Saturday, December 17, 2011

ಯಾರಿಗೆ ಯಾರೋ..

ತಂಗಿ, ಜೀವನಾನ ಸಾಕಾಗಿ ಹೋಗ್ಯದ ಯಾಕೋ? ಒಂದು ತರದ ಬ್ಯಾಸರ ಆಗ್ಯದ. ಜೀವನ ಅನ್ನೋದು ಕುದ್ದು ಹೋಗ್ಯದ. ಜಲ್ಮ ಸಾಕು ಅನ್ನಿಸಲಿಕ್ಕ ಹತ್ಯದ. ಶಿವಪ್ಪಾ, ಕರುಣೆ ತೋರ್ಸಿ, ಈ ಜೀವ ಕರ್ಕೊಂಡು ಬಿಡಪ್ಪಾ? ಎಂದು ದಿನಾಲೂ ನಾ ದೇವರಲ್ಲಿ ಬೇಡಿಕೊಳ್ಳಕ ಹತ್ತೀನಿ.

ಯಾಕಬೇ ಎಕ್ಕಾ, ಹಂಗ್ಯಾಕಂತೀದಿ? ಬಿಡ್ತು ಅನ್ನು. ಅಷ್ಟ್ಯಾಕ ಬ್ಯಾಸರ ಮಾಡಿಕೊಂಡಿರುವಿ? ಈಗೇನು ಎಲ್ಲಾ ಜವಾಬ್ದಾರಿ ಮುಗಿಸಿ ಬಿಟ್ಟಿರುವಿ. ಮೂರೂ ಮಕ್ಕಳ ಮದುವಿ ಮುಗಿದು ಹೋಗ್ಯದ. ಬಸಿರು, ಬಾಣಂತನ ಸಹ ಎಲ್ಲಾ ಮುಗಿದು ಹೋಗ್ಯವ. ಮೊಮ್ಮಕ್ಕಳೂ ಸಾಕಷ್ಟು ಆಗ್ಯವ. ಈಗ್ಯಾಕ ಈ ಬ್ಯಾಸರದ ಮಾತು? ತಗೀ, ತಗೀ ಎಲ್ಲಾ ದೇವರ ಮ್ಯಾಲ ಭಾರ ಹಾಕಿ, ಶಿವ, ಶಿವ ಅಂತ ಆರಾಮಿರೋದು ಕಲ್ತುಕೋ. ಎಲ್ಲಾ ಸರಿಯಾಗುತ್ತ ತನ್ನಿಂದ ತಾನ

ಹೌದು ತಂಗೀ ನಿ ಹೇಳೋ ಮಾತು ಬರೋಬ್ಬರಿ ಐತೆ, ಖರೇ ಐತೆ. ಮೂರೂ ಮಕ್ಕಳ ಮದುವಿ, ಬಸಿರು, ಬಾಣಂತನ ಎಲ್ಲಾ ಮುಗಿದದವ ಖರೇ ಅಂದ್ರ. ಎಲ್ಲಾ ಮುಗಿದೈತಪಾ, ಇನ್ನ ಮುಂದ ನಾವು ಆರಾಮ ಇರಬಹುದೆಂದು ನಾನೂನು ಅಂದುಕೊಂಡಿದ್ದೆ. ಮೂರು ಮಕ್ಕಳಿಗಾಗಿ ಜೀವ ತೇಯ್ದು, ತೇಯ್ದು ಮೈ ಅನ್ನೋದು ಸವೆದು ಹೋಗ್ಯದ. ಮೈಯಾಗ ರಸ ಅನ್ನೋದ ಉಳಿದಿಲ್ಲ. ನಿನಗ ಕಾಣತೈತೆಲ್ಲ, ನಾ ಹೆಂಗ ಅದೀನಂತ?

ಹೌದಬೇ, ಈಗೇನಾಗೇದ ಅಂತ ಬ್ಯಾಸರ ಮಾಡಿಕೊಂಡಿ?

ಏನಂತ ಹೇಳಲವ್ವಾ ತಂಗಿ? ಒಂದ್ಯ, ಎರಡ್ಯ? ಬಾಳ ಅದವ ಬಿಡು.

ಬಿಡು, ಬಿಡು, ಕಷ್ಟ, ಸುಖ ಅನ್ನೋದು ಎಲ್ಲರ ಜೀವನದಾಗ ಇದ್ದದ್ದ. ನಿನ್ನ ಧೈರ್ಯ, ಕಷ್ಟ ಎದುರಿಸುವ ಶಕ್ತಿ, ಸಂಸಾರದ ರಥ ನಡೆಸುವ ತಾಕತ್ತು, ಜಾಣ್ಮೆ ಮೆಚ್ಚಿ ನಮ್ಮೆಜಮಾನರು ನಿನಗೆ, ಕಿತ್ತೂರು ಚೆನ್ನಮ್ಮ ಅಂತ ಆವಾಗಾವಾಗ ಶಹಬ್ಬಾಸಗಿರಿ ಕೊಡುತ್ತಿರುತ್ತಾರ. ನನ್ನ ನೋಡಿ ಬ್ಯಾರೆದವರು ಕಲ್ತುಕೊಳ್ಳುವುದು ಬಹಳ ಐತೆ ಅಂತ ಹೇಳ್ತಿರುತ್ತಾರ. ನಿನ್ನಂಥಹ ಧೈರ್ಯಗಾತಿ, ಎದೆಗಾರಿಕೆ ಉಳ್ಳಾಕಿ ಹೀಂಗ ಮಾತಾಡಿದರ ಹೆಂಗ? ಆದದ್ದಾರೂ ಏನವ? ಹೇಳ್ತಿಯಾ?

