Sunday, October 16, 2011

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...! Prakash Hegde

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...!


ಪ್ರೀತಿಯ ಅಜ್ಜಾ..

ನಿನ್ನ ಕಂಡರೆ ಯಾಕಿಷ್ಟು ಅಕ್ಕರೆ ಹುಟ್ಟಿದೆ..?

ಗೊತ್ತಿಲ್ಲ...



ನನ್ನ ಮಗನಿಗೆ ..

ನೀನು ಭಗತ್ ಸಿಂಗ್ ನಂತಾಗು...

ಸುಭಾಸ್ ಚಂದ್ರನಂತಾಗು.. ಗಾಂಧಿತಾತನಂತಾಗು.. ಅಂತೆಲ್ಲ ಹೇಳುತ್ತಿದ್ದೆ..



ಸ್ವಲ್ಪ ದೊಡ್ಡವನಾದ ಹಾಗೆ ಅವರ ಬಗೆಗಿನ ಪುಸ್ತಕವನ್ನು ತಂದು ಕೊಡುತ್ತಿದ್ದೆ..

ಒಂದು ದಿನ ನನ್ನ ಮಗ ನನ್ನನ್ನು ಕೇಳಿದ..

ಅಪ್ಪಾ..



ಭಗತ್ ಸಿಂಗ್..ಗಾಂಧಿಯವರೆಲ್ಲ ಹಳಬರು...

ನೀನೂ ಸಹ ನೋಡಿಲ್ಲ...

ಈಗಿನವರು ಯಾರೂ ಇಲ್ಲವಾ ಒಳ್ಳೆಯ ನಾಯಕರು ?



ನಮ್ಮದೇಶದ ಪ್ರಧಾನ ಮಂತ್ರಿಗಳು..

ವಿರೋಧ ಪಕ್ಷದ ನಾಯಕರು...

ಯಾರೂ ಒಳ್ಳೆಯವರು ಇಲ್ಲವಾ ಅಪ್ಪಾ?



ಏನು ಹೇಳಲಿ...?

ನಾನು ನಿರುತ್ತರನಾಗಿದ್ದೆ..

ನನಗೆ ಈಗ ಉತ್ತರ ಸಿಕ್ಕಿದೆ...!! ಇಷ್ಟು ದಿನ ಎಲ್ಲಿದ್ದೆ ಅಜ್ಜಾ...?



ನನ್ನ ಮುದ್ದು ಅಜ್ಜಾ...

ಯಾಕೆ ಉಪವಾಸ ಮಾಡುತ್ತೀಯಾ...?

ಈ ದೇಶದ ಬಗೆಗಾ? ..

ನಮ್ಮ ಮುಂದಿನ ಭವಿಷ್ಯದ ಬಗೆಗಾ?....



ಬೇಡ ಅಜ್ಜಾ...

ನಾವು ಈಗ ಸಂತೃಪ್ತಿಯಿಂದ ಇದ್ದೇವೆ..

ಈಗಿನ ವಾತಾವರಣಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಂದಿಕೊಂಡಿದ್ದೇವೆ...



ಬೇಡ ಅಜ್ಜಾ.. ನಮಗಾಗಿ ಉಪವಾಸ ಮಾಡಬೇಡ...

ಹಿಂದೆ ಗಾಂಧಿತಾತ ಉಪವಾಸ ಸತ್ಯಾಗ್ರಹ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು...



ಅಜ್ಜಾ..

ನನು ಗಾಂಧಿ ತಾತ ಅಲ್ಲ...!

ನನ್ನನ್ನು ಗಾಂಧಿತಾತನಂತೆ ನೋಡುವ ಯೋಗ್ಯತೆಯೂ ನಮಗಿಲ್ಲ..

ನೋಡುವದೂ ಇಲ್ಲ..!



ನನ್ನ ಮುದ್ದು ಪುಟಾಣಿ ಅಜ್ಜ..

ನಮ್ಮನ್ನೆಲ್ಲ ಒಡೆದು ಬಿಟ್ಟಿದ್ದಾರೆ ..



ನಮ್ಮ ಜಾತಿ ...

ಭಾಷೆ ಹೆಸರಲ್ಲಿ... ಮತ ಧರ್ಮದ..

ಸಿದ್ಧಾಂತದ ಹೆಸರಲ್ಲಿ ಒಡೆದು ಚೂರು ಚೂರಾಗಿ ಹೋಗಿದ್ದೇವೆ..



