Thursday, June 7, 2012

ಹೀಗೊಂದು ಮದುವೆ..


ಕಡೇನಂದಿಹಳ್ಳಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಕುಗ್ರಾಮ. ಹತ್ತಿರಹತ್ತಿರ ಐನೂರು ಮನೆಗಳಿರುವ ಈ ಹಳ್ಳಿಯಲ್ಲಿ ದ್ವಾರದಲ್ಲೇ ಸುಮಾರು ನೂರು ವರ್ಷದಷ್ಟು ಹಳೆಯದಾದ ಪುಟ್ಟ ಶಾಲೆ ಇದೆ. ಈಗ ಈ ಹಳ್ಳಿಯ ಎಲ್ಲರ ಕೈಗಳಿಗೆ ಮೊಬೈಲ್ ಫೋನ್ಗಳು ಬಂದಿದ್ದರೂ ಹಳ್ಳಿಗೆ ಇಲ್ಲಿಯ ತನಕ ಒಂದು ಆಲೋಪಥಿಕ್ ಆಸ್ಪತ್ರೆ ಬಂದಿಲ್ಲ.
ಹಳೆ ಮೈಸೂರು ಸಂಸ್ಥಾನದ ಕೊನೆ ಹಳ್ಳಿಯಾಗಿದ್ದ ಕಡೇನಂದಿಹಳ್ಳಿ ತನ್ನ ಚಹರೆಯಲ್ಲಿ ನಮ್ಮ ಬಹಳಷ್ಟು ಹಳ್ಳಿಗಳಂತೆಯೇ ಇದೆ. ಉದಾಹರಣೆಗೆ ಕೆಟ್ಟದಿಕ್ಕು ಎಂದೇ ಪರಿಗಣಿಸಲಾಗುವ ದಕ್ಷಿಣಕ್ಕೆ ದಲಿತರ ಕೇರಿ ಇದೆ. ಇದಾದ ನಂತರ ಮಧ್ಯಮ ಜಾತಿಗಳ ಕೇರಿ. ಅದಾದನಂತರವೇ ಮೇಲು ಜಾತಿಯ ಲಿಂಗಾಯತರ ಮನೆಗಳಿವೆ. ಲಿಂಗಾಯತರ ಕೇರಿಯ ಪಕ್ಕವೇ ಒಂದು ಹಳೇ ದೇವಸ್ಥಾನ ಇದೆ. ಅದೀಗ ಪಾಳು ಬಿದ್ದಿರುವುದರಿಂದ ಅದರ ಪಕ್ಕದಲ್ಲೇ ಒಂದು ಹೊಸ ದೇವಸ್ಥಾನ ನಿಮರ್ಾಣದ ಕೆಲಸ ನಡೆಯುತ್ತಿದೆ. ದೇವಸ್ಥಾನದ ಪಕ್ಕದಲ್ಲೇ ಇರುವ ಶಾಲಾ ಕಟ್ಟಡ ಸುಣ್ಣದ ಮುಖ ನೋಡಿ ಹಲವಾರು ವರ್ಷಗಳೇ ಆಗಿದ್ದರೂ ಅದರ ಹತ್ತಿರವೇ ಕೆತ್ತನೆಗಳನ್ನು ಹೊಂದಿರುವ ಕಲ್ಲಿನ ಗೋಡೆಗಳು ದೇವಸ್ಥಾನಕ್ಕೆಂದು ಸಿದ್ಧವಾಗುತ್ತಿರುವುದು ಕಡೇನಂದಿಹಳ್ಳಿಯ ಮತ್ತೊಂದು ಮುಖವೊಂದನ್ನು ಅನಾವರಣ ಮಾಡುವಂತಿದೆ.
ಸ್ವಲ್ಪ ಎತ್ತರದ ಪ್ರದೇಶದಲ್ಲಿ ಈ ಹಳ್ಳಿ ಇದ್ದು ಇದರ ಸುತ್ತ 32 ಚಿಕ್ಕ ಮತ್ತು ದೊಡ್ಡ ಕೆರೆಗಳಿವೆ. ಪುರಾತನ ಕಾಲದ ಈ ಕೆರೆಗಳನ್ನು ಎಷ್ಟು ವ್ಯವಸ್ಥಿತವಾಗಿ ನಿಮರ್ಿಸಲಾಗಿದೆ ಎಂದರೆ ಒಂದು ಕೆರೆಯ ನೀರು ತುಂಬಿದರೆ ಇನ್ನೊಂದು ಕೆರೆಗೆ ಹೋಗುವಂತೆ ಹಾಗೂ ಊರಿನ ಎಲ್ಲಾ ಕೆರೆಗಳು ತುಂಬಿದ ನಂತರವಷ್ಟೇ ಆ ಊರಿನಲ್ಲಿ ಬಿದ್ದ ಮಳೆನೀರು ಪಕ್ಕದ ಹಿರೇಕೇರೂರಿನ ದುರ್ಗಮ್ಮನ ಕೆರೆಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಏಳನೆ ತರಗತಿ ತನಕ ಇಲ್ಲಿರುವ ಶಾಲೆಯಲ್ಲಿ ಓದಿದ ನೂರಾರು ಹಳ್ಳಿಯ ಹುಡುಗರು ಆನಂತರ ಹತ್ತಿರದ ಪೇಟೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಸಕರ್ಾರಿ ನೌಕರರಾಗಿ, ಇಂಜಿನಿಯರ್ಗಳಾಗಿ, ವೈದ್ಯರಾಗಿ, ಅಧ್ಯಾಪಕರಾಗಿ, ವಕೀಲರಾಗಿ ಬದುಕುತ್ತಿದ್ದಾರೆ.