ಅಲ್ಲಾ ತಂಗಿ ಅಂಬಿಕಾ, ನಿನ್ನ ನಾ ನೀ ಹುಟ್ಟಿದಾಗಿಂದ ನೋಡಿನಿ. ಹಾಗೇ ನೀ ಸಹ ನನಗೆ ಬುದ್ಧಿ ತಿಳಿದಾಗಿಂದ ನನ್ನ ನೋಡಿರುವಿ. ನಾನೆಷ್ಟಾದರೂ ನನಗಿಂತ ದೊಡ್ಡಾಕಿ ಅಲ್ಲೇನು ವಯಸ್ಸಿನಾಗ? ಆರೇಳು ವರ್ಷ ನಾ ದೊಡ್ಡಾಕಿರಬೇಕು. ನಮ್ಮವ್ವ, ನಿಮ್ಮವ್ವ ಇಬ್ರೂ ಖಾಸಾ ಅಕ್ಕ-ತಂಗೇರು. ನಮ್ಮವ್ವ ದೊಡ್ಡಾಕಿ, ನಿಮ್ಮವ್ವ ಸಣ್ಣಾಕಿ. ನೀ ಸಣ್ಣಾಕಿದ್ದಾಗ ನಿನ್ನ ಸಾಲಿ ಸೂಟ್ಯಾಗ ನಮ್ಮೂರಿಗೆ ಮ್ಯಾಲಿಂದ ಮ್ಯಾಲೆ ಬರ್ತಿದ್ದಿ. ನಿನೇನವ್ವ, ನಿಮ್ಮಪ್ಪ-ನಿಮ್ಮವ್ವಗ ಒಬ್ಬಾಕೇ ಮಗಳು. ರಾಜಕುಮಾರಿ ಹಂಗ ಇದ್ದಿ, ಹಂಗ ಬೆಳದಿ. ಈಗ ಮಹಾರಾಣಿ ಅಂಗ ಅದಿ. ಆದರ ನೀ ಎಂದೂ ನಿನ್ನ ಸಾವ್ಕಾರಿಕಿ ತೋರ್ಸಲಿಲ್ಲ. ಗತ್ತು ಮಾಡ್ಲಿಲ್ಲ. ಬಾಳ ದೊಡ್ಡ ಗುಣದಾಕಿ ನೀ. ನಿನ್ನ ಮನಸು ಬಾಳ ದೊಡ್ಡದೈತೆವ. ನಿನ್ನ ಮನಸ್ಸಿಗೆ ತಕ್ಕಂಗ ನಿನಗ ಒಳ್ಳೆಯ ಗಂಡ ಸಹ ಸಿಕ್ಕಾನ ನೋಡು. ನೀ ಸಣ್ಣಾಕಿದ್ದಾಗ ನಮ್ಮ ಊರಿಗೆ ಬಂದಾಗ, ನಮ್ಮ ಜೊತಿಗೇ ಹೊಲಕ್ಕ ಬರ್ತಿದ್ದಿ, ಹೊಲದಾಗ ಸಣ್ಣ, ಪುಟ್ಟ ಕೆಲಸಾನೂ ಮಾಡ್ತಿದ್ದಿ. ನಿಮ್ಮ ಊರಿನಾಗ ನೀ ಎಂದೂ ಹೊಲ ನೋಡದಾಕಿ, ನಮ್ಮ ಕೂಡ ಹೊಲಕ್ಕ ಬರ್ತಿದ್ದುದನ್ನು ನೋಡಿ, ಅಪ್ಪ, ಅವ್ವ, ಆಕಿನ್ಯಾಕ ನಿಮ್ಮ ಜೊತಿ ಕರ್ಕೊಂಡು ಹೋಕ್ಕಿರಿ? ಬ್ಯಾಡ ಅಂತ ಅನ್ತಿದ್ರು. ಆದರ, ನೀ ಮಾತ್ರ ದೊಡ್ಡಪ್ಪಾ, ದೊಡ್ಡವ್ವಾ, ನಾ ಸುಮ್ಮನ ಇವರ ಜೊತಿ ಹೋಗ್ತೀನಿ. ಕೆಲಸ, ಗಿಲಸ ನಾ ಏನೂ ಮಾಡೋದಿಲ್ಲ. ಅಂತ ಹೇಳಿ ನಮ್ಮ ಕೂಡ ಬರ್ತಿದ್ದಿ. ದೊಡ್ಡವ್ವನ ಮಗಳು ರುದ್ರಮ್ಮ ಹೇಳುತ್ತಿದ್ದುದನ್ನು ಕೇಳುತ್ತಿದ್ದ ಅಂಬಿಕಾ ನೆನಪಿನಾಳಕ್ಕೆ ಇಳಿದಳು. ಬಾಲ್ಯದ, ಹದಿ ಹರೆಯದ ನೆನಪುಗಳು ಮನದಲ್ಲಿ ಮೂಡತೊಡಗಿದವು.

ರುದ್ರಮ್ಮ ಮತ್ತು ಅಂಬಿಕಾ ಅವರ ತಾಯಿಯಂದಿರು ಖಾಸಾ ಅಕ್ಕ, ತಂಗಿಯರು. ರುದ್ರಮ್ಮ, ಅಂಬಿಕಾ ಇಬ್ಬರೂ 1950ರ ದಶಕದಲ್ಲಿ ಜನಿಸಿದವರು. ರುದ್ರಮ್ಮನ ತಂದೆ-ತಾಯಿಯರಿಗೆ ಬರೋಬ್ಬರಿ ಅರ್ಧ ಡಜನ್ ಮಕ್ಕಳಾದರೆ, ಅಂಬಿಕಾ ತನ್ನ ತಂದೆ-ತಾಯಿಯರಿಗೆ ಏಕೈಕ ರಾಜಕುಮಾರಿ. ಮೂರು ಜನ ಹೆಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳಲ್ಲಿ ರುದ್ರಮ್ಮನೇ ದೊಡ್ಡಾಕಿ. ಊರಲ್ಲಿ ಏಳನೇ ತರಗತಿಯವರೆಗೆ ಶಾಲೆ ಇದ್ದರೂ ರುದ್ರಮ್ಮ ಓದಿದ್ದು ನಾಲ್ಕನೇ ತರಗತಿಯವರೆಗೆ ಅಷ್ಟೆ. ಮೂವರೂ ಹೆಣ್ಣು ಮಕ್ಕಳೇ ದೊಡ್ಡವರು, ನಂತರ ಮೂವರು ಗಂಡು ಮಕ್ಕಳು.

ರುದ್ರಮ್ಮನ ತಂದೆ-ತಾಯಿಯವರಿಗೆ ತಕ್ಕ ಮಟ್ಟಿಗೆ ಹೊಲ ಇದ್ದರೂ, ಜೀವನ ನಿರ್ವಹಣೆಗೆ ತೊಂದರೆ ಇಲ್ಲವೆನ್ನಲಿಕ್ಕೆ ಸಾಧ್ಯವಿದ್ದಿಲ್ಲ. ಮಳೆ ಸರಿಯಾಗಿ ಆಗಿ ಬೆಳೆಗಳು ಚೆನ್ನಾಗಿ ಬಂದರೆ ಅವರನ್ನು ಹಿಡಿಯುವವರಾರೂ ಇದ್ದಿಲ್ಲ. ಬಡತನವಿದ್ದರೂ ಗಂಡ-ಹೆಂಡತಿಯರ ಪ್ರೀತಿಗೇನು ಕಡಿಮೆ ಇರಲಿಲ್ಲ. ಅವರಿಬ್ಬರ ಜೋಡಿ ಅನ್ಯೋನ್ಯವಾಗಿದ್ದು, ಇನ್ನೊಬ್ಬರಿಗೆ ಮಾದರಿಯಾಗುವಂತಿತ್ತು.

