Sunday, October 16, 2011

ಮನಸ್ಸಿದ್ದರೆ ಮಾರ್ಗ

ಸಮಯ ರಾತ್ರಿ ಏಳುವರೆ ಗಂಟೆ ದಾಟಿತ್ತು. ಆಫೀಸಿನ ಕೆಲಸದ ನಿಮಿತ್ಯ ಸುಯೋಗ ಬೆಂಗಳೂರಿಗೆ ಹೋಗಬೇಕಾಗಿತ್ತು. ಆಫೀಸಿನಲ್ಲಿದ್ದಾಗ ಮಧ್ಯಾಹ್ನ ಹೆಡ್ ಆಫೀಸಿನಿಂದ ಸುದ್ದಿ ಬಂದಾಗ ರಾತ್ರಿ ಒಂಭತ್ತು ಗಂಟೆಯ ವೋಲ್ವೋ ಬಸ್ಸಿಗೆ ರಿಜವರ್ೇಷನ್ ಮಾಡಿಸಿದ್ದ. ನಾಳೆ ಶನಿವಾರದ ದಿನ ಮೀಟಿಂಗ್ಗೆ ಹಾಜರಾಗಬೇಕಿತ್ತು. ಹಾಗೆಯೇ ನಾಳೆಯ ಅದೇ ವೋಲ್ವೋ ಬಸ್ಸಿಗೆ ರಿಟರ್ನ ಜನರ್ಿಗೂ ರಿಜವರ್ೇಷನ್ ಮಾಡಿಸಿದ್ದ ಸುಯೋಗ. ಸುಮಾರು ಎಂಟರಿಂದ ಒಂಭತ್ತು ಗಂಟೆಯ ಪ್ರಯಾಣ.

ಸುಯೋಗನ ಮನದೊಡತಿ, ಮನೆಯೊಡತಿ, ಮನದನ್ನೆ ಪತ್ನಿ ಸಾಹಿತ್ಯ ನಾಲ್ಕು ವರ್ಷದ ಮುದ್ದಿನ ಮಗಳು ಸೃಷ್ಟಿಯೊಂದಿಗೆ ಯಾವುದೋ ಅಜರ್ೆಂಟ್ ಕೆಲಸದ ನಿಮಿತ್ಯ ತನ್ನ ತವರು ಮನೆಗೆ ಎರಡು ದಿನಗಳ ಹಿಂದೆಯೇ ಹೋಗಿದ್ದಳು. ಒಂದು ವಾರದವರೆಗೆ ತವರು ಮನೆಯ ಪ್ರೊಗ್ರಾಂ ಇತ್ತು. ಅಡಿಗೆ ಮಾಡುವುದಕ್ಕೆ ಅಲ್ಪ ಸ್ವಲ್ಪ ಬರುತ್ತಿದ್ದರೂ ಆಫೀಸಿನಿಂದ ರಾತ್ರಿ ದಿನಾಲೂ ಲೇಟ್ ಆಗಿ ಬರುತ್ತಿದ್ದುದರಿಂದ ಹೊರಗಡೆಯೇ ಸುಯೋಗನ ಊಟ ಆಗುತ್ತಿತ್ತು.

ನಾಳೆಗೆ ಬೇಕಾಗುವ ಬಟ್ಟೆ ಬರೆ, ಆಫೀಸಿನ ಫೈಲು ಇನ್ನಿತರ ವಸ್ತುಗಳನ್ನು ಬ್ಯಾಗಿಗೆ ಹಾಕಿಕೊಂಡಿದ್ದ ಸುಯೋಗ. ಮಳೆ ಜಾಸ್ತಿ ಆಗಿರುವುದರಿಂದ ಚಳಿ ಇದ್ದು ಸ್ವೆಟರ್ ಶಾಲು ಸಹ ಇಟ್ಟುಕೊಂಡಿದ್ದ. ಮನೆಯಿಂದ ಬಸ್-ಸ್ಟ್ಯಾಂಡಿಗೆ ಹೋಗುವಾಗ ಬಸ್-ನಿಲ್ದಾಣದ ಹತ್ತಿರದ ಒಳ್ಳೆಯ ಹೋಟೆಲಿನಲ್ಲಿ ಊಟಮಾಡಿ ಬಸ್ಸು ಹಿಡಿಯಬೇಕೆಂದು ನಿರ್ಧರಿಸಿ ಹೊರಡುವ ತಯಾರಿಯಲ್ಲಿದ್ದ.

ಮನೆಯಿಂದ ನೂರು ಹೆಜ್ಜೆ ಹೋದರೆ ಮೇನ್ ರೋಡ್ ಸಿಗುತ್ತೆ. ಅಲ್ಲಿ ಆಟೋ ಹಿಡಿದರಾಯಿತೆಂದುಕೊಂಡು ಹೊರಡುವ ಮುಂಚೆ, ಅಡಿಗೆ ಮನೆಯಲ್ಲಿ ಗ್ಯಾಸ್ ಮೇನ್ ಆಫ್ ಮಾಡಿ, ಕಿಟಕಿಗಳನ್ನು ಹಾಕಿ ಬಾಗಿಲು ಹಾಕಬೇಕೆಂದು ಬ್ಯಾಗನ್ನು ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಮನೆಯ ಕಸ ಮುಸುರೆ ಮಾಡುವ, ಬಟ್ಟೆ ಬರೆ ತೊಳೆಯುವ ರತ್ನಮ್ಮ ಹಾಲಿನಲ್ಲಿ ಪ್ರತ್ಯಕ್ಷಳಾದಳು. ಸುಯೋಗನಿಗೆ ಒಂದು ಕ್ಷಣ ಗಾಬರಿಯಾದಂತಾಯಿತು. ಹೊರಡುವ ಅವಸರದಲ್ಲಿದ್ದುದರಿಂದ ಏನಮ್ಮಾ, ಇಷ್ಟೊತ್ತಿನಲ್ಲಿ ಬಂದಿರುವಿ? ಏನಾದರೂ ಅರ್ಜಂಟ್ ಕೆಲಸವಿತ್ತೇ ಹೇಗೆ? ನಾನು ಬೆಂಗಳೂರಿಗೆ ಹೋಗಬೇಕಾಗಿದೆ ಎಂದು ಸುಯೋಗ ಹೇಳಿದ.

ಏನೂ ಅರ್ಜಂಟ್ ಕೆಲಸವಿಲ್ಲ ಸಾಹೇಬರೇ. ಅಮ್ಮಾವರು ಇಲ್ಲಲ್ರೀ. ಅಡಿಗೆ ಗಿಡಿಗೆ ಮಾಡಿಕೊಡಲೇ ಹೇಗೆ ಅಂತ ಕೇಳಲು ಬಂದೆ ಅಷ್ಟೆ. ಅವಳ ಧ್ವನಿಯಲ್ಲಿ ಒಂದು ರೀತಿಯ ನಡುಕ ಇತ್ತು. ಇಷ್ಟೊತ್ತಿನಲ್ಲಿ ಅವಳು ಮನೆಯಲ್ಲಿ ತನ್ನ ಜೊತೆಯಲ್ಲಿರುವುದನ್ನು ಯಾರಾದರೂ ನೋಡಿದರೆ ಅವರ ಬಾಯಿಗೆ ಆಹಾರವಾಗಬಹುದೆಂದು ಸುಯೋಗನಿಗೆ ಮುಜುಗರವಾಗತೊಡಗಿತು.

ಆಯಿತಮ್ಮಾ, ನೀ ಈಗ ಹೊರಡು. ನಾಳೆ ಕೆಲಸಕ್ಕೆ ಬರಬೇಡ. ನಾಡದು ಬೆಳಿಗ್ಗೆ ಬಾ. ಈಗ ನನಗೆ ಹೊತ್ತಾಗುತ್ತಿದೆ. ಅವಳನ್ನು ಸಾಗಹಾಕಲು ಸುಯೋಗ ಅವಸರ ಪಡಿಸಿದ.

ಆಯಿತು ಸಾಹೇಬ್ರೇ, ಅಲ್ಲಿಯವರೆಗೆ ನಿಮ್ಮ ಬ್ಯಾಗ್ ತಂದು ಕೊಡ್ತೀನಿ.

ಬೇಡಮ್ಮ ನಾನೇ ತೆಗೆದುಕೊಂಡು ಹೋಗುತ್ತೇನೆ. ಇಷ್ಟೊತ್ತಿನಲ್ಲಿ ನೀ ಇಲ್ಲಗೆ ಬಂದಿರುವುದು ಸರಿ ಕಾಣುವುದಿಲ್ಲ. ನೀ ಬೇಗ ಹೊರಡು.

ಪರವಾಗಿಲ್ಲ ಸಾಹೇಬ್ರೇ, ನಾ ಬ್ಯಾಗ್ ಹಿಡಿದುಕೊಳ್ಳ್ತೀನಿ. ಎನ್ನುತ್ತಾ ಸುಯೋಗನ ಮಾತು ಲೆಕ್ಕಕ್ಕೆ ತೆಗೆದುಕೊಳ್ಳದೇ, ಅವನ ಪಕ್ಕಕ್ಕಿದ್ದ ಬ್ಯಾಗ್ನ್ನು ಎತ್ತಿಕೊಳ್ಳಲು ಬಗ್ಗಿದಳು. ಬಗ್ಗುವಾಗ ಬೇಕೆಂತಲೇ ಸೆರಗನ್ನು ಜಾರಿಸಿ ತನ್ನ ತೆರೆದ ತುಂಬಿದೆದೆಯನ್ನು ಸುಯೋಗನ ನಡು ಮತ್ತು ತೊಡೆಗಳಿಗೆ ತೀಡುತ್ತಾ ಬ್ಯಾಗನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಳು. ಸುಯೋಗಗೆ ಒಂದು ಕ್ಷಣ ರೋಮಾಂಚನ, ಗಾಬರಿ ಮತ್ತು ಕಸಿವಿಸಿ. ರತ್ನಮ್ಮಳ ಕೈ ಬ್ಯಾಗಿನ ಮೇಲಿದ್ದರೂ ದೃಷ್ಟಿ ಮಾತ್ರ ಸುಯೋಗನ ದೃಷ್ಟಿ ತನ್ನೆದೆಯ ಮೇಲಿದೆಯೋ ಹೇಗೆ ಎಂದು ನೋಡುತ್ತಿದ್ದಳು.