ಅಯ್ಯೋ ಅಜ್ಜಾ...

ನಿನ್ನ ತತ್ವಗಳ, ನೀತಿಗಳ.. ದಿನಾಂಕ ಮುಗಿದಿದೆ..

ಮುಂಬೈ ಸಿನೆಮಾಗಳ...

ಅಲ್ಲಿನ ಥಳುಕಿನ ನಟರ ದೇಶ ಭಕ್ತಿ....

ಸಾಹಸ ನಮಗಿಷ್ಟ.. ಅದರ ಬಗೆಗೆ ನಮ್ಮ ಚಿಂತನೆ...!



ಮತ್ತೆ ದೇಶದ ಹೆಸರಲ್ಲಿ ನಮ್ಮನ್ನು ಸೇರಿಸುವ ವ್ಯರ್ಥ ಪ್ರಯತ್ನ ಮಾಡಬೇಡ..

ನಾವೆಲ್ಲಾ ಒಡೆದ ಮನಸ್ಸಿನವರು... ಮತ್ತೆ ಒಂದಾಗುವ ಆಸೆ ನಮಗಿಲ್ಲ....



ಒಡೆದ ಮನಸ್ಸುಗಳಲ್ಲಿ... ...

ಒಂದು ತರಹದ ವಿಲಕ್ಷಣ ಸಂತೋಷವನ್ನು ಅನುಭವಿಸುತ್ತಿದ್ದೇವೆ...

ನಮ್ಮ ಖುಷಿಗೆ ನೀ ಅಡ್ಡಿ ಪಡಿಸಬೇಡ...



ಆ ಗಾಂಧಿತಾತನಿಗೆ ಒಂದು ಪಕ್ಷವಿತ್ತು..

ಹಣವಿರುವವರ ಬೆಂಬಲವಿತ್ತು..

ದೇಶದ ತುಂಬಾ ಒಂದು ಸಂಘಟನೆ ಇತ್ತು....



ಮುಂದಿನ ಪ್ರಧಾನ ಮಂತ್ರಿ ಯಾರಾಗ ಬಹುದೆಂದರೆ

ಆ ತಾತನ ಬಳಿ ಉತ್ತರ ಸಿದ್ಧವಿತ್ತು..



ಮುದ್ದು ಅಜ್ಜಾ...

ನಿನ್ನ ಬಳಿ ಏನಿದೆ?...

ನಿನ್ನ ಹತ್ತಿರ ಮುಂದಿನ ....

ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯ ರಾಜಕೀಯ ಉಮೇದುವಾರ ಇದ್ದಾನೆಯೇ..?..

ನನ್ನ ಪುಟ್ಟು ಅಜ್ಜಾ ಯಾವುದೋ ಭ್ರಮೆ ಬೇಡ...



ಸತ್ಯ..,

ಅಹಿಂಸೆಯೆಲ್ಲ ಇಂದಿನ ಭಾರತಕ್ಕೆ ಅಲ್ಲ...!

ಇಂದಿನ ಸರಕಾರಕ್ಕೂ ಅಲ್ಲ...



ಅಜ್ಜಾ...

ನಿನಗೆ ಗೊತ್ತಿಲ್ಲದಂತೆ ನಿನ್ನ ಮಕ್ಕಳು.. ಮೊಮ್ಮಕ್ಕಳು...

ನಾವೆಲ್ಲಾ.. ಬದಲಾಗಿಬಿಟ್ಟಿದ್ದೇವೆ..

ಸರಿಯಾಗಲಾರದಷ್ಟು ಬದಲಾಗಿದ್ದೇವೆ..



ನೋಡುತ್ತಾ ಇರು..

ನಿನಗೂ ಒಂದು ಜಾತಿ.. ಬಣ್ಣ ಬಳಿದು..

ನಿನ್ನನ್ನೂ ....

ಒಂದು ಸಮುದಾಯದ ಬಾವುಟವನ್ನಾಗಿ ಮಾಡಿಬಿಡುತ್ತೇವೆ..



ಅಜ್ಜಾ..

ನಮಗೆ ಯಾರಿಗೂ ನಾಚಿಕೆಯಿಲ್ಲ..!

ಇಷ್ಟೆಲ್ಲ ಜನ ಬಂದರು..



