Thursday, June 7, 2012

ಧೈರ್ಯಂ ಸರ್ವತ್ರ ಸಾಧನಂ




ಎದ್ದೇನಬೇ ಎಮ್ಮಾ?
ಎದ್ನೆವ ಹನ್ಮವ್ವಾ. ನೀ ಎದ್ದೇನ್ಬೇ?
ನಾ ಈಗ ಎದ್ನೋಡಬೇ ಎಮ್ಮಾ.
ನಿದ್ದಿ ಬೇಸಿ ಆತಿಲ್ಲವಾ?
ನಿನಗ ಗೊತ್ತ ಐತೆಲ್ಲ ಎಮ್ಮಾ.
ಅದಕ ಕೇಳಕತ್ತೀನವಾ ಹನ್ಮವ್ವ, ನಿದ್ದಿ ಹೆಂಗಾತು ಅಂತ? ನಿನ ಗಂಡ ಕುಡ್ದು ಬಂದು, ನಿನಗ ಹೊಡ್ಯಾದು, ಬಡ್ಯಾದು ಮಾಡದು ನನಗ ಗೊತ್ತಿಲ್ಲೇನು? ನಿನ್ನಿ ರಾತ್ರೀನೂ ಗಲಾಟಿ ಮಾಡಿದ್ನೇನು ನಿನ ಗಂಡ?
ನನ್ನ ಜೀವ ಇರೋಮಟ ಅವ ಹೊಡ್ಯಾದು, ಬಡ್ಯಾದು ಇದ್ದಿದ್ದಬೇ. ಜೀವ ಇರೋಮಟ ಅವ ಹಂಗ ಮಾಡದ ಖರೇನ ಐತಿ. ಜೀವ ಹೋದಮ್ಯಾಲ ಅಂಗ ಮಾಡಾಕಾಗಂಗಿಲ್ಲಲ ಅದಕ ಮಾಡಾಕತ್ಯಾನ. ಅವನ ಕಡೀಂದ ಹೊಡ್ಸಿಕೊಳ್ಳಾಕ ನನ ಜೀವ ಗಟ್ಯಾಗಿಬಿಟೈತಿ. ಹಿಂದಿನ ಜಲ್ಮದಾಗ ನಾ ಏನ ಪಾಪ ಮಾಡಿದ್ನೋ ಏನೋ? ಹಣ್ಯಾಗ ಬರ್ದಿದ್ದು ಅನುಭೋಗಿಸ್ಬೇಕಲ್ಲ? ಸೆಟಿಗೆವ್ವ ಬರ್ದದ್ದು ತಪ್ಪಂಗಿಲ್ಲಲ್ಬೇ. ನನಗಂತೂ ಈ ವಯಸ್ಸಿಗೇನೇ ಜೀವ ಬ್ಯಾಸರಾಗಿ ಹೋಗೇತೆ. ನಿನ್ನಿ ರಾತ್ರಿನೂ ಅವ ಜೊರಾಗೇ ಹೊಡ್ದಾನ. ಇಕ ಈಟ ಎದಿ ಮ್ಯಾಲಿನ ಸೆರಗ ಸರ್ಸತೀನಿ, ನೋಡ ಮತ್ತ. ಕುಡ್ದ ನಿಶಾದಾಗ ಅವ ಹೆಂಗ ಎದಿ ಕಡ್ದಾನ ನೋಡು. ಆ ಬ್ಯಾನಿಗೆ ನಾ ಕುಬುಸನ ಹಾಕ್ಕೊಂಡಿಲ್ಲ. ನೀನ ನೋಡಬೇ ಮುದೇಕಿ. ಸೀರಿ ಸೆರ್ಗ ತೆಗಿಲಾ ಹೆಂಗ?
ಎವ್ವಾ, ಆ ಬಾಡ್ಯಾಗ ಅದೇನ ಬಂದಿತ್ತ? ಅದೆಂಗ ಕಡ್ದಾನಲ್ಲಬೇ ಕೋಡಿ? ಜಿಟ್ಯಾ, ಊರ ಜಿಟ್ಯಾ. ಅವನ ಕೈ ಸೇದೋಗ. ಕುಡ್ಡ ನಿಶಾದಾಗ ಕಡೀಬೇಕಂದ್ರ ಅವಗ ಅದೆಂತ ಕೆಟಬ್ಯಾನಿ ಬಂದಿತ್ತೇನಬೇ? ಸೆರಗ ಹಾಕ್ಕೊಳ್ಳವಾ. ತಟಗ ಅರಿಷಿಣ ಗಿರಿಷಣ ಪುಡಿ ಹಚಿಗೊಳ್ಳಬೇ, ನಂಜು ಗಿಂಜು ಆದೀತು. ಇಲ್ಲಂದ್ರ ದಾಗದಾರ ತಾಕ ಹೋಗಿ ತೋರ್ಸಿಕೊಂಡು ಬಂದ್ಬಿಡು. ಈಗಿನ ಕಾಲ ಬಾಳ ಸೂಕ್ಷ್ಮ ಅದಾವಬೇ. ಅವ್ನ ದುರುಗವ್ವ ನುಂಗಲಿ, ಸುಡುಗಾಡ್ಯಾಗ ಇಕ್ಕಿ ಸುಣ್ಣ ಬಡೀಲಿ. ಅಲ್ಲಬೇ, ಇದ ಹೆಂಗಾತು?
ನಿನ್ನಿ ರಾತ್ರಿ ಅವ ಮನಿಗೆ ಬರೋ ವ್ಯಾಳ್ಯಾ ನನಗ ನಿದ್ದಿ ಮಬ್ಬು ಬಾಳ ಇತ್ತು. ಅವ ರೊಕ್ಕ ಬೇಡ್ದ. ಮುಂಜಾನಿ ಕೊಡ್ತೀನಂತ ಹೇಳಿದ್ದಕ್ಕ ಅವ ಸಿಟ್ಟಿಗಿ ಬಂದ. ಸಿಟಿನ್ಯಾಗ ನನ ಮೊಲಿ ಕಡ್ದ. ಅದಕ್ಕ, ನಾ ಹೇಳಿದ್ದಬೇ, ನನ್ನ ನಸೀಬ ಸರಿ ಇಲ್ಲಂತ.
ಏ ಹನ್ಮವ್ವಾ, ನೀ ತೆಪ್ಪ ತಿಳ್ಕೋಣಾಂಗಿಲ್ಲ ಅಂದ್ರ ನಾ ಒಂದ ಮಾತ ಹೇಳ್ತೀನಿ. ಕೇಳಂಗದೀಯೇನು?
ಎಮ್ಮಾ, ನೀ ಹೇಳಿದ್ದು ನಾ ಯಾವ್ದು ಕೇಳಿಲ್ಲ, ಯಾವತ್ತ ಕೇಳಿಲ್ಲ, ಹೇಳ ಮತ್ತೆ? ಈಗ ಹೇಳದನೂ ಕೇಳ್ತೀನಬೇ. ನನಗಾರ ಯಾರ ದಿಕ್ಕದರ ಇಲ್ಲಿ ನಿನಬಿಟ್ಟು? ನೀ ಹೇಳಿದ್ದು ತಪ್ಪದ ಕೇಳ್ತೀನಿ. ಹೇಳ ಮತ್ತ?