ಅವಳ ತೆರೆದೆದೆಯ ಸೀಳನ್ನು ನೋಡಿ ಒಂದು ಕ್ಷಣ ಚಂಚಲಗೊಂಡು ಕಸಿವಿಸಿಯಾಗಿದ್ದ ಮನಸ್ಸನ್ನು ಹತೋಟಿಗೆ ತಂದುಕೊಂಡು ಸುಯೋಗ ಏನೂ ಆಗದವನಂತೆ ಏನೂ ಬೇಡಮ್ಮಾ ನೀ ಹೊರಡು. ಬ್ಯಾಗನ್ನು ನಾನೇ ತೆಗೆದುಕೊಳ್ಳುತ್ತೇನೆ. ಎಂದು ಸ್ವಲ್ಪ ಎತ್ತರದ ಧ್ವನಿಯಲ್ಲಿ ಹೇಳಿದ್ದನ್ನು ಗಮನಿಸಿದ ರತ್ನಮ್ಮ, ಬಗ್ಗಿದ್ದವಳು ಮೇಲೆದ್ದು ಸೆರಗನ್ನು ಸರಿಪಡಿಸಿಕೊಳ್ಳುತ್ತಾ, ಆಯಿತು ಸಾಹೇಬ್ರೆ ನಾಡದು ಬರುತ್ತೇನೆ. ಎನ್ನುತ್ತಾ, ಕುಡಿ ನೋಟಬೀರುತ್ತಾ, ಒಲ್ಲದ ಮನಸ್ಸಿನಿಂದ ಬಿರಬಿರನೇ ಹೊರಗೋದಳು. ಅವಳು ಹೋದ ಎರಡು ಮೂರು ನಿಮಿಷಗಳ ನಂತರ ಸುಯೋಗ ಮನೆಗೆ ಬೀಗ ಹಾಕಿ, ಬ್ಯಾಗ್ ಹಿಡಿದು ರಸ್ತೆಗಿಳಿದು, ಸಿಕ್ಕ ಆಟೋ ಹಿಡಿದು ಬಸ್ಸ್ ನಿಲ್ದಾಣದ ಕಡೆಗೆ ಹೊರಟ.

ಬಸ್ಸ್ ನಿಲ್ದಾಣದ ಪಕ್ಕದ ಒಳ್ಳೆಯ ಹೋಟೆಲಿನಲ್ಲಿ ಊಟಮಾಡಿ, ಬಸ್ಸು ಏರಿ ಕಿಟಕಿಯ ಪಕ್ಕದ ತನ್ನ ಸೀಟಿನಲ್ಲಿ ಕುಳಿತಾಗ ಸುಯೋಗನಿಗೆ ಹಾಯೆನಿಸಿತ್ತು. ಮನಸ್ಸಿಗೆ ಒಂದು ತರಹ ನಿರಾಳ. ಬಸ್ಸು ನಿಗದಿತ ಸಮಯಕ್ಕೆ ಹೊರಟಾಗ ಕಣ್ಣು ಮುಚ್ಚಿ ನಿದ್ದೆ ಮಾಡಲು ಪ್ರಯತ್ನಿಸಿದ. ಊರನ್ನು ದಾಟುತ್ತಿದ್ದಂತೆ ಬಸ್ಸು ತನ್ನ ವೇಗವನ್ನು ಹೆಚ್ಚಿಸಿಕೊಂಡಂತೆ ಸುಯೋಗನ ಮನಸ್ಸು ಅಂದಿನ ಸಾಯಂಕಾಲದ ಘಟನೆಯ ವಿಮಶರ್ೆ ನಡೆಸಿತು. ರತ್ನಮ್ಮಳ ನಡತೆ ಯಾಕೊ ಅನುಮಾನಕ್ಕೆಡೆಮಾಡಿಕೊಟ್ಟಿತ್ತು. ಅಷ್ಟೊತ್ತಿನಲ್ಲಿ ಆಕೆ ಬಂದದ್ದೇಕೆ? ತಾನಂತೂ ಆಕೆಗೆ ಬರಲು ಹೇಳಿರಲಿಲ್ಲ. ಬಂದ ಉದ್ದೇಶವೇನು? ಒಂದೂ ಸ್ಪಷ್ಟವಾಗುತ್ತಿಲ್ಲ.

ರತ್ನಮ್ಮಳ ವ್ಯಕ್ತಿತ್ವ, ವೇಷ-ಭೂಷಣಗಳ ಬಗ್ಗೆ ಸುಯೋಗನ ಮನಸ್ಸು ತಿಳಿಯಲು ಪ್ರಯತ್ನಿಸುತ್ತಿತ್ತು. ಹೌದು ಇಂದು ಸಾಯಂಕಾಲ ಬಂದಾಗ ಆಕೆ ಒಪ್ಪವಾಗಿ ತಲೆ ಬಾಚಿಕೊಂಡು ನೀಟಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಳು. ರತ್ನಮ್ಮ 25-26ರ ಹರೆಯದ ಹೆಂಗಸು. ಗೋದಿ ಬಣ್ಣ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಆಕರ್ಷಕ ಮೈಮಾಟದ ಹೆಂಗಸು. ಏಳೆಂಟು ವರ್ಷಗಳ ಹಿಂದೆ ಮದುವೆಯಾಗಿದೆಯಂತೆ. ಆದರೂ ಇನ್ನೂ ಮಕ್ಕಳಾಗಿಲ್ಲವೆಂಬ ಕೊರಗು ಇದೆಯಂತೆ. ನಮ್ಮ ಕಾಲೋನಿಯಲ್ಲಿ ಐದಾರು ಮನೆಗಳಲ್ಲಿ ಕಸ ಮುಸುರೆ ಮಾಡುತ್ತಿದ್ದಾಳೆ.

ಆಕೆಯ ಗಂಡ ರಂಗಪ್ಪ ಯಾವುದೋ ದೊಡ್ಡ ಹೋಲ್ಸೇಲ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವನಂತೆ. ಎರಡು ವರ್ಷಗಳಿಂದ ನಮ್ಮ ಮನೆಯ ಕೆಲಸ ಮಾಡುತ್ತಿದ್ದಾಳೆ. ಕೈ ಬಾಯಿ ಶುದ್ಧವಿರುವ ಹೆಂಗಸು ಆಕೆ. ಯಾಕೆಂದರೆ ಸುಯೋಗನ ಮನೆಯಲ್ಲಿನ ಯಾವ ಸಾಮಾನು ಇದುವರೆಗೂ ಮಾಯವಾಗಿಲ್ಲ. ಮರೆತು ದುಡ್ಡು ಗಿಡ್ಡು ಏನಾದರೂ ಟೇಬಲ್ಲಿನ ಮೇಲೆ ಎಷ್ಟೋ ಸಾರೆ ಇಟ್ಟಿದ್ದಿದೆ. ಆದರೆ ಯಾವತ್ತೂ ಏನೂ ಹೋಗಿಲ್ಲ. ಆಕೆಯ ಮೇಲೆ ಸಾಹಿತ್ಯಳಿಗೆ ತುಂಬು ವಿಶ್ವಾಸ. ಕೆಲವೊಂದು ಸಾರೆ ತಿಂಡಿ ಮಾಡಿದಾಗ ರತ್ನಮ್ಮ ಇದ್ದರೆ ಅವಳಿಗೇ ಮೊದಲು ಬಿಸಿ ಬಿಸಿ ತಿಂಡಿ ಕೊಡುತ್ತಿದ್ದಳು ಸಾಹಿತ್ಯ. ಸೃಷ್ಟಿಯೆಂದರೆ ರತ್ನಮ್ಮಳಿಗೆ ಪಂಚ ಪ್ರಾಣ. ಅವಳ ಆಟ, ಪಾಟ, ರಂಪಾಟ, ಹಟ, ತೊದಲುನುಡಿ, ಅವಳ ನಡೆ ಪ್ರತಿಯೊಂದೂ ಇಷ್ಟ. ಕೆಲಸ ಮುಗಿಸಿ ಹೋಗುವವರೆಗೂ ಅವಳ ಜೊತೆ ರತ್ನಮ್ಮಳ ಮಾತು ನಡೆದೇ ಇರುತ್ತಿತ್ತು.

ರತ್ನಮ್ಮಳು ಅಷ್ಟೇ. ಅಲ್ಲಿಯ ಇತರ ಮನೆ ಕೆಲಸದ ಹೆಂಗಸರಂತೆ ಎಲೆ, ಅಡಿಕೆ, ತಂಬಾಕು ಜಿಗಿಯುವುದು, ಗುಟ್ಕಾ ಹಾಕುವುದು, ನಸಿಪುಡಿ ತಿಕ್ಕುವುದು, ಆಗಾಗ್ಗೆ ಗುಂಡು ಹಾಕುವುದು ಇವು ಯಾವ ಚಟಗಳೂ ರತ್ನಮ್ಮಳಿಗಿಲ್ಲ. ಇದ್ದ ಬಟ್ಟೆಗಳನ್ನೇ ನೀಟಾಗಿ ತೊಳೆದುಕೊಂಡು ಉಡುತ್ತಾಳೆ. ಸಾಹಿತ್ಯಳೂ ವರ್ಷಕ್ಕೊಂದೋ ಎರಡೋ ತನ್ನ ಹಳೆಯ ಒಳ್ಳೆಯ ಸೀರೆಗಳನ್ನು ರತ್ನಮ್ಮನಿಗೆ ಕೊಡುವುದರ ಜೊತೆ ಪ್ರತಿ ವರ್ಷದ ದಸರಾ, ಯುಗಾದಿ ಹಬ್ಬಗಳಲ್ಲಿ ಹೊಸ ಸೀರೆಗಳನ್ನೂ ಕೊಡಿಸುತ್ತಾಳೆ. ಸುಯೋಗನ ಕುಟುಂಬದ ಸದಸ್ಯರೆಲ್ಲರಿಗೂ ರತ್ನಮ್ಮನೊಂದಿಗೆ ಆತ್ಮೀಯ ಸಂಬಂಧ ಬೆಸೆದುಕೊಂಡು ಬೆಳೆದುಬಂದಿದೆ. ರತ್ನಮ್ಮನು ಸುಯೋಗನ ಕುಟುಂಬದ ಯಾರಿಗೂ ವಿಶ್ವಾಸ ದ್ರೋಹ ಬಗೆದಿಲ್ಲ. ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರಳಾಗುತ್ತಾ ಮುನ್ನಡೆದಿದ್ದಾಳೆ.

