Friday, January 13, 2012

ಮತ್ಸ್ಯಗಂಧಿಯ ಮೀನುಗಳು

ಬೆಳಗಿನ ಜಾವ ಮೂರಕ್ಕೆ ಪ್ರಯತ್ನಪಟ್ಟರೂ ನೆನಪಿಗೆ ಬಾರದ ಸ್ವಪ್ನವೊಂದರಿಂದ ಎಚ್ಚರವಾ ಯಿತು. ಅರ್ಧ ಗಂಟೆ ಹೊರಳಾಡಿದೆನಾದರೂ ನಿದ್ರೆ ಹತ್ತಲಿಲ್ಲ. ಎದ್ದು ಕುಳಿತು ಕೊನೆಯ ಕೆಲವು ಪುಟಗಳಷ್ಟೇ ಉಳಿದಿದ್ದ ನನ್ನ ತೇಜಸ್ವಿ ಪುಸ್ತಕವನ್ನು ಕೈಗೆತ್ತಿಕೊಂಡೆ. ಗಂಟೆ ಆರಾಗುವಷ್ಟರಲ್ಲಿ ಪುಸ್ತಕದ ಪುಟಗಳು ಮುಗಿದುಹೋದವು.

ರೂಮಿನಲ್ಲೇ ಅತ್ತಿಂದಿತ್ತ ಹೆಜ್ಜೆ ಹಾಕುತ್ತಾ, ಇಂದೇಕೋ ಮಳೆಯಿಲ್ಲ, ಏನು ಮಾಡಬೇಕೆಂದು ತೋಚದೆ ಮೊಬೈಲೆತ್ತಿಕೊಂಡು ಗೂಗಲ್ಗೆ ಹೋಗಿ ಸುಳ್ಯ ಎಂದು ಟೈಪಿಸಿ ಮೂಡುವ ಪುಟಗಳಿಗೆ ಕಾದೆ. ಮೊದಲ ಪುಟ ವಿಕಿಪೀಡಿಯಾದಾಗಿತ್ತು. ಅದನ್ನೇ ತೆರೆದೆ. ಸುಳ್ಯದ ಹತ್ತಿರದ ಜಾಗಗಳ ಹೆಸರುಗಳನ್ನು ನೋಡುತ್ತಿದ್ದಾಗ ತೊಡಿಕಾನ, ಮತ್ಸ್ಯಗಂಧಿ, ದೇವರಗುಂಡಿಯ ಹೆಸರುಗಳು ಕಂಡವು. ಸುಳ್ಯದಿಂದ ಹತ್ತಿರದಲ್ಲೇ ಇದ್ದ ಜಾಗಗಳವು.

ಸರಿ ನಡಿ ಹೊರಡೋಣ ಎಂದು ಶಟರ್ು ಪ್ಯಾಂಟು ತೊಟ್ಟು ಜಕರ್ಿನ್ನಿನ ಒಳಜೇಬಿಗೆ ಕ್ಯಾಮೆರಾ, ಮೊಬೈಲನ್ನು ಹಾಕಿ ಜಕರ್ಿನ್ನನ್ನು ಹೆಗಲಿಗೇರಿಸಿ ಬೈಕೇರಿ ಹೊರಟೆ. ದಾರಿ ಕೇಳಲು ರಸ್ತೆಯಲ್ಲಿ ಜನ ಸಂಚಾರವೇ ಆರಂಭವಾಗಿರಲಿಲ್ಲ. ಎಲ್ಲರೂ ಭಾನುವಾರದ ರಜೆಯ ಮೋಜನ್ನು ನಿದ್ರೆಯಲ್ಲಾನಂದಿಸುತ್ತಿರುವಾಗ ನನಗ್ಯಾವ ಹುಕಿ ಇದು ಎಂದು ನಗುತ್ತಾ, ಬಸ್ ನಿಲ್ದಾಣದ ಬಳಿಹೋಗಿ ಆಟೋದವರನ್ನು ತೊಡಿಕಾನಕ್ಕೆ ಹೋಗು ವ ದಾರಿ ಕೇಳಿದೆ. ಮಡಿಕೇರಿಯೆಡೆಗೆ ಹೋಗುವ ರಸ್ತೆಯಲ್ಲೇ ಹೋಗಿ ಅರಂತೋಡುವಿನ ಬಳಿ ಬಲಕ್ಕೆ 5 ಕಿ.ಮಿ ಕ್ರಮಿಸಿದರೆ ತೊಡಿಕಾನ ಸಿಗುತ್ತದೆ ಎಂದರು.