ಹನ್ಮವ್ವಾ, ನೀ ಗಟ್ಯಾಗಬೇಕ್ಬೇ. ಇಲ್ಲಂದ್ರ ನಡೆಂಗಿಲ್ಲ. ನೀ ಅಂಜಿಕೆಂತ ನಿನ ಗಂಡಗ ಸೆರಗ ಹಾಸೀದಿ ಅಂದ್ರ, ಅವ ನಿನ ಮ್ಯಾಲ ಬರತಾನ. ಅವ ಮನಿಷರ ಪೈಕಿನೇ ಇಲ್ಬೇ. ಅವ ಸಣ್ಣಾವ ಇದ್ದಾಗಿಂದ ನಾ ಅವ್ನ ನೋಡಿಲ್ಲೇನು? ಹದಿನಾರಕ್ಕ ನಿನ ಗಂಡ ರಾಮ್ಯಾಗ ಹೆಂಗ್ಸರ ಚಟ ಇತ್ತಂತ. ನಿನಗರ ಏಟ ವಯಸ್ಸಾಗೇತಿ? ಬಾಳ ಅಂದ್ರ ಇಪ್ಪತ್ರ ಮ್ಯಾಲ ಐದ ಇರ್ಬೇಕಲ್ಲ? ಮೂರು ಮಕ್ಕಳನ್ನ ಹಡ್ದು ಬಿಟ್ಟೀದಿ. ಆಗಲೇ ಜೀವ್ನ ಬ್ಯಾಸರ ಆಗೈತಿ ಅಂದ್ರ ಹೆಂಗ?
ಮೈ ನೆರ್ತು ಎಡ್ಡ ವರ್ಷದಾಗ ಮದುವ್ಯಾತು ನಿಂದು. ನಿನ ಗಂಡಗ ಆಗ ಹದಿನೆಂಟೋ, ಹತ್ತೊಂಭತ್ತೋ ಅಟ. ತುಡುಗ ದನದಂಗ ಅವರಿವರ ಹೊಲ ಮೇಯ್ಕೊಂಡು ತಿರಗ್ತಿದ್ದ ಅವಗ ಮದುವ್ಯಾದ ಮ್ಯಾಲೆ ಒಳ್ಳೇ ಗಮಿಂಡ ಭೂಮಿ ಸಿಕ್ಕಾಂಗಾತು. ನಿನ್ಕುಡನೂ ಮಜಾ ಮಾಡ್ತನ, ಅಲ್ಲದ ಬ್ಯಾರೆ ತುಡುಗ ದನಗೋಳ ಕೂಡಾನೂ ಮಜಾ ಮಾಡ್ಕೆಂತ ತಿರಗಕತ್ಯಾನ. ನೀ ಹೆಂಗೂ ಅವರಿವರ ಮನ್ಯಾಗ ಕಸ ಮುಸುರಿ ಮಾಡಿ, ನಾಕ ದುಡ್ಡ ಗಳಸ್ತಿ. ಮಕ್ಕಳನ್ನ ಸಾಕಾಕತ್ತೀದಿ. ಅಲ್ಲದ, ಅವಂಗೂ ಕೂಳು ಕುಚ್ಚಿ ಹಾಕ್ತಿ. ನಿನ ಗಂಡ ದುಡಿದದ್ದ ಬರೀ ಅವಗ ಸೆರೆ ಕುಡೀಲಕ್ಕ ಮತ್ತು ಸೂಳ್ಯಾರ ಮಾಡ್ಲಿಕ್ಕ ಆಗ್ತಾದ. ಅದಕ್ಕ, ನೀ ಗಟ್ಟಿ ಮನಸ ಮಾಡ್ಬೇಕಬೇ ಅಂತ ನಾ ಹೇಳಿದ್ದು.
ಅಲ್ಲಬೇ ಎಮ್ಮಾ, ನೀ ಏನ್ ಹೇಳ್ಬೇಕಂತಿದೀ, ಅದನ್ನರ ಹೇಳು.
ಹಂಗಾರ ನಾ ಹೇಳೋದ್ನ ಚೆಂದಾಗಿ ಕೇಳ್ಸೋಕೋ. ಬೇ ಹನ್ಮವ್ವಾ, ಈ ಗಂಡ್ಸರು ಹೆಂಗ್ಸರ ಮೊಲಿ, ಇನ್ನೊಂದು ಅಂದ್ರ ಬಾಯಿ ಬಾಯಿ ಬಿಡ್ತಾವ. ಇದಕ್ಕ ನಿನ ಗಂಡ ರಾಮ್ಯಾನೂ ಕೂಡ ಬ್ಯಾರೆ ಏನೂ ಅಲ್ಲ. ಹತ್ರೊಳಗ ಹನ್ನೊಂದ್ರಂಗ ಅವನೂ ಯಾವಾಗ್ಲೂ ಜೊಲ್ಲ ಸುರಿಸ್ತಿರತಾನ. ಅದಕ್ಕ, ನಾವು ಹೆಣ್ಮಕ್ಳು ತಟಗ ಬಿಗೀಲೇ ಇರ್ಬೇಕು. ಅವ್ರು ಕೇಳಿ ಕೇಳ್ದಂದ ನಾವು ಕುಣೀಬಾರ್ದು. ನಿನ ಸಂಸಾರನ್ನ ನಾ ಬಾಳ ವರ್ಷದಿಂದ ನೋಡ್ಲಿಕತ್ತೀನಿ. ನೀ ದುಡ್ದ ರೊಕ್ಕದಿಂದ ನಿಮ್ಮ ಮನಿ ನಡಿಲಿಕ್ಕತ್ಯಾದ. ರಾಮ್ಯಾ ದುಡಿದದ್ದ ಅವ್ನ ಚಟಗಳ್ಗೇ ಸಾಕಾಂಗಿಲ್ಲ. ಅವ ಕೇಳಿ ಕೇಳ್ದಂಗ ನಿ ರೊಕ್ಕಾನೂ ಕೊಡ್ತಿ, ನಿನ ಮೈನೂ ಒಪ್ಪಿಸ್ತಿ. ಹಿಂಗಾಗಿ ಅವಗ ಜೀವನ ಮಾಡಾದು ಬಾಳ ಹಗುರಾಗಿ ಬಿಟೈತಿ. ಅವ ದುಡೆಂಗಿಲ್ಲ, ದುಃಖ ಬಡೆಂಗಿಲ್ಲ.