ಸುಯೋಗನ ಮನೆಯ ಕಾಲೋನಿಯಿಂದ ಸುಮಾರು ಮುಕ್ಕಾಲು ಕಿ. ಮೀ. ದೂರದ ಆಶ್ರಯ ಕಾಲೋನಿಯಲ್ಲಿ ಒಂದು ಮನೆಯನ್ನು ಗಿಟ್ಟಿಸಿಕೊಂಡಿದ್ದಾಳೆ ರತ್ನಮ್ಮ. ಹಾಗೆಯೇ ಸಮೀಪದ ಬ್ಯಾಂಕೊಂದರಲ್ಲಿ ಉಳಿತಾಯ ಖಾತೆಯೊಂದನ್ನು ತೆಗೆದು ಗಂಡ ಹೆಂಡಿರ ತಮ್ಮ ಉಳಿತಾಯದ ಹಣವನ್ನು ಅದರಲ್ಲಿ ಜಮಾ ಮಾಡುತ್ತಾ ಬಂದಿದ್ದಾಳೆ.

ಮೊನ್ನೆ ಸಾಹಿತ್ಯ ಊರಿಗೆ ಹೋದ ನಂತರ ರತ್ನಮ್ಮ ಕೆಲಸಕ್ಕೆ ಬಂದಿದ್ದಳು. ಮಾಮೂಲಿನಂತೆ ಎಲ್ಲಾ ಕೆಲಸ ಮುಗಿಸಿ ಹೋಗಿದ್ದಳು. ಆದರೆ ಯಥಾ ರೀತಿ ಬೆಳಿಗ್ಗೆ ಏಳುವರೆಗೆ ಕೆಲಸಕ್ಕೆ ಬಂದಿದ್ದಳು. ಆಕೆ ಕೆಲಸಕ್ಕೆ ಬಂದಾಗ ಸುಯೋಗ ದೈನಂದಿನ ಪ್ರಾತಃವರ್ಿಧಿಗಳನ್ನು ಮುಗಿಸಿ, ಹಲ್ಲುಜ್ಜಿ, ಒಂದು ಕಪ್ ಚಹ ಮಾಡಿಕೊಂಡು, ಟಿ.ವಿ. ಆನ್ ಮಾಡಿಕೊಂಡು ಅಂದಿನ ಪೇಪರು ಓದುತ್ತಿದ್ದ. ದಿನದಂತೆ ರತ್ನಮ್ಮ ಬಂದು ಕಸ ಗುಡಿಸಿ ನೆಲ ಒರೆಸಿದ್ದಳು. ಕಸ ಗುಡಿಸುವಾಗ ಮತ್ತು ನೆಲ ಒರೆಸುವಾಗ ಪೇಪರು ಓದುತ್ತಿದ್ದ ಸುಯೋಗನ ದೃಷ್ಟಿ ಎರಡು ಮೂರು ಸಾರೆ ರತ್ನಮ್ಮನ ಕಡೆಗೆ ಹರಿದಿತ್ತು. ಸುಯೋಗ ನೋಡಿದಾಗಲೆಲ್ಲ ರತ್ನಮ್ಮನ ಸೆರಗು ಎದೆಯ ಮೇಲಿರಲಿಲ್ಲ. ಕೆಲಸದ ಗಡಿಬಿಡಿಯಲ್ಲಿ ಇದು ಮಾಮೂಲು ಎಂದು ಸುಯೋಗ ಅದರ ಬಗ್ಗೆ ವಿಶೇಷ ಅರ್ಥ ಕಲ್ಪಿಸಿರಲಿಲ್ಲ.

ಚಹ ಕುಡಿದ ಬಟ್ಟಲನ್ನು ಸಿಂಕಿನ ಹತ್ತಿರ ಇಟ್ಟು ವಾಪಾಸು ಬರುವಾಗ ಯಾವುದೋ ಕಾರಣಕ್ಕೆ ಸುಯೋಗನ ಎದುರಿಗೆ ಬರುತ್ತಿದ್ದ ರತ್ನಮ್ಮ ತನ್ನೆದೆಯ ಮೇಲಿದ್ದ ಸೆರಗನ್ನು ಪೂತರ್ಿ ತೆಗೆದು ಝಾಡಿಸಿದಂತೆ ಮಾಡಿ ಪುನಃ ಎದೆಯ ಮೇಲೆ ಹಾಕಿಕೊಡಿದ್ದಳು. ಆಗಲೂ ಸುಯೋಗ ಅದಕ್ಕೆ ಯಾವುದೇ ಅರ್ಥ ಕಂಡು ಕೊಂಡಿರಲಿಲ್ಲ. ಇಂದು ಬೆಳಿಗ್ಗೆಯ ಘಟನೆಯ ನಂತರ ಅವಳ ಪ್ರತಿಯೊಂದು ಚಲನವಲನಗಳನ್ನೂ ಸುಯೋಗ ತುಲನೆಮಾಡತೊಡಗಿದ. ರಸ್ತೆಯಲ್ಲಿ ಯಾವುದೋ ಗಾಡಿ ಅಡ್ಡ ಬಂದುದರಿಂದ ಚಾಲಕ ತಕ್ಷಣ ಬ್ರೇಕ್ ಹಾಕಿದುದರಿಂದ ಬಸ್ಸು ಒಮ್ಮಿಂದೊಮ್ಮೆಲೇ ನಿಂತ ಹಾಗಾಯಿತು. ಹಾಗೆಯೇ ಸುಯೋಗನ ವಿಚಾರ ಲಹರಿಗೂ ತಡೆ ಬಿದ್ದಾಂತಾಯಿತು. ಕಾದು ನೋಡಿದರಾಯಿತು. ಅವಶ್ಯಕತೆಬಿದ್ದರೆ ಆಕೆಗೆ ಸರಿಯಾದ ರೀತಿಯಲ್ಲಿ ಉಪದೇಶವನ್ನೂ ಕೊಟ್ಟರಾಯಿತು ಎಂದು ಮನದಲ್ಲಿಯೇ ಲೆಕ್ಕಾಚಾರ ಹಾಕುತ್ತಾ ನಿದ್ದೆಗೆ ಜಾರಲು ಪ್ರಯತ್ನಿಸಿದ.

ಮೀಟಿಂಗ್ ಮುಗಿಸಿಕೊಂಡು ರಾತ್ರಿ ಪುನಃ ಅದೇ ವೋಲ್ವೋ ಬಸ್ಸು ಏರಿ ಸುಯೋಗ ತನ್ನೂರಿಗೆ ಬಂದಾಗ ಬೆಳಿಗ್ಗೆ ಆರು ಗಂಟೆ. ಆಟೊ ಹತ್ತಿ ಮನೆಗೆ ಬಂದಾಗ ಆರು ಕಾಲು ಅಷ್ಟೆ. ಬೇಗ ಬೇಗ ಟಾಯಿಲೆಟ್ಟಿಗೆ ಹೋಗಿ, ಬ್ರಷ್ ಮಾಡಿ ಮುಖ ತೊಳೆದು, ಒಂದು ಕಪ್ ಚಹ ಮಾಡಿಕೊಂಡು ಕುಡಿದ. ಈಗ ಒಂದೆರಡು ತಾಸು ನಿದ್ದೆ ಮಾಡಿ ಎದ್ದ ನಂತರ ಸ್ನಾನ ಮುಗಿಸಿಕೊಂಡು ಟಿಫಿನ್ ಇಲ್ಲವೇ ಒಂದೇ ಬಾರಿಗೆ ಊಟಕ್ಕೆ ಹೋದರಾಯಿತೆಂದುಕೊಂಡು ಮನದಲ್ಲೇ ಲೆಕ್ಕಹಾಕುತ್ತಾ ಮುಂದಿನ ಬಾಗಿಲ ಬೋಲ್ಟ ಹಾಕಿ ಬೆಡ್ ರೂಮಿಗೆ ನಡೆದ. ಹಾಸಿಗೆಗೆ ಮೈಯೊಡ್ಡುತ್ತಿದ್ದಂತೆ ಬೆಲ್ಲಾಯಿತು. ಏನೋ ರಾತ್ರಿ ಸರಿಯಾಗಿ ನಿದ್ದೆಯಾಗಿದ್ದಿಲ್ಲ. ಈಗಲಾದರೂ ಸ್ವಲ್ಪ ನಿದ್ದೆ ಮಾಡಿದರಾಯಿತೆಂದುಕೊಂಡರೆ ಇವರ್ಯಾರ ಕಾಟವಪ್ಪಾ ಈಗ ಎನ್ನುತ್ತಾ ಒಲ್ಲದ ಮನಸ್ಸಿನಿಂದ ಬಾಗಿಲು ತೆಗೆದ ಸುಯೋಗ. ಬಾಗಿಲಲ್ಲಿ ರತ್ನಮ್ಮ ನಿಂತಿದ್ದಳು. ಮನೆ ಕೆಲಸ ಮಾಡಲು ಮಾಮೂಲಿನಂತೆ ಬಂದಿರುವಳೆಂದು ಅನಿಸಿತು ಸುಯೋಗನಿಗೆ. ಒಂದು ಬಾರಿ ರತ್ನಮ್ಮನನ್ನು ಸೂಕ್ಷ್ಮವಾಗಿ ಅವಲೋಕಿಸಿದ ಸುಯೋಗ.