ಬೆಳಗಿನ ಖಾಲಿ ರಸ್ತೆಗಳ ಸೊಬಗನ್ನು ಸವಿಯುತ್ತಾ ಮಧ್ಯೆ ಮಧ್ಯೆ ಫೋಟೋ ಕ್ಲಿಕ್ಕಿಸುತ್ತಾ ತೊಡಿಕಾನದ ದೇವಸ್ಥಾನಕ್ಕೊಂದು ಮಿಂಚಿನ ಭೇಟಿ ಕೊಟ್ಟು ದೇವಾಲಯದ ಹಿಂದಿರುವ ಮತ್ಸ್ಯಗಂಧಿಯ ಕಡೆ ಹೆಜ್ಜೆ ಹಾಕಿದೆ. ಹಿಂದಿನ ದಿನದ ಮಳೆಗೆ ಜಾರುತ್ತಿದ್ದ ಆ ಕೊರಕಲುಗಳಲ್ಲಿ ಒಂದಷ್ಟು ಪ್ರಯಾಸಪಡುತ್ತಾ ನಡೆದು ಮತ್ಸ್ಯಗಂಧಿ ತಲುಪಿದೆ.

ಕೇರಳದ ಒಂದಷ್ಟು ಮಂದಿ ನದಿಯ ಬದಿಗೆ ಕಟ್ಟಿದ್ದ ಮೆಟ್ಟಿಲುಗಳ ಮೇಲೆ ನಿಂತು ಕುತೂಹಲ ಭರಿತವಾಗಿ ಮೀನುಗಳನ್ನು ನೋಡುತ್ತಿದ್ದರು. ಅಲ್ಲೇ ಹಾಕಿದ್ದ ಕಟ್ಟೆಯ ಮೇಲೆ ಕುಳಿತು ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಒಂದೆರಡು ಫೋಟೋ ತೆಗೆದೆ. 5 ನಿಮಿಷದ ನಂತರ ಅವರೆಲ್ಲ ಹೊರಟು ಹೋದರು. ಇಷ್ಟು ಬೆಳಿಗ್ಗೆ ಹೆಚ್ಚು ಜನರು ಇಲ್ಲಿಗೆ ಬರುವವುದಿಲ್ಲವೇನೋ ಎಂಬುದನ್ನು ನೆನೆದು ಏಕಾಂತದ ಖುಷಿಯನ್ನನುಭವಿಸುವ ಸಾಧ್ಯತೆಯಿಂದ ಸಂತಸವಾಯಿತು.

ಹೋಗಿ ಮೆಟ್ಟಿಲ ಮೇಲೆ ಕುಳಿತು ಚಪ್ಪಲಿ ಕಳಚಿ ಕಾಲನ್ನು ನೀರಿನೊಳಗಿಳಿಬಿಟ್ಟು ಕುಳಿತೆ. ಮೀನುಗಳ ಓಡಾಟದ ಸಂಘರ್ಷದಿಂದ ಸುತ್ತಲಿನ ಹವೆಗಿಂತ ನೀರೇ ಬೆಚ್ಚಗಿತ್ತು, ಹಿತ ತರುವಂತಿತ್ತು. ಹಸ್ತಗಳನ್ನು ಮೇಲಿನ ಮೆಟ್ಟಲ ಮೇಲಿಟ್ಟು, ಆಗಸದೆಡೆಗೆ ಮುಖಮಾಡಿ ಕಣ್ಣುಮುಚ್ಚಿದೆ. ಪಕ್ಷಿಗಳ ಕಲರವ, ನದಿಯ ಹರಿವು, ಮರ? ಗಿಡದ ಎಲೆಗಳ ತೊಯ್ದಾಡುವಿಕೆಯ ಸದ್ದು ಕ್ರಮೇಣ ಮರೆಯಾಗುತ್ತಾ ಹೋಗಿ ಯಾರೊ ಮೆಲುದನಿಯಲ್ಲಿ ಮಾತನಾಡುತ್ತಿರುವ ಸದ್ದು ಕೇಳಿತು. ಕಣ್ಣು ತೆರೆದು ಸುತ್ತಲೂ ನೋಡಿದೆ, ಯಾರೂ ಕಾಣಲಿಲ್ಲ; ಭ್ರಮೆಯಿರಬೇಕೆಂದು ಮತ್ತೆ ಕಣ್ಣೆವೆ ಮುಚ್ಚಿದೆ; ಮತ್ತೆ ಮಾತನಾಡುವ ಸದ್ದು, ಜಗಳವಾಡುತ್ತಿರುವ ದನಿಯಿತ್ತು ಆ ಸದ್ದಿನಲ್ಲಿ.