ಅಂಬಿಕಾ, ತನ್ನ ದೊಡ್ಡಮ್ಮನ ಊರಿಗೆ ಹೋದಾಗ, ಆಕೆಯ ದೊಡ್ಡಮ್ಮ ಅವಳಿಗಾಗಿ ಬೆಳಿಗ್ಗೇನೇ ಬಿಸಿ, ಬಿಸಿ ಬಿಳಿಜೋಳದ ರೊಟ್ಟಿ ಮಾಡಿಕೊಡುತ್ತಿದ್ದಳು. ಅಂಬಿಕಾಗೆ ಚಹ, ಕಾಫಿ ಕುಡಿಯುವ ಹವ್ಯಾಸ ಇರದಿದ್ದುದರಿಂದ, ಮಗುಗೆ ಬಿಸಿ, ಬಿಸಿ ರೊಟ್ಟಿ ಮಾಡಿಕೊಡು ಎಂದೆನ್ನುತ್ತಿದ್ದ ಆಕೆಯ ದೊಡ್ಡಪ್ಪ. ಬಿಸಿ, ಬಿಸಿ ರೊಟ್ಟಿಯ ಜೊತೆಗೆ ಕಾಯಿಪಲ್ಲೆ, ಬೆಣ್ಣೆ, ಹಸಿ ಮೆಣಸಿನ ಕಾಯಿ ಹಿಂಡಿ, ಹುಣಸೇತೊಕ್ಕು ಹಚ್ಚಿಕೊಡುತ್ತಿದ್ದಳು ಅವಳ ದೊಡ್ಡಮ್ಮ. ಇದೆಂದರೆ, ಅಂಬಿಕಾಗೂ ತುಂಬಾ ಖುಷಿ. ಎರಡು ರೊಟ್ಟಿ ಹೊಡೆದು ಅಂಬಿಕಾ, ರುದ್ರಮ್ಮ ಮತ್ತು ತಂಗಿಯರ ಜೊತೆ ಊರಿಗೆ ಸಮೀಪವೇ ಇದ್ದ ಅವರ ತೋಟದ ಹೊಲಕ್ಕೆ ಹೋಗಿ ಅವರ ಜೊತೆ ದನಕರುಗಳಿಗೆ ಬೇಕಾದ ಹಸಿ ಮೇವನ್ನು ಕೊಯ್ದು ಕೊಡಲು ಪ್ರಯತ್ನಿಸುತ್ತಿದ್ದಳು ಅಕ್ಕ-ತಂಗಿಯರು ಬೇಡವೆಂದರೂ. ಬ್ಯಾಡ ತಾಯಿ, ನೀನೇನಾದರೂ ಮೇವು ಕೊಯ್ದದ್ದು ಅಪ್ಪ-ಅಮ್ಮಗೆ ಗೊತ್ತಾದರೆ, ನಮ್ಮನ್ನ ಬೈತಾರೆ. ಎಂದು ಹೇಳಿದರೂ ಆಕೆ ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ತೋಟದಲ್ಲಿ ತರಕಾರಿಗಳಾದ ಬೆಂಡೆ, ಬದನೆ, ಚವಳಿ, ಮೆಣಸಿನಕಾಯಿಗಳಿದ್ದರೆ ಅವುಗಳನ್ನು ಹರಿದುಕೊಟ್ಟು ಸಹಾಯ ಮಾಡುತ್ತಿದ್ದಳು. ಅಂಬಿಕಾಗೆ ಪ್ರಕೃತಿಯೆಂದರೆ ಖುಷಿ. ಗಿಡ, ಮರ, ಹಸಿರು ಎಂದರೆ ಆಕೆಯ ಮನಸ್ಸಿಗೆ ತುಂಬಾ ಸಂತೋಷವಾಗುತ್ತಿತ್ತು.

ರುದ್ರಮ್ಮನ ಊರಿನ ಪಕ್ಕವೇ ಹಳ್ಳ ಹರಿಯುತ್ತಿತ್ತು. ಮಳೆಗಾಲದ ದಿನಗಳಲ್ಲಿ ಹಳ್ಳದಲ್ಲಿ ನೀರು ತುಂಬಿಕೊಂಡು ನೋಡುಗರಿಗೆ ರಮಣೀಯವಾಗಿ ಕಾಣುವಂತೆ ಅಂಕು ಡೊಂಕಾಗಿ ಹರಿಯುತ್ತಿತ್ತು. ಮಧ್ಯಾಹ್ನದ ವೇಳೆಗೆ ಬಟ್ಟೆ ಒಗೆಯಲಿಕ್ಕೆ ಹೋಗುತ್ತಿದ್ದ ರುದ್ರಮ್ಮನ ಜೊತೆಗೆ ಅಂಬಿಕಾ ಯಾವಾಗಲೂ ಹಾಜರ್. ಹಳ್ಳದಲ್ಲಿ ವೈಯಾರವಾಗಿ ಹರಿಯುತ್ತಿದ್ದ ನೀರಿನ ಧಾವಂತ ನೋಡಲು ಆಕೆಯ ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು, ಗರಿಗೆದರುತ್ತಿತ್ತು. ಹಳ್ಳದ ದಂಡೆಯ ಮೇಲಿನ ಹಸಿರು ಗಿಡ, ಮರ, ಬಳ್ಳಿಗಳು, ವಿವಿಧ ಬಣ್ಣದ, ವಾಸನೆಗಳ ಹೂವುಗಳ ಚೆಲುವನ್ನು ಆಸ್ವಾದಿಸುವುದು ಅವಳಿಗೆ ತುಂಬಾ ಖುಷಿ ನೀಡುತ್ತಿತ್ತು. ಅಲ್ಲಿಯ ಪಕ್ಷಿಗಳ ಕಲರವ ಅಂಬಿಕಾಳ ಮನಸ್ಸಿಗೆಮುದ ನೀಡುತ್ತಿತ್ತು. ಹಾಗೇ ಹಾದಿಯಲ್ಲಿ ಕವಳೆ, ಕಾರೆ ಹಣ್ಣುಗಳ ರುಚಿಯನ್ನೂ ಸವಿದು ನಾಲಿಗೆ ಚಪಲ ತೀರಿಸಿಕೊಳ್ಳುತ್ತಿದ್ದಳು.