ಆಗಲೇ ಅವಳು ಸ್ನಾನ ಮಾಡಿಕೊಂಡು ಬಂದಿರುವಂತೆ ತೋರುತ್ತಿತ್ತು. ಸಾಹಿತ್ಯಳ ಹಳೆಯ ಸೀರೆಯಲ್ಲಿ ಮಿಂಚುತ್ತಿದ್ದಳು. ಏನು ರತ್ನಮ್ಮಾ, ಇಂದು ಸ್ನಾನ ಮಾಡಿಕೊಂಡೇ ಬಂದಂತಿದೆ? ಏನು ವಿಶೇಷವಮ್ಮಾ? ಸುಯೋಗ ತಮಾಷೆ ಮಾಡುತ್ತಾ ಪ್ರಶ್ನೆ ಹಾಕಿದ. ಸಾಹೇಬ್ರೇ, ಇವತ್ತು ಯಾಕೋ ಸ್ನಾನ ಮಾಡಿಕೊಂಡೇ ಬರಬೇಕೆಂದು ಅನ್ನಿಸಿತು. ಅದಕ್ಕೇ ಸ್ನಾನ ಮಾಡಿಕೊಂಡೇ ಬಂದೆ ಅಷ್ಟೆ. ವಿಶೇಷವೇನಿಲ್ಲ. ಎಂದು ಹೇಳತ್ತಾ ರತ್ನಮ್ಮ ಕೆಲಸಕ್ಕೆ ತೊಡಗಿಸಿಕೊಂಡಳು. ಏನೋ ಖುಷಿಯಲ್ಲಿದ್ದಂತೆ ಕಾಣುತ್ತಿದ್ದಳು ರತ್ನಮ್ಮ.

ಮಲಗಿ ನಿದ್ದೆ ಮಾಡಬೇಕೆಂಬ ತನ್ನ ಪ್ರೊಗ್ರಾಂನ್ನು ರತ್ನಮ್ಮ ಕಸ ಮುಸುರೆಮಾಡುವವರೆಗೂ ತಾತ್ಕಾಲಿಕವಾಗಿ ಮುಂದೂಡಿ ಟಿ.ವಿ. ಚಾಲೂ ಮಾಡಿ ಅಂದಿನ ಪೇಪರು ಹಿಡಿದುಕೊಂಡು ಕುಳಿತ ಸುಯೋಗ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಮನೆ ಸ್ವಚ್ಛವಾಗಿಯೇ ಇತ್ತು. ರತ್ನಮ್ಮ ಬರ ಬರ ಕಸ ಬಳಿದು ನೆಲ ಒರೆಸಿ ಮನೆ ಕೆಲಸವನ್ನು ಮುಗಿಸುವ ಹಂತದಲ್ಲಿದ್ದಳು. ಅವಳು ಕೆಲಸದಲ್ಲಿ ತೊಡಗಿದ್ದಾಗ ಸುಯೋಗ ಅವಳ ಕಡೆ ಒಂದು ಸಾರೆಯೂ ನೋಡಲಿಲ್ಲ. ತನ್ನ ಪಾಡಿಗೆ ತಾ ಓದುತ್ತಾ ಕುಳಿತಿದ್ದ. ರತ್ನಮ್ಮ ತನ್ನ ಪಾಡಿಗೆ ತನ್ನ ಕೆಲಸದಲ್ಲಿ ತೊಡಗಿದ್ದಳು. ಇನ್ನೇನು ಎರಡು ನಿಮಿಷ, ಕೆಲಸ ಮುಗಿಸಿಕೊಂಡು ಹೊರಡುತ್ತಾಳೆ, ತಾನು ಮಲಗಿ ನಿದ್ದೆ ಮಾಡಬಹುದೆಂದುಕೊಂಡ.

ಬೆಡ್ ರೂಮಿನಲ್ಲಿದ್ದ ಸುಧಾ ವಾರ ಪತ್ರಿಕೆಯನ್ನು ತರಲು ಸುಯೋಗ ಹೆಜ್ಜೆ ಹಾಕಿದ್ದ. ಅದ್ಯಾವ ಮಾಯೆಯಲ್ಲಿ ರತ್ನಮ್ಮ ಬಂದಳೋ ಗೊತ್ತಿಲ್ಲ. ಬೆಡ್ ಮೇಲಿದ್ದ ಸುಧಾ ಪತ್ರಿಕೆಯನ್ನು ತೆಗೆದುಕೊಳ್ಳಲು ಬಗ್ಗಿದ್ದ ಸುಯೋಗನನ್ನು ಹಿಂದಿನಿಂದ ಗಟ್ಟಿಯಾಗಿ ತಬ್ಬಿ ಹಿಡಿದ ರತ್ನಮ್ಮ ತನ್ನೆದೆಯನ್ನು ಸುಯೋಗನ ಬೆನ್ನಿಗೆ ತಿಕ್ಕತೊಡಗಿದಳು. ಸುಯೋಗನಿಗೆ ಗಾಬರಿ, ತಬ್ಬಿಬ್ಬು, ಕಳವಳ, ಹಾಗೂ ಒಂದು ರೀತಿಯ ಭಯ. ರತ್ನಮ್ಮನ ಆಕ್ರಮಣವನ್ನು ನಿರೀಕ್ಷಿಸಿರಲಿಲ್ಲ. ಒಂದು ರೀತಿಯ ಉಸಿರು ಕಟ್ಟಿದ ವಾತಾವರಣ ಸುಯೋಗನಿಗೆ. ಆಕೆಯಿಂದ ಬಿಡಿಸಿಕೊಳ್ಳಲು ಸುಯೋಗ ಕೊಸರಾಡಿದ. ಆದರೆ ಆಗಲಿಲ್ಲ. ರತ್ನಮ್ಮಳ ಪಟ್ಟು ಬಹಳ ಗಟ್ಟಿಯಾಗಿತ್ತು. ಈ ಆಘಾತದಿಂದ ಕ್ಷಣಾರ್ಧದಲ್ಲಿ ಸುಧಾರಿಸಿಕೊಂಡ ಸುಯೋಗ. ಏ....ಏಯ್ ಏನು ಮಾಡುತ್ತಿರುವಿ ರತ್ನಮ್ಮ, ಇದು ಸರಿಯಲ್ಲ ಬಿಡು ನನ್ನನ್ನು. ನೀನು ಮಾಡುತ್ತಿರುವುದು ಒಳ್ಳೆಯದಲ್ಲ. ತೊದಲುತ್ತಾ ಏದುಸಿರು ಬಿಡುತ್ತಾ ಸುಯೋಗ ಬಡ ಬಡಿಸಿದ.

ಸಾಹಿತ್ಯಳನ್ನು ಬಿಟ್ಟು ಇನ್ನೊಂದು ಹೆಣ್ಣಿನ ದೇಹದ ಸ್ಪರ್ಶವನ್ನು ಸುಯೋಗ ಮಾಡಿರಲಿಲ್ಲ ಜೀವನದಲ್ಲಿ. ಸಾಹಿತ್ಯ ಸುಯೋಗ ಪರಸ್ಪರರಲ್ಲಿ ಸ್ವರ್ಗ ಕಂಡುಕೊಂಡಿದ್ದರು. ಅಂಥಹ ಅನ್ಯೋನ್ಯತೆ ಇಬ್ಬರಲ್ಲಿ. ಹೀಗಿರುವಾಗ ಇನ್ನೊಂದು ಹೆಣ್ಣಿನ ಕಡೆಗೆ ಸುಯೋಗನ ಮನಸ್ಸೆಂದೂ ಹರಿದಿರಲಿಲ್ಲ.

ನೋಡ್ರೀ ಸಾಹೇಬ್ರ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಲ್ಲಾ ನನಗೆ ಗೊತ್ತೈತಿ. ಈ ಜಗತ್ತಿನ್ಯಾಗ ಯಾವುದೂ ಒಳ್ಳೆಯದಿಲ್ಲ, ಯಾವುದೂ ಕೆಟ್ಟದಿಲ್ಲ. ನಾವು ಮಾಡೋದೆಲ್ಲಾ ನಮ ನಮಗೆ ಒಳ್ಳೇದೇ. ಬೇರೆಯವರಿಗೆ ಕೆಟ್ಟದಂತ ಅನಿಸಬಹುದು. ಆಕೆ ಇನ್ನೂ ಏನೋ ಹೇಳುತ್ತ ಇದ್ದಳು. ಅವಳ ಮಾತನ್ನು ಅಲ್ಲಿಗೇ ತಡೆದು ಸುಯೋಗ, ನೋಡು ರತ್ನಮ್ಮಾ, ಅದು ನಿನ್ನ ಅಭಿಪ್ರಾಯ ಅಷ್ಟೆ. ನಿನ್ನನ್ನು ನಾ ಆ ದೃಷ್ಟಿಲೀ ಯಾವತ್ತೂ ನೋಡಿಲ್ಲ. ನಿನ್ನ ಬಗ್ಗೆ ನನಗೆ ಒಳ್ಳೆಯ ಭಾವನೆ ಇದೆ. ನನ್ನನ್ನು ಬಿಟ್ಟು ಬಿಡು. ಎಂದು ಹೇಳುತ್ತಲಿದ್ದ.