ಕಣ್ತೆರೆದು ನೀರಿನತ್ತ ನೋಡಿದೆ. ಕೇಳಿದ್ದು ಮೀನುಗಳ ಸಂಭಾಷಣೆಯಾ? ಎಂಬ ಪ್ರಶ್ನೆ ಉದ್ಭವಿಸಿ ನನ್ನ ಕಲ್ಪನಾ ಲಹರಿಗೆ ನನಗೇ ನಗು ಬಂತು. ನೀರನ್ನೇ ಗಮನಿಸುತ್ತ ಕುಳಿತಾಗ ನನ್ನ ಕಲ್ಪನೆ ಕೇವಲ ಕಲ್ಪನೆಯಲ್ಲ ನಿಜವೆಂಬುದು ನಿಧಾನಕ್ಕೆ ಅರಿವಿಗೆ ಬರುತ್ತಲೇ ಅಚ್ಚರಿಯುಂಟಾಯಿತು. ಮೀನುಗಳು 2 ಗುಂಪಿನಲ್ಲಿದ್ದವು. ಬಲಗಡೆ ನೂರಾರು ಮೀನುಗಳಿರುವ ಗುಂಪು, ಎಡದಲ್ಲಿ ಹತ್ತದಿನೈದಷ್ಟೇ ಇದ್ದ ಗುಂಪು. 2 ಗುಂಪಿನ ಮುಂದಾಳತ್ವ ವಹಿಸಿದ್ದ ಮುಖಂಡರನ್ನು ಗುರುತಿಸುವುದು ಕಷ್ಟವಾಗಲಿಲ್ಲ. ಮುಖಂಡರಿಬ್ಬರೂ ನಿಲರ್ಿಪ್ತ ಭಾವದಿಂದ ನನ್ನೆಡೆಗೆ ನೋಡಿ ಚಟಪಟ ಸದ್ದು ಮಾಡುತ್ತಿದ್ದ ಗುಂಪಿನ ಇತರ ಮೀನುಗಳತ್ತ ನೋಡಿದವು. ಮುಖಂಡರ ಮುಖಭಾವವನ್ನರಿತವರಂತೆ ಉಳಿದ ಮೀನುಗಳು ನಿಶ್ಯಬ್ದ ತಾಳಿದವು. ಒಂದೆರಡು ಕ್ಷಣದ ನಂತರ ಎಡದಲ್ಲಿದ್ದ ಮುಖಂಡ ಮೌನ ಮುರಿದು ನೀವೇನೇ ಹೇಳಿದರೂ ಕೂಗಿದರೂ ನಾವಂತೂ ಇಲ್ಲಿ ಉಳಿಯುವುದಿಲ್ಲ. ನಾವು ಮುಂದೆ ಸಾಗುತ್ತೇವೆ ಎಂದು ಹೇಳಿತು.