ನೀರಾವರಿ ಇಲ್ಲದಿರುವುದರಿಂದ ಈ ಹಳ್ಳಿಯ ರೈತಾಪಿಗಳು ಮಳೆಯನ್ನೇ ಆದರಿಸಿದ್ದಾರೆ. ಹೆಚ್ಚಿನವರು ಚಿಕ್ಕ ಹಿಡುವಳಿದಾರರಾಗಿದ್ದು, ಹತ್ತಿ ಮತ್ತು ಮೆಕ್ಕೆ ಜೋಳ ಬೆಳೆಯುತ್ತಾರೆ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ಇದ್ದಾಗ ಈ ಹಳ್ಳಿಯ ಒಂದಿಷ್ಟು ಜನ ರೈತ ಸಂಘದೊಂದಿಗೆ ಗುರುತಿಸಿಕೊಂಡಿದ್ದರೂ ಆ ಸಂಘಟನೆಯ ಪ್ರಗತಿಪರ ಯೋಚನೆಗಳು ಇಲ್ಲಿನ ಬದುಕನ್ನು ತಟ್ಟಲೇ ಇಲ್ಲ. ಇಲ್ಲಿಯ ತನಕ ಯಾವ ಪ್ರಗತಿಪರ ಚಿಂತನೆಯಾಗಲಿ, ಚಳವಳಿಯಾಗಲಿ ಕಡೇನಂದಿಹಳ್ಳಿಯನ್ನು ಪ್ರಭಾವಿಸಲಿಲ್ಲವಾದ್ದರಿಂದ ಇದು ಒಂದು ರೀತಿಯಲ್ಲಿ ಜಗತ್ತಿಗೆ ಇನ್ನೂ ಅಷ್ಟಾಗಿ ತೆರೆದುಕೊಳ್ಳದೇ ಇರುವ ಕುಗ್ರಾಮ ಎಂದರೂ ತಪ್ಪಾಗಲಿಕ್ಕಿಲ್ಲ.
ಇಂತಹ ಒಂದು ಹಳ್ಳಿಯಲ್ಲಿ ಕಳೆದ ವಾರ ಒಂದು ಅಪರೂಪದ ಘಟನೆ ನಡೆಯಿತು. ಅದು ನಮ್ಮ ಕುಮಾರ್ ಬುರಡಿಕಟ್ಟಿ ಮತ್ತು ಗೀತಾ ಸಿ.ಎನ್. ಮಾಡಿಕೊಂಡ ಸರಳ ಮದುವೆ. ಈಗ ಕಡೇನಂದಿಹಳ್ಳಿಯಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಈ ಮದುವೆಯದ್ದೇ ಸುದ್ದಿ!
ಕುಮಾರ್ ಬುರಡಿಕಟ್ಟಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ. (ಈಗ ದ ಸಂಡೇ ಇಂಡಿಯನ್ ಎಂಬ ಪಾಕ್ಷಿಕದಲ್ಲಿ ಅಸೋಸಿಯೇಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾನೆ) ನಮ್ಮಂತೆಯೇ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ, ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಯುವಕ. ನಗು ಮುಖದ, ತಮಾಷೆಯ ಕುಮಾರ್ ಕಂಡರೆ ನನಗೆಷ್ಟು ಪ್ರೀತಿ ಅಂದರೆ ನಾನು ಅವನನ್ನು ಕೂಸೆ ಎಂದು ಕರೆದರೆ ಆತ ನನ್ನನ್ನು ಟಠಟ ಎಂದು ಕರೆಯುತ್ತಾನೆ.
ಇಂತಹ ಕುಮಾರ್ಗೆ ಮದುವೆ ಮಾಡಲು ಅವನ ಸಹೋದರರು ನಿರ್ಧರಿಸಿದರು. ಆಗ ಕುಮಾರ್ ಹಾಕಿದ ಷರತ್ತುಗಳು ಹುಡುಗಿಯ ಮನೆಯವರು ವರದಕ್ಷಿಣೆ ಕೊಡಬಾರದು ಮತ್ತು ಸರಳ ಮದುವೆಗೆ ಒಪ್ಪಬೇಕು ಎಂಬುದು.
ಈಗ ನಮ್ಮ ಸಮಾಜದಲ್ಲಿ ಈ ವರದಕ್ಷಿಣೆ ಎಂಬ ಪಿಡುಗು ಯಾವ ಮಟ್ಟಕ್ಕೆ ಹಬ್ಬಿದೆ ಎಂದರೆ ಪ್ರಗತಿಪರ ಯುವಕನೊಬ್ಬ ತನಗೆ ವರದಕ್ಷಿಣೆ ಬೇಡವೆಂದರೆ ಆತನಲ್ಲಿ ಏನೋ ಐಬಿದೆ ಎಂದೇ ಹುಡುಗಿಯ ಮನೆಯವರು ಭಾವಿಸಿ ಮದುವೆ ಮಾತುಕತೆಯನ್ನೇ ನಿಲ್ಲಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ವರದಕ್ಷಿಣೆ ಮಾತ್ರವಲ್ಲ, ಹೆಚ್ಚಿನ ಜನ ಒಪ್ಪದೇ ಇರುವ, ಸಾಂಪ್ರದಾಯಿಕ ಮದುವೆಗಳಿಗೆ ಸಿಗುವಷ್ಟು ಸಾಮಾಜಿಕ ಮನ್ನಣೆ ಸಿಗದಿರುವ ಈ ಸರಳ ಮದುವೆ ಆಗಬೇಕೆನ್ನುವ ಹುಡುಗನಿಗೆ ಯಾರು ತಾನೆ ತಮ್ಮ ಮಗಳನ್ನು ಕೊಡಲು ಒಪ್ಪುತ್ತಾರೆ?