ಅಂಬಿಕಾ ತಮ್ಮ ಊರಿಗೆ ಬಂದಾಗೊಮ್ಮೆ ಆಕೆಯ ದೊಡ್ಡಪ್ಪ ಬಂಡಿ ಕಟ್ಟಿಕೊಂಡು, ಪಕ್ಕದ ಊರಿನ ಸಿನಿಮಾ ಥೇಟರಿಗೆ ಮನೆಯವರೆಲ್ಲರ ಜೊತೆಗೆ ಆಕೆಯನ್ನು ಕರೆದುಕೊಂಡು ಹೋಗಿ ಸಿನಮಾಗಳನ್ನು ತೋರಿಸಿಕೊಂಡು ಬರುತ್ತಿದ್ದ. ದೊಡ್ಡಮ್ಮನ ಊರಿನ ನೆನಪುಗಳು ಅವಳ ಮನಸ್ಸಿನಲ್ಲಿ ಇನ್ನೂ ಹಸಿ, ಹಸಿಯಾಗಿಯೇ ಇವೆ. ಈ ನೆನಪುಗಳ ಹುಡುಕಾಟದಲ್ಲಿ ಅವಳ ಮನಸ್ಸು ಕಳೆದು ಹೋಗಿತ್ತು ತುಸು ಹೊತ್ತು. ಗತಕಾಲದ ಸವಿನೆನಪುಗಳ ಸುಳಿಯಲ್ಲಿ ಸಿಲುಕಿದ್ದ ಅಂಬಿಕಾಳನ್ನು ರುದ್ರಮ್ಮ ವಾಸ್ತವಕ್ಕೆ ತರಲು ಪ್ರಯತ್ನಿಸಿದಳು.

ಏನ್ ತಂಗೆವ್ವಾ, ಹಳೆದನ್ನು ಬಾಳ ನೆನಿಸಿಕೊಳ್ಳಾಕ ಹತ್ತಿದಂಗ ಕಾಣಿಸಕತ್ತೇದ. ಅಂತ ಎಚ್ಚರಿಸದಳು.

ಹೌದಬೇ ಎಕ್ಕಾ, ನಿ ಹೇಳೋದೆಲ್ಲಾ ಖರೇ ಐತೆ. ನೀ ಹೇಳಿದಂಗ ನನಗ ನಾ ಸಣ್ಣಾಕಿದ್ದಾಗ ನಿಮ್ಮ ಊರಿಗೆ ಬಂದು ಹೋದಾಗಿನ ದಿನಗಳು ಬಾಳ ನೆನಪಾಗ್ಲಿಕ್ಕತ್ಯಾವು. ಖರೇ ಅಂದ್ರ ಆಗಿನ ನೆನಪುಗಳು ನನಗ ಆವಾಗಾವಾಗ ಈಗಲೂ ಕಾಡ್ಸುತ್ತಿರುತ್ತಾವ. ಮರೀಲಿಕ್ಕ ಆಗಂಗಿಲ್ಲ ನೋಡು ಆ ದಿನಗಳನ್ನು. ನಿಜವಾಗ್ಲೂ ಎಷ್ಟು ಖುಷಿ ಇತ್ತಲ್ಲ ಆಗಿನ ದಿನಗಳಲ್ಲಿ? ಅಲ್ವೇನಕ್ಕಾ? ಅದಿರಲಿ ಅಕ್ಕಾ, ನೀ ಯಾಕ ಬ್ಯಾಸರ ಮಾಡಿಕೊಂಡಿರುವಿ ಎಂದು ಮೊದಲು ಹೇಳು. ಅಂಬಿಕಾ ಪುನಃ ವಾಸ್ತವಕ್ಕೆ ಬಂದಳು.

ಅಲ್ಲಬೇ ತಂಗಿ, ನಿನಗೆ ಎಲ್ಲಾ ಗೊತ್ತೈತಿ. ಆದರೂ ಕೇಳ್ತಿರುವಿ. ನನ್ನ ಬಾಯಿಯಿಂದಾನ ಕೇಳ್ಬೇಕೆಂಬ ಆಶಾ ನಿನಗ ಅಂತ ಕಾಣುತ್ತ. ನಾ ಹೇಳ್ತೀನಿ ಕೇಳಬೇ. ಎಂದು ಶುರು ಮಾಡಿದಳು ರುದ್ರಮ್ಮ.

ನಮ್ಮೂರಿನಾಗ ಏಳನೇ ಕ್ಲಾಸಿನವರೆಗೂ ಶಾಲೆ ಇದ್ರೂ ನಾ ಕಲ್ತಿದ್ದು ನಾಲ್ಕನೇ ಕ್ಲಾಸು ಮಾತ್ರ. ನನಗ ಓದೋ ಮನಸ್ಸಿದ್ದರೂ ಮುಂದೆ ಓದಿಸಲಿಲ್ಲ ಅಪ್ಪ. ನಾ ಸಾಲಿ ಬಿಟ್ಟಾಗ ನನಗ ಹತ್ತು ಅಥವಾ ಹನ್ನೊಂದು ವರ್ಷ ವಯಸ್ಸಿರಬಹುದು. ಆಗಲೇ ತಂಗೇರಾದ ಲತಾ, ಗೀತಾ, ತಮ್ಮನಾದ ಚಂದ್ರಶೇಖರ ಹುಟ್ಟಿದ್ದರು ಅವ್ವಗ. ನಾ ಸಾಲಿ ಬಿಟ್ಟ ಮೇಲೆ ತಮ್ಮಂದಿರಾದ ರಾಜಶೇಖರ ಮತ್ತು ಸೋಮಶೇಖರ ಹುಟ್ಟಿದರು. ಅವ್ವ ಎರಡು ಮೂರು ವರ್ಷಕ್ಕೊಂದು ಹಡೆಯುತ್ತಿದ್ದರಿಂದ ಚಿಕ್ಕ ಮಕ್ಕಳಿಗೆ ನಾನೇ ಅರ್ಧ ಮರ್ಧ ತಾಯಾಗಿದ್ದೆ. ತಂಗಿಯರ, ತಮ್ಮಂದಿರ ದೇಖರೇಕಿ ಜೊತೆಗೆ ಹೊಲ ಮನೆಗಳಲ್ಲಿ ಗಂಡಾಳಿನಂತೆ ದುಡೀತಿದ್ದೆ. ಯಾಕಂದ್ರ ಅಪ್ಪನೂ ಒಂದು ರೀತಿಯ ಸುಸ್ತಿ ಮನುಷ್ಯ ಇದ್ದ. ಯಾವಾಗಲೂ ಕೆಮ್ಮು, ದಮ್ಮು ಎಂದು ಏದುಸಿರು ಹಾಕುತ್ತಿದ್ದ. ಗಂಡು ಮಕ್ಕಳೆಲ್ಲಾ ಸಣ್ಣವರಾಗಿದ್ದರಿಂದ ಎಲ್ಲಾ ಒಜ್ಜೆ ನನ್ನ ಮೇಲೆ ಬಿದ್ದಿತ್ತು. ಆರು ಮಕ್ಕಳನ್ನ ಹಡೆದ್ರಾಗ ಅವ್ವನೂ ಅರ್ಧ ಮರ್ಧ ಸುಸ್ತಾಗಿದ್ದಳೂ ಕೂಡ.

