಂಡತಿಯರಿಬ್ಬರೂ. ಒಂದೇ ದಿನ ಮುಹೂರ್ತ ಫಿಕ್ಸ್ ಮಾಡಿದ ಪುರೋಹಿತರಿಗೆ ಹಿಡಿ ಶಾಪ ಹಾಕುತ್ತೇನೆ ನಾನಂತೂ. ಈ ಗಳಿಗೆಯೇ ಶುಭ ಗಳಿಗೆ ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ ಎಂಬ ಶರಣರ ಮಾತುಗಳು ಯಾರಿಗೂ ಬೇಕಿಲ್ಲ ಅಲ್ಲವೇ?
ಅದೇ..ರ್ರಿ, ಊರಲ್ಲಿ ಅಮ್ಮನ ಮನೆಯ ಹತ್ತಿರ, ಅಮ್ಮನ ಮನೆಯ ಸಾಲಿನಲ್ಲಿ ಎಡಗಡೆಗೆ ಮೂರನೆಯ ಮನೆಯಲ್ಲಿ ಬಾಡಿಗೆಗೆ ಇರುವ ಟೀಚರ್ ಮೇಡಂ ರಚನಾಳ ನೆನಪು ನಿಮಗಿರಬೇಕಲ್ಲವೇ? ಆ ಹುಡುಗಿಯು ಗುಂಡ ಗುಂಡಗೆ ಚೆಂದ ಇರುವಳಲ್ಲವೇ? ಆ ಹುಡುಗಿಯ ಅಮ್ಮ ಸಾವಿತ್ರಮ್ಮ ಮೇಲಿಂದ ಮೇಲೆ ನಮ್ಮ ಮನೆಗೆ ಬಂದು, ಅಮ್ಮನ ಜೊತೆ ಮಾತಾಡುತ್ತಿದ್ದುದನ್ನು ನೀವು ಕಂಡಿರಬೇಕು. ನಾನೂ ಊರಿಗೆ ಹೋದಾಗ ನನ್ನ ಜೊತೆನೂ ಬಹಳಷ್ಟು ಸಲ ಮಾತಾಡುತ್ತಿದ್ದುದು ನಿಮಗೆ ನೆನಪಿರಬೇಕು ಅಲ್ಲವೇ?
ಪ್ರಣೀತಾಳ ಮಾತನ್ನು ಅರ್ಧಕ್ಕೇ ತಡೆದು, ಆಯಿತು ಕಣೇ, ನೀನು ಮೊದಲು ವಿಷಯ ಹೇಳು. ಪೀಠಿಕೆನೇ ಜಾಸ್ತಿಯಾಯ್ತು. ಎಂದೆ. ನಾ ಮುಖ ತೊಳೆಯಲು ಹೋಗಬೇಕಾಗಿದ್ದುದರಿಂದ ಅವಸರ ಮಾಡಿದೆ.
ಅದೇ ಟೀಚರ್ ಮೇಡಮ್ದೇ ಮದುವೆ. ಹುಡುಗ ಕಾಲೇಜ್ ಲೆಕ್ಚೆರರ್ ಅಂತೆ. ಎರಡು ದಿನಗಳ ಹಿಂದೆ ಸಾವಿತ್ರಮ್ಮನವರು ಫೋನು ಮಾಡಿ, ನನ್ನ ಜೊತೆ ಮಾತಾಡಿ, ನಮ್ಮ ಮನೆ ಅಡ್ರೆಸ್ ಪಡೆದುಕೊಂಡು ಮನೆ ಅಡ್ರೆಸ್ಸಿಗೇ ಆಮಂತ್ರಣ ಪತ್ರಿಕೆ ಕಳುಹಿಸಿದ್ದಾರೆ. ಫೋನಿನಲ್ಲಿಯೂ ಮದುವೆಗೆ ಬರಬೇಕೆಂದು ಬಹಳ ಒತ್ತಾಯಿಸಿದ್ದಾರೆ. ಇಂದು ಗುರುವಾರ, ಬರುವ ಗುರುವಾರ ಮದುವೆಯೆಂತೆ. ನಾ ಸೋಮವಾರದ ದಿನ ಊರಿಗೆ ಹೋಗಿ, ಎರಡು ದಿನ ಊರಲ್ಲಿ ಇದ್ದು ಮದುವೆ ಮುಗಿಸಿಕೊಂಡು ಬರುವೆ. ಹೇಗೂ ಊರಿಗೆ ಹೋಗದೇ ಬಹಳ ದಿನಗಳಾದವಲ್ಲ? ಎಂದು ತಾ ಊರಿಗೆ ಹೋಗುವ ತವಕ ವ್ಯಕ್ತ ಪಡಿಸಿದಳು.
ಆಯಿತು ಕಣೇ, ಮದುವೆ ಇನ್ನೂ ದೂರ ಇದೆಯಲ್ಲ? ಅವಸರವೇಕೆ? ಎಂದೆ.
ಆಫೀಸಿನ ಕೆಲಸದ ಒತ್ತಡದಲ್ಲಿ ಶನಿವಾರ ಬಂದುದೇ ಗೊತ್ತಾಗಲಿಲ್ಲ. ಶನಿವಾರ ಆಫೀಸಿಗೆ ಹಾಫ್ ಡೇ ಇದ್ದರೂ, ಮನೆಗೆ ಬರುವಷ್ಟರಲ್ಲಿ ಕಡಿಮೆಯೆಂದರೂ ಆರು ಗಂಟೆಯಾಗುತ್ತಿತ್ತು. ನನ್ನ ಕೆಲಸದ ಪರಿ ನೋಡಿ, ನನ್ನ ಶ್ರೀಮತಿ ಆಗಾಗ, ಜಗತ್ತಿನಲ್ಲಿ ಯಾವ ಆಫೀಸಿನಲ್ಲಿಯೂ ನಿಮ್ಮ ಆಫೀಸಿನಂಥಹ ಕೆಲಸವಿರಲಿಕ್ಕಿಲ್ಲ. ಹೊತ್ತೂ ಇಲ್ಲ, ಗೊತ್ತೂ ಇಲ್ಲ ನಿಮ್ಮ ಆಫೀಸಿನ ಕೆಲಸಕ್ಕೆ. ಮನೆಯ ಪ್ರತಿಯೊಂದೂ ಕೆಲಸ ನಾನೇ ಮಾಡಿಕೊಳ್ಳಬೇಕು. ಕಿರಾಣಿ ಸಾಮಾನು ನಾನೇ ತರಬೇಕು, ಹಣ್ಣು, ತರಕಾರಿ ನಾನೇ ತರಬೇಕು ಎಂದು ಗೊಣಗುತ್ತಿದ್ದಳು. ಏಕೆಂದರೆ ಮಕ್ಕಳು ಬೇರೆ ಬೇರೆ ಕಡೆಗೆ ಓದುತ್ತಿದ್ದುದರಿಂದ ಮನೆಯಲ್ಲಿ ಇರುವುದು ನಾವಿಬ್ಬರೇ. ಇಂದೂ ಸಹ ಬಹಳ ಲೇಟಾಗಿರುವುದರಿಂದ ಏನು ಪ್ರತಿಕ್ರಿಯೆ ಬರುವುದೋ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಮನೆಯಲ್ಲಿ ಹೆಜ್ಜೆ ಹಾಕಿದ್ದೆ. ಶ್ರೀಮತಿಯವರ ಸುಂದರ ವದನ ದುಗುಡದಿಂದ ಕೂಡಿದ ಹಾಗೆ ಕಾಣುತ್ತಿತ್ತು. ಮನದಲ್ಲಿ ಚಿಂತೆಯ ಕಾಮರ್ೋಡಗಳು ತುಂಬಿದ್ದವು ಎಂದೆನಿಸುತ್ತಿತ್ತು.
ರೀ, ಊರಿಂದ ಅಮ್ಮ ಫೋನು ಮಾಡಿದ್ದಳು. ಆ ರಚನಾ ಟೀಚರ್ ಮದುವೆ ನಿನ್ನೆ ಆಯಿತಂತೆ. ಊರಿಗೆ ಬರುವ ಅವಶ್ಯಕತೆ ಇಲ್ಲವೆಂದು ಹೇಳಿದಳು.
ನನಗೊಂದೂ ಅರ್ಥವಾಗಲಿಲ್ಲ. ಏಕೆಂದರೆ, ಬರುವ ಗುರುವಾರ ಆ ಹುಡುಗಿಯ ಮದುವೆ ಇದೆಯೆಂದು ಮೊನ್ನೆ ತಾನೇ ಹೇಳಿದ್ದಳು. ಈಗ ನೋಡಿದರೆ, ಆಗಲೇ ನಿನ್ನೇನೇ ಮದುವೆ ಆಯಿತು ಎಂದು ಹೇಳುತ್ತಿದ್ದಾಳೆ. ಟೋಟಲೀ ಕನ್ಫ್ಯೂಜ್ ಆಯಿತು. ಸ್ವಲ್ಪ ವಿವರಿಸಿಯಾದರೂ ಹೇಳೇ ಎಂದೆ.
ರಚನಾಳ ಮನೆಗೆ ಮೇಲಿಂದ ಮೇಲೆ ಬರುತ್ತಿದ್ದ ಆಕೆಯ ಸೋದರತ್ತೆಯ ಮಗನನ್ನು ನೀವೂ ನೋಡಿರಬಹುದು. ಅವನದೂ ನಮ್ಮ ಊರೇ. ನಾನೂ ಸಹ ಊರಿಗೆ ಹೋದಾಗ ಆ ಹುಡುಗನನ್ನು ರಚನಾಳ ಮನೆಯಲ್ಲಿ ಬಹಳಷ್ಟು ಸಾರೆ ನೋಡಿದ್ದೇನೆ. ಅದೇ ಹುಡುಗನನ್ನು ರಚನಾ ಮದುವೆಯಾಗಿರುವಳಂತೆ.
ಆ ಹುಡುಗಗೆ ಮದುವೆಯಾಗಿ ಮಕ್ಕಳೂ ಇವೆಯೆಂದು ಹೇಳುತ್ತಿದ್ದರಲ್ಲಾ? ಹೌದು ತಾನೆ? ನಾ ಕುತೂಹಲದಿಂದ ಅರ್ಧದಲ್ಲೇ ಅವಳ ಮಾತು ತಡೆದು ಕೇಳಿದೆ.