ಕುಮಾರನ ಆಶೆಗಳಿಗೆ ಮೊದಲು ಸ್ಪಂದಿಸಿದವರು ಆತನ ಮೂವರು ಸಹೋದರರು. ಹಿರಿಯ ಸಹೋದರ ಬಿ.ಎಚ್. ಬುರಡಿಕಟ್ಟಿ ರಾಣೇಬೆನ್ನೂರಿನಲ್ಲಿ ವಕೀಲರಾಗಿದ್ದು ಪ್ರಗತಿಪರ ಚಿಂತನೆಗಳನ್ನು ಹೊಂದಿರುವವರು. ಎರಡನೆ ಅಣ್ಣ ಕಲ್ಲಪ್ಪ ಕೃಷಿಕರಾಗಿದ್ದರೂ ತಮ್ಮ ಸಹೋದರರು ಸರಿಯಾದದ್ದನ್ನೇ ಮಾಡುತ್ತಾರೆಂಬ ನಂಬಿಕೆ ಇಟ್ಟುಕೊಂಡಿರುವವರು. ಮೂರನೆ ಅಣ್ಣ ರಾಜೇಂದ್ರ. ತೀರ್ಥಹಳ್ಳಿಯಲ್ಲಿ ಶಾಲಾ ಮಾಸ್ಟರ್ ಆಗಿದ್ದು, ಸೂಕ್ಷ್ಮ ಸಂವೇದನೆಯ ಕವಿಯೂ ಆಗಿದ್ದಾರೆ. ಈಗ ತೀರ್ಥಹಳ್ಳಿಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ರಾಜೇಂದ್ರ ಸ್ವತಃ ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದವರು. ಇನ್ನು ಕುಮಾರನ ವಿಧವಾ ತಾಯಿ ವೀರಮ್ಮನವರು ಪುತ್ರರ ಜನಪರ ಚಿಂತನೆಗಳಿಗೆ ಸ್ಪಂದಿಸುವವರು.
ಇಂತಹ ಬುರಡಿಕಟ್ಟಿ ಸಹೋದರರಿಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಚೆನ್ನಬಸಪ್ಪ ಮತ್ತು ಲಲಿತಾ ಅವರ ಮಗಳು ಗೀತಾ ಬಗ್ಗೆ ಕುಮಾರ್ ಅವರ ಸಂಬಂಧಿಯೇ ಆಗಿರುವ ಮುದೇನೂರ್ ಮಂಜು ಎಂಬುವವರು ಹೇಳಿದರು. ಅದು ಸಣ್ಣ ಹಿಡುವಳಿ ಹೊಂದಿರುವ ಸಾಮಾನ್ಯ ರೈತ ಕುಟುಂಬ. ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ತಮ್ಮ ಕೈಲಾದಷ್ಟು ವಿದ್ಯೆ ಕೊಡಿಸಿರುವವರು. ಆದರೆ ಸರಳ ಮದುವೆ, ಪ್ರಗತಿ ಪರತೆ, ಇತ್ಯಾದಿಗಳ ಬಗ್ಗೆ ಕಂಡುಕೇಳರಿಯದವರು.
ಚೆನ್ನಬಸಪ್ಪ ದಂಪತಿಗಳಿಗೆ ಮತ್ತು ಅವರ ಪುತ್ರಿ ಗೀತಾಳಿಗೆ ಕುಮಾರ್ ಒಪ್ಪಿಗೆಯಾದ. ಆದರೆ ಕಷ್ಟದ ಕೆಲಸ ಎದುರಾಗಿದ್ದೇ ಆನಂತರ. ರಾಜೇಂದ್ರ ಮತ್ತು ಇತರ ಸಹೋದರರು ಚೆನ್ನಬಸಪ್ಪನವರ ಕುಟುಂಬದವರಿಗೆ ಪುರೋಹಿತಶಾಹಿಗಳು ಇರದಂತಹ, ಮಹೂರ್ತ-ಗಳಿಗೆಗಳನ್ನು ಗಮನಕ್ಕೆ ತೆಗೆದುಕೊಳ್ಳದಂತಹ ಮಂತ್ರ ಮಾಂಗಲ್ಯ ಎಂಬ ಸರಳ ಮದುವೆ ಬಗ್ಗೆ ವಿವರಿಸಿದರು. ಅದಕ್ಕೆ ಒಪ್ಪಿಸಲು ತಿಣುಕಾಡಿದರು. ಬಹಳ ಶ್ರಮ ವಹಿಸಿದ ನಂತರ ಚೆನ್ನಬಸಪ್ಪ ಮತ್ತು ಅವರ ಮಡದಿ ಲಲಿತಮ್ಮ ಒಪ್ಪಿಕೊಂಡರು. ಆದರೆ ಅವರ ಪುತ್ರಿ ಗೀತಾ ತಕರಾರೆತ್ತಿದಳು. ಇದೆಂತಹ ಮದುವೆ? ನನಗೆ ಸರಿಯಾಗಿ ಮದುವೆ ಮಾಡಿಸಿಕೊಡಿ ಎಂದಳು. ಆದರೆ ಚೆನ್ನಬಸಪ್ಪನವರು ಬುರಡಿಕಟ್ಟಿ ಸಹೋದರರು ಹೇಳಿದಂತೆಯೇ ಮದುವೆ ನಡೆಯಲಿ ಎಂದರು.