ಹೀಂಗ ಹೊಲ ಮನಿ ಕೆಲಸದೊಳ್ಗ ನಾ ಹರೇಕ ಬಂದೆ. ಅವ್ವ ತನ್ನ ತಮ್ಮಗ ನನ್ನ ಕೊಟ್ಟು ಮದುವೆ ಮಾಡಿದಾಗ ನನಗ ಹದಿನೆಂಟೋ ಹತ್ತೊಂಭತ್ತೋ ಇರಬೇಕು ಅಷ್ಟೆ. ಮದುವೆ ಆದ ಮ್ಯಾಲ ಗಂಡನ ಮನ್ಯಾಗ ಸಂಸಾರದ ರಥ ಎಳೆಯೋದು ಶುರುವಾಯ್ತು. ಇಲ್ಲಿ ಗಂಡನ ಮನ್ಯಾಗೂ ಸಹ ನನಗ ಹೊಲ ಮನಿ ಕೆಲಸ ತಪ್ಪಲಿಲ್ಲ. ಮದುವ್ಯಾದ ಮೂರು ವರ್ಷದ ತನಕ ಮಕ್ಕಳಾಗಲಿಲ್ಲ. ಅದೊಂದು ರೀತಿ ಚೊಲೋ ಆತನ್ನು. ಯಾಕೆಂದ್ರ, ಚಾಂಯ್, ಮಿಂಯ್ ಅಂತ ಕಿರಿ ಕಿರಿ ಇರಲಿಲ್ಲ. ನಿನ್ನ ಮಾವನೂ ನನ್ನ ಚೆನ್ನಾಗೇ ನೋಡಿಕೊಳ್ತಿದ್ದ. ಪ್ರೀತಿಯಿಂದ ನೋಡ್ಕೊಳ್ತಿದ್ದ ಎಂದ ಮೇಲೆ ಎಷ್ಟು ದಿನ ಮಕ್ಕಳಾಗದಿರಲಿಕ್ಕ ಸಾಧ್ಯ ಹೇಳು? ಮದುವೆಯಾದ ನಾಲ್ಕನೇ ವರ್ಷದಿಂದ ಎರಡು ವರ್ಷಕ್ಕೊಂದರಂತೆ, ಒಂದೊಂದೇ ಅಂತ ನಾಲ್ಕು ಮಕ್ಕಳಾದವು. ಎಲ್ಲಾ ಹೆಣ್ಣೇ ಆಗಬೇಕೆ? ನನ್ನ ಹೊಟ್ಯಾಗ ಒಂದಾದರೂ ಗಂಡು ಕೂಸು ಹುಟ್ಟಲಿಲ್ಲ. ಎರಡನೇ ಹುಡುಗಿ ಹನ್ನೆರಡನೇ ವಯಸ್ಸಿನಾಗ ತೀರಿಕೊಂಡಿದ್ದು ನಿನಗೆ ಗೊತ್ತ ಐತೆ.

ಉಳಿದ ಮೂರೂ ಮಕ್ಕಳೂ ಹೆಂಗೋ ಬೆಳದ್ವು, ಹೆಂಗೋ ದೊಡ್ಡವಾದ್ವು. ಹಾಂಗೇ ಮೂವರ್ದೂ ಹೆಂಗೋ ಮದುವಿನೂ ಆಗೋಯ್ತು. ಮಕ್ಕಳ ಮದುವಿಗೆ ಅಂತ ನಿಮ್ಮಂಥಹವರ ಸಂಗಡ ಸಾಲಾನೂ ಆಯ್ತು. ಮಳಿ, ಬೆಳಿ ಸರಿಯಾಗಿದ್ರ ಸಾಲ ಗೀಲ ಆಗ್ತಿರಲಿಲ್ಲ. ಗೊಬ್ಬರದಂಗಡ್ಯಾಗ ಸಾಲ, ಬ್ಯಾಂಕಿನ್ಯಾಗ ಸಾಲ ಅಂತ ಮೈ ತುಂಬಾ ಸಾಲ ಆಗ್ಯಾದ. ಸಾಲಕ್ಕ ಬರೀ ಬಡ್ಡೀ ತೀರ್ಸೋದ್ರೊಳಗ ನಾವು ಹೈರಾಣಾಗೀವಿ. ನಿಮ್ಮ ಮಾವನೂ ಈಗ ಮೊದ್ಲಿನಂಗಿಲ್ಲ. ಮೊದಲು ಬೀಡಿ, ಸಿಗರೇಟು ಅಂತ ಆಗೊಮ್ಮೆ, ಈಗೊಮ್ಮೆ ಸೇದ್ತಿದ್ದ. ಅದರ ಜೊತೆಗೆ ಆವಗೊಮ್ಮೆ ಇವಗೊಮ್ಮೆ ಅಂತ ಗೆಳ್ಯಾರ ಜೊತೆ ಇಸ್ಪೀಟ ಆಡತಿದ್ದ, ಅಷ್ಟೆ. ಆದರ ಈಗೀಗ ಕುಡೀಲಕ್ಕೂ ಚಾಲೂ ಮಾಡ್ಯಾನ. ಕುಡುದು ಬಂದ ಮನ್ಯಾಗ ಒದರ್ಯಾಡಲಿಕ್ಕ ಶುರು ಮಾಡ್ಯಾನ.