ಹೌದುರೀ. ಆ ಹುಡುಗಗೆ ಈಗಾಗಲೇ ಮದುವೆಯಾಗಿ, ಎರಡು ಮಕ್ಕಳೂ ಇವೆಯೆಂತೆ. ಅವನಿಗೂ ರಚನಾಗೂ ಸುಮಾರು 10ವರ್ಷಗಳ ಅಂತರವಿರಬಹುದು. ಅವರಿಬ್ಬರ ಮದುವೆ ನಿನ್ನೆ ಆಯಿತಂತೆ. ಯಾವುದೋ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಬಂದು, ತನ್ನ ತಂದೆ-ತಾಯಿಗಳಿಗೆ ಆಶ್ಚರ್ಯದ ಜೊತೆಗೆ ಶಾಕ್ನ್ನೂ ನೀಡಿರುವಳಂತೆ ರಚನಾ. ಸಾವಿತ್ರಮ್ಮನವರು ಮಾನಸಿಕವಾಗಿ ಬಹಳ ಜಜರ್ಿರಿತರಾಗಿರುವರೆಂದು ಅಮ್ಮ ಫೋನಿನಲ್ಲಿ ಹೇಳುತ್ತಿದ್ದಳು. ಎಂದಳು ನನ್ನ ಶ್ರೀಮತಿ ಪ್ರಣೀತಾ.
ಅಮ್ಮಾ ತಾಯಿ, ಸ್ವಲ್ಪ ವಿವರಿಸಿ ಹೇಳ್ತೀಯಾ? ಎಂದು ನಾ ಉತ್ಸುಕತೆ, ಕುತೂಹಲ ತೋರಿಸಿದಾಗ, ನನ್ನ ಶ್ರೀಮತಿ ಪ್ರಣೀತಾ ಶುರು ಮಾಡಿದಳು.
ರಚನಾ ಶಾಲಾ ಶಿಕ್ಷಕಿಯಾಗಬೇಕೆಂಬ ಉದ್ದೇಶದಿಂದಲೇ, ಪಿ.ಯು.ಸಿ. ಮುಗಿದ ತಕ್ಷಣ ಡಿ.ಎಡ್. ಮಾಡಿಕೊಂಡಿದ್ದಳು. ತಂದೆ-ತಾಯಿಯಂದಿರು ಡಿಗ್ರಿ ಮಾಡಿಕೊಂಡು ಬಿ.ಎಡ್. ಮಾಡಿಕೋ ಎಂದು ಒತ್ತಾಯಿಸಿದರೂ ಆಕೆ ಕೇಳಿರಲಿಲ್ಲ. ರಚನಾ ಡಿ.ಎಡ್. ಮಾಡಿ ವರ್ಷವಾದರೂ, ಸರಕಾರ ಶಾಲಾ ಶಿಕ್ಷಕರ ಹುದ್ದೆಗಳನ್ನು ಭತರ್ಿ ಮಾಡಲು ಆದೇಶ ಹೊರಡಿಸದಿದ್ದುದರಿಂದ, ಮುಂದಿನ ವರ್ಷ ಆಕೆ ಬಿ.ಎ.ಗೆ ಸೇರಿಕೊಂಡಳು. ಆಕೆಯ ಬಿ.ಎ. ಮುಗಿಯುವ ವರ್ಷ ಸರಕಾರ ಶಿಕ್ಷಕರ ನೇಮಕಾತಿ ಕೈಗೊಂಡುದದರಿಂದ ರಚನಾಗೆ ನಮ್ಮ ಊರಿಂದ ಹದಿನೈದು ಕಿ.ಮೀ. ದೂರದ ಹಳ್ಳಿಯೊಂದರ ಮಾಧ್ಯಮಿಕ ಶಾಲೆಗೆ ಶಿಕ್ಷಕಿಯೆಂದು ಆದೇಶ ಸಿಕ್ಕಿತು.
ಬಾಗಲುಕೋಟೆ ಜಿಲ್ಲೆಯ ರಚನಾಳಿಗೆ ಈಗ ಪೋಸ್ಟಿಂಗ್ ಆಗಿರುವ ಹಳ್ಳಿ ಅರಿಯದ ಊರು. ಇದುವರೆಗೂ ತಂದೆ-ತಾಯಿಗಳು ಹಾಗು ತಂಗಿ ಅಮೃತಾಳ ಜೊತೆ ಬೆಳೆದವಳು. ರಚನಾಳ ತಂದೆಗೆ ಇದೇ ವರ್ಷ ಉದ್ಯೋಗದಲ್ಲಿ ಬಡ್ತಿ ಸಿಕ್ಕು, ಪಕ್ಕದ ಗದಗ ಜಿಲ್ಲೆಯ ತಾಲೂಕೊಂದಕ್ಕೆ ಲೆಕ್ಚೆರರ್ ಅಂತ ವರ್ಗ ಆಯಿತು. ಈಗ ಪೋಸ್ಟಿಂಗ್ ಆಗಿರುವ ಹಳ್ಳಿಯ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಲು ರಚನಾಳಿಗೆ ಇನ್ನೂ ಒಂದು ವಾರ ಅವಧಿ ಇತ್ತು. ಆಗ ಅವರಿಗೆಲ್ಲಾ ಹೊಳೆದಿದ್ದು ನಮ್ಮ ಊರಿನಲ್ಲಿದ್ದ ರಚನಾಳ ಸೋದರತ್ತೆಯ ಮನೆಯ ಬಗ್ಗೆ. ಅವರಿಗೆ ಒಬ್ಬನೇ ಮಗ ಮಹೇಶ ಅಂತ. ನಮ್ಮ ಊರಿನಲ್ಲಿ ಮನೆ ಮಾಡಿ, ಅಲ್ಲಿಂದ ಶಾಲೆಯ ಹಳ್ಳಿಗೆ ಬಸ್ಸಿನಲ್ಲಿ ಅಡ್ಡಾಡುವುದೆಂದು ತಮ್ಮಲ್ಲೇ ಚಚರ್ಿಸಿ ತೀಮರ್ಾನಿಸಿಕೊಂಡು, ಮಹೇಶನಿಗೆ ಫೋನಾಯಿಸಿ, ರಚನಾಳಿಗೆ ಉದ್ಯೋಗ ಸಿಕ್ಕಿರುವ ಬಗ್ಗೆ ತಿಳಿಸಿ, ಅವಳಿಗಾಗಿ ಎರಡು ರೂಮಿನ ಚಿಕ್ಕ ಮನೆಯೊಂದನ್ನು ಹುಡುಕಲು ಹೇಳಿದ್ದರು. ಕುಟುಂಬದವರೆಲ್ಲಾ ಒಂದು ದಿನ ನಮ್ಮೂರಿಗೆ ಬಂದು ಮಹೇಶ್ ನೋಡಿಟ್ಟಿರುವ ಮನೆಗಳಲ್ಲಿ ಒಂದು ಮನೆಯನ್ನು ಫೈನಲ್ ಮಾಡಿಕೊಂಡು ಹಾಗೇ ರಚನಾಳ ಶಾಲೆಯ ಊರಿಗೆ ಹೋಗಿ ನೋಡಿಕೊಂಡು ಬಂದರು. ಚಿಕ್ಕ ಮಗಳು ಅಮೃತಾಳೊಂದಿಗೆ ತಂದೆ, ರಚನಾಳೊಂದಿಗೆ ತಾಯಿ ಇರುವುದೆಂದು ಅವರ ಕುಟುಂಬದಲ್ಲಿ ತೀಮರ್ಾನ ಮಾಡಿಕೊಂಡಿದ್ದರು.
ರಚನಾಳ ಶಾಲೆಯ ಊರು ರಾಜ್ಯ ಹೆದ್ದಾರಿಯಲ್ಲಿ ಇದ್ದುದರಿಂದ ಕೆಲವೊಂದಿಷ್ಟು ಬಸ್ಸುಗಳು ಅಲ್ಲಿ ನಿಲ್ಲುತ್ತಿದ್ದವು. ಬೆಳಿಗ್ಗೆ 9 ಗಂಟೆಯ ಬಸ್ಸಿಗೆ ಹೋದರೆ, ಒಂಭತ್ತುವರೆಗೆ ಅಲ್ಲಿಗೆ ಹೋಗಬಹುದಿತ್ತು. 10ಗಂಟೆಗೆ ಶಾಲೆ ಆರಂಭವಾಗುತ್ತಿತ್ತು. ಸಾಯಂಕಾಲ ನಾಲ್ಕುವರೆಯಿಂದ ಐದುವರೆ ಒಳಗೆ ಆ ಗ್ರಾಮದಿಂದ ವಾಪಸ್ಸು ಬರಲು 4-5 ಬಸ್ಸುಗಳಿದ್ದವು. ಶಾಲೆ ಐದು ಗಂಟೆಗೆ ಮುಗಿಯುತ್ತಿತ್ತು. ರಚನಾಳಿಗೆ ಶಾಲೆಯಿಂದ ವಾಪಾಸು ಬರಲು ಬಸ್ಸಿನ ಅನುಕೂಲ ಚೆನ್ನಾಗಿತ್ತು.
ಶಾಲೆಗೆ ಕರ್ತವ್ಯಕ್ಕೆ ಹಾಜರಾಗಬೇಕಿಂದಿದ್ದ ಹಿಂದಿನ ದಿನ ರಚನಾ ತನ್ನ ತಂದೆ-ತಾಯಿ ಹಾಗೂ ತಂಗಿಯೊಂದಿಗೆ ಲಗೇಜಿನ ಸಮೇತ ಬಂದಿಳಿದಿದ್ದಳು ನಮ್ಮ ಊರಿಗೆ. ಬರುವುದನ್ನು ಮೊದಲೇ ತಿಳಿಸಿದ್ದುದರಿಂದ ಮಹೇಶ್ ಬಸ್ನಿಲ್ದಾಣದಲ್ಲಿ ಹಾಜರಿದ್ದು ಅವರನ್ನು ಬರ ಮಾಡಿಕೊಂಡಿದ್ದ. ಲಗೇಜುಗಳ ಸಾಗಾಣಿಕೆ, ಮನೆಯಲ್ಲಿ ನೀರಿನ ವ್ಯವಸ್ಥೆ ಎಲ್ಲಾ ಮಾಡಿದ್ದ ಮಹೇಶ್.