ಅಷ್ಟು ಸಾಕಾಯಿತು, ಗೀತಾಳ ಊರಲ್ಲಿ ಜನ ಗುಸುಗುಸು ಮಾತನಾಡಿಕೊಳ್ಳಲು. ಹುಡುಗ ವರದಕ್ಷಿಣೆ ಬೇಡ ಅಂದನಂತೆ. ಅವನಲ್ಲಿ ಏನೋ ಐಬು ಇರಬೇಕು. ಮದುವೆಯಲ್ಲಿ ಅಯ್ಯನೋರು ಇರಲ್ಲವಂತೆ. ಅದೇನೋ ಭಾಷಣ ಮಾಡುತ್ತಾರಂತೆ ಎಂದೆಲ್ಲ ಮಾತನಾಡಿಕೊಂಡರು. ಕುಮಾರನ ಹಳ್ಳಿಯಲ್ಲೂ ಅಂತಹದ್ದೇ ಪರಿಸ್ಥಿತಿ. ಆ ದಿನ ಯಾವುದೇ ಮದುವೆ ಮಹೂರ್ತಗಳಿಲ್ಲ. ಯಾವ ಮದುವೆಯೂ ನಡೆಯುತ್ತಿಲ್ಲ. ನೀವು ಹೇಗೆ ಮದುವೆ ಮಾಡುತ್ತಿದ್ದೀರಿ. ಇದೇನು ಲಗ್ನ ಪತ್ರಿಕೆ ಲಗ್ನ ಪತ್ರಿಕೆ ತರ ಇಲ್ಲ? ಇದಕ್ಕೆ ಅರಿಷಿಣ ಹಚ್ಚಿಲ್ಲ? ಸೊಸೈಟಿ ಮೀಟಿಂಗ್ ಆಹ್ವಾನವಿದ್ದಂತಿದೆ. ಮುಹೂರ್ತದ ಬದಲು ಮಾತುಗಾರರ ಹೆಸರುಗಳಿವೆ ಎಂದೆಲ್ಲ ಪ್ರಶ್ನಿಸಲಾರಂಭಿಸಿದರು. ಮದುವೆ ಸಾಂಪ್ರಾದಾಯಿಕ ಮದುವೆಗಳಲ್ಲಾದರೆ ಮೂರು ದಿನ ಮುಂಚಿತವಾಗಿಯೇ ಮದುಮಗನಿಗೆ ಅರಿಷಿಣ ಹಚ್ಚಿ ಹೊರ ಹೋಗದಂತೆ ಕೂರಿಸಿ ಬಿಟ್ಟಿರುತ್ತಾರೆ. ಆದರೆ, ಕುಮಾರ್ ಹಿಂದಿನ ದಿನ ಮಧ್ಯರಾತ್ರಿಯ ತನಕವೂ ಸ್ನೇಹಿತರೊಡಗೂಡಿ ಹೊರಗಡೆ ಸುತ್ತಾಡಿಕೊಂಡು ಕೆಲಸ ಮಾಡುತ್ತಿದ್ದದನ್ನು ಕಂಡು ಜನರಿಗೂ ಮತ್ತೂ ಆಶ್ಚರ್ಯ. ಮದುವೆಯ ಬೆಳಗ್ಗೆಯೂ ಯಾರೋ ಒಬ್ಬರು ಕುಮಾರ, ಇಷ್ಟುಹೊತ್ತಾದರೂ ಓಲಗದವರು ಬಂದಿಲ್ಲವಲ್ಲಾ? ಎಂದು ಕೇಳಿದರು. ಕರೆದಿದ್ದರ ತಾನೆ ಅವರು ಬರೋದು ಎಂದು ಕುಮಾರ್ ಉತ್ತರಿಸಿದಾಗ ಪ್ರಶ್ನೆ ಕೇಳಿದವನಿಗೆ ಇದೆಂತಹ ಮದುವೆ ಎಂದು ಅಚ್ಚರಿ. ಮದುವೆಗಾಗಿ ಊಟ ತಯಾರಿಸುವವರ ಹತ್ತಿರ ಹೋದಾಗಲೂ ಇದೇ ಸಮಸ್ಯೆ. ಮದುವೆಯ ಹಿಂದಿನ ದಿನ ರಾತ್ರಿ ಎಷ್ಟು ಜನರಿಗೆ ಊಟ ರೆಡಿ ಮಾಡಬೇಕು ಎಂಬ ಅವರ ಪ್ರಶ್ನೆಗೆ ಯಾರಿಗೂ ಬೇಡ ಎಂದು ಕುಮಾರ್ ಹೇಳಿದ್ದ. ಅದಕ್ಕೆ ಅವರು ದಿಗ್ಭ್ರಮೆ ಗೊಂಡು ಇದು ಮದುವೆ ಸಮಾರಂಭ ತಾನೆ ಅಂತ ಪ್ರಶ್ನಿಸಿದ್ದರು.
ವಿಧಿ ಇಲ್ಲದೆ ಇಂತಹ ಮದುವೆ ಸಮಾರಂಭಕ್ಕೆ ಒಪ್ಪಿದ್ದ ಗೀತಾ ಕೂಡ ಅದೇನೋ ಮಾಡಕ್ಕೆ ಹೊರಟಿದ್ದೀರಿ. ಇದು ನನಗೆ ಸರಿ ಕಾಣಿಸಲಿಲ್ಲ ಅಂದರೆ ನಾನು ಬೇರೆಯವರಿಗೆ ಇಂತಹ ಮದುವೆ ಸಮಾರಂಭಕ್ಕೆ ಒಪ್ಪಬೇಡಿ ಅಂತ ಹೇಳ್ತೀನಿ ಎಂದು ಪದೇ ಪದೇ ಕುಮಾರನಿಗೆ ಎಚ್ಚರಿಕೆ ನೀಡುತ್ತಿದ್ದಳು.
ಇದೆಲ್ಲದರಿಂದಾಗಿ ಇಡೀ ಕಡೇನಂದಿಹಳ್ಳಿಯಲ್ಲಿ ಕುಮಾರನ ಮದುವೆ ಸಮಾರಂಭ ಕುತೂಹಲವನ್ನು ಕೆರಳಿಸಿತ್ತು. ಹಳ್ಳಿಯಲ್ಲಿ ಒಂದು ಪುಟ್ಟ ಸಮುದಾಯ ಭವನವಿದ್ದರೂ ಬುರಡಿಕಟ್ಟಿ ಕುಟುಂಬದ ಮನೆಯ ಮುಂದೆಯೇ ರಸ್ತೆಗೆ ಬಣ್ಣಬಣ್ಣದ ಶಾಮಿಯಾನ ಹಾಕಿಸಲಾಗಿತ್ತು. ಒಂದು ಕಡೆ ಚಿಕ್ಕ ವೇದಿಕೆ ಇದ್ದರೆ ಇನ್ನೊಂದು ಕಡೆ ಕುಚರ್ಿಗಳನ್ನು ಹಾಕಲಾಗಿತ್ತು. ಹಿಂದಿನ ದಿನವೇ ಮಳೆ ಬಿದ್ದಿದ್ದರಿಂದ ಬಹಳಷ್ಟು ರೈತರಿಗೆ ಬಿತ್ತನೆ ಕೆಲಸ ಕಾದಿತ್ತು. ಆದರೂ ಅವರೆಲ್ಲ ಬೆಳಗ್ಗೆಯೂ ಹೋಗಿ ಹೊಲದಲ್ಲಿ ಆದಷ್ಟು ಕೆಲಸ ಮುಗಿಸಿ ಮದುವೆ ನೋಡಲು ಬಂದಿದ್ದರು. ಮಹಿಳೆಯರಂತೂ ತಮ್ಮ ಕುಚರ್ಿಗಳಲ್ಲಿ, ಮನೆ ಜಗುಲಿಯ ಮೇಲೆ ಕಿಕ್ಕಿರಿದಿದ್ದರು.