ನೋಡ್ರೀ ಸಾಹೇಬ್ರ, ನಿಮ್ಮನ್ನೂ ಸಹ ನಾ ಎಂದೂ ಆ ಭಾವನೆಯಾಗ ನೋಡಿಲ್ಲ. ನೀವೆಷ್ಟು ಒಳ್ಳೆಯವರೆಂದು ನನಗೆ ಗೊತ್ತು. ಈಗ ಅದೆಲ್ಲಾ ನನಗೆ ಬ್ಯಾಡ. ನನಗೆ ಬೇಕಾಗಿರುವುದು ಒಂದು ಮಗು ಅಷ್ಟೆ. ನೀವು ಅಷ್ಟು ಸಹಾಯ ಮಾಡಿದ್ರ ಸಾಕು. ಸಾಯೋಮಟ ನಿಮ್ಮನ್ನು ನೆನೆಸಿಕೊಳ್ತೀನಿ.

ಅಲ್ಲ ರತ್ನಮ್ಮಾ ಮಗು ಕೊಡಲಿಕ್ಕೆ ನಿನ್ನ ಗಂಡ ಇದ್ದಾನ. ನಾ ಯಾವಾಗಲೂ ನಿನ್ನ ತಂಗಿ ಅಂತ ತಿಳಿದು ಕೊಂಡೀನಿ.

ನೋಡ್ರೀ ತಂಗೀ ಗಿಂಗೀ ಎಂದು ನನ್ನ ಮೈ ಮನ ಎರಡನ್ನೂ ಕಟ್ಟಿ ಹಾಕಬ್ಯಾಡ್ರಿ. ಈ ಅವಕಾಶಕ್ಕಾಗಿ ಭಾಳ ದಿನಗಳಿಂದ ಕಾದುಕೊಂಡು ಕುಳಿತಿದ್ದೆ. ನಿನ್ನೆ ರಾತ್ರೀನೇ ನಿಮ್ಮ ಜೊತೆ ಕೂಡಬೇಕೆಂದಿದ್ದೆ. ಆದರೆ ನೀವು ಬೆಂಗಳೂರಿಗೆ ಹೋಗುವ ಅವಸರದಲ್ಲಿದ್ರಿ. ನಿನ್ನೆ ಭಾಳ ನಿರಾಸೆಯಿಂದ ನಾ ವಾಪಾಸು ಹೋದೆ. ಅಮ್ಮಾ ಅವರು ಇಲ್ಲದ್ದು ನೋಡಿಕೊಂಡೇ ಇಂದು ಪುನಃ ಬೆಳಿಗ್ಗೇನೇ ಸ್ನಾನ ಮಾಡಿಕೊಂಡೇ ತಯಾರಾಗಿ ಬಂದಿದ್ದೇನೆ. ನಿಮ್ಮ ದಮ್ಮಯ್ಯ ಅನ್ನುವೆ. ಇಲ್ಲ ಅನ್ನಬೇಡ್ರಿ, ಅಮ್ಮಾ ಅವರಿಗೆ ಈ ವಿಷಯ ತಿಳಿಯದ ಹಾಗೆ ನೋಡಿಕೊಳ್ತೀನಿ. ಇವತ್ತು ಮಾತ್ರ ನಾ ಹಾಂಗ ಹೋಗೋದಿಲ್ಲ.

ರತ್ನಮ್ಮಾ ನಮ್ಮ ಸಮಾಜದಲ್ಲಿ ಪಾವಿತ್ರತೆಗೆ ಬೆಲೆ ಇದೆ. ಪವಿತ್ರ ಸಂಬಂಧಕ್ಕೆ ತೂಕ ಇದೆ. ಅಣ್ಣ-ತಂಗಿ ಸಂಬಂಧಕ್ಕೆ ಬಹಳ ಮಹತ್ವವಿದೆ. ಕ್ಷಣಿಕದ ಸುಖಕ್ಕೆ ಪವಿತ್ರ ಸಂಬಂಧವನ್ನು ಹಾಳುಮಾಡಿಕೊಂಡು ಜೀವನ ಪರ್ಯಂತ ಕೊರಗುವಂತಾಗಬಾರದು. ನನ್ನನ್ನು ನಿನ್ನ ಸ್ವಂತ ಅಣ್ಣನೆಂದೇ ತಿಳಿದುಕೊ. ನಿನ್ನದೇನು ಸಮಸ್ಯೆ ಇದ್ದರೂ ಪರಿಹರಿಸೋಣ. ತಾಳ್ಮೆ ಇರಲಿ. ದೇವರು ಎಲ್ಲಾ ಒಳ್ಳೇದು ಮಾಡ್ತಾನೆ.

ಯಾ ದೇವ್ರೋ ಏನೋ? ಅವ ಎಲ್ಲಿರುವನೋ ಏನೋ? ನನಗಂತೂ ಇದುವರೆಗೆ ಕಂಡಿಲ್ಲ. ನನ್ನ ಪಾಲಿಗಂತೂ ದೇವರಿಲ್ಲಂತ ಅನಸಕತ್ತೈತಿ. ಅವ ಇದ್ರ ಇಷ್ಟೊತ್ತಿಗೆ ನನ್ನ ಹೊಟ್ಟ್ಯಾಗ ಒಂದು ಕೂಸು ಹಾಕತಿದ್ದ.

ನಂಬಿಕೆ ಇರಲಿ ತಂಗೆಮ್ಮಾ. ಎಲ್ಲಾ ಸರಿ ಹೋಗುತ್ತೆ. ನಿನ್ನ ಸಮಸ್ಯೆಗೆ ನಾ ಪರಿಹಾರ ಹುಡುಕಿ ಕೊಡುತ್ತೇನೆ. ಈಗ ನನ್ನನ್ನು ಬಿಡು. ಕೂತು ಮಾತಾಡೋಣ.

ರತ್ನಮ್ಮಳಿಗೆ ಏನನ್ನಿಸಿತೋ ಏನೋ ಅಣ್ಣಾ ಎನ್ನುತ್ತಾ ತನ್ನ ಪಟ್ಟನ್ನು ಸಡಿಲಿಸಿ ಜರ್ರಂತ ಕೆಳಗಿಳಿದು ಸುಯೋಗನ ಮೊಣಕಾಲಿನಲ್ಲಿ ತನ್ನ ಮುಖ ಹುದುಗಿಸಿ ಅಳಲು ಪ್ರಾರಂಭಿಸಿದಳು. ಅವಳ ತಲೆಯಲ್ಲಿ ಕೈ ಯಾಡಿಸುತ್ತಾ ಅವಳನ್ನು ಮೇಲಕ್ಕೆಬ್ಬಿಸಿ ಹಾಲಿಗೆ ಕರೆದುಕೊಂಡು ಬಂದ ಸುಯೋಗ. ಬೆಡ್ ರೂಮಿಗೆ ಬರುವಾಗ ರತ್ನಮ್ಮ ಹಾಕಿದ್ದ ಮುಂಬಾಗಿಲನ್ನು ತೆಗೆದು ಸೋಫಾದಲ್ಲಿ ಕುಳಿತುಕೊಂಡ. ಮೊದಲನೇ ಅಂತಸ್ತಿನ ಕಟ್ಟಡವಾದುದರಿಂದ ರಸ್ತೆಯಲ್ಲಿ ಹೋಗುವವರಿಗೆ ಅವರು ಕಾಣುತ್ತಿರಲಿಲ್ಲ. ಅಲ್ಲಿನ ಕುಚರ್ಿಯೊಂದರಲ್ಲಿ ಕುಳಿತುಕೊಳ್ಳಲು ಒತ್ತಾಯ ಮಾಡಿದರೂ ಅವಳು ಅದರಲ್ಲಿ ಕೂಡದೇ ಸುಯೋಗನ ಕಾಲುಗಳ ಹತ್ತಿರ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಬೇಡಮ್ಮಾ, ಅಕಸ್ಮಾತ್ತಾಗಿ ಯಾರಾದರೂ ಬಂದರೆ ಅಪಾರ್ಥಕ್ಕೆ ಕಾರಣವಾಗುತ್ತದೆ.ಎಂದು ಅವ ಹೇಳಿದ್ದಕ್ಕೆ ದೂರಕ್ಕೆ ಸರಿದು ಅಳುತ್ತಾ ಕುಳಿತಳು.

ಸುಯೋಗ ರತ್ನಮ್ಮಳ ಕಡೆ ಒಮ್ಮೆ ದೃಷ್ಟಿ ಹರಿಸಿದ. ರತ್ನಮ್ಮ ಮೈ ತುಂಬಾ ಸೆರಗು ಹೊದ್ದುಕೊಂಡು ಗೌರಮ್ಮನಂತೆ ಮುದ್ದಾಗಿ ಕಾಣುತ್ತಿದ್ದಳು. ಅಳುತ್ತ, ಕಣ್ಣೀರು ಒರೆಸಿಕೊಳ್ಳತ್ತಾ ಕೂತಿದ್ದರಿಂದ ಕೆಂಪು ಕೆಂಪಾಗಿ ಕಾಣುತ್ತಿದ್ದ ಅವಳ ಮುಖದ ಚೆಲುವು ಇಮ್ಮಡಿಸಿತ್ತು. ಅಳುತ್ತಾ ರತ್ನಮ್ಮ ತನ್ನ ಸಂಸಾರದ ಕತೆ ಹೇಳತೊಡಗಿದಳು.