ಮರು ದಿನದಿಂದ ರಚನಾ ತನ್ನ ಶಾಲೆಗೆ ಹೋಗಲು ಬೆಳಿಗ್ಗೆ 9 ಗಂಟೆಯ ಬಸ್ಸು ಹಿಡಿಯಬೇಕಾಗಿತ್ತು. 9 ಗಂಟೆಯ ಬಸ್ಸು ತಪ್ಪಿದರೆ ಪುನಃ ಬಸ್ಸಿರುವುದು 10ಕ್ಕೆ. ಶಾಲೆಯಲ್ಲಿ ಸರಿಯಾದ ವೇಳೆಗೆ ಇರಬೇಕೆಂದರೆ, ಒಂಬತ್ತು ಗಂಟೆಯ ಬಸ್ಸು ಹಿಡಿಯುವುದು ಅನಿವಾರ್ಯವಾಗಿತ್ತು ರಚನಾಳಿಗೆ. ಮನೆಯಿಂದ ಬಸ್ಟ್ಯಾಂಡಿಗೆ ಎಂಟ್ಹತ್ತು ನಿಮಿಷಗಳ ಹಾದಿ ಅಷ್ಟೆ. ಮೊದಲನೇ ದಿನ ರಚನಾ ಬಸ್ಟ್ಯಾಂಡಿಗೆ ಬರುವಷ್ಟರಲ್ಲಿ ಒಂಭತ್ತು ಗಂಟೆ ಐದು ನಿಮಿಷಗಳಾಗಿದ್ದವು. ಅವಸರವಸರವಾಗಿ ಸ್ವಲ್ಪ ಟಿಫಿನ್ ಮಾಡಿಕೊಂಡು, ಚಪಾತಿ, ಮೊಸರನ್ನ ಡಬ್ಬಿಗೆ ಹಾಕಿಕೊಂಡು ಬರುವಷ್ಟರಲ್ಲಿ ಬಸ್ಸು ಸ್ವಲ್ಪದರಲ್ಲಿ ಮಿಸ್ಸಾಗಿತ್ತು. ಮೊದಲನೇ ದಿನವೇ ಹೀಗಾದುದಕ್ಕೆ ರಚನಾಳಿಗೆ ಹಳಹಳಿಯಾಗಿತ್ತು. ಹತ್ತು ಗಂಟೆಯ ಬಸ್ಸೇ ಗತಿ ಎಂದು ಅಂದುಕೊಂಡಳು. ಲೇಟಾಗಿ ಹೋದರೆ, ಮುಖ್ಯ ಗುರುಗಳು ಏನನ್ನುವರೋ ಏನೋ ಎಂಬ ಅಳುಕು ಮನದಲ್ಲಿ. ಒಂದು ರೀತಿಯ ಆತಂಕ ಶುರುವಾಯಿತು ಅವಳಿಗೆ. ಮನಸ್ಸಿನಲ್ಲಿ ಒಂದು ರೀತಿಯ ಚಿಂತೆಗಿಟ್ಟುಕೊಂಡಿತು.
ಅಷ್ಟರಲ್ಲಿ ತನ್ನ ಸೈಕಲ್ ಮೋಟರಿನಲ್ಲಿ ಮಹೇಶ್ ಪ್ರತ್ಯಕ್ಷನಾಗಬೇಕೆ?. ಮೊದಲನೇ ದಿನ ನೀವು ಡ್ಯೂಟಿಗೆ ಹಾಜರಾಗುತ್ತಿರುವುದರಿಂದ ನಿಮಗೆ ವಿಷ್ ಮಾಡಬೇಕೆಂದು ಮನೆಯ ಹತ್ತಿರ ಬಂದೆ. ಆಗಲೇ ನೀವು ಹೋಗಿರುವುದಾಗಿ ತಿಳಿಯಿತು. ಬಸ್ಟ್ಯಾಂಡಿಗಂತೂ ಹೋಗೋಣ. ನೀವು ಸಿಕ್ಕರೆ ವಿಷ್ ಮಾಡಿದರಾಯಿತೆಂದುಕೊಂಡು ನೇರವಾಗಿ ಇಲ್ಲಿಗೇ ಬಂದೆ. ಹೋಗಿದ್ದರೆ ಫೋನು ಮಾಡಿ ವಿಷ್ ಮಾಡಿದರಾಯಿತೆಂದು ಅಂದು ಕೊಂಡಿದ್ದೆ. ಎನಿ ವೇ ನಿಮ್ಮ ಭೆಟ್ಟಿಯಾಯಿತು. ಬಸ್ಸು ಇನ್ನೂ ಬಂದಿಲ್ಲವೇ? ಆಗಲೇ ಹೊತ್ತಾಗಿದೆ. ಎಂದ ಮಹೇಶ್.
ಬಸ್ಸು ಮಿಸ್ಸಾದ ಬಗ್ಗೆ ಮಿಸ್ ರಚನಾ ಹೇಳುತ್ತಾ, ಶಾಲೆಗೆ ತಡವಾಗುತ್ತಿರುವುದಕ್ಕೆ ಕಳವಳ ವ್ಯಕ್ತ ಪಡಿಸತೊಡಗಿದಳು.
ಲೇಟಾಗುತ್ತಿರುವುದಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಶಾಲೆ ಮುಖ್ಯ ಗುರುಗಳು ನನಗೆ ಚೆನ್ನಾಗಿ ಗೊತ್ತು. ಅವರಿಗೆ ಬೇಕಾದರೆ ನಾ ಹೇಳುತ್ತೇನೆ. ಎಂದ ಮಹೇಶ್.
ಬೇಡ, ಬೇಡ. ಅವರಿಗೇನೂ ಹೇಳುವುದು ಬೇಡ. ನನ್ನ ಉದ್ಯೋಗ ಪರ್ವದ ಮೊದಲನೆಯ ದಿನವೇ ತಡವಾಗಿ ಹೋಗುತ್ತಿರುವುದಕ್ಕೆ ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಎಂದು ಇನ್ನೇನೋ ಹೇಳಬೇಕೆನ್ನುತ್ತಿದ್ದಳು ರಚನಾ.
ಹಾಗಾದರೆ ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ, ನನ್ನ ಬೈಕಿನಲ್ಲಿ ನಿಮ್ಮನ್ನು ಇಂದು ಶಾಲೆಗೆ ಕರೆದುಕೊಂಡು ಹೋಗಿ ತಲುಪಿಸುವೆ. ಹದಿನೈದು ನಿಮಿಷಗಳಲ್ಲಿ ನೀವು ಶಾಲೆಯಲ್ಲಿರುವ ಹಾಗೆ ನಾ ನೋಡಿಕೊಳ್ಳುವೆ. ನಿಮ್ಮ ಮನಃಸಾಕ್ಷಿಯಂತೆ ನೀವು ನಿಗದಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗಬಹುದು. ರಚನಾಳ ಮಾತುಗಳನ್ನು ಕಟ್ ಮಾಡಿ ಹೇಳಿದ್ದ ಮಹೇಶ್.
ಬೇಡ, ನಿಮಗೇಕೆ ತೊಂದರೆ? ರಚನಾ ಮಹೇಶನ ಜೊತೆ ಹೋಗುವುದಕ್ಕೆ ಮೀನ ಮೇಷ ಎಣಿಸತೊಡಗಿದ್ದಳು.
ಇರಲಿ ಬನ್ರೀ, ಸಂಕೋಚ ಪಡಬೇಡಿ. ನೀವು ವಿದ್ಯಾವಂತರಿರುವಿರಿ. ಮೇಲಾಗಿ ನಾನೂ, ನೀವೂ ಸಂಬಂಧಿಕರಿರುವುದರಿಂದ ನಾ ನಿಮ್ಮನ್ನು ಕರೆದುಕೊಂಡು ಹೋಗಲು ಕೇಳುತ್ತಿರುವೆನು. ಇಲ್ಲದಿದ್ದರೆ, ನಾನ್ಯಾರೋ, ನೀವ್ಯಾರೋ? ಅಲ್ಲವೇ? ಎಂದು ಹೇಳುತ್ತಾ ಮಹೇಶ್ ಒತ್ತಾಯಪೂರ್ವಕವಾಗಿ ರಚನಾಳನ್ನು ತನ್ನ ಬೈಕಿನಲ್ಲಿ ಕೂಡ್ರಿಸಿಕೊಂಡು ಹೊರಟೇ ಬಿಟ್ಟ.
ರಚನಾಳಿಗೆ ಇದೊಂದು ರೀತಿಯ ಹೊಸ ಅನುಭವ, ಹರೆಯದ ಗಂಡಸಿನೊಂದಿಗೆ ಬೈಕಿನಲ್ಲಿ ಹೋಗುವುದು. ತಾನಿನ್ನೂ ಈ ಊರಿಗೇ ಹೊಸಬಳು. ಅವಳಿಗೆ ಒಂದು ರೀತಿಯ ಮುಜುಗರವಾಗತೊಡಗಿತ್ತು. ಆದರೂ ಅವನೊಂದಿಗೆ ಹೋಗುವುದು ಅನಿವಾರ್ಯವಾಗಿತ್ತು ಅವಳಿಗೆ. ಪರಸ್ಥಿತಿಗೆ ಹೊಂದಿಕೊಳ್ಳಬೇಕೆಂದುಕೊಂಡು ಮನಸ್ಸಿನಲ್ಲಿ ಮಂಥನ ನಡೆಸಿ, ರಾಜಿ ಮಾಡಿಕೊಳ್ಳತೊಡಗಿದಳು ತನ್ನಷ್ಟಕ್ಕೆ ತಾನೇ.