ರಾಜೇಂದ್ರ ಬುರಡಿಕಟ್ಟಿ ಈ ಸರಳ ಮದುವೆಯ ಬಗ್ಗೆ ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದರು. ಈ ಸಮಾರಂಭಕ್ಕೆಂದು ಬಂದಿದ್ದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪನವರು ಚಾಲನೆ ನೀಡಿದರು. ಮೂವತ್ತು ವರ್ಷಗಳ ಹಿಂದೆ ತಾವು ಉದ್ದೇಶಪೂರ್ವಕವಾಗಿಯೇ ರಾಹುಕಾಲದಲ್ಲಿ ಸರಳ ಮದುವೆ ಆದಾಗ ಪುರೋಹಿತರು ತಮಗೆ ಮಕ್ಕಳಾಗುವುದಿಲ್ಲ ಎಂದು ಹೆದರಿಸಲು ಪ್ರಯತ್ನಿಸಿದರು ಎಂದೂ, ಆದರೂ ತಾವೀಗ ಮೂವರು ಅದ್ಭುತ ಮಕ್ಕಳಿಗೆ ತಂದೆಯೆಂದೂ, ಮಡದಿ-ಮಕ್ಕಳೊಂದಿಗೆ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂದು ಹೇಳುವ ಮೂಲಕ ವೀರಭದ್ರಪ್ಪನವರು ಮುಹೂರ್ತ, ಒಳ್ಳೆ ಗಳಿಗೆ ಎಂಬಂತಹ ಮೂಢ ನಂಬಿಕೆಗಳ ವಿರುದ್ಧ ಎಚ್ಚರಿಕೆ ಮೂಡಿಸಿದರು. ಶಿವಸುಂದರ್, ಡಾ.ವಿ.ಎಸ್.ಶ್ರೀಧರ, ಪಾರ್ವತೀಶ ಮತ್ತು ನಾನು ಎಲ್ಲರೂ ಸರಳ ಮದುವೆಗಳ ಅವಶ್ಯಕತೆ, ಇತ್ಯಾದಿಗಳ ಬಗ್ಗೆ ಮಾತನಾಡಿದೆವು. ಇಂತಹ ಸಮಾರಂಭಕ್ಕೆ ಒಪ್ಪಿದ ಚೆನ್ನಬಸಪ್ಪ, ಅವರ ಪತ್ನಿ ಲಲಿತಮ್ಮ ಮತ್ತು ಮಗಳು ಗೀತಾಳಿಗೆ ನಮ್ಮ ಅಭಿನಂದನೆಗಳನ್ನು ಹೇಳುವುದನ್ನು ಮರೆಯಲಿಲ್ಲ.
ಕುಮಾರ್ ಮತ್ತು ಗೀತಾ ಮಂತ್ರ ಮಾಂಗಲ್ಯವನ್ನು ಓದುವ ಮೂಲಕ ದಾಂಪತ್ಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಪರಸ್ಪರ ಹಾರಗಳನ್ನು ಹಾಕಿಕೊಂಡ ನಂತರ ಗೀತಾಳ ಕೊರಳಿಗೆ ಕುಮಾರ ತಾಳಿ ಕಟ್ಟಿದ. ಕುಮಾರನ ಕೈಬೆರಳಿಗೆ ಗೀತಾ ಉಂಗುರ ತೊಡಿಸಿದಳು. ಅಲ್ಲಿದ್ದ ಜನರೆಲ್ಲ ಚಪ್ಪಾಳೆ ತಟ್ಟುವ ಮೂಲಕ ನವ ದಂಪತಿಗಳಿಗೆ ಆಶೀವರ್ಾದ ಮಾಡಿದರು. ಎಲ್ಲರ ಭಾಷಣಗಳನ್ನು, ಸರಳ ಮದುವೆಯ ಕ್ರಿಯೆಗಳನ್ನು ಅಲ್ಲಿದ್ದ ಜನರೆಲ್ಲ ತದೇಕ ಚಿತ್ತರಾಗಿ ಕೇಳಿಸಿಕೊಳ್ಳುತ್ತಿದ್ದರು, ನೋಡುತ್ತಿದ್ದರು. ಜನ ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದರೆಂದರೆ ಜನರ ಮಧ್ಯೆ ಎಲ್ಲೋ ಒಂದು ಮಗು ಅಳುವುದಕ್ಕೆ ಶುರು ಮಾಡಿದಾಗ ಹತ್ತಿರಲ್ಲಿದ್ದ ಒಬ್ಬರು ಏ, ಅದನ್ನು ಆ ಕಡಿ ಕರಕೊಂಡು ಹೋಗು. ನನಗೆ ಕೇಳಿಸ್ತಿಲ್ಲ ಎಂದು ಕಿಡಿಕಾರಿದರು.