ರತ್ನಮ್ಮ-ರಂಗಪ್ಪಾ ಅವರ ಮದುವೆಯಾಗಿ ಎಂಟು ವರ್ಷಗಳಿಗೆ ಸಮೀಪಿಸಿದೆ. ಎಲ್ಲಾ ರೀತಿಯಿಂದ ನೋಡಿದರೆ ಇಬ್ಬರದೂ ಓವರ್ ಆಲ್ ಸುಖೀ ಸಂಸಾರವೆಂದು ಹೇಳಬಹುದು. ಮದುವೆಯಾದ ಎರಡು ಮೂರು ವರ್ಷಗಳಲ್ಲಿ ಮಕ್ಕಳಾಗದಾಗ ಅವರಲ್ಲಿ ಒಂದು ರೀತಿಯ ಆತಂಕ, ಕಳವಳ ಶುರುವಾಯಿತು. ಕಾಲ ಕಳೆದಂತೆಲ್ಲಾ, ವರ್ಷಗಳು ಉರುಳಿದಂತೆಲ್ಲಾ, ಆತಂಕ ಕಳವಳ ಜಾಸ್ತಿಯಾಗುತ್ತಾ ಹೋಯಿತು. ಜೊತೆಗೆ ನಿರಾಶೆಯ ಮೋಡಗಳು ಅವರ ಸುತ್ತ ಕವಿಯತೊಡಗಿದವು. ಅವರ ಸಂಸಾರದಲ್ಲಿದ್ದ ಮೊದಲಿನ ಉತ್ಸಾಹ, ಆಸಕ್ತಿ, ತೀವ್ರತೆ, ತುಡಿತ, ಪರಸ್ಪರ ಆಕರ್ಷಣೆ ಕಡಿಮೆಯಾಗುತ್ತಾ ಹೋದವು. ತನ್ನ ಗಂಡ ರಂಗಪ್ಪನಿಂದ ತನ್ನ ಹೊಟ್ಟೆಯಲ್ಲಿ ಒಂದು ಹುಳುವೂ ಮಿಸುಕಾಡಲಿಲ್ಲವಲ್ಲ ಎಂಬ ಚಿಂತೆ, ಕಳವಳ, ಕೊರಗು ರತ್ನಮ್ಮಳಿಗೆ. ಸಂಬಂಧಿಕರ, ಪಕ್ಕದ ಮನೆಯವರ, ಹಿತೈಷಿಗಳ ಆಶಯದಂತೆ ಹಲವಾರು ದೇವರುಗಳಲ್ಲಿ ಮೊರೆಯಿಟ್ಟರು. ಆಸ್ಪತ್ರೆಯಲ್ಲೂ ತಪಾಸಣೆ ಆಯಿತು. ಯಾವ ದೇವರುಗಳೂ ಇವರ ಪಾಲಿಗೆ ಬರಲಿಲ್ಲ. ಆಸ್ಪತ್ರೆಯ ವರದಿಗಳ ಪ್ರಕಾರ ಇಬ್ಬರಲ್ಲೂ ಯಾವುದೇ ದೋಷವಿರಲಿಲ್ಲ. ಎಲ್ಲರ ಹೇಳಿಕೆ ಒಂದೇ. ಕಾಲ ಕೂಡಿ ಬರಬೇಕು. ಕಾಲ ಕೂಡಿಬಂದಾಗ ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲವೆಂದು.

ಇತ್ತೀಚಿಗೆ ಮೂರು ತಿಂಗಳುಗಳಿಂದ ರತ್ನಮ್ಮಳು ಇನ್ನೂ ಹೆಚ್ಚಿಗೆ ವ್ಯಾಕುಲಗೊಂಡಿದ್ದಾಳೆ. ಏಕೆಂದರೆ ರಂಗಪ್ಪ ಗುಟ್ಕಾ ತಿನ್ನುವುದು ಹೆಚ್ಚಿಗೆ ಮಾಡಿದ್ದಾನೆ. ಹಾಗೆಯೇ ವಾರದಲ್ಲಿ ನಾಲ್ಕೈದು ದಿನ ಕುಡಿದು ಮನೆಗೆ ಬರಲಾರಂಭಿಸಿದ್ದಾನೆ. ಆಕೆಯ ಓಣಿಯ ಜನ ಮಾತನಾಡುವುದನ್ನು ಕೇಳಿಸಿಕೊಂಡು ಕಳವಳಕ್ಕೀಡಾಗಿದ್ದಾಳೆ. ಏನೆಂದರೆ ಈ ರೀತಿ ಹೆಚ್ಚಿಗೆ ಗುಟ್ಕಾ ತಿನ್ನುವವರಿಗೆ ಮತ್ತು ಕುಡಿಯುವವರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುತ್ತದೆಯೆಂದು. ಗಂಡನಿಗೆ ಈ ಚಟಗಳನ್ನು ಬಿಡಿಸಲು ರತ್ನಮ್ಮ ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಫಲ ಮಾತ್ರ ಸಿಕ್ಕಿರಲಿಲ್ಲ. ತನ್ನ ಹಣೆ ಬರಹವೇ ಖೊಟ್ಟಿಯಿದೆಯೆಂದು ಪೇಚಾಡಿಕೊಳ್ಳುತ್ತಿದ್ದಳು. ಈ ಚಟಗಳು ಬಲಿತ ನಂತರ ರಂಗಪ್ಪನಿಗೆ ರತ್ನಮ್ಮನ ಜೊತೆ ಪ್ರೀತಿ ಅಷ್ಟಕ್ಕಷ್ಟೆ. ಗಂಡ ಹೆಂಡಿರ ಸಂಸಾರವೇ ಚೆನ್ನಾಗಿ ನಡೆಯದಿರುವಾಗ ಮಕ್ಕಳೇಗೆ ಹುಟ್ಟುತ್ತವೆಯೆಂಬುದು ರತ್ನಮ್ಮಳ ತರ್ಕ. ತನ್ನ ಸುಂದರ ಯೌವನ ಹೀಗೇ ಬಂಜರಾಗಿ ಬಿಡುತ್ತದೇನೋ ಎಂಬ ಅಳುಕು ಅವಳ ಮನದಲ್ಲಿ.

ಟಿ.ವಿ.ಯಲ್ಲಿ ಬರುವ ಹಲವಾರು ಧಾರಾವಾಹಿಗಳನ್ನು ರತ್ನಮ್ಮ ದಿನಾಲೂ ನೋಡುತ್ತಿದ್ದಾಳೆ. ಕೆಲವೊಂದು ಧಾರಾವಾಹಿಗಳಲ್ಲಿ ಒಬ್ಬ ಹೆಂಗಸು ಎರಡು ಮೂರು ಗಂಡಸರ ಸಂಗ ಬೆಳೆಸಿ ರಾಜಾರೋಷವಾಗಿ ತಿರುಗುವುದು, ಹಾಗೇಯೇ ಒಬ್ಬ ಗಂಡಸು ಇಬ್ಬರು ಮೂವರು ಹೆಂಗಸರ ಸಂಬಂಧ ಬೆಳೆಸುವುದು ನೋಡೀ, ನೋಡೀ, ತಾನೂ ಸಹ ಇಂಥಹ ಪ್ರಯೋಗವೇಕೆ ಮಾಡಬಾರದೆಂದು ಯೋಚಿಸಿದ್ದಾಳೆ ಹಲವಾರು ಸಾರೆ. ಇಂಥಹ ಯೋಚನೆಗಳ ಪ್ರಯೋಗದ ಫಲವೇ ಸುಯೋಗನೊಂದಿನ ಇಂದಿನ ಅವಳ ಸಾಹಸ. ತನ್ನ ರೂಪ, ಯೌವನದ ಸುಂದರ ಶರೀರಕ್ಕೆ ಸುಯೋಗ ಮಾರು ಹೋಗಬಹುದೆಂದು ಅವಳು ಹಾಕಿದ್ದ ಲೆಕ್ಕಾಚಾರ ಫಲಿಸಲಿಲ್ಲ.

ನೋಡು ರತ್ನಮ್ಮಾ ನಿನ್ನಂಥಹ ಚೆಲುವೆ ಹೆಂಗಸು ಕಣ್ಸನ್ನೆ ಮಾಡಿದರೇ ಸಾಕಷ್ಟು ಜನ ಗಂಡಸರು ನಿನ್ನ ಹಿಂದೆ ಬೀಳಬಹುದು. ನಿನ್ನ ಹೆಣ್ತನ ಹಾಳು ಮಾಡಿ ಪಾವಿತ್ರ್ಯತೆ ಸೂರೆ ಮಾಡಿಬಿಡಿತ್ತಾರೆ. ನೀನು ಯಾವಾಗಲೂ ಉಡಿಯಲ್ಲಿ ಬೆಂಕಿಯನ್ನು ಇಟ್ಟುಕೊಂಡು ಅಡ್ಡಾಡುತ್ತಿರುವಿ. ಬಹಳ ಹುಷಾರಾಗಿರಬೇಕು. ನಾಳೆ ಸಾಯಂಕಾಲ ಸಾಹಿತ್ಯ, ಸೃಷ್ಟಿ ಬರುತ್ತಾರೆ. ಹೇಗೂ ನಾಡದು ನಿನ್ನ ಗಂಡನಿಗೆ ಮಾಕರ್ೆಟ್ ಬಂದ್ ಇರುವುದರಿಂದ ವಾರದ ರಜೆ ಇರುತ್ತದೆ. ಸಾಯಂಕಾಲ ಏಳು ಗಂಟೆ ಸುಮಾರಿಗೆ ಇಬ್ಬರೂ ನಮ್ಮ ಮನೆಗೆ ಬನ್ನಿರಿ. ನಾನೂ ಆಫೀಸಿನಿಂದ ಬೇಗ ಬರುತ್ತೇನೆ. ನಾವೆಲ್ಲಾ ತಿಳಿಸಿ ಹೇಳಿ ನಿನ್ನ ಬಾಳ ಹಾದಿ ಸುಧಾರಿಸುವಂತೆ ಮಾಡುತ್ತೇವೆ. ಯಾವುದಕ್ಕೂ ಹೆಚ್ಚಿಗೆ ಚಿಂತೆ ಮಾಡಬೇಡ.

ಇನ್ನೊಂದು ವಿಷಯ. ಮೊದಲು ನಿನ್ನಲ್ಲಿ ನಿನಗೆ ನಂಬಿಗೆ ಇರಲಿ. ನಿನ್ನ ಗಂಡನಲ್ಲಿ ನಿನಗೆ ನಂಬಿಗೆ ಇರಲಿ. ದೇವರಲ್ಲಿ ನಂಬಿಗೆ ಇರಲಿ. ನಿನ್ನ ಅಣ್ಣನಲ್ಲಿ ನಂಬಿಗೆ ಇರಲಿ. ಎಲ್ಲಾ ತಾನಾಗಿಯೇ ಸರಿ ಹೋಗುತ್ತದೆ. ಇವತ್ತಿನ ನಿನ್ನ ನಡತೆಯನ್ನು ಇಲ್ಲಿಯೇ ಮರೆತು ಬಿಡು. ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ. ದೇವರು ನಿನ್ನ ಜೊತೆಯಿದ್ದಾನೆ. ನಿನ್ನ ಮಾನ ಪಾವಿತ್ರ್ಯತೆ ಉಳಿದಿದೆ.