ಬೈಕು ಊರ ಹೊರವಲಯ ದಾಟುತ್ತಿತ್ತು. ಈ ವರ್ಷ ಮೇ ತಿಂಗಳಿಂದಲೇ ಮಳೆ ಪ್ರಾರಂಭವಾಗಿದ್ದುದರಿಂದ ಭೂ ದೇವಿ ಹಸಿರುಟ್ಟು ನೋಡುಗರ ಮನಸ್ಸಿಗೆ ಮುದ ನೀಡುತ್ತಿದ್ದಳು. ಸಣ್ಣ ಪುಟ್ಟ ಗುಡ್ಡಗಳು ಗಿಡ ಗಂಟಿಗಳಿಂದ ಹಸಿರು ಹಸಿರಾಗಿ ಕಾಣುತ್ತಿದ್ದವು. ಮಹೇಶನ ಬೈಕು ವೇಗವಾಗಿ ಓಡುತ್ತಿದ್ದುದರಿಂದ ಮಾತಾಡುವುದಕ್ಕೆ ಹೆಚ್ಚಿಗೆ ಅವಕಾಶವಿರಲಿಲ್ಲ. ಮಹೇಶನ ಬೈಕು ರಚನಾಳ ಶಾಲೆಯ ಮುಂದೆ ನಿಂತಾಗ 9-45 ಆಗಿತ್ತು. ರಚನಾಳ ಮುಖದಲ್ಲಿ ಧನ್ಯತಾ ಭಾವವಿತ್ತು. ಮಹೇಶ ಮುಖ್ಯ ಗುರುಗಳನ್ನು ಭೆಟ್ಟಿಯಾಗಿ, ರಚನಾಳ ಪರಿಚಯ ಮಾಡಿಸಿ, ತಮ್ಮ ನೆಂಟಸ್ತಿಕೆಯ ಬಗ್ಗೆಯೂ ಹೇಳಿದ. ರಚನಾ ತಾ ಅಂದುಕೊಂಡಿದ್ದಂತೆ ಅಂದು ಸರಿಯಾದ ವೇಳೆಗೆ ಕರ್ತವ್ಯಕ್ಕೆ ಹಾಜರಾಗಿದ್ದಳು ಮಹೇಶನಿಗೆ ಧನ್ಯವಾದ ಹೇಳುತ್ತಾ.
ಮುಂದಿನ ದಿನಗಳಲ್ಲಿ ಮಹೇಶ್ ರಚನಾಳ ಮನೆಗೆ ಆಗಾಗ್ಗೆ ಬರುತ್ತಿದ್ದ. ಹೆಚ್ಚಾದ ಇವರ ಮಾತುಕತೆಗಳು ಸಾವಿತ್ರಮ್ಮನವರಿಗೆ ಹಿಡಿಸುತ್ತಿರಲಿಲ್ಲ. ಮಗಳಿಗೆ ಆಗಾಗ್ಗೆ ಕಿವಿ ಮಾತೂ ಹೇಳತೊಡಗಿದ್ದರು. ಮಹೇಶ್ ಮತ್ತು ರಚನಾರ ನಡುವೆ ಒಂದು ರೀತಿಯ ಆತ್ಮೀಯತೆ ಬೆಳೆಯತೊಡಗಿತ್ತು.
ಆಗಸ್ಟ್ 15ರಂದು ತನ್ನ ಶಾಲೆಯಲ್ಲಿ ರಚನಾ ತಾನೇ ಧ್ವಜಾರೋಹಣ ಮಾಡಬೇಕಾಗಿತ್ತು. ಶಾಲೆಯ ಮುಖ್ಯ ಗುರುಗಳು ಯಾವುದೋ ತುತರ್ು ಕೆಲಸದ ಮೇಲೆ ಬೇರೆಡೆಗೆ ಹೋಗುತ್ತಿದ್ದುದರಿಂದ ರಚನಾ ಮೇಡಂಗೆ ಧ್ವಜ ಏರಿಸುವ ಜವಾಬ್ದಾರಿ ವಹಿಸಿದ್ದರು. ಅಂದು ರಚನಾ ಬೆಳಿಗ್ಗೆ ಆರೂವರೆಗೆಲ್ಲಾ ಊರು ಬಿಡಬೇಕಾಗಿತ್ತು. ಬೆಳಿಗ್ಗೆ ಐದುವರೆಯ ಬಸ್ಸಿನ ನಂತರ ಆಕೆಯ ಶಾಲೆಯ ಊರಿಗೆ ಬಸ್ಸಿರುವುದೇ ಎಂಟು ಗಂಟೆಗೆ. ನಾಳೆ ಬೆಳಿಗ್ಗೆ ಶಾಲೆಗೆ ಹೇಗೆ ಹೋಗುವುದು? ಆಗ ರಚನಾಗೆ ನೆನಪಾದುದು ಮಹೇಶ್. ಅದಕ್ಕಾಗಿ ಹಿಂದಿನ ದಿನವೇ ರಚನಾ ಮಹೇಶಗೆ ಫೋನು ಮಾಡಿ, ಪಂದ್ರಹ ಆಗಷ್ಟ್ದ ದಿನ ತನ್ನನ್ನು ಶಾಲೆಗೆ ಕರೆದುಕೊಂಡು ಹೋಗಬೇಕೆಂದು ವಿನಂತಿಸಿಕೊಂಡಾಗ ಅವ ಖುಷಿಯಿಂದ ಒಪ್ಪಿಕೊಂಡಿದ್ದ.
ಮರು ದಿನ ಹೇಳಿದ ವೇಳೆಗೆ ಸರಿಯಾಗಿ ಬಂದ ಮಹೇಶ್. ಮಳೆಗಾಲದ ದಿನವಾಗಿದ್ದರಿಂದ ಚಳಿ ಹಿತವಾಗಿತ್ತು. ಇರಲಿಯೆಂದು ರಚನಾ ಸ್ವೆಟರ್ ಹಾಕಿಕೊಂಡಳು ಮುಂಜಾಗರೂಕತೆಯಿಂದ. ಬೈಕಿನ ಮೇಲೆ ಹೋಗುವಾಗ ಗಾಳಿ ಹೆಚ್ಚಿಗೆ ಬರುತ್ತದೆಯೆಂದು ಆಕೆ ಅನುಭವವಾಗಿತ್ತು. ಬೈಕಿನ ಪ್ರಯಾಣ ಚೇತೋಹಾರಿಯಾಗಿತ್ತು ಇಬ್ಬರಿಗೂ. ಮುಂಜಾನೆಯ ಕುಳಿಗರ್ಾಳಿಗೆ ಹಾರಾಡುತ್ತಿದ್ದ ಮುಂಗುರುಳನ್ನು ವಯ್ಯಾರವಾಗಿ, ನವಿರಾಗಿ ಹಿಂದಕ್ಕೆ ತಳ್ಳುತ್ತಾ, ಮುಂಗಾರು ಬೆಳೆಗಳ ಹಸಿರಿನಿಂದ ನಳ ನಳಿಸುತ್ತಿದ್ದ ಭೂ ದೇವಿಯ ಚೆಲುವನ್ನು ಆಸ್ವಾದಿಸುತ್ತಿದ್ದಳು ರಚನಾ. ಮಹೇಶ್ ತನ್ನ ಗಾಡಿಯಲ್ಲಿ ಕರೆದುಕೊಂಡು ಬಂದುದರಿಂದ ಅಂದು ರಚನಾ ಸರಿಯಾದ ವೇಳೆಗೆ ಶಾಲೆಗೆ ಬಂದು, ಧ್ವಜಾರೋಹಣವನ್ನು ನೆರವೇರಿಸಿದ್ದಳು. ಮಹೇಶನ ಉಪಕಾರ ಸ್ಮರಣೆ ಮಾಡಿದ್ದಳು ಮೇಲಿಂದ ಮೇಲೆ. ಮಹೇಶನಿಗೂ ಇದು ಒಂದು ರೀತಿಯ ತೃಪ್ತಿ ಮತ್ತು ಖುಷಿ ನೀಡಿತ್ತು.
ರಚನಾ ಮತ್ತು ಮಹೇಶರ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿದ್ದುದನ್ನು ಗಮನಿಸಿದ ರಚನಾಳ ತಾಯಿ ಸಾವಿತ್ರಮ್ಮ ಇಬ್ಬರಿಗೂ ಎಚ್ಚರಿಕೆಯ, ತಿಳುವಳಿಕೆಯ, ಹಿತ ವಚನದ ಮಾತುಗಳನ್ನು ಮೇಲಿಂದ ಮೇಲೆ ಹೇಳತೊಡಗಿದ್ದರು. ಅಂಥಹದ್ದೇನೂ ಇಲ್ಲ, ಮಹೇಶ್ ಆಪತ್ಕಾಲಕ್ಕೆ ಸ್ಪಂದಿಸುವ ಒಳ್ಳೆಯ ಗೆಳೆಯ ಅಷ್ಟೇ ಎಂದು ತಾಯಿಗೆ ಸಮಜಾಯಿಸಿ ಹೇಳಿ, ಸುಮ್ಮನಾಗಿಸುತ್ತಿದ್ದಳು ರಚನಾ. ಮಹೇಶ್ ಹೆಚ್ಚಿಗೇನೂ ಮಾತಾಡದೇ ಅತ್ತೆಯ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದ. ಈಗಾಗಲೇ ಅಕ್ಕ-ಪಕ್ಕದವರಿಂದ ಟೀಕೆ, ಟಿಪ್ಪಣಿಗಳು ಶುರುವಾಗಿದ್ದುದರಿಂದ ಮಗಳಿಗೆ ಸಾವಿತ್ರಮ್ಮನ ಹಿತ ವಚನ, ಉಪದೇಶ ನಿರಂತರವಾಗಿ ಮುಂದುವರೆದಿದ್ದವು.
ರಚನಾ ಬಂದು ಐದಾರು ತಿಂಗಳುಗಳಾಗುವುದರೊಳಗೆ, ಓಣಿಯ ಜನರೆಲ್ಲಾ, ಗುಸು, ಗುಸು ಮಾತಾಡಲು ತೊಡಗಿದ್ದರು. ಅಯ್ಯೋ, ಈ ಟೀಚರಮ್ಮ ಮದುವೆಯಾಗಿರುವ ಆ ಹುಡುಗನ ಹಿಂದೆ ಬಿದ್ದಿದ್ದಾಳಂತೆ. ಈ ಹುಡುಗಿಗೇನು ಧಾಡಿಯಾಗಿದೆಯೋ ಏನೋ ಮದುವೆಯಾಗಿ ಎರಡು ಮಕ್ಕಳಿರುವ ಈ ಮಹೇಶನ ಹಿಂದೆ ಗಂಟು ಬೀಳುವುದಕ್ಕೆ? ಚೆಂದುಳ್ಳಿ ಚೆಲುವಿಯಂಥಹ ಈ ಮಾಸ್ತರತಿ ಮಹೇಶನಲ್ಲಿ ಅಂಥಹದ್ದನ್ನು ಏನು ಕಂಡಿದ್ದಾಳೋ ಏನೋ? ಈ ಹುಡುಗನ ಹೆಂಡತಿ, ತಾಯಿಗಾದರೂ ಬುದ್ಧಿ ಬೇಡವೇ? ಈ ಹುಡುಗಿ ನೋಡಿದರೆ, ಬಿ.ಎ.,ಡಿ.ಎಡ್. ಅಂತೆ, ಮಹೇಶನದು ಬರೀ ಎಸ್.ಎಸ್.ಎಲ್.ಸಿ. ಅಷ್ಟೆ. ಇವ ನೋಡಿದರೆ ರೈತ, ಆಕೆ ನೋಡಿದರೆ ಶಾಲಾ ಶಿಕ್ಷಕಿ. ಇವರದೇನು ಪ್ರೇಮವೋ, ಕಾಮವೋ? ಒಂದೂ ಗೊತ್ತಾಗುತ್ತಿಲ್ಲ. ಹುಡುಗಿಯ ತಾಯಿ ಹುಡುಗಿಯ ಜೊತೆನೇ ಇದ್ದರೂ ಈ ಹುಚ್ಚು ಹುಡುಗಿಗೇಕೆ ತಾಯಿ ಸರಿಯಾದ ಬುದ್ಧಿವಾದ ಹೇಳುತ್ತಿಲ್ಲ? ಎಂದು ಜನ ತಮಗೆ ತಿಳಿದ ಹಾಗೆ ಮಾತಾಡತೊಡಗಿದ್ದರು.