ಮದುವೆ ಸಮಾರಂಭ ಮುಗಿದ ನಂತರ ರಾಜೇಂದ್ರ ಅವರು ಈಗ ನಿಮಗೆಲ್ಲ ಒಂದು ಚೀಟಿಯನ್ನು ಹಂಚುತ್ತೇವೆ. ಅದರಲ್ಲಿ ನಿಮಗೆ ಈ ಸಮಾರಂಭದ ಬಗ್ಗೆ ಏನನ್ನಿಸಿತು ಎಂದು ಬರೆದುಕೊಡಿ. ಮೆಚ್ಚಿಗೆ ಇದ್ದರೆ ಅದನ್ನೇ ಹೇಳಿ, ಬೈಯುವುದಿದ್ದರೆ ಅದನ್ನೂ ಬರೆಯಿರಿ ಎಂದರು. ಎಲ್ಲರೂ ಆ ಚೀಟಿಗಳನ್ನು ಪಡೆದು ಬರೆಯಲು ಉತ್ಸುಕರಾದರು. ಅಲ್ಲಿದ್ದ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು ಬರೆಯುವ ತವಕ ಆದರೆ, ಹೆಚ್ಚಿನ ಜನರ ಬಳಿ ಪೆನ್ಗಳು ಇರಲಿಲ್ಲವಾದ್ದರಿಂದ ಪೆನ್ಗಳಿಗೆ ಬೇಡಿಕೆಯೋ ಬೇಡಿಕೆ! ವಿವಿಧ ವಯೋಮಾನದವರಾದ 77 ಜನ ತಮ್ಮ ಅಭಿಪ್ರಾಯಗಳನ್ನು ಬರೆದು ಕೊಟ್ಟರು. ಅವುಗಳನ್ನು ಮೊನ್ನೆ ಕುಮಾರ ನನಗೆ ತಂದು ಕೊಟ್ಟ. ಅವುಗಳನ್ನು ಓದಿದಾಗ ನಮ್ಮೆಲ್ಲರಿಗೂ ತುಂಬಾ ಖುಷಿಯಾಯಿತು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನೀಡಿದ್ದೇನೆ.
* ಸರಸ್ವತಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ: ನಮ್ಮ ಸಂಘದ 20 ಸದಸ್ಯೆಯರು ಈ ಮದುವೆಗೆ ಶುಭ ಹಾರೈಸಿದ್ದೇವೆ. ಈ ರೀತಿ ಎಲ್ಲರೂ ಸರಳವಾಗಿ ಮದುವೆ ಆಗಬೇಕೆಂಬ ನಮ್ಮ ಅಭಿಪ್ರಾಯವನ್ನು ಎಲ್ಲರಿಗೂ ತಿಳಿಸುತ್ತೇವೆ.
* ಬಸವರಾಜು, 25: ಇಂತಹ ಮದುವೆ ಹೊಸ ಪೀಳಿಗೆಗೆ ಹೊಸ ದಾರಿಯನ್ನು ತೋರುತ್ತದೆ. ಕಡೇನಂದಿಹಳ್ಳಿಯಲ್ಲಿ ಇದು ನಡೆದದ್ದು ಸಂತೋಷ ತಂದಿದೆ.
* ಮಲ್ಲಿಕಾಜರ್ುನ, 24: ನಮ್ಮೂರ ಮಟ್ಟಿಗೆ ಇದು ಹೊಸತು. ಆದರೆ ತುಂಬಾ ಚೆನ್ನಾಗಿತ್ತು. ನಮ್ಮ ಗೆಳೆಯರೆಲ್ಲಾ ಹೀಗೆ ಮದುವೆ ಆಗಬೇಕೆಂದು ತಿಳಿಸುತ್ತೇನೆ.
* ಶಾರದಾ ಎ.ಎಸ್., 24: ಇದರಿಂದ ತಂದೆಯ ಹೊರೆ ತಪ್ಪಿ ಎಲ್ಲರೂ ಸಂತೋಷದಿಂದ ಬಾಳಲು ಅನುಕೂಲವಾಗುತ್ತದೆ.
* ಸರಳಾ ಬಿ.ಸಿ, 40: ಈ ಸರಳ ಮದುವೆ ತುಂಬಾ ಚೆನ್ನಾಗಿತ್ತು. ನನ್ನ ಮಕ್ಕಳಿಗೆ ಈ ರೀತಿ ಮದುವೆ ಮಾಡಲು ಪ್ರಯತ್ನಿಸುವೆ.
* ನೇತ್ರಾವತಿ ಚಂದ್ರಶೇಖರ್, 28: ಈ ಮದುವೆ ತುಂಬಾ ಚೆನ್ನಾಗಿತ್ತು. ನಮ್ಮ ಸಾಂಪ್ರದಾಯಿಕ ಮದುವೆಗಳಲ್ಲಿ ಬದಲಾವಣೆ ಆಗಬೇಕು ಅಂತಾ ನಾನು ಅಂದುಕೊಂಡಿದ್ದೆ. ಆದರೆ ಹಳ್ಳಿಗಾಡಿನಲ್ಲಿ ಅದೆಲ್ಲ ನಡೆಯುವುದಿಲ್ಲ ಎಂದು ಅಂದುಕೊಂಡಿದ್ದೆ. ಇಲ್ಲಿ ಇಂತಹ ಮದುವೆ ನಡೆದದ್ದು ಸಂತೋಷ ತಂದಿದೆ.
* ವಿ. ಕಲ್ಲಪ್ಪ, 80: ಇದು ಹೊಸ ಪದ್ಧತಿ. ನಮ್ಮ ಮನಸ್ಸಿಗೆ ಸಂತೋಷ ತಂದಿದೆ.
* ಏ. ಬಸವರಾಜಪ್ಪ ಮಲ್ಲಾಪುರ, 65: ಈ ಸರಳ ಮದುವೆ ನಮಗೆ ಬಹಳ ಸಂತೋಷ ತಂದಿದೆ. ಆಡಂಬರದ ಮದುವೆಗಿಂತ ಈ ಮದುವೆ ಇಷ್ಟವಾಯಿತು. ಇದನ್ನು ಒಪ್ಪುತ್ತೇವೆ.