ಆಂದೋಲನ ಮಾಡಿದರು ಅಂತ ಭ್ರಮೆಯಲ್ಲಿ ನೀನಿರಬೇಡ..!

ಈ ಜನರಾ...?

ಟಿವಿಯಲ್ಲಿ ತಮ್ಮ ಮುಖ ಬರುತ್ತದೆ ಅಂತ ಬಂದವರೇ ಜಾಸ್ತಿ...!



ಅಜ್ಜಾ..

ನಿನ್ನ ಬೆಂಬಲಕ್ಕೆ ನಿಂತ ಎಲ್ಲ ಮಾಧ್ಯಮದವರು...

ನಿನ್ನೆದುರಿಗೆ ಸೇರಿ ಕೂಗುವ ಜನ...

ಎಲ್ಲರೂ... ಆತ್ಮವಂಚನೆ ಮಾಡಿಕೊಳ್ಳುವವರು..



ಅಜ್ಜಾ...

ನಿನ್ನೆ ನಿನಗೆ ಜೈಕಾರ ಹಾಕಿ ..

ಇಂದು ನಗರ ಸಭೆಗೆ ಹೋಗಿ ನಾನು ಲಂಚಕೊಟ್ಟು ಬಂದೆ...



ಲಂಚ ಕೊಡುವ ನನಗೂ..

ತೆಗೆದುಕೊಂಡ ಅವನಿಗೂ...

ಸ್ವಲ್ಪವೂ ಮುಜುಗರವೂ.. ನಾಚಿಕೆಯೂ ಆಗಲಿಲ್ಲ..

ರೂಢಿಯಾಗಿಬಿಟ್ಟಿದೆ...



ನಮ್ಮ ಆತ್ಮಸಾಕ್ಷಿಯನ್ನು ಸಾಯಿಸಿ...

ಇಬ್ಬರೂ ನಗುತ್ತ .. ಸ್ನೇಹಿತರಂತೆ ಇದ್ದೇವೆ..!

ಇಷ್ಟು ದೊಡ್ಡ ಪಟ್ಟಣದಲ್ಲಿ ಹೆಂಡತಿ ಮಕ್ಕಳೊಂದಿಗೆ ಬದುಕಲು ಇದು ಅಗತ್ಯ...



ಪ್ರೀತಿಯ ಅಜ್ಜಾ .... ಬೇಜಾರಾಗಬೇಡ..

ಇನ್ನು ಸರಕಾರದ ಜೊತೆ ನಿನ್ನ ಮಾತುಕತೆ..!

ತಾವು ಕುಳಿತ ಹಣ್ಣಿನ ಮರದ ರೆಂಭೆಯನ್ನು ...

ಯಾರಾದರೂ ಕಡಿಯುತ್ತಾರೆಯೇ ಅಜ್ಜಾ...?



ಅಜ್ಜಾ..

ನಮ್ಮ ಪ್ರತಿನಿಧಿಗಳು ನಾಟಕದವರು...!

ಒಪ್ಪಿಕೊಂಡಂತೆ ಮಾಡಿದರೂ... ರಂಗೋಲಿ ಒಳಗೆ ನುಸಿಯಲು ಜಾಗ ಇಟ್ಟುಕೊಂಡಿರುತ್ತಾರೆ...



ಅಜ್ಜಾ...

ನಮ್ಮ ದೇಶದ ಭ್ರಷ್ಟಾಚಾರ ವಿದೇಶಗಳಿಂದಲೂ ಬೆಂಬಲಿತ...

ಅನೇಕ ಅಂತರರಾಷ್ಟ್ರೀಯ ಕಂಪೆನಿಗಳು..

ನಮ್ಮ ದೇಶವನ್ನು ಉದ್ಧಾರ ಮಾಡಲು ಬಂದಿವೆ..



ನಮ್ಮ ದೇಶದ ಅನೇಕ ಗಣ್ಯರು ..!

ಅವರ ಮಕ್ಕಳು ಅದರಲ್ಲಿ ಕೆಲಸ ಮಾಡುತ್ತಾರೆ..



ನಿನ್ನ ಬಿಲ್ಲನ್ನು ಪಾಸು ಮಾಡುತ್ತೇವೆ ಎನ್ನುವ...

ಎಲ್ಲ ಪಕ್ಷದ ಎಂಪಿಗಳಿಗೆ..

ಮಂತ್ರಿಗಳಿಗೆ....