ಮ್.. ನಿಮಗೆ ಅರ್ಥವಾಗುವುದಿಲ್ಲ ಬಿಡಿ. ನಮ್ಮ ಸುಖ, ನೆಮ್ಮದಿ ಕಂಡು ನಿಮಗೆ ಹೊಟ್ಟೆಯುರಿಯಿರಬೇಕು. ಮಳೆಗಾಲದಲ್ಲಿ ಈ ನದಿಯ ಪ್ರವಾಹದ ವಿರುದ್ಧ ಈಜಿ ಅಗೋ ಅಲ್ಲಿ ಕಾಣುತ್ತಿದೆಯಲ್ಲ ಕಟ್ಟೆ ಅದರ ಈ ಬದಿಗೇ ಉಳಿದುಬಿಟ್ಟರೆ ಇನ್ನುಳಿದೆಲ್ಲ ಕಾಲ ರೆಕ್ಕೆ ಅಲುಗಿಸದೆ ಪ್ರಯಾಸವಿಲ್ಲದೇ ಆರಾಮಾಗಿ ಇದ್ದುಬಿಡಬಹುದು. ಆಹಾರಕ್ಕೂ ಶ್ರಮಪಡುವ ಅಗತ್ಯವಿಲ್ಲ. ದೇವಸ್ಥಾನಕ್ಕೆ ಬರುವ ಜನರೇ ಪುರಿ, ಅನ್ನ ಹಾಕುತ್ತಾರೆ. ತಿಂದುಂಡು ನೆಮ್ಮದಿಯಾಗಿರಬಹುದು ನನ್ನ ಮಾತು.....

ಬಲಬದಿಯ ಮುಖಂಡನ ಮಾತುಗಳನ್ನು ಅರ್ಧಕ್ಕೆ ತಡೆಯುತ್ತಾ ಬೇರೆಯವರ ಹಂಗಿನಲ್ಲಿ ಬದುಕಿ ನೆಮ್ಮದಿ ಯಾಗಿ ಆರಾಮವಾಗಿ ಇರಬಹುದೆಂದು ಎಂದೂ ನಮ ಗನ್ನಿಸಿಲ್ಲ ಕೊಂಚ ಗಡುಸಾಗಿಯೇ ಹೇಳಿದ ಮುಖಂಡನ ಮಾತಿಗೆ ಹೌದೌದೆಂದು ತಲೆಯಾಡಿಸಿದವು ಹಿಂದಿದ್ದ ಮೀನುಗಳು. ಹ್ಹ ಹ್ಹ ಹಂಗ್ಯಾಕೆ? ಅವರು ನಮ್ಮನ್ನು ದೈವಾಂಶ ಸಂಭೂತರೆಂದೇ ಕಾಣುತ್ತಾರೆ. ನಮ್ಮನ್ನು ಬೇಟೆಯಾ ಡಲೂ ಇಲ್ಲಿ ಅವಕಾಶವಿಲ್ಲ. ನಾವೇ ಇಲ್ಲಿನ ರಾಜ ರಾಣಿಯರು.

ಈ ಗೊಡ್ಡು ಅಹಂಕಾರ ಬೇಡ. ನಿಮ್ಮಲ್ಲಿ ಅಹಂಭಾವದ ಭಾವನೆ ಬೆಳೆಸಿ, ನಿಮ್ಮಷ್ಟು ಸುಖಿಗಳೂ ಯಾರೂ ಇಲ್ಲರೆಂಬ ಭ್ರಮೆ ಹುಟ್ಟಿಸಿ ಅವರು ಬಿಸಾಡುವ ಆಹಾರಕ್ಕಾಗಿ ನಿಮ್ಮನ್ನು ಕಾಯುವಂತೆ ಮಾಡಿರುವ ಆ ಮನುಷ್ಯ ಜನ್ಮಕ್ಕೆ ಧಿಕ್ಕಾರವಿರಲಿ. ಇಲ್ಲಿ ನಿಮಗೆ ಆಹಾರವೆಸೆದು ಗುಲಾಮಗಿರಿಯೆಡೆಗೆ ತಳ್ಳಿ ಆ ಕಟ್ಟೆ ದಾಟಿ ಗಾಳವಿಡಿದು ಕೂರುವ ಆ ಮನುಜರಿಂದ ದೈವವೆನ್ನಿಸಿಕೊಳ್ಳುವ ಕರ್ಮ ನಮಗೆ ಬೇಡ

ಆದರೆ ಇಲ್ಲಿ ಪ್ರಾಣಭಯವಿಲ್ಲದೆ ಆರಾಮವಾಗಿರ ಬಹುದಲ್ಲ ದನಿಯಲ್ಲಿನ ಆತ್ಮವಿಶ್ವಾಸ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಿತ್ತು.