ಜನರ ಇಂಥಹ ಕುಹಕದ ಮಾತುಗಳನ್ನು ಕೇಳಿಸಿಕೊಂಡ ರಚನಾಳ ತಾಯಿ ಸಾವಿತ್ರಮ್ಮ ಒಂದು ದಿನ ಮಗಳನ್ನು ಕೂಡ್ರಿಸಿಕೊಂಡು ಬಹಳ ಸೀರಿಯಸ್ಸಾಗಿ ಬುದ್ಧಿವಾದ ಹೇಳಿದಳು. ನೀ ಇದೇ ರೀತಿ ಮಹೇಶನ ಜೊತೆ ಸುತ್ತಾಡುವುದು, ಮಾತಾಡುವುದು ಮುಂದುವರಿಸಿದರೆ, ಜನರ ಬಾಯಿಗೆ ಆಹಾರವಾಗಿ, ನಾಳೆ ನಿನ್ನ ಮದುವೆಗೆ ತೊಂದರಯಾಗುತ್ತದೆ ನೋಡು. ಆಗ ನೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ನನಗಿಂತ ನೀ ಹೆಚ್ಚಿಗೆ ಓದಿಕೊಂಡವಳು, ತಿಳುವಳಿಕೆಯುಳ್ಳವಳು. ಹೆಣ್ಣು ಎಷ್ಟು ಹುಷಾರಾಗಿದ್ದರೂ ಕಡಿಮೆಯೇ. ಮೈ ಎಲ್ಲಾ ಕಣ್ಣಾಗಿಟ್ಟುಕೊಂಡಿರಬೇಕು. ಒಂದು ಸಾರೆ ಹೆಸರಿಗೆ ಕಳಂಕ ಅಂಟಿಸಿಕೊಂಡರೆ, ಜೀವನ ಪರ್ಯಂತ ನೋವು ಅನುಭವಿಸಬೇಕಾಗುತ್ತದೆ. ಜನರಾಡುವ ಮಾತುಗಳನ್ನು ಕೇಳಿಸಿಕೊಂಡರೆ, ನನಗಂತೂ ಜೀವ ಹೋದ ಹಾಗೆ ಆಗುತ್ತಿದೆ. ನಮ್ಮ ಮನೆತನದ ಮಾನ, ಮಯರ್ಾದೆ ಕಾಪಾಡುವುದು ನಿನ್ನ ಧರ್ಮ. ನಮಗಾದರೂ ಯಾರಿದ್ದಾರೆ? ನೀನು & ಅಮೃತಾ ತಾನೆ? ನೀವಿಬ್ಬರೂ ನನ್ನ ಎರಡು ಕಣ್ಣುಗಳಿದ್ದ ಹಾಗೆ. ಎಂದು ಮಗಳಿಗೆ ತಿಳುವಳಿಕೆ ಹೇಳಿದ್ದಳು.
ಅತ್ತ ಮಹೇಶನ ಮನೆಯಲ್ಲಿಯೂ ಈ ವಿಷಯ ಗೊತ್ತಾಗಿ ಮಹೇಶನ ಹೆಂಡತಿಯೂ ಅವನ ಜೊತೆ ರಂಪಾಟ ಮಾಡಿದ್ದಳು. ಅತ್ತೂ, ಕರೆದೂ ಕಣ್ಣೀರು ಹಾಕಿದ್ದಳು. ಆದರೆ ಮಹೇಶನ ದರ್ಪದ ಮಾತುಗಳ ಮುಂದೆ ಅವಳದೇನೂ ನಡೆದಿರಲಿಲ್ಲ. ಆಕೆಯ ಕಣ್ಣೀರಿಗೆ ಅವನೇನೂ ಕರಗಲಿಲ್ಲ. ಮಹೇಶನ ತಾಯಿಯೂ ಮಗನಿಗೆ ತಿಳುವಳಿಕೆ ಹೇಳಿದ್ದಳು. ತಮ್ಮ ಮನೆತನದ ಮಾನ, ಮಯರ್ಾದೆ ಕಾಪಾಡುವುದರ ಜೊತೆಗೆ ಆ ಹುಡುಗಿಯ ಹೆಸರಿಗೆ ಕಳಂಕ ಬರದ ಹಾಗೆ ನೋಡಿಕೊಳ್ಳಬೇಕಾದುದು ನಮ್ಮ ಧರ್ಮ ಎಂದು ಮಗನಿಗೆ ಬುದ್ಧಿವಾದ ಹೇಳಿದ್ದರು.
ಅಂಥಹದ್ದೇನೂ ಇಲ್ಲಮ್ಮಾ ನನ್ನ ಮತ್ತು ಆ ಹುಡುಗಿಯ ನಡುವೆ ನೀವು ತಿಳಿದುಕೊಂಡ ಹಾಗೆ. ಜನರು ಮಾತಾಡುವ ಹಾಗೆ ಯಾವ ಸಂಬಂಧವೂ ಇಲ್ಲ. ಎಲುಬಿಲ್ಲದ ನಾಲಿಗೆಯ ಜನ ಮನಸ್ಸಿಗೆ ಬಂದಂತೆ ಮಾತಾಡುತ್ತಿರುವಂತೆ ನೀವೂ ಸಹ ಅವರ ಮಾತಿನ ತಾಳಕ್ಕೆ ಕುಣಿಯುತ್ತಿರುವಿರಲ್ಲಾ? ನಿಮಗಾದರೂ ತಿಳಿಯಬೇಡವೇ? ನಿಮ್ಮ ಮಗನ ಮೇಲೆ ನಿಮಗೆ ನಂಬಿಗೆಯಿಲ್ಲವೇ? ಏನೋ ಅವರಿಗೆ ಇದು ಅರಿಯದ ಊರು ಎಂದು ನಾ ಒಂದೆರಡು ಸಾರೆ ರಚನಾಳನ್ನು ಅವಳ ಶಾಲೆಗೆ ಕರೆದುಕೊಂಡು ಹೋಗಿರಬಹುದು ನನ್ನ ಬೈಕಿನಲ್ಲಿ. ಅವರ ಮನೆಯ ಕಡೆಗೆ ಹೋದಾಗ ಏನೋ ಸ್ವಲ್ಪ ಮಾತಾಡಿರಬಹುದು ಅಷ್ಟೇ. ಅದಕ್ಕೇ ಅಂಥಹ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲಮ್ಮಾ. ಇದು ಆ ಹುಡುಗಿಯ ಮಯರ್ಾದೆ ಪ್ರಶ್ನೆ. ಎಂದು ಸಮಜಾಯಿಸಿ ಹೇಳಿ ತಾಯಿಯ ಬಾಯಿ ಮುಚ್ಚಿಸಿದ್ದ ಮಹೇಶ್.
ಮುಂದಿನ ದಿನಗಳಲ್ಲಿ ಮಹೇಶ್ ರಚನಾಳ ಮನೆಗೆ ಹೋಗುವುದನ್ನು ಸ್ವಲ್ಪ ಕಡಿಮೆ ಮಾಡಿದ್ದ. ಸಾವಿತ್ರಮ್ಮ, ರಚನಾ ಶಾಲೆಗೆ ಹೋದನಂತರ ಗಂಡನಿಗೆ ಫೋನು ಮಾಡಿ, ಸಾಧ್ಯವಾದರೆ ಈ ವರ್ಷ ರಚನಾಳಿಗೆ ಮದುವೆ ಮಾಡೋಣ. ಸ್ವಲ್ಪ ಸೀರಿಯಸ್ಸಾಗಿ ವರಗಳನ್ನು ನೋಡಲು ಶುರು ಮಾಡಿರಿ. ಈಗಾಗಲೇ ಯಾರಿಗಾದರೂ ಹೇಳಿರುವಿರಾ? ಎಂದಿದ್ದಳು.
ನಾ ಈಗಾಗಲೇ ನನ್ನ ಸ್ನೇಹಿತರಿಗೆಲ್ಲಾ ತಿಳಿಸಿದ್ದೇನೆ. ನೋಡೋಣ. ಈ ವರ್ಷದ ಬೇಸಿಗೆಯಲ್ಲಿ ಅನುಕೂಲ ನೋಡಿಕೊಂಡು ರಚನಾಳ ಮದುವೆ ಮುಗಿಸಿ ಬಿಡೋಣ. ರಚನಾಳಿಗೇನು ವರಗಳು ಕ್ಯೂ ಹಚ್ಚುತ್ತಾರೆ, ಹಾಗಿದ್ದಾಳೆ ನಮ್ಮ ಮಗಳು. ಎಂದು ಮಗಳನ್ನು ಬಣ್ಣಿಸಿದ್ದರು ಸಾವಿತ್ರಮ್ಮನ ಯಜಮಾನರು ಶಿವಶಂಕರ್.