ಮೂವರು ಮಕ್ಕಳ ಮದುವಿ ಮುಗ್ಸೋದ್ರೊಳಗ ನಾವು ಗಂಡ-ಹೆಂಡತಿ ಮೆತ್ತಗಾಗಿದ್ವಿ. ಆಮ್ಯಾಲೆ ಒಬ್ಬೊಬ್ಬ ಮಗಳ ಎರಡು ಮೂರು ಬಸಿರು, ಬಾಣಂತನ ಮಾಡೋದ್ರೊಳಗ ನಾನಂತೂ ನಿಕ್ಕಳಕ ಬಿದ್ದೀನಿ. ಅಕ್ಕಡೆ ಹೊಲ ಮನಿ ಕೆಲಸ ನೋಡ್ಕೊಳ್ಳೋದು ಒಂದು ಕೆಲಸ ಆದರ, ಇಕ್ಕಡೆ ಮಕ್ಕಳು, ಮೊಮ್ಮಕ್ಕಳನ್ನು ನೋಡ್ಕೊಳ್ಳೋದು ಇನ್ನೊಂದು ಕೆಲಸ. ಇವರು ಕುಡ್ಯಾಕ ಹತ್ತಿದ ಮ್ಯಾಲ ಹೊಲದ ಕೆಲಸ ಹೆಚ್ಚು ಕಡಿಮೆ ನನಗ ಹತ್ಯದ. ಯಾವುದಕ್ಕೂ ಜವಾಬ್ದಾರಿ ತೊಗೊಳ್ಳೊದಿಲ್ಲ. ಈ ಸಂಸಾರದ ಜಂಜಾಟದೊಳಗ ಆಸರಿಕೆ, ಬ್ಯಾಸರಿಕೆ ಇಲ್ಲದ, ಕತ್ತೆ ಹಂಗ ದುಡಿದು, ದುಡಿದೂ ಮೆತ್ತಗಾಗಿ ಹೋಗೀನಿ.

ಎಲ್ಲಾ ಮಕ್ಕಳ ಮದುವಿ, ಬಾಣಂತನ ಎಲ್ಲಾ ಮುಗ್ಸೀನಿ, ಇನ್ನ ಮುಂದ ಆರಾಮ ಮಾಡಬಹುದೆಂದು ನಾವೂ ಅಂದ್ಕೊಂಡಿದ್ದಿವಿ. ಎಲ್ಲಾ ಸರಿಯಾಗೈತೆ ಎಂದು ಅಂದುಕೊಂಡಾಗ್ಲೇ, ಹೊಸದೊಂದು ಕಿರಿ, ಕಿರಿ ಶುರುವಾಗ್ಲಿಕ್ಯತ್ತದ. ನನ್ನ ಗಂಡನಿಗೆ ಕಡಿಮೆ ವರದಕ್ಷಿಣೆ ಕೊಟ್ಟೀರಿ, ಆಕಿ ಗಂಡಗೆ ಹೆಚ್ಚಿನ ವರದಕ್ಷಿಣೆ ಕೊಟ್ಟೀರಿ. ಅದರಂಗ ನಮಗೂ ಉಳಿದ ಹಣ ಕೊಡ್ರಿ ಎಂದು ಒಬ್ಬಾಕಿ ಹೇಳ್ಲಿಕತ್ಯಾಳ. ನನ ಗಂಡಗ ಬಂಗಾರ ಕೊಟ್ಟಿಲ್ಲ, ಆದರ ಆಕಿ ಗಂಡಗ ಬಹಳ ಕೊಟ್ಟೀರಿ. ಅದರಂಗ ನಮಗೂ ಬಂಗಾರ ಕೊಡ್ರಿ ಎಂದು ಇನ್ನೊಬ್ಬಾಕಿ ಹೇಳಾಕ ಚಾಲೂ ಮಾಡ್ಯಾಳ. ಹೆಂಗೂ ನಾವು ಮೂರು ಜನ ಹೆಣ್ಣುಮಕ್ಕಳೇ ನಿಮಗ. ನಿಮ್ಮ ಹೊಲ, ಮನಿ ನಮ್ಮ ಮೂವರಲ್ಲಿ ಈಗಲೇ ಹಂಚಿಬಿಡ್ರಿ ಎಂದು ಮತ್ತೊಬ್ಬಾಕಿ ಹೇಳಕತ್ಯಾಳ. ನನಗಂತೂ ಒಂದೂ ತಿಳಿದಂಗಾಗ್ಯದ.

ನಿನಗ ಗೊತ್ತಿದ್ದ ಐತೆ, ಎನಂದ್ರ, ಹಿರೇ ಮಗಳು ಪಾರ್ವತಿಯನ್ನು ಖಾಸಾ ತಮ್ಮನಗೇ ಕೊಟ್ಟಿದ್ದು. ಅವ ಗುಮ್ಮನ ಗುಸುಗ, ಮೆತ್ತನ ಕಳ್ಳ, ತನಗ ಆಗ ವರದಕ್ಷಿಣೆ ಕೊಟ್ಟಿಲ್ಲ, ಈಗ ಕೊಡ್ರಿ ಅಂತ ಹೆಂಡ್ತಿಗೆ ಹಚ್ಚಿ ಕುಂತಾನ. ಮೂರನೇ ಮಗಳು ಸರಸ್ವತಿಗೆ ವರದಕ್ಷಿಣೆ ಕೊಟ್ಟದ್ದು ಅವಗ ಕಣ್ಣಾಗ ಒತ್ತಲಿಕ್ಕತೈತೆ. ಆವಾಗ ವರದಕ್ಷಿಣೆ ಬ್ಯಾಡ ಅಂತ ತಾನ ಹೇಳ್ಯಾನ. ಈಗ ನೋಡಿದ್ರ ಹೀಂಗ ಅನ್ನಾಕತ್ಯಾನಂತ. ಮೂರನೇ ಅಳಿಯನಿಗೆ ವರದಕ್ಷಿಣೆನೂ ಜಗ್ಗಿ ಕೊಟ್ಟೀರಿ, ಮತ್ತು ಅವಗ ಆಸ್ತೀಲೂ ಸರಿ ಪಾಲು ಬರತೈತೆ ಅಂತ ಅವನ ವಾದ ಈಗ. ಇದಕ್ಕಾಗೇ ಮಗಳದು ಬಲು ಕಿರಿ, ಕಿರಿ, ರಿಪಿ, ರಿಪಿ ನಡೆದೈತೆ ಈಗ.