ಆರಾಮವಾಗಿರುವುದಷ್ಟೇ ಜೀವನವಾ? ಒಪ್ತೀನಿ, ಮತ್ಸ್ಯಗಂಧಿಯ ಆಚೀಚಿನ ಬದುಕಿನಲ್ಲಿ ಪ್ರತಿ ಕ್ಷಣವೂ ಹೋರಾಡಬೇಕು. ಆಹಾರಕ್ಕೆ, ಬೇಸಿಗೆಯಲ್ಲಿ ನೀರಿನ ಮೂಲಕ್ಕೆ, ಈ ಮನುಷ್ಯರ ಗಾಳಗಳಿಂದ ತಪ್ಪಿಸಿಕೊಳ್ಳು ವುದಕ್ಕೆ ಹೋರಾಡಲೇಬೇಕು. ನಮಗೆ ಆ ಹೋರಾಟ ದಲ್ಲೇ ನೆಮ್ಮದಿಯಿದೆ, ಸುಖವಿದೆ. ಆಯುಷ್ಯ ತೀರುವ ಮುಂಚೆಯೇ ಸಾಯುವ ಸಂಭವ ಅಧಿಕವಾದರೂ ಸ್ವತಂತ್ರ್ಯವಾಗಿ ಪರರ ಹಂಗಿಗೆ ಸಿಲುಕದೆ ಬಾಳ್ವೆ ನಡಿಸಿದ ಆತ್ಮಸಂತೃಪ್ತಿಯಾದರೂ ನಮ್ಮಲ್ಲಿ ಉಳಿದೀತು.

ಮುಖಂಡರೇ ನನ್ನದೊಂದು ಪ್ರಶ್ನೆ ಎಡಬದಿಯ ಮುಖಂಡನ ಹಿಂದಿದ್ದ ಮೀನೊಂದು ಕೇಳಿತು. ಕೇಳು ಎಂಬಂತೆ ತಲೆಯಾಡಿಸಿತು ಮುಖಂಡ.

ಅಲ್ಲಾ ಅವರಿಗೆ ಬೇಸಿಗೆಯಲ್ಲಿ ನೀರು ಹೇಗೆ ದೊರಕುತ್ತೆ. ಆಗಲಾದರೂ ನೀರನ್ನರಸಿ ಈ ಸ್ಥಳವನ್ನು ತೊರೆಯಬೇಕಲ್ಲವೇ? ಈ ಪ್ರಶ್ನೆಗೆ ನಾನೇ ಉತ್ತರವನ್ನೀ ಯುತ್ತೇನೆಂಬಂತೆ ಬಲಬದಿಯ ಮುಖಂಡ ಗಂಟಲು ಸರಿಮಾಡಿಕೊಂಡಿತು. ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿಯೇ ಅಗೋ ಆ ಕಟ್ಟೆಗಳ ನಡುವೆ ಹಲಗೆಯಿಟ್ಟು ನೀರು ಹರಿಯುವುದನ್ನು ನಿಲ್ಲಿಸಿಬಿಡುತ್ತಾರೆ. ಮತ್ತೂ ಕಡಿಮೆಯಾದಲ್ಲಿ ದೇವರಗುಂಡಿಯಿಂದ ಪೈಪ್ನಲ್ಲಿ ನೀರು ಹರಿಸುತ್ತಾರೆ. ಹಾಗಾಗಿ ನಾವು ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ ಕುಗ್ಗುತ್ತಿದ್ದ ಆತ್ಮವಿಶ್ವಾಸವನ್ನು ಮುಚ್ಚಿಡಲು ಒಣಅಭಿಮಾನವನ್ನು ತೋರ್ಪಡಿಸುತ್ತಾ ಹೇಳಿತು.