ರಾಮ್ಯಾ ರಾತ್ರಿ ಕುಡ್ದ ಬಂದಾಗ ಅವನ ನಾಲ್ಗೀಗಿ ಹೆದ್ರಿ ನೀ ಸುಮ್ಮನ ಇರ್ತಿ, ರೊಕ್ಕಾನೂ ಕೊಡ್ತಿ, ಮೈನೂ ತೆರಕೊಳ್ತಿ. ನೀ ದುಡ್ದ ರೊಕ್ಕ ಎಲ್ಲಾ ಅವನ ಶೋಕಿಗೆ ಹೋಗ್ತದ, ಇನ್ನೂ ತಟಗ ಹೆಚ್ಚಿಗೆ ಕುಡಿತಾನ, ಅವ್ನ ಸೂಳೇರಿಗೆ ಹರ್ದ ಹಂಚಿ ಹೋಗ್ತದ. ನೀ ಅವ್ನಿಗೆ ರೊಕ್ಕ ಕೊಡೋದ ಮೊದ್ಲು ನಿಲ್ಸು. ಅವ ಒದರ್ಯಾಡಕ, ನಿನಗ ಬಡ್ಯಾಕ ಚಾಲೂ ಮಾಡಿದ್ರ, ನೀ ಅವ ಹೇಳ್ದಂಗ ಕೇಳದ ಬಿಟ್ಟು ಹೇರಗಚ್ಚಿ ಹಾಕಿ ನಿಲ್ಲು. ರಾಣಿ ಚೆನ್ನಮ್ಮನಂಗಾಗು. ತಾನ ದಾರೀಗಿ ಬರ್ತಾನ. ಅವಗ ಕೊಡ ದುಡ್ಡನ್ನ ನಿನ್ನ ಮಕ್ಳ ಸಾಲಿ ಕಚರ್ಿಗಿ ಕೊಡು. ಹುಡುಗರನ್ನ ಶಾಣ್ಯಾರಾಗಿ ಮಾಡು. ದುಡಿದದ್ದೆಲ್ಲಾ ಆ ಕುಡುಕಗ ಕೊಟ್ಟು ನಿನ್ನ ಜೀವನ ಹಾಳ ಮಾಡ್ಕೋಳದಲ್ಲದ ಮಕ್ಕಳ ಬಾಯಾಗ ಮಣ್ಣ ಹಾಕಾಕತ್ತೀದಿ. ನೀ ಅವ್ನ ಎದ್ರಿಗೆ ಸೆಟದ ನಿಂತೀ ಅಂದ್ರ ಅವ ತಾನ ತಣ್ಣಗಾಕಾನ. ಎರ್ಡ ದಿವ್ಸ ಅವ ಹೆಗರ್ಯಾಡ್ತ್ಯಾನ. ಆಮ್ಯಾಕ ತಾನ ದಾರೀಗಿ ಬರ್ತಾನ.
ಬೇ ಹನ್ಮವ್ವಾ, ನೀ ಅಂಜಿಕ್ಯಾ ಬ್ಯಾಡ. ನಿನ್ನ ಹೆಸ್ರ ಹನ್ಮವ್ವ, ಅಂದ್ರ ಹಣಮಂತ ದೇವ್ರು ಅಂತ. ಆ ಹಣಮಂತ ಲಂಕಿ ಸುಟ್ಟಂಗ, ನೀ ಆ ರಾಮ್ಯಾನ ದುಷ್ಟ ಬುದ್ದಿ ಸುಡು. ಮೊದಲ ನೀ ಹಣಮಂತನ ಅವತಾರ ತಾಳು. ನಿನ್ನ ಜೊತಿಗೇ ನಾ ಅದೀನಿ. ತಟಗ ಗಟ್ಟಿ ಮನಸ ಮಾಡಬೇ. ನಿಂದು ಜೀವನ ಇನ್ನೂ ಬಾಳ ಐತೆವ. ದೇವ್ರ ಮ್ಯಾಲೆ ಭಾರ ಹಾಕವಾ. ಎಲ್ಲಾ ವೈನಾಗಿ ನಡೀತೈತೆ.
ಆತಬೇಎಮ್ಮಾ, ನಿ ಹೇಳ್ದಂಗ ನಾ ಕೇಳ್ತೀನಿ. ಇವತ್ನಿಂದನ ನಿನ ಮಾತ ಪಾಲಿಸ್ತೀನಿ. ನೀನ ನನಗ ದೇವ್ರು, ತಾಯಿ, ತಂದೆಬೇ ಎಮ್ಮಾ.
ನಡೀಬೇ ಹೊತ್ತಾಗೈತೆ. ನಿನ ಗಂಡ ಮತ್ತ ಒದರ್ಯಾಡ್ಯಾಕ ಸುರು ಮಾಡ್ತನ. ಹುಡುಗ್ರಿಗೆ ಸಾಲಿಗೆ ಕಳ್ಸಾಕ ತಯಾರ ಮಾಡ್ಬೇಕಲ್ಲ. ನಡಿ, ನಡಿ.
ಹೀಂಗ ಮುಂಜಾನೆ ಮುಂಜಾನೆ ಮಾತು ನಡೆದಿದ್ದು ಊರಿನ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವ, ಅಕ್ಕ ಪಕ್ಕದ ಮನೆಯವರಾದ ಭೀಮವ್ವಜ್ಜಿ ಮತ್ತು ಹನ್ಮವ್ವನ ನಡುವೆ. ಅರವತ್ತೈದರ ಆಜು ಬಾಜುವಿನ ವಯಸ್ಸು ಭೀಮವ್ವ ಅಜ್ಜಿದು. ಭೀಮವ್ವಜ್ಜಿ ಗಂಡ ತೀರಿಕೊಂಡು ಆಗಲೇ ಹದಿನೈದು ವರ್ಷ ಆಗಿದ್ದವು. ಇಲ್ಲಿ ಹಿರೇ ಮಗಳ ಮನೆಯಲ್ಲಿ ಹತ್ತು ವರ್ಷಗಳಿಂದ ಇದ್ದಾಳೆ. ಗಂಡ ಸತ್ತ ಮೇಲೆ ಐದು ವರ್ಷ ಹಂಗೂ, ಹಿಂಗೂ ಗಂಡು ಮಕ್ಕಳ ಮನೆಯಲ್ಲಿ ಇರುವುದಕ್ಕೆ ಪ್ರಯತ್ನಿಸಿದ್ದಳು. ಈಕೆಗೂ ಸೊಸೆಯಂದಿರಿಗೂ ಹೊಂದಾಣಿಕೆ ಆಗದ್ದರಿಂದ ಈಗ ಮಗಳ ಮನೆಯಲ್ಲಿ ಠಿಕಾಣಿ ಹೂಡಿದ್ದಾಳೆ. ಜೀವನದಲ್ಲಿ ಎಲ್ಲಾ ತರಹದ ನೋವು-ನಲಿವು ಉಂಡಾಳ. ಹಂಗಾಮದ ಹುಡುಗಿ ಹನ್ಮವ್ವ ಕಟಿ ಪಿಟಿ ಬಿಡೋದನ್ನು ನೋಡುತ್ತಿದ್ದ ಭೀಮವ್ವನ ಕರುಳು ಚುರುಕ್ಕೆನ್ನುತ್ತಿತ್ತು.