ಸಾವಿತ್ರಮ್ಮ, ರಚನಾ ಮತ್ತು ಮಹೇಶ್ರ ಬಗ್ಗೆ ಈ ಊರಿನಲ್ಲಿ ಹರಡಿರುವ ಸುದ್ದಿಯ ಬಗ್ಗೆಯೇನೂ ಹೇಳಿರಲಿಲ್ಲ ಗಂಡನಿಗೆ. ಆದಷ್ಟು ಬೇಗ ಅವಳ ಮದುವೆ ಮುಗಿಸಬೇಕೆಂಬುದು ಅವರ ಮನಸ್ಸಿನ ಆಶಯವಾಗಿತ್ತು. ಹಾಗೇ ಇಲ್ಲಿಂದ ತಮ್ಮ ಊರಿನ ಕಡೆಗೆ ರಚನಾಳಿಗೆ ವಗರ್ಾವಣೆಗೂ ಪ್ರಯತ್ನ ಮಾಡಲು ಗಂಡನಿಗೆ ತಿಳಿಸುವುದನ್ನು ಮರೆಯಲಿಲ್ಲ.
ಮಹೇಶನ ಮುಖ ದರ್ಶನ ದಿನಾಲೂ ಆಗುವುದು ತಪ್ಪಿದ್ದಕ್ಕೆ ರಚನಾಳಿಗೆ ತುಂಬಾ ಬೇಸರವಾಗಿತ್ತು. ಇಬ್ಬರಿಗೂ ಮುಖಾ ಮುಖಿ ಭೆಟ್ಟಿ ಮೇಲಿಂದ ಮೇಲೆ ಆಗದಿದ್ದರೂ, ಫೋನಿನಲ್ಲಿ ಇಬ್ಬರ ಮಾತುಕತೆಗಳು ಮುಂದುವರೆದಿದ್ದವು. ರಚನಾ ಅಪ್ಪಿ ತಪ್ಪಿಯೂ ಮನೆಯಲ್ಲಿ ಅಮ್ಮನೆದುರಿಗೆ ಮಹೇಶನ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದಿಲ್ಲ. ಆದರೆ ಆಕೆ ಮನೆ ಬಿಟ್ಟ ಕೂಡಲೇ ಅವಳ ಮೊಬೈಲು ಫೋನು ಶುರುವಾಗುತ್ತಿತ್ತು ಮಹೇಶನೊಂದಿಗೆ ಹರಟಲು.
ಏಕಾಂತದಲ್ಲಿದ್ದಾಗ, ರಚನಾಳಿಗೆ ಮಹೇಶನ ಬಗ್ಗೆಯೇ ಯೋಚನೆಗಳು ಮುತ್ತಿಕ್ಕುತ್ತಿದ್ದವು. ಅವಳ ಮನಸ್ಸು ಒಂದು ರೀತಿಯ ತಾಕಲಾಟದಲ್ಲಿ ಬಿದ್ದಿತ್ತು. ತಾನು ಮಹೇಶನನ್ನು ಪ್ರೀತಿಸುತ್ತಿದ್ದೇನೆಯೇ ಎಂಬ ಅನುಮಾನ ಅವಳ ಮನದಲ್ಲಿ ಸುಳಿದು ಮಾಯವಾಗುತ್ತಿತ್ತು. ಮಹೇಶನ ಭೆಟ್ಟಿಗಾಗಿ ಅವಳ ಮನಸ್ಸು ಹಪ ಹಪಿಸುತ್ತಿತ್ತು. ಎಂಥಹದೋ ಅರಿಯದ ಆಕರ್ಷಣೆ ಅವಳಿಗೆ ಅವನಲ್ಲಿ. ಅವಳ ಹೃದಯ ಅವನಿಗಾಗಿ ಮಿಡಿಯುತ್ತಿತ್ತು. ಅವನನ್ನು ಗಾಢವಾಗಿ ಪ್ರೀತಿಸು ಎಂದು ಒಂದು ಮನಸ್ಸು ಹೇಳುತ್ತಿದ್ದರೆ, ಇನ್ನೊಂದು ಮನಸ್ಸು, ಏಯ್ ಹುಡುಗಿಯೇ, ನಿನಗೇನು ಹುಚ್ಚು ಗಿಚ್ಚು ಹಿಡಿದಿದೆಯೇ ಮದುವೆಯಾಗಿ ಮಕ್ಕಳಿರುವ, ನಿನಗಿಂತಲೂ ಹತ್ತು ವರ್ಷಗಳಷ್ಟು ಹಿರಿಯನನ್ನು ಪ್ರೀತಿಸಲು? ನಿನ್ನ ರೂಪ, ವಿದ್ಯೆ, ಯೌವನಕ್ಕೆ ತಕ್ಕ ಚೆಲುವ ಚೆನ್ನಿಗ ಸಿಗಲಾರನೇ? ಯೌವನದ ಹುಚ್ಚು ಹೊಳೆಯಲ್ಲಿ ಈಸಲು ಪ್ರಯತ್ನಿಸಬೇಡ. ಸರಿಯಾದ ದಿಶೆಯಲ್ಲಿ ವಿಚಾರ ಮಾಡಲು ಆ ಭಗವಂತ ನಿನಗೆ ವಿದ್ಯಾ, ಬುದ್ಧಿ ಕೊಟ್ಟಿರುವನು. ಆತುರದ ನಿಧರ್ಾರ ತೆಗೆದುಕೊಂಡು ಮುಂದೆ ಪಶ್ಚಾತ್ತಾಪ ಪಡಬೇಡ. ಎಂದು ಎಚ್ಚರಿಸುತ್ತಿತ್ತು. ರಚನಾಳ ಮನಸ್ಸು ಗೊಂದಲಗಳ ಗೂಡಾಗಿತ್ತು. ಒಂದು ಮನಸ್ಸು ಎಷ್ಟೇ ವಿವೇಚನೆ ಹೇಳಿದರೂ, ಆಕೆಯ ಇನ್ನೊಂದು ಮನಸ್ಸು ಮಹೇಶನ ಕಡೆಗೇ ವಾಲುತ್ತಿತ್ತು.
ಮಹೇಶನ ಮನಸ್ಸೂ ಇದಕ್ಕೆ ವಿರುದ್ಧವಾಗಿರಲಿಲ್ಲ. ಮನೆಯಲ್ಲಿ ಚೆಲುವೆ, ಗುಣಸಂಪನ್ನೆ ಹೆಂಡತಿ, ಮುದ್ದಾದ ಮಕ್ಕಳು ಇದ್ದರೂ ಅವನ ಮಂಗ ಮನಸ್ಸು ಅವನಿಗೆ ಅರಿಯದಂತೆ ರಚನಾಳನ್ನು ಬಯಸುತ್ತಿತ್ತು. ಬೇಡ, ಬೇಡವೆಂದು ಒಂದು ಮನಸ್ಸು ಹೇಳುತ್ತಿದ್ದರೂ, ಇನ್ನೊಂದು ಮನಸ್ಸು ಬೇಕು, ಬೇಕು ಎಂದು ಬೋಧಿಸುತ್ತಿತ್ತು. ಬೇಕು, ಬೇಕು ಎನ್ನುವ ಮನಸ್ಸಿನ ತುಡಿತವೇ ಸ್ಥಿರವಾತೊಡಗಿತ್ತು.
ಅಂದು ಮಹೇಶ್ ಬಜಾರಕ್ಕೆ ಹೊರಟಿದ್ದ ತನ್ನ ಹೀರೋ ಹೊಂಡಾ ಗಾಡಿಯ ಮೇಲೆ. ಹೋಗುವಾಗ ರಚನಾಳ ಮನೆಯ ಮುಂದೆಯೇ ಹೋಗಬೇಕಾಗುತ್ತಿತ್ತು. ಅಂದು ರವಿವಾರ ಬೇರೆ. ಬಹಳ ದಿನಗಳಿಂದ ರಚನಾಳನ್ನು ಭೆಟ್ಟಿಯಾಗಿರದಿದ್ದುದರಿಂದ ಅವನ ಮನಸ್ಸಿನಲ್ಲಿ ತವಕ. ತುಡಿತ ಜಾಸ್ತಿ ಇತ್ತು. ಅವಳ ಮನೆಯ ಸಮೀಪ ಬರುತ್ತಲೇ ಅವ ತನ್ನ ಗಾಡಿ ನಿಲ್ಲಿಸಿ, ಮನೆಗೆ ಹೋಗಿ ಬಾಗಿಲು ಬಡಿದ. ಹಿಂದಿನ ದಿನದಿಂದ ರಚನಾಳಿಗೆ ವಿಪರೀತ ನೆಗಡಿ, ಕೆಮ್ಮು, ಜ್ವರ. ರಾತ್ರಿ ತನ್ನಲ್ಲಿದ್ದ ಯಾವುದೋ ಒಂದು ನೆಗಡಿ ಗುಳಿಗೆ ತೆಗೆದುಕೊಂಡಿದ್ದಳು. ತಂದೆಗೆ ಆರಾಮವಿಲ್ಲವೆಂದು ತಾಯಿ ಬೇರೆ ಎರಡು ದಿನಗಳ ಹಿಂದೇನೇ ಊರಿಗೆ ಹೋಗಿದ್ದುದರಿಂದ ರಚನಾಳಿಗೆ ಆರೈಕೆ ಮಾಡಲು ತನ್ನವರೆನ್ನುವವರು ಯಾರೂ ಇರಲಿಲ್ಲ. ಬೇರೆಯವರು ತಪ್ಪು ತಿಳಿದುಕೊಂಡಾರೆಂದು ಮಹೇಶನಿಗೆ ಹೇಳಲೂ ಅವಳಿಗೆ ಮನಸ್ಸಿರಲಿಲ್ಲ. ಒಂದು ತರಹದ ಅಸಹಾಯಕತೆಯಿಂದ ರಚನಾ ಜಜರ್ಿರಿತಳಾಗಿದ್ದಳು. ಜ್ವರ, ಕೆಮ್ಮು ಜಾಸ್ತಿಯಾಗಿ ತುಂಬಾ ಬಳಲಿ ಹೋಗಿದ್ದಳು. ಜ್ವರದ ತಾಪದ ಜೊತೆಗೆ ರಾತ್ರಿಯೆಲ್ಲಾ ಕೆಮ್ಮಿ, ಕೆಮ್ಮಿ ಸುಸ್ತಾಗಿ ಅಶಕ್ತಳಾಗಿದ್ದಳು. ಬೆಳಿಗ್ಗೆ ಹೇಗೋ ಕಷ್ಟಪಟ್ಟು ಎದ್ದು, ಒಂದು ಕಪ್ ಚಹ ಮಾಡಿಕೊಂಡು ಕುಡಿದಿದ್ದಳು ಅಷ್ಟೆ.