* ಗದಿಗೆಪ್ಪ, 42: ಈ ಸರಳ ಮದುವೆಗೆ ಶಾಮಿಯಾನ ಬೇಕಿತ್ತಾ? ಯಾವುದೋ ಒಂದು ಮರದ ಅಡಿ ಅಥವಾ ಗುಡಿಯಲ್ಲಿ ಮಾಡಬಹುದಿತ್ತು.
* ಗಜೇಂದ್ರ, 45: ಆಡಂಬರದ ಮದುವೆ ಮಾಡಿ ಸಾಲದ ಸುಳಿಯಲ್ಲಿ ಸಿಲುಕುತ್ತಿರುವಂತಹ ಕುಟುಂಬಗಳಿಗೆ ಇದು ಮಾದರಿಯಾಗಿದೆ. ಇಂತಹ ಸರಳ ಮದುವೆ ನಡೆಯುವುದರಿಂದ ನಮ್ಮ ಸಮಾಜದ ಹೆಚ್ಚಿನ ಸಮಸ್ಯೆಗಳು ಬಗೆಹರಿಯುತ್ತವೆ.
* ಶಿಲ್ಪಾ ಬಿ.ಜಿ. 21: ಸಂಪ್ರದಾಯದ ಕಟ್ಟುಪಾಡುಗಳಿಲ್ಲದ ಈ ಮದುವೆ ನನಗೆ ಇಷ್ಟವಾಯಿತು.
* ಚನ್ನಯ್ಯ ಬಿ. ಮಾರವಳ್ಳಿ, 37: ಎಲ್ಲಾ ಮದುವೆಗಳೂ ಹೀಗೆಯೇ ನಡೆಯಬೇಕು.
* ಅನ್ಸರ್ ದಿವಾನಖಾನ, 39: ಮುಂದಿನ ಜನ್ಮ ಎಂಬುದಿದ್ದರೆ ನಾನು ಹೀಗೆ ಮದುವೆ ಆಗುತ್ತೇನೆ.
* ಸಾವಿತ್ರಿ ಸಂ, 23: ನಾನು ಇದೇ ಮೊದಲನೆಯ ಬಾರಿ ಇಂತಹ ಮದುವೆಯನ್ನು ನೋಡಿದ್ದು. ಮೊದಲು ನನಗೆ ಇದೆಂತಹ ಮದುವೆ ಅನ್ನಿಸಿತು. ಈ ಸರಳ ಮದುವೆ ಸಮಾರಂಭವನ್ನು ನೋಡಿದ ಮೇಲೆ ನನಗೆ ಇದಕ್ಕಿಂತಲೂ ಸರಳವಾಗಿ ಮದುವೆ ಆಗಬೇಕು ಅನ್ನಿಸಿತು.
* ರಾಘವೇಂದ್ರ ಟಿ.ಎಂ. 20: ನಾನು ಕಂಡ ಅತ್ಯಂತ ಸರಳ ಮತ್ತು ಅದ್ಭುತ ಮದುವೆ ಇದು.
* ಹೂವಪ್ಪ ಶಿರಗಂಬಿ, 53: ಈ ತರಹದ ಹೊಸ ರೀತಿಯ ಮದುವೆ ನಮಗೆ ಅಚ್ಚರಿ ಆಯಿತು. ಆದರೆ ಭಾಷಣಕಾರರು ಇದರ ಬಗ್ಗೆ ವಿವರ ಮಾಹಿತಿ ನೀಡಿದ ನಂತರ ನಮಗೆ ತುಂಬಾ ಇಷ್ಟವಾಯಿತು.
* ಕೆ.ಬಿ.ಶಿವಕುಮಾರ್, 20: ಸರಳ ಮತ್ತು ಸೂಪರ್ ಮದುವೆ ಸಾರ್!
ಇವರೆಲ್ಲರಿಗಿಂತ ಇವತ್ತು ಹೆಚ್ಚು ಸಂತೋಷ ಪಡುತ್ತಿರುವುದು ಮದುಮಗಳು ಗೀತಾ ಮತ್ತು ಆಕೆಯ ಹೆತ್ತವರು. ಗೀತಾಳ ಸ್ನೇಹಿತರೂ ಆಕೆಯಂತೆ ಮದುವೆಯಾಗಬೇಕು ಎಂದು ಆಕೆಗೆ ಹೇಳಿದ್ದಾರೆ.
ಹಾಗೆ ನೋಡಿದರೆ ಇದು ಅಂತರಜಾತಿ ಮದುವೆಯಲ್ಲ, ತೀರಾ ಸರಳವಾದ ಮದುವೆಯೂ ಅಲ್ಲ. ಕ್ರಾಂತಿಕಾರಕ ಮದುವೆಯಂತೂ ಅಲ್ಲವೇ ಅಲ್ಲ. ಆದರೆ ಕುಮಾರ್ ಮತ್ತು ಆತನ ಸಹೋದರರ ಉದ್ದೇಶ ಸಂಪ್ರದಾಯಿಕ ಶಾಸ್ತ್ರಗಳು ಇರದಂತಹ, ಆದಷ್ಟು ಸಿಂಪಲ್ ಆದ ಮದುವೆ ಸಮಾರಂಭವನ್ನು ತಮ್ಮ ಕುಗ್ರಾಮವಾದ ಕಡೇನಂದಿಹಳ್ಳಿಯಲ್ಲಿ ಮಾಡಬೇಕೆನ್ನುವುದೇ ಆಗಿತ್ತು. ಮತ್ತು ಆ ಮೂಲಕ ಹಲವರಾದರೂ ಸ್ಫೂತರ್ಿ ಪಡೆದು ತಮ್ಮ ಮಕ್ಕಳಿಗೆ ಇಂತಹ ಮದುವೆ ಮಾಡಿದರೆ ಅದೇ ತಾವು ತಮ್ಮ ಹಳ್ಳಿಗೆ ಪರಿಚಯಿಸಿದ ಪ್ರಗತಿಪರ ದೃಷ್ಟಿ ಎಂಬುದಾಗಿತ್ತು.