ಎರಡನೇ ಅಳಿಯನ ಊರು ನಮ್ಮ ಊರಿನ ಪಕ್ಕದಾಗ ಇರೋದ್ರಿಂದ ನಮ್ಮ ಹೊಲ, ತನ್ನ ಹೊಲಾನೆಲ್ಲಾ ನಮ್ಮ ಮನೆಲೇ ಇದ್ದುಕೊಂಡು ನೋಡ್ಕೊಳ್ಳಲೀ ಅಂತ ಅಳಿಯ, ಮಗಳು ಇಬ್ರುನ್ನೂ ಮನೇಲಿಟ್ಟುಕೊಂಡು ಅವರ ಮೂರೂ ಮಕ್ಕಳ ಹೇಲು, ಉಚ್ಚಿ ಎಲ್ಲಾ ತೊಳ್ದೆವು, ಬಳ್ದೆವು ಬ್ಯಾಸರ ಮಾಡಿಕೊಳ್ಳದಂಗ. ಈಗ ಅವ ಏನಂತಾನ ಅಂತ ಅಂದ್ರ, ನಾನೊಬ್ಬಾತ ಎಲ್ಲರ ಪಾಲಿನ ಹೊಲ ಯಾಕ ಮಾಡ್ಬೇಕು? ಎಲ್ಲರ ಸಲುವಾಗಿ ನಾನ್ಯಾಕ ಇವರ ಮನ್ಯಾಗ ದುಡೀಬೇಕು ಅಂತ ಹೆಂಡತಿ ಮಕ್ಕಳನ್ನು ಹೊಂಡಿಸಿಕೊಂಡು ತನ್ನ ಊರಿಗೆ ಹೋಗ್ಯಾನ. ಮಗಳು ಲಕ್ಷ್ಮೀನೂ ಸಹ ಅವನ ತಾಳಕ್ಕ ಕುಣೀಲಕ್ಕ ಹತ್ಯಾಳ. ತನ್ನ ಗಂಡ ಇವರ ಮನಿ ಸಂಬಳದಾಳೇನು ಅಂತ ಅನ್ನಲಿಕ್ಕ ಹತ್ಯಾಳಂತ.

ಈ ಮೂರೂ ಮಕ್ಕಳ ಕಿತ್ತಾಟ, ಕಿತಾಪತಿ ಕೇಳಿ, ಕೇಳಿ ನನಗಂತೂ ಒಂದು ತರ ಜೀವ ರೋಸಿ ಹೋದಂಗಾಗ್ಯದ. ಇವರಿಗಾಗಿ ನಮ್ಮ ಜೀವನ ತೇಯ್ದದ್ದು ಯಾರಿಗೂ ಬೇಕಾಗಿಲ್ಲಂತ ಅನಸ್ಲಿಕ್ಕತ್ಯದ. ಇವರ ಮೇಲೆ ನನಗ ಒಂದು ತರ ಹೇಸಿಕೆ ಬಂದಂಗಾಗಕ್ಕತ್ಯದ. ಇದನ್ನ ಮನಸ್ಸಿಗೆ ಹಚ್ಚಿಕೊಂಡು ಇವರು ಈಗೀಗ ಇನ್ನೂ ಹೆಚ್ಚಿಗೆ ಕುಡೀಲಕ್ಕ ಹತ್ಯಾರ. ಏನು ಮಾಡಿದ್ರ ಏನೈತೆ? ಮಕ್ಕಳಿಗಾಗಿ ತಾ ಎಷ್ಟೆಲ್ಲಾ ಕಷ್ಟ ಪಟ್ರೂ, ತ್ಯಾಗ ಮಾಡಿದ್ರೂ ಇವರ್ಯಾರಿಗೂ ನಾವು ಬೇಕೇ ಇಲ್ಲವಲ್ಲಾ? ನಾವು ಇನ್ನು ಬದುಕಿದ್ದೂ ಪ್ರಯೋಜನವೇನು? ನಾವು ಯಾರಿಗಾಗಿ ಬದುಕಬೇಕಾಗೈತೆ? ಅಂತ ಪೇಚಾಡ್ಲಿಕ್ಕೆ ಹತ್ಯಾರ ಇವರು. ನನಗಂತೂ ದಿಕ್ಕೇ ತೋಚದಂಗಾಗ್ಯದ. ಇದ ವಿಷಯ ನೋಡು ತಂಗಿ ನನಗ ಬ್ಯಾಸರ ತಂದಿದ್ದು. ಎಂದು ರುದ್ರಮ್ಮ ದುಗುಡದಿಂದ ಹೇಳಿ ಮುಗಿಸಿದಳು.

ಅಯ್ಯಾ, ಹುಚ್ಚು ಕೋಡಿ ಹೆಣ್ಣು ಮಗಳಾ, ನಿನ್ನ ಧೈರ್ಯ ಮೆಚ್ಚಿಕೊಂಡಿದ್ದ ನಮ್ಮ ಮನೆಯವರ ನಂಬಿಕೆಯನ್ನು ನೀ ಹುಸಿ ಮಾಡಲಿಕ್ಕೆ ಹತ್ತಿಯಲ್ಲ? ಇದೇನಂಥ ದೊಡ್ಡ ವಿಷಯವಲ್ಲ ಬಿಡು. ನೀ ಚಿಂತಿ ಮಾಡೂ ಅವಶ್ಯಕತೆನೇ ಇಲ್ಲ. ಬ್ಯಾಸರ ಮಾಡಿಕೋ ಬ್ಯಾಡಬೇ ಎಕ್ಕಾ? ಎಂದು ಸಮಾಧಾನ ಮಾಡತೊಡಗಿದಳು ಅಂಬಿಕಾ.

ಏನಬೇ, ನೀ ಏನ ಮಾತಾಡಕತ್ತೀಯಂತ ನಿನಗ ತಿಳಿವಲ್ತೇನು? ಇದೇನು ಅಂಥಹ ದೊಡ್ಡ ವಿಷಯ ಅಲ್ಲೇನು? ಅದೆಂಗಬೇ? ತಿಳಿಸ್ಯರ ಹೇಳು.