ಹನುಮವ್ವಗೆ ಮದುವೆ ಆದಾಗ ಆಕೆಗೆ ಹದಿನೈದು ತುಂಬಿ ಹದಿನಾರು ನಡೆಯುತ್ತಿತ್ತು. ರಾಮಪ್ಪ ಆಕೆಯ ತಾಯಿಯ ತಮ್ಮ. ಕಳ್ಳು, ಬಳ್ಳಿ ಹಚ್ಚಿಕೊಳ್ಳಬೇಕೆಂದು ತಮ್ಮಗೇ ಮಗಳನ್ನು ಕೊಟ್ಟಿದ್ದಳು ಕಲ್ಲಮ್ಮ. ರಾಮಪ್ಪನೂ ಕೂಲಿ ನಾಲಿ, ಹಮಾಲಿ ಕೆಲಸ, ಅದೂ, ಇದೂ ಅಂತ ಮಾಡುತ್ತಿದ್ದ. ಮದುವೆ ಆದ ಮೇಲೆ ಹನುಮವ್ವನೂ ನಾಲ್ಕೈದು ನೌಕರದಾರರ ಮನೆಗಳ ಕಸ, ಮುಸುರೆ ಕೆಲಸ ಹಿಡಿದು, ತಾನೂ ಗಂಡನ ಜೊತೆ ಸಂಪಾದಿಸುವುದಕ್ಕೆ ಶುರು ಮಾಡಿದ್ದಳು. ಮೊದ ಮೊದಲು ರಾಮಪ್ಪಗೆ ಯಾವ ಚಟಗಳೂ ಇರಲಿಲ್ಲ. ಹನುಮವ್ವ ಮೊದಲನೇ ಬಾಣಂತನಕ್ಕೆ ತವರು ಮನೆಗೆ ಹೋಗಿದ್ದಾಗ, ಒಂದೊಂದೇ ಚಟಗಳನ್ನು ಕಲಿತ ರಾಮಪ್ಪ. ಮೊದಲು ಸಣ್ಣಾಗಿ ಕುಡಿಯುವುದನ್ನು ಕಲಿತ. ನಂತರ ಹೆಂಗಸರ ಸಹವಾಸವನ್ನೂ ಹಚ್ಚಿಕೊಂಡ. ಎಷ್ಟಾದರೂ ಅವನದು ಉಪ್ಪು, ಹುಳಿ ಉಂಡ ದೇಹ ಅಲ್ಲವೇ?
ಹೀಗೇ ಚಟಗಳನ್ನು ಹಚ್ಚಿಕೊಂಡಿದ್ದ ರಾಮಪ್ಪ ಮುಂದೆ ಆವಾಗಾಗ ಹೆಂಡತಿ ಹನುಮವ್ವಗೆ ಹೊಡೆಯುವುದು, ಬಡಿಯುವುದು ಶುರು ಮಾಡಿದ. ತನ್ನ ಚಟಗಳ ಸಲುವಾಗಿ ಮೇಲಿಂದ ಮೇಲೆ ಹಣಕ್ಕಾಗಿ ಹೆಂಡತಿಯನ್ನು ಪೀಡಿಸತೊಡಗಿದ. ತಾನು ದುಡಿದದ್ದು ಸಾಕಾಗದಾದಾಗ ಆಕೆಯ ದುಡಿತದ ಹಣಕ್ಕಾಗಿ ಕಾಡಿಸತೊಡಗಿದ. ಮನೆಯ ಯಾವ ಮೂಲೆಯಲ್ಲಿ ಹನುಮವ್ವ ದುಡ್ಡನ್ನು ಬಚ್ಚಿಟ್ಟಿದ್ದರೂ ಅವ ಹುಡುಕಿ, ಹುಡುಕಿ ತೆಗೆದುಕೊಂಡು ಹೋಗುತ್ತಿದ್ದ.
ಹನುಮವ್ವಗೆ ರಾಮಪ್ಪನ ದಬ್ಬಾಳಿಕೆ, ದೌರ್ಜನ್ಯ, ಬಲಾತ್ಕಾರ, ಹೊಡೆತ, ಬಡಿತ ಜಾಸ್ತಿಯಾಗಿದ್ದುದರಿಂದ ಆಕೆಗೆ ಜೀವನವೇ ರೋಷಿ ಹೋದಂತಾಗಿತ್ತು. ಮನೆಯ ಒಳಗಿನ ಕಲಹ ಹೊರಗೆ ತೋರಿಸಬಾರದೆಂದು ಮಯರ್ಾದೆಗೆ ಅಂಜಿ ಗಂಡನ ಘನಕಾರ್ಯಗಳನ್ನು ಮೌನವಾಗಿ ಸಹಿಸಿಕೊಂಡು ಜೀವನ ಸವೆಸುತ್ತಿದ್ದಳು. ಆಕೆಗೂ ತಗ್ಗಿ ಬಗ್ಗಿ ನಡೆದು ಸಾಕಾಗಿ ಹೋಗಿತ್ತು. ಇಂದು ಭೀಮವ್ವಜ್ಜಿ ಧೈರ್ಯ ತುಂಬಿದ್ದರಿಂದ ಆಕೆ ಪರಸ್ಥಿತಿಯನ್ನು ಎದುರಿಸಲು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕತೊಡಗಿದಳು. ಗಂಡನ ಅಟ್ಟಹಾಸವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬ ವಿಚಾರದಲ್ಲಯೇ ಇದ್ದಳು ಇಡೀ ದಿನ.
ಎಂದಿನಂತೆ ಅಂದೂ ಸೂರ್ಯ ದೇವ ತನ್ನ ಕಾಯಕ ಮುಗಿಸಿ, ಪಶ್ಚಿಮ ದಿಗಂತದಲ್ಲಿ ಮರೆಯಾದ. ಸೂರ್ಯ ಮುಳುಗುವಾಗ ಎಲ್ಲೆಡೆ ಪಸರಿಸಿದ್ದ ಹೊಂಬಣ್ಣವನ್ನು ಕಂಡ ಹನುಮವ್ವ, ತನ್ನ ಬಾಳಲ್ಲಿಯೂ ಒಂದು ಹೊಸ ಬೆಳಕು ಮೂಡಬಹುದೇ ಎಂದು ಅಂದುಕೊಂಡಳು ಮನದಲ್ಲಿ ಅಂದು. ಎಂದಿನಂತೆ ರಾಮಪ್ಪ ತೂರಾಡುತ್ತಾ ಮನೆಗೆ ಬಂದಾಗ ಆಗಲೇ ರಾತ್ರಿ ಒಂಭತ್ತು ಗಂಟೆ ದಾಟಿತ್ತು. ಇಡೀ ದಿನ ಕೆಲಸ ಮಾಡಿದ್ದ ಹನುಮವ್ವಗೆ ಹಾಸಿಗೆ ಕೈ ಬೀಸಿ ಕರೆಯುತ್ತಿದ್ದರೂ, ಗಂಡಗಾಗಿ ದಾರಿ ಕಾಯುತ್ತಿದ್ದಳು ತೂಕಡಿಸುತ್ತಾ. ಗಂಡ ಬರುತ್ತಲೇ ತಡಬಡಿಸಿ ಎದ್ದು ಊಟಕ್ಕೆ ಇಟ್ಟಳು. ಮಕ್ಕಳೆಲ್ಲಾ ಮಲಗಿ ಆಗಲೇ ಬಹಳ ಹೊತ್ತಾಗಿತ್ತು. ಊಟ ಮುಗಿಯುತ್ತಿದ್ದಂತೆ ರಾಮಪ್ಪ, ಹನುಮವ್ವನನ್ನು ತೆಕ್ಕೆಗೆ ಹಾಕಿಕೊಳ್ಳಬೇಕೆಂದು ಅವಸರ ಮಾಡಿದ.