ಸಂಸತ್ತಿನಲ್ಲಿ ಬಿಲ್ಲು ಪಾಸುಮಾಡುವಾಗ...

ಅವರಿಗೆ ತಿಂದ ಲಂಚದ ಆತ್ಮಸಾಕ್ಷಿಗೆ ಹೇಗೆ ಮೋಸ ಮಾಡಿಕೊಳ್ಳಲು ಸಾಧ್ಯ...?



ಬಹುರಾಷ್ಟ್ರೀಯ ಕಂಪೆನಿಗಳ ಎಂಜಲನ್ನು ..

ನಾವು ಗೌರವದಿಂದ ತಿನ್ನುತ್ತಿದ್ದೇವೆ..

ಆ ಅತಿಥಿಗಳಿಗೆ ನಾವು ಹೇಗೆ ಅಗೌರವ ತೋರಿಸಲು ಸಾಧ್ಯ...?



ಈ ಕಾನೂನು ಬಂದರೆ ಎಷ್ಟೊಂದು ಕುಟುಂಬದ

ಯಜಮಾನರು ಜೈಲಿನಲ್ಲಿರಬೇಕಾಗುತ್ತದೆ..?

ಸ್ವಲ್ಪ ಯೋಚಿಸು ಅಜ್ಜಾ...ಅವರೂ ನನ್ನ ಮಕ್ಕಳು..!



ಅಜ್ಜಾ..

ಈಗ ಸಂಧಾನ ಮಾತುಕತೆ ಅಂತೆಲ್ಲ ನಾಟಕ ನಡೆಯುತ್ತಿದೆಯಲ್ಲ..

ತೆಪ್ಪಗೆ ಒಪ್ಪಿಕೊಂಡುಬಿಡು..



ಈ ಉಪವಾಸ.. ಅಹಿಂಸೆ.. ಸತ್ಯಾಗ್ರಹ ನಮಗೆ ಅಗತ್ಯ ಇಲ್ಲ..

ಪ್ರತಿ ನಿತ್ಯ ನೂರಾ ಇಪ್ಪತ್ತು ಕೋಟಿ ಜನಕ್ಕೆ ಹೂವಿಡುವವರಿಗೆ..

ಇನ್ನೊಂದು ಹೂ ಇಡುವದು ಕಷ್ಟವೆ?



ಅಜ್ಜಾ..

ಇದುವರೆಗೆ ಯಾರೂ ಇಡದ ...

ಒಂದು ಚಂದದ ಹೂವು ನಿನಗಿಡುತ್ತಿದ್ದಾರೆ..!



ಇಂದು ಅಲ್ಲದಿದ್ದರೆ ನಾಳೆ ಕೊಟ್ಟೆ..ಕೊಡುತ್ತಾರೆ...!

ಇಟ್ಟುಕೋ..!!

ನಾವು ಇಟ್ಟುಕೊಂಡಿದ್ದೇವೆ... ನೀನೂ ಸಹಿಸಿಕೊ..

ಕ್ರಮೇಣ ರೂಢಿಯಾಗುತ್ತದೆ...!



ಅಜ್ಜಾ..

ಇದೆಲ್ಲ ಬಿಟ್ಟು ನಮ್ಮನೆಗೆ ಬಾ..



ಶೇಂಗಾವನ್ನು ನೀರಿನಲ್ಲಿ ಬೇಯಿಸಿ ...

ಉಪ್ಪು ಖಾರ ಹಾಕಿ ಬೇಯಿಸಿಡುತ್ತೇನೆ..

ಅದನ್ನು ತಿನ್ನುತ್ತ..

ನಿನ್ನ ಹಿಂದಿನ ಸಾಹಸದ ಕಥೆಗಳನ್ನು ಹೇಳು..



ನಿನಗೊಂದು ಜಾತಿ ಪಟ್ಟ ಕಟ್ಟಿ..

ಬಣ್ಣ ಬಳಿದು..

ನಿನ್ನನ್ನು...

ಒಂದು ಬಾವುಟವನ್ನಾಗಿ ನೋಡಲು ಮನಸ್ಸು ಒಪ್ಪುತ್ತಿಲ್ಲ..



ಕರಳು ಕಿವುಚಿದಂತಾಗುತ್ತದೆ..

ಬಂದು ಬಿಡು ಅಜ್ಜಾ...!



ಕಾಯುತ್ತಾ ಇತರ್ೆನೆ...

1 comment:

Thanku