ನೋಡವಾ ಎಕ್ಕಾ, ಇವೆಲ್ಲಾ ಎಲ್ಲರ ಮನ್ಯಾಗ ಇದ್ದದ್ದೇ. ಅದಕ್ಯಾಕ ನೀವು ಗಂಡ-ಹೆಂಡತಿಯರಿಬ್ಬರೂ ಇಷ್ಟು ಬ್ಯಾಸರ ಮಾಡಿಕೋ ಬೇಕು? ಧೈರ್ಯ ತಗೋ. ಎಲ್ಲಾ ಸರಿ ಹೋಕೈತೆ. ಹೊಲ, ಮನ ಎಲ್ಲಾ ಮಾಮನ ಹೆಸರಿಲೇ ಇರೋದಲ್ಲವಾ? ಅಂದ ಮೇಲೆ ಮಕ್ಕಳಿಗೆ, ಅಳಿಯಂದಿರಿಗೆ ಹೇಳ್ರೀ, ಏನಂದ್ರ, ನಾವು ಜೀವಂತ ಇರೋವರೆಗೂ ನಮ್ಮ ಆಸ್ತೀಲಿ ಒಂದು ತುಣುಕೂ ನಿಮ್ಮ ಹೆಸರಿಲೆ ಮಾಡಿಕೊಡೋದಿಲ್ಲ. ನಿಮಗೆ ಆಸ್ತಿ ಕೊಡ್ತೀವಂತ ನಾವೆಂದೂ ನಿಮಗೆ ಹೇಳಿಲ್ಲ. ನಮ್ಮ ಜೀವ ಇರೋಮಟ ಅನುಭವಿಸ್ತೀವಿ. ಹಂಗೇನಾದ್ರೂ ಅಂಥ ಪ್ರಸಂಗ ಬಂದ್ರ, ಆಸ್ತಿ ಮಾರಿ ಮೊದಲು ಸಾಲ, ಗೀಲಾ ಚುಕ್ತಾ ಮಾಡ್ತೀವಿ. ಸಾಲ, ಗೀಲಾ ತೀರ್ಸಿದ ಮ್ಯಾಲ ಉಳಿದ ದುಡ್ಡನ್ನ ನಮ್ಮಿಬ್ರ ಹೆಸರಿನ್ಯಾಗ ಬ್ಯಾಂಕಿನ್ಯಾಗ ಇಟ್ಟು ಜೀವನ ನಡೆಸ್ತೀವಿ. ಅಂತ ಅವರಿಗೆ ಮುಖಕ್ಕೆ ಹೊಡೆದಂಗ ಹೇಳ್ರಿ ಎಂದಳು ಅಂಬಿಕಾ.

ಇದಕ್ಕ ಅವರು ಒಪ್ಪಿ ಸುಮ್ಮನ ಆಗ್ತಾರೇನು? ರುದ್ರಮ್ಮ ಸಂಶಯ ವ್ಯಕ್ತ ಪಡಿಸಿದಳು.

ಅವರು ಒಪ್ಪಿದ್ರೇನು, ಬಿಟ್ರೇನು? ಅವರಿಗೆ ಯಾವ ಅಧಿಕಾರ ಐತೆಂತ ಹೀಂಗ ಕೇಳ್ಲಿಕತ್ಯಾರ? ಅವರಿಗೆ ಯಾವ ಅಧಿಕಾರವೂ ಇಲ್ಲ ತಿಳುಕೋ ನೀ. ಅವ್ರೇನಾದ್ರೂ ಇನ್ನೊಂದು ಸಲ ಆಸ್ತಿಯ ಮಾತೆತ್ತಿದ್ರೆ ಅವ್ರನ್ನು ನಮ್ಮ ಹತ್ರ ಕಳುಹಿಸಿಕೊಡ್ರಿ. ನಾವೆಲ್ಲಾ ಅವ್ರಿಗೆ ತಿಳಿಸಿ ಹೇಳ್ತೀವಿ. ನೋಡವಾ, ಹಂಗ ನಾ ಇನ್ನೊಂದು ಮಾತ ಹೇಳ್ತೀನಿ. ನಾ ಹೀಂಗ ಹೇಳ್ತಿನಂತ ಬ್ಯಾಸರ ಮಾಡಿಕೋ ಬ್ಯಾಡ. ನಿನಗ, ಮಾಮನಿಗೆ ಅಷ್ಟು ಬ್ಯಾಸರ ಆಗಿದ್ರ ನಮ್ಮಲ್ಲಿಗೇ ಬಂದು ಬಿಡ್ರಿ. ನಿಮ್ಮಿಬ್ರಿಗೂ ಹೊಟ್ಟೆ, ಬಟ್ಟೆಗೆ ನೋಡಿಕೊಳ್ಳೊದಕ್ಕ ನಮಗೆ ಆಗೋದಿಲ್ಲೇನು? ಮಾಮಗೆ ನಾ ತಿಳಿಸಿ ಹೇಳ್ತೀನಿ. ಹಾಂಗ ಕುಡಿತದ ಬಗ್ಗೆನೂ ಆತನಿಗೆ ಪಾಠ ಹೇಳ್ತಿನಿ. ನೀವಿಬ್ರೂ ಲವಲವಿಕೆಯಿಂದ ಇರ್ಬೇಕೆಂದು ನನ್ನ ಮನವಿ. ಎಂದಳು ಅಂಬಿಕಾ ಹೃದಯ ತುಂಬಿ.

ಆಯ್ತು ಬಿಡವ್ವಾ, ನೀ ಇಷ್ಟು ಹೇಳ್ತಿದಿಯೆಂದ ಮ್ಯಾಲ ನಾ ಕೇಳಂಗಿಲ್ಲೇನವಾ? ನಿನ್ನ ಮಾತಿಂದ ನನಗಂತೂ ಬಾಳ ಸಂತೋಷ ಆಗೈತೆ. ನಮ್ಮವರೆನ್ನುವವರು ಇದ್ದಾರಲ್ಲ ಅಂತ ಒಂದು ರೀತಿ ಖುಷಿ ಆಗ್ಲಿಕ್ಕತ್ಯದ. ನಿನ್ನ ಮಾತು ಕೇಳಿ ನನಗಂತೂ ಎದೆ ಭಾರ ಇಳಿದಂಗಾತು. ನಿನ್ನ ಮಾವನಿಗೂ ನೀ ಸ್ವಲ್ಪ ಧೈರ್ಯ ಹೇಳವ್ವಾ? ನಮ್ಮ ಮೂರೂ ಜನ ಮಕ್ಕಳೂ, ಅಳಿಯಂದ್ರೂ ಆಸ್ತಿಯ ಲೆಕ್ಕಾಚಾರದಲ್ಲಿ ಮುಳುಗಿರುವಾಗ ನಿನ್ನ ಮಾತು ಕೇಳಿ ನಂಗ ಹೋಳಿಗೆ ತುಪ್ಪ ಉಂಡಂಗಾತವ. ಎಂದು ಹೃದಯ ತುಂಬಿ, ಕಣ್ತುಂಬಿ ಹೇಳುತ್ತಾ ರುದ್ರಮ್ಮ ಅಂಬಿಕಾಳನ್ನು ಬಿಗಿದಪ್ಪಿದಳು.

ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು (9448989332)

No comments:

Post a Comment

Thanku