ಏಯ್, ಇವತ್ತು ನನ್ಕೈಲಿ ಆಗೋಲ್ಲ, ನಿನ್ನೆ ನಿ ಎದಿ ಮ್ಯಾಲೆ ಮಾಡಿದ ಗಾಯ ಬಾಳ ಬ್ಯಾನಿ ಆಗಲಕ್ಕತ್ಯದ. ಸುಮ್ಮನ ನೀ ದೂರ ಮಲ್ಗು. ನನ್ನ ತಂಟೆಗೆ ಬರಬ್ಯಾಡ. ಹನ್ಮವ್ವ ತುಸು ಮೆತ್ತಗ ಮಾತ ಚಾಲೂ ಮಾಡಿದ್ಳು.
ಇರ್ಲಿ ಬಾರೇ, ನೋಡಿದ್ದೀನಿ. ತಡಮಾಡಬ್ಯಾಡ. ನನಗ ತಡ್ಕೊಳಕ್ಕಾಗಲ್ಲ. ಅದೇನ ದೊಡ್ಡ ಗಾಯ ಆಗೈತೆ ಅಂತ ಬಡ್ಕೋಳ್ಳಕತ್ತೀದಿ. ತೋರ್ಸು ನಿನ್ನ ಎದಿ ತೋರ್ಸು. ನಾನೂ ತಟಗ ನೋಡ್ತೀನಿ ಎಂದ ರಾಮಪ್ಪ ಅವಳ್ನ ಪುಸಲಾಯಿಸ್ಲಕ್ಕ.
ಎಂದೂ ನೋಡ್ಲಾರ್ದವಂಗ ಹೇಳ್ಲಿಕತ್ತಿಯಲ್ಲ? ಅದ ನೆವದಾಗ ನನ ಮೈ ನೋಡ್ಬೇಕಂತ ಆಸಿ ನಿನಗ ಅಲ್ಲಾ? ಏನೂ ತೋರ್ಸಂಗಿಲ್ಲ. ನೀ ಹೀಂಗ ಕುಡ್ದು ಬಂದ್ರ ಇನ್ನ  ಮುಂದ ನಾ ನಿನ್ನ ಜೊತಿ ಮಲಗಂಗಿಲ್ಲ. ನಿನ್ನ ಬಾಯಿಯಿಂದ ಬರೋ ಗಬ್ಬು ನಾತ ನನ್ಕೈಲಿ ತಡಕೊಳ್ಳಾಕಾಗಲ್ಲ. ವಾಂತಿ ಬಂದಂಗಾಗ್ತದ. ಅಲ್ದ ನೀ ಯಾರ್ಯಾರೋ ಸೂಳ್ಯಾರ ತಾಕ ಸರ್ಗ್ಯಾಡಿ ಬರ್ತಿ. ಇದ್ರಿಂದ ಅದೇನೋ ದೊಡ್ಡ ರೋಗ, ಏಡ್ಸೋ ಏನೋ ಬರ್ತದಂತ ಅಂತ ಓಣ್ಯಾಗಿನ ಹೆಣ್ಮಕ್ಕಳು ಮಾತಾಡ್ತಿರತಾರ. ಅದಕ್ಕ, ಇವತ್ತ ನಾ ಒಂದ ವಿಚಾರ ಮಾಡೀನಿ. ಇನ್ನ ಮುಂದ ನೀ ಕುಡ್ದು ಬಂದ್ರ, ಅವರಿವರ ತಾಕ ಹೋಗಿ ಬಂದ್ರ, ನಾ ನಿನ್ನ ಹತ್ರ ಕರ್ಕೊಳಲ್ಲ. ತಿಳಿತಿಲ್ಲ? ನನ್ನ ನೀ ಮುಟ್ಟಬ್ಯಾಡ, ಹುಷಾರ್. ಹನ್ಮವ್ವ ಧೈರ್ಯ ಮಾಡಿ ಹೇಳ್ಬಿಟ್ಳು.
ಏನೇ ಭೋಸುಡಿ, ಬಾಳ ಮಾತಾಡ್ಲಕ್ಕತ್ತೀಯಲ್ಲ? ಮೈಯಾಗ ಸೊಕ್ಕ ಜಾಸ್ತಿ ಆಗೆತೇನು? ಹಂಗ ಚೆಂದಾಗಿ ಕರದ್ರ ನೀ ಬರಂಗಿಲ್ಲ ಅಂತ ಕಾಣ್ತದ. ಯಾವ್ದ ದ್ಯಾವ್ರಿಗೆ ಯಾವ್ದ ಪೂಜಿ ಮಾಡ್ಬೇಕಂತಲ್ಲ? ನಿನ್ಗೂ ಅದ ಪೂಜಿ ಮಾಡ್ಲೇನಲೇ ಹಡಬಿ? ಈಗ ಸುಮ್ಮನ ಬರ್ತೀಯೋ ಇಲ್ಲಲೇ ಸೂಳಿ. ರಾಮಪ್ಪ ಹಲ್ಕಟ್ಟ ಮಾತಿನ್ಯಾಗ ಹನ್ಮವ್ವಗ ಬೈಲಿಕ್ಕ ಸುರು ಮಾಡ್ದ.
ನೀ ಮೊದ್ಲು ಒದರ್ಯಾಡ್ಯಾದು ನಿಲ್ಸು. ನೀ ಏನ್ ಮಾಡಿದ್ರೂ ನಾ ನಿನ್ನ ತಾಕ ಬರಂಗಿಲ್ಲ.
ನೀ ಬರಂಗಿಲ್ಲ ಅಂದ್ರ ನಾ ಬಿಡ್ತಿನೇನಲೇ? ಬಾರಲೇ ಭೋಸುಡಿ? ನನ್ಹತ್ರ ಬರಂಗಿಲ್ಲಂದ್ರ ಯಾವನಾರ ಮಿಂಡಗಾರ್ನ ನೋಡ್ಕೊಂಡಿಯೇನು? ಸುಮ್ಮನ ಬರ್ತೀಯ, ಇಲ್ಲಾ ಹುಲಿ ಜಿಂಕಿ ಮ್ಯಾಲ ಎಗರಿ ಹಿಡೆಂಗ ಹಿಡಿಲ್ಯಾ? ಅಂತ ಅನಕೋತ ರಾಮಪ್ಪ ಹನ್ಮವ್ವನ ಎಳದಾಡತೊಡ್ಗಿದ.