ಎಡಬದಿಯ ಮೀನುಗಳು ತಮ್ಮಲ್ಲೇ ಮಾತನಾಡಿ ಕೊಂಡವು. ಏನೆಂದು ನನಗೆ ಸ್ಪಷ್ಟವಾಗಿ ತಿಳಿಯಲಿಲ್ಲ. ಅವರ ಮನಸ್ಥಿತಿಯನ್ನು ಅರಿತ ಮುಖಂಡ ನೋಡಿ ಈ ಹಂಗಿನ ಸುಖ ಪ್ರತಿಯೊಬ್ಬರ ಮನಸ್ಸನ್ನೂ ಚಂಚಲ ಗೊಳಿಸುತ್ತೆಂಬುದನ್ನು ನಾನು ಬಲ್ಲೆ. ಇಂಥ ಕೃತಕ ಸುಖದ ಜಾಗಗಳು ಜೀವಿಸಲು ಹೋರಾಡಬೇಕಾದ ನಮ್ಮ ದೈಹಿಕ ಶ್ರಮವನ್ನಷ್ಟೇ ಅಲ್ಲದೇ ನಮ್ಮ ಮಾನಸಿಕ ಶ್ರಮವನ್ನೂ ಹೊಸಕಿ ಹಾಕುತ್ತವೆ. ಚಿಂತನೆಯನ್ನು, ಆಲೋಚನಾ ಪರತೆಯನ್ನು ಹುಟ್ಟುವ ಮೊದಲೇ ಸಾಯಿಸುತ್ತವೆ. ಈ ಪ್ರಲೋಭನೆಗಳ ಪ್ರಭಾವಕ್ಕೆ ಒಳಗಾಗದಿರಿ ಎಂದಷ್ಟೇ ನಾನು ಹೇಳಬಲ್ಲೆ.

ಇನ್ಮೇಲೆಯೂ ನೀವು ಇಲ್ಲೇ ಇರಲು ನಿರ್ಧರಿಸಿದರೆ ............. ನನ್ನ ಬಲವಂತವಿಲ್ಲ ಎಂದ್ಹೇಳಿ ಒಮ್ಮೆ ಕಣ್ಣು ಮುಚ್ಚಿ ಏನೋ ಯೋಚಿಸಿ ಕಣ್ತೆರೆದು ನಾನಿನ್ನು ಹೊರಡುತ್ತೇನೆ. ಇಲ್ಲೇ ಉಳಿಯಬಯಸುವವರು ಉಳಿಯಬಹುದು ಎದುರಿನ ಗುಂಪನ್ನುದ್ದೇಶಸಿ ಹಂಗಿನರಮನೆಯನ್ನು ತೊರೆದು ಸ್ವತಂತ್ರ್ಯವಾಗುಳಿಯ ಬಯಸುವವರಿಗೆ ನಮ್ಮಲ್ಲಿ ಸದಾ ಸ್ವಾಗತ ಎಂದು ಮಾತು ಮುಗಿಸಿ ಎದುರಿನ ಮುಖಂಡನೆಡೆಗೊಮ್ಮೆ ನೋಡಿ ವಿದಾಯದ ನಗೆ ಬೀರಿ ನದಿಯ ಹರಿವಿನ ಜೊತೆ ಮುಂದೆ ಸಾಗಿತು.

ಮೆಟ್ಟಿಲುಗಳ ಮೇಲೆ ನಡೆಯುತ್ತಾ ನಾನೂ ಅದರ ಸಮನಾಂತರವಾಗಿ ಸಾಗಿದೆ. ಇಲ್ಲಿ ಉಳಿಯುವುದಾ? ಅಥವಾ ಮುಂದೆ ಸಾಗುವುದಾ? ಎಂಬ ಜಿಜ್ಞಾಸೆಯಲ್ಲಿದ್ದ ಮೀನುಗಳ ಬಗ್ಗೆ ಆ ಮುಖಂಡನಿಗೆ ಆಸ್ಥೆಯಿರುವಂತೆ ಕಾಣಲಿಲ್ಲ.

ಕಟ್ಟೆ ದಾಟುವ ಮುನ್ನ ಒಮ್ಮೆ ನನ್ನೆಡೆಗೆ ತಿರುಗಿ ಮನದಲ್ಲೇ ನಿಮಗೆ ಧಿಕ್ಕಾರವಿರಲಿ ಎಂದು ಹೇಳಿ ಪರತಂತ್ರದಿಂದ ಸ್ವತಂತ್ರ್ಯದೆಡೆಗೆ ಈಜುತ್ತಾ ಮುಂದರಿಯಿತು.

ಡಾ.ಅಶೋಕ ಕೆ.ಆರ್. ಸುಳ್ಯ.

No comments:

Post a Comment

Thanku