ಬಾಗಿಲು ಬಡಿದ ಶಬ್ದ ಕೇಳಿ, ಹೇಗೋ ಎದ್ದು ಬಂದು ಬಾಗಿಲು ತೆಗೆದಿದ್ದಳು. ತನ್ನವರಾರೂ ಜೊತೆಗೆ ಇಲ್ಲವಲ್ಲ ಎಂಬ ನೋವು ಮನದಲ್ಲಿ ತುಂಬಿಕೊಂಡಿದ್ದ ರಚನಾಳಿಗೆ ಮಹೇಶನನ್ನು ನೋಡುತ್ತಲೇ, ಮರುಭೂಮಿಯಲ್ಲಿ ಓಯಾಸಿಸ್ ಕಂಡಂತೆ ಆಯಿತು. ಮನಸ್ಸಿನಲ್ಲಿ ಒಂದು ರೀತಿಯ ಪುಳಕ ಶುರುವಾಯಿತು ಆರಾಮವಿರದಿದ್ದರೂ ಮಹೇಶನನ್ನು ನೋಡುತ್ತಲೇ. ಜ್ವರ, ಕೆಮ್ಮಿನಿಂದ ಕಳೆಗುಂದಿದ್ದ ಮುಖದಲ್ಲಿ ನಗು ಬರಿಸಿಕೊಂಡು ಮಹೇಶನನ್ನು ಸ್ವಾಗತಿಸಿದ್ದಳು. ತುಂಬಾ ನಿಶ್ಯಕ್ತಿಯಾಗಿದ್ದುದರಿಂದ ಅವಳಿಗೆ ಕುಳಿತುಕೊಂಡು ಮಹೇಶನ ಜೊತೆ ಮಾತಾಡಲು ಕಷ್ಟವಾದುದನ್ನು ಗಮನಿಸಿದ ಮಹೇಶ್ ಅವಳ ಹತ್ತಿರ ಬಂದು ಅವಳ ಹಣೆಯ ಮೇಲೆ ಕೈ ಇಟ್ಟು ಪರೀಕ್ಷಿಸಿದ. ಹಣೆ ಕೆಂಡದಂತೆ ಸುಡುತ್ತಿತ್ತು. ಜ್ವರ ತುಂಬಾ ಇತ್ತು. ರಚನಾ ಅವನಿಗೆ ಎಲ್ಲಾ ಹೇಳಿದಳು. ಇಂಥಹ ಸಮಯದಲ್ಲಿ ತನ್ನವರೆನ್ನುವವರು ತಬ್ಬಿ ಹಿಡಿದು ಸಂತೈಸಿ ಸಮಾಧಾನ ಮಾಡಿದರೆ, ಮೈ ಮನಸ್ಸಿಗೆರಡಕ್ಕೂ ಹಾಯೆನಿಸುತ್ತದೆ ಎಂದು ಅವಳ ಮನದ ನಿರೀಕ್ಷೆ.
ರಚನಾಳ ಕೆಂಡದಂಥಹ ಹಣೆಯ ಮೇಲಿದ್ದ ತನ್ನ ಕೈ ತೆಗೆದ ಮಹೇಶ್ ತಕ್ಷಣ ಅವಳಿಗೆ ಹೇಳಿ, ತನಗೆ ಗೊತ್ತಿದ್ದ ಡಾಕ್ಟರರನ್ನು ಅಲ್ಲಿಗೇ ಕರೆದುಕೊಂಡು ಬಂದು ತೋರಿಸಿ, ಔಷಧಿ ಕೊಡಿಸಿದ. ಡಾಕ್ಟರರನ್ನು ಬಿಟ್ಟು ಬರುವಾಗ, ಅವಳಿಗಾಗಿ ಇಡ್ಲಿ, ಬ್ರೆಡ್, ಬಿಸ್ಕೀಟು, ಹಣ್ಣುಗಳನ್ನು ತಂದಿದ್ದ. ಒತ್ತಾಯ ಪೂರ್ವಕವಾಗಿ ಸ್ವಲ್ಪ ಇಡ್ಲಿ, ಬ್ರೆಡ್ ತಿನ್ನಿಸಿ ಮಾತ್ರೆ ನುಂಗಿಸಿದ. ಅವನ ಕಾಳಜಿ ನೋಡಿ ರಚನಾಳ ಹೃದಯ ತುಂಬಿ ಬಂದಿತ್ತು. ಮಹೇಶನೇ ಅವಳಿಗಾಗಿ ಚಹ ಮಾಡಿಕೊಟ್ಟ. ಅವನ ಆರೈಕೆ, ಕಳಕಳಿಗೆ ರಚನಾಳ ಮನ ಸೋತು ಹೋಯಿತು. ಬಹಳ ದಿನಗಳಿಂದ ಹಿಡಿದಿಟ್ಟುಕೊಂಡಿದ್ದ ಸುಪ್ತ ಭಾವನೆಗಳನ್ನು ತಡೆದುಕೊಳ್ಳದಾಗಿದ್ದಳು. ಮಹೇಶನನ್ನು ಬಲವಾಗಿ ತಬ್ಬಿ ಹಿಡಿದು ಅವನ ಎದೆಯಲ್ಲಿ ತನ್ನ ಮುಖ ಹುದುಗಿಸಿ, ದೀರ್ಘವಾಗಿ ಉಸಿರಾಡಿಸುತ್ತಾ ಮೊದಲ ಸಲ ಅವನ ಸಾಂಗತ್ಯದಲ್ಲಿ ಸಂಭ್ರಮಿಸತೊಡಗಿದಳು. ಇದನ್ನು ನಿರೀಕ್ಷಿಸಿಯೇ ಇದ್ದ ಮಹೇಶ್ ತಾನೂ ಸಹ ಅವಳನ್ನು ತಬ್ಬಿ ಹಿಡಿದು, ಅವಳ ತಲೆ, ಬೆನ್ನು ನೇವರಿಸುತ್ತಾ ಅವಳನ್ನು ಸಂತೈಸಿ ಸಮಾಧಾನ ಮಾಡಿದ್ದ. ಅವಳಿಗೆ ಆರಾಮವಾಗುವವರೆಗೂ ಅವನ ಆರೈಕೆ ಮುಂದುವರೆದಿತ್ತು. ಇದರಿಂದ ಅವರು ಪರಸ್ಪರ ಇನ್ನೂ ಹತ್ತಿರವಾಗಿದ್ದರು.
ಬೇಸಿಗೆ ರಜ ಸುರುವಾಗುತ್ತಲೇ, ಸಾವಿತ್ರಮ್ಮ ಮಗಳನ್ನು ಹೊರಡಿಸಿಕೊಂಡು ತಕ್ಷಣ ಗಂಡನಿದ್ದ ಊರಿಗೆ ಹೋಗಿದ್ದಳು ಮಹೇಶ್ ಮತ್ತು ರಚನಾರ ಸಂಪರ್ಕ ಕಡಿಯಲು. ರಚನಾಳಿಗೆ ವರಗಳ ಬೇಟೆ ತುಂಬಾ ಬ್ರಿಸ್ಕ್ ಆಗಿ ಶುರುವಾಯಿತು. ಇಬ್ಬರು ಹುಡುಗರು ಬಂದು ಹೋದರು. ಹುಡುಗರಿಗೆ ರಚನಾ ಇಷ್ಟವಾದರೆ, ರಚನಾಳಿಗೆ ಹುಡುಗರು ಇಷ್ಟವಾಗಲಿಲ್ಲ. ಒಬ್ಬ ಹೈಸ್ಕೂಲಿನ ಟೀಚರ್ ಇದ್ದರೆ, ಇನ್ನೊಬ್ಬ ಮಾಧ್ಯಮಿಕ ಶಾಲೆಯ ಟೀಚರ್. ಅವಳ ರೂಪಕ್ಕೆ ಅವರು ತಕ್ಕ ಜೋಡಿಯಾಗುತ್ತಿರಲಿಲ್ಲ. ಮೂರನೆಯದಾಗಿ ಬಾಗಲುಕೋಟೆ ಜಿಲ್ಲೆ ಬದಾಮಿ ತಾಲೂಕಿನ ಲೆಕ್ಚೆರರ್ ಹುಡುಗ ಬಂದ. ಹುಡುಗನಿಗೆ ರಚನಾ ಒಪ್ಪಿಗೆಯಾದಳು. ರಚನಾಳ ತಂದೆ-ತಾಯಿಯವರಿಗೂ ಹುಡುಗ ಒಪ್ಪಿಗೆಯಾದ. ಕೊನೆಗೆ ರಚನಾಳೂ ಒಪ್ಪಿಕೊಂಡಳು. ಮೇ ತಿಂಗಳ ಕೊನೇ ವಾರದಲ್ಲಿ ಮದುವೆ ನಿಗದಿ ಮಾಡಲಾಯಿತು.
ಅಲ್ಲಿಗೆ ಹೋದ ಮೇಲೆ ರಚನಾ ಹೆಚ್ಚು ಕಡಿಮೆ ಮೌನ ಗೌರಿಯಂತಾಗಿದ್ದಳು. ಮಾತು ಬಹಳ ಕಡಿಮೆ ಮಾಡಿದ್ದಳು. ಕತೆ, ಕಾದಂಬರಿಗಳೇ ಅವಳ ಸಂಗಾತಿಗಳಾಗಿದ್ದವು. ಇಲ್ಲಿನ ಪ್ರತಿಯೊಂದು ಬೆಳವಣಿಗೆಗಳ ವರದಿ ವಾಚನ ರಚನಾಳಿಂದ ಮಹೇಶನಿಗೆ ರೆಗುಲರ್ ಆಗಿ ಆಗುತ್ತಿತ್ತು. ಸಮಯ ನೋಡಿಕೊಂಡು ಇಬ್ಬರೂ ಗೌಪ್ಯವಾಗಿ ಮಾತಾಡುತ್ತಿದ್ದರು.
ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಮದುವೆಯ ತಯಾರಿ ಜೋರಾಗಿ ನಡೆದಿದ್ದರೆ, ರಚನಾ ಮತ್ತು ಮಹೇಶರ ನಡುವೆ ಮಾತುಕತೆಗಳೂ ಸಹ ಅಷ್ಟೇ ವೇಗವಾಗಿ ನಡೆದಿದ್ದವು. ಅವರಿಬ್ಬರಲ್ಲಿ ತುಂಬಾ ಮಾತುಕತೆಗಳು ಆದವು ಫೋನಿನಲ್ಲಿ. ಎಲ್ಲವೂ ಹೃದಯಕ್ಕೆ ಸಂಬಂಧಪಟ್ಟವು. ಮನಸ್ಸು ಮನಸ್ಸಗಳನ್ನು ಬೆಸೆಯುವಂಥಹವು. ಇಬ್ಬರ ಮನಸ್ಸುಗಳಲ್ಲಿನ ತವಕ, ಕಳವಳ, ವೇದನೆ ಅವರಿಬ್ಬರಿಗೇ ಗೊತ್ತು. ಇಬ್ಬರ ಪರಸ್ಥಿತಿ ನೀರಿನಿಂದ ಹೊರ ತೆಗೆದ ಮೀನಿನಂತಾಗಿತ್ತು.
ರಚನಾಳ ಮದುವೆ ಇನ್ನೂ ಒಂದು ವಾರವಿದೆಯೆಂದಾಗ, ರಚನಾ ಮತ್ತು ಮಹೇಶ್ ಬಲವಾದ ನಿಧರ್ಾರವೊಂದನ್ನು ತೆಗೆದುಕೊಂಡಿದ್ದರು. ಅಂದು ಬೆಳಿಗ್ಗೆ ಎಂಟು ಗಂಟೆಯ ಸುಮಾರು ರಚನಾ ಮನೆಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟಿದ್ದಳು. ಮೊಬೈಲು, ಸ್ವಿಚ್ ಆಫ್ ಆಗಿತ್ತು. ರಚನಾ ಪುನಃ ವಾಪಾಸು ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗುತ್ತಲಿತ್ತು. ಜೊತೆಯಲ್ಲಿ ಮಹೇಶ್ ಇದ್ದ. ಜೊತೆಗೆ ಅವನ ನಾಲ್ಕೈದು ಜನ ಗೆಳೆಯರು. ರಚನಾ-ಮಹೇಶ್ ಸಾಧಾರಣ ಹುಡುಗಿ-ಹುಡುಗರಂತೆ ಇರಲಿಲ್ಲ. ಇಬ್ಬರೂ ಸತಿ-ಪತಿಗಳಾಗಿದ್ದರು. ಇಬ್ಬರ ಕೊರಳಲ್ಲಿ ದೊಡ್ಡ ದೊಡ್ಡ ಹೂವಿನ ಹಾರಗಳು ರಾರಾಜಿಸುತ್ತಿದ್ದವು. ರಚನಾಳ ಕೊರಳಲ್ಲಿನ ಮಾಂಗಲ್ಯ ಅವಳ ಎದೆಯ ಮೇಲೆ ಮಿಂಚುತ್ತಿತ್ತು.
ರಚನಾ-ಮಹೇಶ್ ಇಬ್ಬರೂ ಸಾವಿತ್ರಮ್ಮ, ಶಿವಶಂಕರ್ ಅವರ ಪಾದಗಳಿಗೆರಗಿ ಆಶೀವರ್ಾದ ಪಡೆಯಲು ಯತ್ನಿಸಿದಾಗ ಮನೆಯವರಿಗೆಲ್ಲಾ ಶಾಕ್ ಹೊಡೆದಂತಾಗಿತ್ತು. ಮಗಳ ಹೊಸ ಜೀವನದ ಅವತಾರವನ್ನು ನೋಡಿದ ಸಾವಿತ್ರಮ್ಮನಿಗೆ ಆದ ಶಾಕ್ನಿಂದ ಆಕೆ ಕೆಲ ಹೊತ್ತು ಪ್ರಜ್ಞಾ ಶೂನ್ಯಳಾದಳು. ಶಿವ ಶಂಕರ್-ಸಾವಿತ್ರಮ್ಮ ದಂಪತಿಗಳಿಗೆ ಮಗಳ ನಿಧರ್ಾರವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ. ಈ ರೀತಿ ಆಗಬಹುದೆಂದು ಊಹಿಸಿದ್ದ ಸಾವಿತ್ರಮ್ಮನಿಗೆ ಅದನ್ನು ತಪ್ಪಿಸಲು ಪ್ರಯತ್ನಿಸಿದರೂ ಆಕೆ ಅದರಲ್ಲಿ ಸಫಲತೆಯನ್ನು ಕಾಣಲಿಲ್ಲ.
ಇದೇ ನೋಡ್ರಿ ರಚನಾಳ ಪ್ರೇಮ ಕಥೆ ಎಂದು ನನ್ನ ಶ್ರೀಮತಿ ಪ್ರಣೀತಾ ಭಾರವಾದ ಹೃದಯದಿಂದ ಹೇಳಿ ಮುಗಿಸಿದಳು.
ಆ ಹುಡುಗಿಗೆ ಅವನಲ್ಲಿ ಮೊದಲಿನಿಂದಲೂ ಒಲವಿತ್ತೆಂದು ಅನಿಸುತ್ತಿದೆ. ಅದಕ್ಕೇ ಹೀಗಾಗಿದೆ. ಪ್ರೀತಿಗೆ ವಯಸ್ಸಿನ ಅಂತರ, ಎರಡನೆಯ ಸಂಬಂಧ ಅದೂ ಇದೂ ಅಂತ ಯಾವುದೂ ಗೊತ್ತಾಗುವುದಿಲ್ಲ, ಅಲ್ಲವೇ? ಎಂದೆ ನಾ.
ಪ್ರಣೀತಾ ಇನ್ನೂ ಮುಂದುವರೆದು, ರಚನಾಳ ತಾಯಿ ಸಾವಿತ್ರಮ್ಮನವರ ಗೋಳಾಟ, ರಂಪಾಟ, ವೇದನೆ ಮನ ಕಲಕುವಂತಿದೆಯೆಂದು ಅಮ್ಮ ಹೇಳುತ್ತಿದ್ದರು. ಅವರು ಅಮ್ಮನಿಗೆ ಫೋನು ಮಾಡಿ, ತನ್ನ ಮನದಲ್ಲಿ ವೇದನೆಯನ್ನು ಅಮ್ಮನೊಂದಿಗೆ ಹಂಚಿಕೊಂಡಳಂತೆ. ಈ ಹುಚ್ಚು ಹುಡುಗಿ ತನ್ನ ಅಸಂಬದ್ಧ ನಿಧರ್ಾರದಿಂದ ನಮ್ಮನ್ನೆಲ್ಲಾ ಕೊಂದು ಹಾಕಿದಳು. ನಮ್ಮನ್ನೆಲ್ಲಾ ಜೀವಂತ ಶವಗಳನ್ನಾಗಿ ಮಾಡಿಬಿಟ್ಟಳು. ತನ್ನ ಸ್ವಂತ ಮಯರ್ಾದೆ ಏನೆಂದು ತಿಳಿದುಕೊಳ್ಳಲಿಲ್ಲ. ಮನೆತನದ ಮಯರ್ಾದೆಯ ಬಗ್ಗೆಯೂ ವಿಚಾರ ಮಾಡಲಿಲ್ಲ. ನಡು ವಯಸ್ಸಿನ ತಂದೆ-ತಾಯಿಗಳ ಮಾನಸಿಕ ಸ್ಥಿತಿ ಹೇಗಾಗಬಹುದೆಂದೂ ಚಿಂತಿಸಲಿಲ್ಲ. ಮನೆಯಲ್ಲಿ ಮುಂದೆ ಮದುವೆಯಾಗುವ ತಂಗಿಯೊಬ್ಬಳಿದ್ದಾಳೆ ಎಂದು ಆಲೋಚಿಸಲಿಲ್ಲ. ತನ್ನ ಇಂಥಹ ನಿಧರ್ಾರ ತಂಗಿಯ ಮದುವೆಯ ಮೇಲೆ ಎಂಥಹ ಪರಿಣಾಮ ಬೀರಬಹುದೆಂದು ತಿಳಿದುಕೊಳ್ಳಲಿಲ್ಲ. ಅದೇನು ಅವಳ ಪ್ರೀತಿಯೋ ಏನೋ? ಇದು ಪ್ರೀತಿಯೋ? ಬರೀ ತೆವಲೋ? ಒಂದೂ ಅರ್ಥವಾಗುತ್ತಿಲ್ಲ. ಇವಳೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದ ಆ ಗಂಡು ಹುಡುಗನ ಮನೆಯವರ ಮಾನ ಮಯರ್ಾದೆ ಏನು? ಈ ಮದುವೆಗೆ ಒಪ್ಪಿಕೊಳ್ಳುವ ಮುಂಚೆನೇ ಮಹೇಶ್ನೊಂದಿಗೆ ಮದುವೆ ಮಾಡಿಕೊಂಡಿದ್ದರೆ, ಗಂಡಿನ ಮನೆಯವರ ಮಯರ್ಾದೆಗೆ ಧಕ್ಕೆ ಬರುತ್ತಿರಲಿಲ್ಲ. ಸರೀಕರ ಜೊತೆ ನಾವು ತಲೆ ಎತ್ತಿ ನಿಲ್ಲದ ಹಾಗೆ ಮಾಡಿಬಿಟ್ಟಳು ರಚನಾ ಎಂದು ಇನ್ನೇನೋ ಹೇಳಿ ತಮ್ಮ ಅಳಲನ್ನು ತೋಡಿಕೊಂಡರಂತೆ ಸಾವಿತ್ರಮ್ಮ ಅಮ್ಮನೊಂದಿಗೆ. ಅಮ್ಮ ತನಗೆ ತಿಳಿದಂತೆ ಅವರಿಗೆ ಸಮಾಧಾನ ಮಾಡಿದರಂತೆ. ಎಂದು ಬಹಳಷ್ಟು ವಿಷಯ ತಿಳಿಸುತ್ತಾ, ಹುಚ್ಚು ಕೋಡಿ ಮನಸ್ಸೇ ನೀ ಹಿಂಗ್ಯಾಕ? ಎಂದು ಕೊನೆಗೆ ನಿಟ್ಟುಸಿರು ಹಾಕಿದಳು ಪ್ರಣೀತಾ.
ಶೇಖರಗೌಡ, ವ್ಯವಸ್ಥಾಪಕರು, ಎಸ್.ಬಿ.ಹೆಚ್ ಬ್ಯಾಂಕ್ ಲಿಂಗಸ್ಗೂರು.
No comments:
Post a Comment
Thanku