ತನ್ನಂಥಹ ಪಾಪಿಯನ್ನು ಕ್ಷಮಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ ಸುಯೋಗನ ಪಾದಗಳಿಗೆ ಕಣ್ಣೀರಿನ ಅಭಿಷೇಕ ಮಾಡಿದ್ದಳು ರತ್ನಮ್ಮ. ಸುಯೋಗ ತನ್ನ ಕೈಯಾರೆ ಅವಳ ಕಣ್ಣೀರು ಒರೆಸಿ, ಧೈರ್ಯ ತುಂಬಿ ಕಳುಹಿಸಿದ.

ಮರುದಿನ ಸಾಯಂಕಾಲ ಸಾಹಿತ್ಯ, ಸೃಷ್ಟಿಯೊಂದಿಗೆ ತನ್ನ ತವರು ಮನೆಯಿಂದ ಬಂದಿಳಿದಳು. ಸೃಷ್ಟಿ ಊಟಮಾಡಿ ಮಲಗಿದ ಮೇಲೆ ಸುಯೋಗ ಎರಡು ದಿನಗಳಿಂದ ನಡೆದ ವಿದ್ಯಮಾನಗಳನ್ನು ವಿವರಿಸಿ ಹೇಳಿದ ಸಾಹಿತ್ಯಳಿಗೆ. ನನಗಿಂತಲೂ ಭರ್ಜರಿ ಫಿಗರಿರುವ ರತ್ನಳ ರೂಪಕ್ಕೆ ಮರುಳಾಗಿ ಹಳ್ಳಕ್ಕೆ ಬಿದ್ದಿರಬಹುದು ನೀವು ಎಂದು ತಮಾಷೆ ಮಾಡಿದಳು. ಅವಳಿಗೆ ತನ್ನ ಗಂಡ ಅಪರಂಜಿ ಎಂದು ಗೊತ್ತಿದ್ದರೂ ಇದು ತಮಾಷೆ ಮಾಡುವ ವಿಷಯವಲ್ಲವೆಂದು ಸುಯೋಗನಿಗೆ ತುಂಬಾ ಕೋಪ ಬಂತು. ನೋಡು ಸಾಹಿತ್ಯ, ನೀ ಹೇಳಿದ ಹಾಗೆ ಆಗಿದ್ದರೆ ನಾನೇಕೆ ನಿನ್ನ ಹತ್ತಿರ ಈ ವಿಷಯ ಹೇಳಿ ಗುಲ್ಲು ಮಾಡಬೇಕಾಗಿತ್ತು? ಗಪ್ ಚಿಪ್ ಆಗಿ ವ್ಯವಹಾರ ಮುಂದುವರೆಸುತ್ತಿದ್ದೆ. ಸುಯೋಗ ಸಮಜಾಯಿಸಿ ಹೇಳಿದ. ಗಂಡನನ್ನು ತನ್ನೆದೆಗೆ ಅವುಚಿ ಹಿಡಿದುಕೊಂಡು ಮುದ್ದುಮಾಡಿ ರಮಿಸಿದಳು ಸಾಹಿತ್ಯ.

ಮರುದಿನ ಸಾಯಂಕಾಲ ರತ್ನಮ್ಮ-ರಂಗಪ್ಪ ದಂಪತಿಗಳು ಮನೆಗೆ ಬರುವಷ್ಟರಲ್ಲಿ ಸುಯೋಗ ಮನೆಗೆ ಬಂದು ಮುಖ ತೊಳೆದು ರೆಡಿಯಾಗಿ ಕುಳಿತಿದ್ದ. ಸಾಹಿತ್ಯ, ರತ್ನಮ್ಮಳನ್ನು ನಗುಮೊಗದಿಂದ ಸ್ವಾಗತಿಸಿ, ಎಲ್ಲರಿಗೂ ಲಘು ತಿಂಡಿ ಹಾಗು ಚಹ ಸರಬರಾಜು ಮಾಡಿದಳು.

ಸುಯೋಗ ಮೊದಲು ಅದೂ ಇದೂ ಮಾತಾಡುತ್ತಾ, ರತ್ನಮ್ಮ ತಮ್ಮ, ಮನೆಯ ಮಗಳು ಇದ್ದ ಹಾಗೆ. ರಂಗಪ್ಪ ತಮ್ಮ ಅಳಿಯ ಇದ್ದ ಹಾಗೆ ಎಂದು ಹೇಳುತ್ತಾ ಅವರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಗುಟ್ಕಾ, ಕುಡಿತದಿಂದಾಗುವ ದುಷ್ಪರಿಣಾಮಗಳು, ಹಾಗೂ ಅವುಗಳ ಅಡ್ಡ ಪರಿಣಾಮಗಳಿಂದ ಸಂಸಾರದಲ್ಲಿ ಆಗುವ ಅನಾಹುತಗಳ ಬಗ್ಗೆ ವಿವರಿಸಿ ಹೇಳಿದ. ಮನಸ್ಸು ಮಾಡಿದರೆ ಈ ಚಟಗಳನ್ನು ಯಾವ ಕಷ್ಟವಿಲ್ಲದೇ ಬಿಡಬಹುದೆಂದೂ ಹೇಳಿದ. ಹಾಗೆಯೇ ತನಗೆ ಗೊತ್ತಿರುವ ಡಾಕ್ಟರ್ ದಂಪತಿಗಳಿಗೆ ಮದುವೆಯಾಗಿ ಹದಿನಾರು ವರ್ಷದ ಮೇಲೆ ಮಕ್ಕಳಾಗಿರುವ ಬಗ್ಗೆ ಹಾಗೂ ಇನ್ನೊಬ್ಬ ಬ್ಯಾಂಕಿನ ಗೆಳೆಯ ದಂಪತಿಗಳಿಗೆ ಮದುವೆಯಾದ ಹನ್ನೆರಡು ವರ್ಷಗಳ ಬಳಿಕ ಮಕ್ಕಳಾಗಿರುವುದನ್ನು ಅವರಿಗೆ ಮನ ಮುಟ್ಟುವಂತೆ ಹೇಳಿದ. ಯಾವುದಕ್ಕೂ ಜೀವನದಲ್ಲಿ ಹತಾಶರಾಗಬೇಕಿಲ್ಲ. ನಿರಾಶರಾಗಬೇಕಿಲ್ಲ. ನಗು ನಗುತ್ತಾ ಜೀವನವನ್ನು ಎದುರಿಸಬೇಕು. ಹಾಗೆಯೇ ಅವರಿಗೆ ಯೌವನವೂ ಇದೆಯೆಂದು ಒತ್ತಿ ಒತ್ತಿ ಹೇಳಿದ ಸುಯೋಗ. ಮನಸ್ಸಿದ್ದರೆ ಮಾರ್ಗವಿದೆಯೆಂದು ತಿಳಿಸಿದ.

ರತ್ನಮ್ಮ-ರಂಗಪ್ಪ ದಂಪತಿಗಳ ಮುಖದಲ್ಲಿ ಸಂತಸ ಅರಳಿತ್ತು. ರಂಗಪ್ಪ ತಾನಾಗಿಯೇ ಮುಂದೆ ಬಂದು ಸುಯೋಗನ ಕೈ ತೆಗೆದುಕೊಂಡು ಆತನ ಕೈಯಲ್ಲಿ ತನ್ನ ಕೈ ಹಾಕಿ ಪ್ರಮಾಣ ಮಾಡುತ್ತಾ, ಇನ್ನು ಮುಂದೆ ಈ ಚಟಗಳನ್ನು ಬಿಟ್ಟು ಬಿಡುವುದಾಗಿ ಒಪ್ಪಿಕೊಂಡ. ರತ್ನಮ್ಮಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಅವಳ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದಾಗಿ ಪ್ರಮಾಣ ಮಾಡಿದ. ಎಲ್ಲರ ಮನಸ್ಸುಗಳು ಖುಷಿಯಿಂದ ಬೀಗುತ್ತಿದ್ದವು.

ಸಾಹಿತ್ಯ, ರತ್ನಮ್ಮ ಇಬ್ಬರೂ ಸೇರಿ ಅಡಿಗೆ ಮಾಡಿದರು. ಎಲ್ಲರೂ ಸೇರಿ ಊಟ ಮಾಡಿದರು. ರತ್ನಮ್ಮ ಸೃಷ್ಟಿಯ ಜೊತೆ ತಾ ಬಂದಾಗಿನಿಂದಲೂ ಆಟ ಆಡುತ್ತಿದ್ದಳು. ಊಟಮಾಡಿ ರತ್ನಮ್ಮ ಗಂಡನೊಂದಿಗೆ ಹೊರಟು ನಿಂತಾಗ, ಸಾಹಿತ್ಯ ರತ್ನಮ್ಮ ಬೇಡ ಬೇಡವೆಂದರೂ ಆಕೆಗೆ ತಮ್ಮ ಪ್ರೀತಿಯದ್ಯೋತಕವಾಗಿ ಸೀರೆ, ಖಣ ಕೊಟ್ಟು ಕಳುಹಿಸಿದಳು. ರತ್ನಮ್ಮನಿಗೆ ತನ್ನ ತವರು ಮನೆಯಲ್ಲಿರುವ ಹಾಗೆ ಅನಿಸಿತು. ಹೊರಟಾಗ ಭಾವುಕತೆಯಿಂದ ಅವಳ ಹೃದಯ ತುಂಬಿ ಬಂದಿತು. ಇಬ್ಬರೂ ಸಾಹಿತ್ಯ ಮತ್ತು ಸುಯೋಗರ ಕಾಲಿಗೆ ನಮಸ್ಕರಿಸಿ ಆಶೀವರ್ಾದ ಪಡೆದುಕೊಂಡರು.