ಅದರಲ್ಲಿ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚ ಯಶಸ್ಸನ್ನು ಕಂಡಿದ್ದಾರೆ ಎನ್ನಬಹುದು.


ಕುಮಾರ್ ಬುರಡಿಕಟ್ಟಿಯವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಡೆನಂದಿಹಳ್ಳಿಯವರು. ಎಪ್ರಿಲ್ 07, 1978ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ರಮವಾಗಿ ಕಡೇನಂದಿಹಳ್ಳಿ ಮತ್ತು ಹಿರೇಕೇರೂರಿನಲ್ಲಿ. ಶಿವಮೊಗ್ಗೆಯಯಲ್ಲಿ ಕಾಲೇಜು ಶಿಕ್ಷಣ.
ವಿದ್ಯಾಥರ್ಿ ದೆಸೆಯಿಂದ ಆರಂಭಿಸಿ ಸತತ ಒಂದು ದಶಕ ಕಾಲ ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸುತ್ತಾ ಬಂದ ಕುಮಾರ್ ಬುರಡಿಕಟ್ಟಿ ಸಾಮಾಜಿಕ ಚಳವಳಿಗಳ ಭಾಗವಾಗಿ ದೆಹಲಿ, ಮುಂಬೈಗಳಲ್ಲಿಯೂ ಐದಾರು ವರ್ಷಗಳ ಕಾಲ ನೆಲೆಸಿದ್ದರು. 2002ರ ಗುಜರಾತ್ ನರಮೇಧ, ಹರ್ಯಾಣದ ಜಝಾರ್ನಲ್ಲಿ ನಡೆದ ದಲಿತರ ಮಾರಣಹೋಮ ಮುಂತಾದ ಹಲವಾರು ಘಟನೆಗಳ ಬಗ್ಗೆ ವಸ್ತುನಷ್ಠ ವರದಿಗಳನ್ನು ಹೊರತರಲು ರಚಿಸಲಾದ ಅನೇಕ ರಾಷ್ಟ್ರ ಮಟ್ಟದ ಸತ್ಯಶೋಧನಾ ಸಮಿತಿಗಳ ಸದಸ್ಯರಾಗಿ ಕಾರ್ಯನರ್ವಹಿಸಿದ್ದಾರೆ. 2004ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ಚುನಾವಣಾ ವಿಚಕ್ಷಣಾ ಸಮಿತಿಯ ಸದಸ್ಯರಾಗಿ ಭಾಗವಹಿಸಿದ್ದರು. 
ಕಳೆದ ಕೆಲವಾರು ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನರ್ವಹಿಸುತ್ತಿರುವ ಅವರು ಮೂರು ವರ್ಷಗಳ ಕಾಲ ಗೌರಿ ಲಂಕೇಶರ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿ ಈಗ ಅರಿಂಧಮ್ ಚೌಧುರಿಯವರ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಅಸೋಸಿಯೇಟ್ ಎಡಿಟರ್ ಮತ್ತು ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪ್ರಕಟಿತ ಕೃತಿಗಳು
* ಓ ಈಳಂ: ಎಲ್ಟಿಟಿಈ - ವೀರೋಚಿತ ಕದನ ಮತ್ತು ರಕ್ತಸಿಕ್ತ ಕಥನ (ಲಂಕೇಶ್ ಪ್ರಕಾಶನ - 2009): ಶ್ರೀಲಂಕಾದ ತಮಿಳು ರಾಷ್ಟ್ರೀಯತೆಯ ಪ್ರಶ್ನೆ ಹಾಗೂ ವೆಲುಪಿಳ್ಳೈ ಪ್ರಭಾಕರನ್ ನಾಯಕತ್ವದಲ್ಲಿ ತಮಿಳು ಹುಲಿಗಳು ಮೂರು ದಶಕಗಳ ಕಾಲ ನಡೆಸಿದ ಪ್ರತ್ಯೇಕವಾದಿ ರಕ್ತಸಿಕ್ತ ಹೋರಾಟ ಕುರಿತು ಕನ್ನಡದಲ್ಲಿ ಲಭ್ಯವಿರುವ ಏಕೈಕ ಕೃತಿ ಇದು.
* ಆಚರಣೆ ಹಾಗೂ ವೈರುಧ್ಯ: ಮಾವೋ ತ್ಸೆ ತುಂಗರ ಆಯ್ದ ತತ್ವಶಾಸ್ತ್ರೀಯ ಬರಹಗಳ ಅನುವಾದ (ಸೃಜನ ಪ್ರಕಾಶನ)
* ಕಾಶ್ಮೀರ: ರಣರಂಗವಾಗಿರುವ ಬೀದಿಗಳು- ಕೆಂಪಾಗುತ್ತಿರುವ ಝೇಲಂ - ಕಾಶ್ಮೀರ ವಿವಾದದ ಚಾರಿತ್ರಿಕ ಹಿನ್ನೆಲೆಯನ್ನು ವಿವರಿಸಿ ವಿಶ್ಲೇಷಿಸುವ ಕಿರು ಹೊತ್ತಿಗೆ
* ಜಂಗಲ್ನಾಮಾ: ಮಾವೋವಾದಿ ಗೆರಿಲ್ಲಾ ವಲಯದೊಳಗೆ - ಸತ್ನಾಮ್ ಅವರ ಪ್ರವಾಸ ಕಥನದ ಅನುವಾದ. ಛತ್ತೀಸ್ಗಢದ ಬಸ್ತರ್ ದುರ್ಗಮ ಅರಣ್ಯದಲ್ಲಿನ ಆದಿವಾಸಿಗಳ ಬದುಕು-ಬವಣೆಗಳನ್ನು ಹಾಗೂ ಅವರು ಮಾವೋವಾದಿ ನಕ್ಸಲೀಯರೊಂದಿಗೆ ಜೊತೆಗೂಡಿ ನಡೆಸುತ್ತಿರುವ ಪ್ರಭುತ್ವ ವಿರೋಧಿ ಬಂಡಾಯದದ ಕಥನ.

No comments:

Post a Comment

Thanku