ಲೇ ಪಿಕನಾಸಿ, ಹಳೇ ಪಿಕನಾಸಿ, ನಾ ನಿನ್ನಂಗ ಕಂಡ ಕಂಡವ್ರ ತಾಕ ಹಾದರ ಮಾಡಂಗಿಲ್ಲಲೇ. ನೀ ಎಷ್ಟ ಹೆಂಗ್ಸರ ತಾಕ ಸಾವಾಸ ಮಾಡತೀ ಅಂತ ನನಗ ಸರ್ಯಾಗಿ ಗೊತ್ತೈತಿ. ಇನ್ನೊಂದ ಸಲ ಹಂಗ ಮಿಂಡಗಾರ, ಗಿಂಡಗಾರ ಅಂತ ಅಂದ್ರ ನಾ ಸುಮ್ಕೆ ಇರೋಳಲ್ಲ. ನಿನ್ನ ಒಂದ ಕೈ ನೋಡೇ ಬಿಡ್ತೀನಿ ಮತ್ತ ಅನ್ಕೋಂತ ಹೇರಗಚ್ಚಿ ಹಾಕಿದ್ಳು ಹನ್ಮವ್ವ. ರಾಮಪ್ಪಗ ಒಂಚೂರು ಗಾಬ್ರಿ ಆಗಿ, ಅವನ ಎದ್ಯಾಗ ನಡುಕ ಸುರುವಾಗಿತ್ತಾದ್ರೂ ತನ್ನ ಪೌರುಷ ತೋರ್ಸಬೇಕಂತ, ನಾ ಅಂತೀನಿ ನೋಡ್ಲೇ, ನೀ ಯಾವನ್ನೋ ಮಿಂಡಗಾರ್ನ ಕೂಡ್ಕೊಂಡಿರ್ತೀ. ಅದಕ್ಕಾ, ನೀ ಹಿಂಗ ಹ್ಯಾರ್ಯಾಡಲಿಕ್ಕ ಅತ್ತೀದಿ. ಅದಕ್ಕ, ನನ್ನ ತಾಕ ಬರಕ ಒಲ್ಲೆ ಅಂತೀದಿ, ಕಳ್ಳ ಸೂಳಿ ಅನ್ನಕೋತ ರಾಮಪ್ಪ ಅವ್ಳ ಕೂದ್ಲಿಗೆ ಕೈ ಹಾಕಿ ತನ್ನ ಕಡಿಗೆ ಎಳ್ಕೋಬೇಕೆಂದು ಕೈ ಹಚ್ಚಿದ.
ಮೊದ್ಲ ಅವ್ನಿಗೆ ನಶಾ ಏರ್ಲಿಕ್ಕತ್ತಿತ್ತು. ಹನ್ಮವ್ವಗೂ ಸಿಟ್ಟ ಬಂದಿತ್ತು. ಅವ್ನಿಂದ ಕೊಸರಿಕೊಂಡು ಅವ್ನ ಜೋರಾಗಿ ದಬ್ಬಿದ್ಳು. ರಾಮಪ್ಪ ಮಾರುದ್ದ ದೂರ್ಹೋಗಿ ಬಿದ್ದ. ಅವಗ್ಯಾಕೋ ತನ್ನ ಜೀವ್ನದಾಗ ಮೊದಲ್ನೇ ಸಲ ದಣಿವಾದಂಗನಿಸ್ತು. ಯಾಕೋ ಇವತ್ತ ನನ್ನ ಟೇಮು ಸರಿ ಇಲ್ಲಂತ ಕಾಣ್ತದ. ಸುಮ್ಮನಿದ್ಬಿಟ್ರಾತು ಎಂದು ಮನಸಿನ್ಯಾಗನ ಅಂದ್ಕೊಂಡು ಅವ ಅಲ್ಲೇ ತೆಪ್ಪಗ ಮಲ್ಗಿದ. ಹನ್ಮವ್ವಗ ಮೊದಲ ಜಯ ಸಿಕ್ಕಿತ್ತು. ಭೀಮವ್ವಜ್ಜಿನ ಮನದಾಗ ನೆನ್ಸಿಕೊಂಡ್ಳು.
ಅವತ್ತ ಹನ್ಮವ್ವ ಇಡೀ ರಾತ್ರಿ ಕಣ್ಣಿಗೆ ಕಣ್ಣ ಹಚ್ಲಿಲ್ಲ. ಈ ತುಡುಗ ನಾಯಿ ಯಾವಾಗರ ತನ್ನ ಮೈ ಮ್ಯಾಲೆ ಬೀಳ್ಬಹುದು ಅಂತ ಟಕ ಟಕಿ ಇತ್ತು ಆಕೀಗಿ. ಹನ್ಮವ್ವ ಅಂದ್ಕೊಂಡಂಗ ರಾಮಪ್ಪ ರಾತ್ರಿ ಒಂದ ಹೊತ್ತಿನ್ಯಾಗ ಮೆಲ್ಲಗ ಕಳ್ಳ ಹೆಜ್ಜಿ ಇಡ್ತ ಆಕಿ ಮ್ಯಾಲ ಸವಾರಿ ಮಾಡ್ಲಿಕ್ಕ ಹೋದ. ಎಚ್ಚರದಾಗನ ಇದ್ದ ಹನ್ಮವ್ವ ಅವ್ನ ಕೊಡ್ವಿ ದೂರ ತಳ್ಳಿದ್ಳು.
ಈಟಾದ್ರೂ ನಿನ್ನ ಜೀವಕ್ಕ ನಾಚಿಗಿ ಅನ್ನೋದ ಇಲ್ಲೇನು? ನಿನ್ನ ಜೀವಕ್ಕಿಟ್ಟು ಬೆಂಕಿ ಹಾಕ. ಥೂ, ನಿ ಮನುಷರ ಪೈಕೀನೇ ಇಲ್ಲ ಅಂತ ಅನಸತೈತೆ. ನೀ ಮನುಷ ಆಗಿದ್ರೆ ನಿನ್ನೆ ನೀ ಮಾಡಿದ ಗಾಯಕ್ಕ ತಟಗರ ಕಳಕಳಿ ತೋರ್ಸುತ್ತಿದ್ದಿ. ನಿನಗೆ ಬರೀ ನಿನ್ನ ಚಟ ತೀರಿದ್ರ ಸಾಕ ಅಲ್ಲಾ? ರಾಮಪ್ಪ ಇಂಗುತಿಂದ ಮಂಗನಂತೆ ಮೂಲ್ಯಾಗ ಗಪ್ಪನ ಬಿದ್ಕೊಂಡ.