ಮುಂದಿನ ದಿನಗಳಲ್ಲಿ ಸುಯೋಗ ಮತ್ತು ಸಾಹಿತ್ಯ, ರತ್ನಮ್ಮಳಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ರತ್ನಮ್ಮ ಉತ್ಸಾಹದ ಚಿಲುಮೆಯಾಗಿದ್ದಳು. ಲವಲವಿಕೆಯ ಬುಗ್ಗೆಯಾಗಿದ್ದಳು. ಇವರ ಮನೆಗೆ ಬಂದಾಗ ಸೃಷ್ಟಿಯೊಂದಿಗೆ ಹೆಚ್ಚಿನ ಸಮಯ ಕಳೆಯತೊಡಗಿದಳು. ಸಾಯಂಕಾಲ ದಿನಾಲೂ ಕಡಿಮೆಯೆಂದರೆ ಅರ್ಧ ಗಂಟೆಯಾದರೂ ಸೃಷ್ಟಿಯೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಳು. ರಂಗಪ್ಪ ಸಹ ತನ್ನ ಚಟಗಳಿಗೆ ತಿಲಾಂಜಲಿಯಿತ್ತಿದ್ದ. ತನ್ನ ಕೆಲಸ ಮುಗಿದ ಕೂಡಲೇ ಮನೆ ಸೇರುತ್ತಿದ್ದ. ಇಬ್ಬರ ಸಂಸಾರದಲ್ಲಿ ಮೊದಲಿನ ಅನ್ಯೋನ್ಯತೆ ಸ್ಥಾನ ಅಲಂಕರಿಸಿತ್ತು. ಹೊಸದಾಗಿ ಮದುವೆಯಾದ ಜೋಡಿಯಂತೆ ಆಗಾಗ್ಗೆ ಸಮೀಪದ ದೇವಸ್ಥಾನದ ಊರುಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬರುತ್ತಿದ್ದರು. ದಾಂಪತ್ಯ ಸುಖದ ಪರಾಕಾಷ್ಟತೆಯಲ್ಲಿ ಮಿಂದು ತೇಲುತ್ತಿದ್ದರು.

ನಾನು ಬಡವಿ ಆತ ಬಡವ. ಒಲವೇ ನಮ್ಮ ಬದುಕು. ಬಳಸಿಕೊಂಡೆವದನೆ ನಾವು ಅದಕೂ ಇದಕೂ ಎದಕೂ. ಎಂಬ ಹೃದಯಕ್ಕೆ ಹತ್ತಿರದ ಕವಿವಾಣಿಯನ್ನು ತಮಗಾಗಿಯೇ ಇದೆಯೆಂದು ಅಂದು ಕೊಂಡಿದ್ದರು. ದಸರಾ ಹಬ್ಬಕ್ಕೆ ಇಬ್ಬರೂ ಜೊತೆಯಾಗಿ ಬಂದು ಸುಯೋಗ-ಸಾಹಿತ್ಯರೊಂದಿಗೆ ಬನ್ನಿಯೆಂಬ ಬಂಗಾರ ವಿನಿಮಯ ಮಾಡಿಕೊಂಡು ಖುಷಿ ಹಂಚಿಕೊಂಡು ಆಶೀವರ್ಾದ ಪಡೆದಿದ್ದರು. ಹಾಗೆಯೇ ಮುಂದಿನ ದೀಪಾವಳಿ, ಸಂಕ್ರಾಂತಿ ಹಬ್ಬಕ್ಕೂ ತಪ್ಪಿಸಿರಲಿಲ್ಲ. ದೀಪಾವಳಿ ಹಬ್ಬಕ್ಕಾಗಿ ಗಂಡ-ಹೆಂಡತಿ ಇಬ್ಬರಿಗೂ ಹೊಸ ಬಟ್ಟೆ ಕೊಡಿಸಿದ್ದರು, ಸುಯೋಗ ಮತ್ತು ಸಾಹಿತ್ಯ.

ಮುಂದೆ ಯುಗಾದಿ-ನಮ್ಮ ಹೊಸ ವರ್ಷ ಸಮೀಪವಾಗುತ್ತಿದ್ದಂತೆ ಎರಡೂ ಜೋಡಿಗಳಲ್ಲೂ ಸಂತಸದ ಹೊನಲು. ರತ್ನಮ್ಮ-ರಂಗಪ್ಪ ದಂಪತಿಗಳ ಈ ಆರು ತಿಂಗಳುಗಳ ಅನ್ಯೋನ್ಯ, ಮಧುರ ದಾಂಪತ್ಯದ ಫಲವೆಂಬಂತೆ ರತ್ನಮ್ಮಳ ಮಡಿಲು ತುಂಬತೊಡಗಿತ್ತು. ರತ್ನಮ್ಮಳ ಸಂತೋಷಕ್ಕೆ ಮೇರೆ ಇರಲಿಲ್ಲ. ಯುಗಾದಿ ಪಾಡ್ಯದ ದಿನ ರತ್ನಮ್ಮ ಗಂಡನೊಂದಿಗೆ ತನ್ನ ಸ್ವಂತ ತವರು ಮನೆಗೆ ಬರುವ ಠೀವಿಯಲ್ಲಿ ಸುಯೋಗ-ಸಾಹಿತ್ಯರ ಮನೆಗೆ ಬಂದಿದ್ದಳು. ಎಲ್ಲರ ಮುಖಗಳು ಸಂತೋಷ, ಸಂಭ್ರಮದಿಂದ ಬೀಗುತ್ತಿದ್ದವು. ದಂಪತಿಗಳಿಬ್ಬರೂ ಸುಯೋಗ-ಸಾಹಿತ್ಯರ ಪಾದಗಳಿಗೆರಗಿ ಆಶೀವರ್ಾದ ಪಡೆದರು.

ಅಣ್ಣಾ, ನಾವಿಬ್ಬರೂ ರಕ್ತ ಹಂಚಿಕೊಂಡು ಹುಟ್ಟಿರದಿದ್ದರೂ ನಾನೆಂತು ತೀರಿಸಲಿ ನಿನ್ನ ಋಣದ ಭಾರ. ಎನ್ನುತ್ತಾ ಸುಯೋಗನ ಪಾದವಿಡಿದು ಕಣ್ಣೀರಿನ ಧಾರೆ ಹರಿಸಿದ್ದಳು. ಛೀ ಹುಚ್ಚಿ, ಈ ಸಂತಸದ ಸಮಯದಲ್ಲಿ ಕಣ್ಣೀರೇಕೆ? ಎಂದು ಹೇಳುತ್ತಾ ಸುಯೋಗ ಅವಳ ತಲೆಯಲ್ಲಿ ತನ್ನ ಕೈಯಾಡಿಸುತ್ತಾ ಅವಳ ತೋಳು ಹಿಡಿದು ಮೇಲೆಬ್ಬಿಸಿದ. ಸಂತೋಷದಿಂದ ಅವಳ ಕಣ್ಣೀರಿನ ಕಟ್ಟೆಯೊಡೆದಿತ್ತು. ಆವೇಶದಿಂದ ಅವನನ್ನು ತಬ್ಬಿ ಹಿಡಿದು ಇನ್ನೂ ಜೋರಾಗಿ ಅಳುತ್ತಾ, ತನ್ನ ಮನದಲ್ಲಿದ್ದ ದುಗುಡವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಳು. ಸಾಹಿತ್ಯ, ರಂಗಪ್ಪ, ಸೃಷ್ಟಿ, ಈ ಅವಿಸ್ಮರಣೀಯ ದೃಷ್ಯವನ್ನು ಮೂಕವಿಷ್ಮಿತರಾಗಿ ನೋಡುತ್ತಾ ಆನಂದಿಸುತ್ತಿದ್ದರು. ಸಾಹಿತ್ಯ ಸುಯೋಗನ ಸಹಾಯಕ್ಕೆ ಬಂದು ರತ್ನಮ್ಮಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಮಾಧಾನ ಮಾಡತೊಡಗಿದಳು.

ಅಷ್ಟರಲ್ಲಿ ಇಲ್ಲಿ ಕೇಳಿ ರತ್ನಮ್ಮ, ರಂಗಪ್ಪ, ನಿಮಗೆ ಈಗ ಇನ್ನೊಂದು ಸಿಹಿ ಸುದ್ದಿ ಹೇಳುವೆ. ಸೃಷ್ಟಿಗೆ ಆರೇಳು ತಿಂಗಳುಗಳಲ್ಲಿ ತಮ್ಮ ಅಥವಾ ತಂಗಿ ಜೊತೆಯಾಗಲಿದೆ. ಸುಯೋಗ ತನ್ನ ಸಂತಸ ಹಂಚಿಕೊಂಡ. ಸಾಹಿತ್ಯಳ ಮುಖ ನಾಚಿಕೆಯಿಂದ ರಂಗೇರಿತ್ತು. ಎಲ್ಲರ ಮುಖದಲ್ಲಿ ಸಂತಸ ಅರಳಿತ್ತು.

ರತ್ನಮ್ಮಳ ಬಾಳಲ್ಲಿ ಆವರಿಸಿದ್ದ ಕತ್ತಲು ತನ್ನಿಂದ ತಾನೇ ಮಾಯವಾಗಿ ಹೊಂಬೆಳಕು ಮೂಡಿತ್ತು.



ಲೇಖಕರು : ಶ್ರೀ ಶೇಖರಗೌಡ ಪಾಟೀಲ್,
ಮುಖ್ಯ ವ್ಯವಸ್ಥಾಪಕರು, ಎಸ್.ಬಿ.ಹೆಚ್ ಆರ್.ಸಿ.ಪಿ.ಸಿ
ಮೊಬೈಲ್ 9448989332
ಲಿಂಗಸ್ಗೂರು.

No comments:

Post a Comment

Thanku