ಮುಂಜಾನೆದ್ದು ಹನ್ಮವ್ವ ಕಸಗಿಸ ಹೊಡ್ದು, ಬಾಗಿಲಿ ಪೂಜಿ ಮಾಡಿ, ನೀರೊಲಿಗೆ ಬೆಂಕಿ ಹಾಕಿ, ಬೆಂಕಿ ನೋಡ್ಕೊತ ಕಟಗಿ ಇಟಗೊಂತ ಕುಂತಿದ್ಳು. ಅಷ್ಟರಾಗ ರಾಮಪ್ಪ ಎದ್ದ ಬಂದಿದ್ದ. ಬಂದವನೇ, ಯಾವ ದೊಡ್ಡ ಮನುಷಾರು ನಿನ್ನ ತಲಿಗೆ ಈ ಇಚಾರ ತುಂಬ್ಯಾರ. ಮೊದ್ಲೆಂದೂ ನೀ ಹೀಂಗ ಮಾಡಿದ್ದಿಲ್ಲ. ಯಾರ ನಿನಗ ಏನ ಹೇಳ್ಲಿಕತ್ಯಾರ ಅಂತ ದೊಡ್ಡ ಬಾಯಿ ಮಾಡ್ತ ಹನ್ಮವ್ವನ ಬೆನ್ನಿಗೆ ಇಕ್ಕತೊಡ್ಗಿದ. ಉರಿತಿದ್ದ ಒಲಿ ನೋಡ್ಕೋತ ಕುಳ್ತಿದ್ದ ಹನ್ಮವ್ವ ಗಂಡ ಹಿಂಗ ಮಾಡ್ತಾನಂತ ಅನ್ಕೊಂಡಿರ್ಲಿಲ್ಲ. ಆಕಿಗೆ ಏನನ್ನಸಿತೋ ಏನೋ, ಸರಕ್ಕನ ಒಲ್ಯಾಗಿನ ಒಂದ ಕೊಳ್ಳಿ ತೊಗೊಂಡು ಅವನ್ಗೆ ಎದ್ರು ನಿಂತ್ಳು. ಒಂದ ಹೆಜ್ಜಿ ಮುಂದಾರ ಬಾರ ನೋಡಾನ ಎಂದ ಹನ್ಮವ್ವ ಚಂಡಿ ಚಾಮುಂಡಿಯಂತಾದ್ಳು. ಬಾಲ ಮುದ್ರಿಕೊಂಡು ಹೋಗೋ ನಾಯಿ ಹಂಗ ರಾಮಪ್ಪ ಮುಕುಳಿ, ಬಾಯಿ ಮುಚ್ಕೊಂಡು ಸುಮ್ಮನ ಹೊರಗ ನಡೆದ.
ಹನ್ಮವ್ವ ಅವತ್ತು ಭೀಮವ್ವಜ್ಜಿಗೆ ಎಲ್ಲಾ ವರದಿ ಒಪ್ಪಿಸಿದ್ಳು. ಎಲ್ಲಾ ಕೇಳ್ಸಿಕೊಂಡ ಭೀಮವ್ವಜ್ಜಿ, ಬಾಳ ಚೋಲೋ ಮಾಡಿದಿ ನೋಡು. ಶಾಬ್ಬಾಸ ಹುಡುಗಿ. ನೀ ಧೈರ್ಯ ಬಿಡಬ್ಯಾಡ. ಎಲ್ಲಾ ಸರಿ ಹೋಗ್ತದ ಅಂತ ಹನ್ಮವ್ವನ ಕೆಲ್ಸ ಮೆಚ್ಚಿ ಧೈರ್ಯ ತುಂಬಿದ್ಳು. ಅದೇನೋ ಅಂತಾರಲ್ಲವ್ವ, ಅದು ನಂಗೆ ಸರ್ಯಾಗಿ ಹೇಳಾಕ ಬರಂಗಿಲ್ಲ. ಆದ್ರೂ ಹೇಳ್ತೀನಿ. ಧೈರ್ಯಂ ಸರ್ವತ್ರ ಸಾಧನಂ ಅನ್ನೋದು ನೆಪ್ಪ ಇಟಗ.
ಅಂದು ರಾತ್ರಿ ಕೂಡಾ ರಾಮಪ್ಪ ಇನ್ನೂ ಜೋರ ಮಾಡ್ದ. ಹನ್ಮವ್ವಗ ಅವ ಹೊಡ್ದ, ಬಡ್ದ, ಒದ್ದ, ಕೂದಲ ಹಿಡ್ದು ಎಳ್ದ, ಕುಬುಸ ಹರ್ದ. ಎದಿಗೆ ಕೈ ಹಾಕಾಕ ನೋಡ್ದ. ಅಲ್ಲೀ ಮಟ ಸುಮ್ಮಕ ಇದ್ದ ಆಕಿ ಕೆರಳಿದ ದುಗರ್ಿಯಂತಾದ್ಳು. ನೀ ನನ ಗಂಡ ಅದೀ ಅಂತ ನಾ ಇಲ್ಲೀ ಮಟ ತಡ್ಕೊಂಡು ಸುಮ್ಮನ ಅದೀನಿ. ನೀ ಇಲ್ಗೇ ಸುಮ್ಮಕ್ಯಾದಿ ಅಂದ್ರ ಸರಿ, ಇಲ್ಲಂದ್ರ ನಾ ಮುಂದ ಹಂಗ ಸುಮ್ಮಕ ಕೂಡೋಕಿ ಅಲ್ಲ. ನಾ ಒಂದ ಏಟಿನ್ಯಾಗ ನಿನ್ನ, ಗಂಡಸ್ತನನ ಮೆತ್ತಗ ಮಾಡಿ ಬಿಡ್ತೀನಿ ನೋಡ ಮತ್ತ ಅಂತ ಕೆಕ್ಕರ್ಸಿ ನೋಡ್ತಾ ಗಂಡಗ ದಬಾಯಿಸಿದ್ಳು. ರಾಮಪ್ಪ ಆಕಿ ಮಾತಿಗೆ ತಟಗ ಮೆತ್ತಗಾದ. ಬಾಳ ಹೊತ್ತಿನ ಮಟ ಇಬ್ರ ನಡ್ವೆ ಜಟಾಪಟಿ ನಡೀತು. ಜಪ್ಪಯ್ಯಂದ್ರೂ ಹನ್ಮವ್ವ ತನ್ನ ತೆರ್ಕೊಳ್ಲಿಲ್ಲ ರಾಮಪ್ಪಗ. ಭೀಮವ್ವಜ್ಜಿ ಹೇಳ್ದ ಮಾತು ನೆಪ್ಪಿನ್ಯಾಗ ಇತ್ತ ಆಕಿಗೆ. ನೀ ಮಾತ್ರ ರಾಮ್ಯಾನ ಮುಂದ ಬೋಳೇತನ ತೋರ್ಸಬ್ಯಾಡ. ಸಡ್ಲ ಆಗಬ್ಯಾಡ. ಕತ್ತಿಗೆ ಲತ್ತಿ ಪೆಟ್ಟ ಸರಿ ಅಂತಾರ ಅಂತ ಅಂದಿದ್ಳು ಮುದೇಕಿ ಹನ್ಮವ್ವಗ.
ಮುಂದ ಮೂರ್ನಾಲ್ಕು ದಿನ ರಾತ್ರಿ ರಾಮಪ್ಪ ಮನಗೆ ಬರ್ಲಿಲ್ಲ. ಹನ್ಮವ್ವಗ ಹೆದ್ರಿಕಿ ಆಗ್ಲಿಕ್ಕತ್ತಿತು. ಭೀಮವ್ವಜ್ಜಿ ಜೊತಿಗೆ ಸಂಕಟ ಹಂಚಿಕೊಂಡ್ಳು. ಅದಕ್ಕ ಅಜ್ಜಿ, ಹನ್ಮವ್ವಾ, ನೀನೇನೂ ಹೆದ್ರೋಕ ಬ್ಯಾಡ. ಅವ ಎಲ್ಲೂ ಹೋಗಂಗಿಲ್ಲ. ರಾತ್ರಿ ಯಾವಾಕೀತಾಕಾರ ಹೋಗಿರ್ಬೇಕು. ಅದಕ್ಕ ಮನಿಗೆ ಬರ್ತಿರಲಿಕ್ಕಿಲ್ಲ. ನಿ ಮಾತ್ರ ಅವಗ ಒಂದ ಪೈಸೆನೂ ಕೊಡಬ್ಯಾಡ. ತನಗ ಕುಡ್ಯಾಕ, ಸೂಳ್ಯಾರ್ಗೆ ಕೊಡ್ಯಾಕ ಬೇಕಾದಷ್ಟ ಅವ ಎಲ್ಲಿ ದುಡಿತಾನ? ರೊಕ್ಕ ಬೀಸಾಕದಿದ್ರ ಯಾವಾಕೀನೂ ಹತ್ರ ಬರಗೊಡಂಗಿಲ್ಲ. ಎಷ್ಟ ದಿನ ಅಂತ ಉದ್ರಿ ಹೇಳ್ತಾನ ಇವ? ಇವ್ನ ಉದ್ರಿ ಮಾತ ಯಾರೂ ಕೇಳಾಂಗಿಲ್ಲ ಬಿಡು. ಹಸ್ದ ನಾಯಿಯಂತಾಗಿ ಅವ ನಿಂತಾವನೇ ಬರ್ತಾನ. ನೀ ಚಿಂತಿ ಮಾಡಬ್ಯಾಡ ಹನ್ಮವ್ವ. ಅಜ್ಜಿ ಮಾತಿಂದ ಆಕಿಗೆ ತಟಗ ಸಮಾಧಾನ ಆದಂಗಾತು.
ಒಂದು ವಾರ ಆದ್ರೂ ರಾಮಪ್ಪ, ರಾತ್ರಿ ಮನಿಗೆ ಮಲಗಲಿಕ್ಕ ಬರ್ಲಿಲ್ಲ. ಹಗಲೊತ್ತು ಊಟಕ್ಕ ಬರ್ತಿದ್ರೂ, ಹನ್ಮವ್ವನ ಜೊತಿಗೆ ಆಟಕ್ಕಾಟ ಮಾತಾಡ್ತಿದ್ದ. ಮಕ್ಳ ಜೊತಿಗಿನೂ ಆಟ. ಇದ್ರಿಂದ ಹನ್ಮವ್ವನ ಎದಿಯಾಗ ತಳಮಳ ಬಾಳ ಆತು. ಭೀಮವ್ವಜ್ಜಿನ ಕೇಳಿದ್ರ, ನೀ ಚಿಂತಿ ಮಾಡಬ್ಯಾಡಬೇ ಅಂತ ಧೈರ್ಯ ತುಂಬ್ತಿದ್ಳು.
ಕೊನಿಗೇ ಎರ್ಡು ವಾರ ಆದ್ಮೇಲೆ ರಾಮಪ್ಪ ಒಂದ ದಿನ ರಾತ್ರಿ ಮನಿಗೆ ಬಂದ. ಕುಡಿದಿದ್ರೂ, ತುಸಾನಾ ಕುಡ್ದಾನಂತ ಅನಸ್ತಿತ್ತು ಅವ್ನ ನೋಡಿದ್ರ. ತನ್ನಟಕ ತಾನ ಒಂದ ಮೂಲ್ಯಾಗ ಹಾಸ್ಗಿ ಹಾಸ್ಕೊಂಡು ಮಲಕ್ಕೊಳಕ್ಕತ್ತಿದ್ದ. ಹನ್ಮವ್ವ ಊಟಕ್ಕ ಕರದ್ರೂ ಅವ ಒಲ್ಲೆ ಅಂದ. ಹನ್ಮವ್ವಗ ಮುಖಕ್ಕ ಮುಖ ಕೊಟ್ಟು ಮಾತಾಡೋ ತಾಕತ್ತ ಅವನ್ಗಿದ್ದಂಗಿದ್ದಿಲ್ಲ.
ಯಾಕ, ಯಾವ ಭೋಸುಡಿನೂ ನಿನ್ನ ಮಗ್ಗಲಕ ಕರ್ಕೊಳ್ಲಿಲ್ಲೇನು? ಅದಕ್ಕ ಬಂದಿಯೇನು ಬಿಕನಾಸಿ ಅಂಗ ಇಲ್ಲಿಗೆ? ಹನ್ಮವ್ವ ಅವ್ನ ತರಾಟೆಗೆ ತೆಗೆದ್ಕೊಂಡ್ಳು.
ನೀ ಹೇಳಾದು ಸರಿ ಹನುಮಿ. ಕಾಸಿಲ್ದ ಯಾರ ನನ್ನ ಹತ್ರಕ್ಕ ಕರ್ಕೊಂತಾರ? ನೀ ಬರೋಬ್ಬರಿ ಹೇಳ್ದಿ ಅಂತ ಅಂದ ರಾಮಪ್ಪ.
ಮತ್ಯಾಕ ಕುಡ್ದ ಬಂದೀ ಈಗ? ಅದಕ್ಕ ರೊಕ್ಕ ಎಲ್ಲಿಂದ ಬಂತು?
ಹನುಮೀ, ಖರೇ ಹೇಳ್ಬೇಕಂದ್ರ ಒಂದ ವಾರ್ದಿಂದ ನಾ ಯಾ ಹೆಂಗ್ಸಿನ ತಾಕ ಹೋಗಿಲ್ಲ. ಹಂಗ ಅವತ್ನಿಂದ ನಾ ಕುಡ್ಯಾದೂ ಕಡಿಮಿ ಮಾಡೀನಿ. ನೀ ಹೇಳಿದ ಮಾತೆಲ್ಲಾ ಖರೇ ಅಂತ ನನಗನಿಸಕತ್ತಿದ್ವು. ಕುಡೇ ಚಟ ಇದ್ದವ್ರು ಒಂದ ಸಲಕ ಕುಡೇದು ನಿಲ್ಸಾಕಾಗಂಗಿಲ್ಲ ಅಂತ ಯಾರೋ ಹೇಳಿದ್ದ ನನಗ ನೆಪ್ಪ ಐತಿ. ಕುಡ್ದು, ಕುಡ್ದು ಹೆಂಗ್ಸರ ಚಟಕ್ಕ ನಾ ಹುಚ್ಚನಂಗಾಗಿದ್ದೆ. ಈ ಎರ್ಡ ವಾರ್ದಾಗ, ಕುಡಿಲಾರ್ದ ವ್ಯಾಳ್ಯಾದಾಗ ನಾ ನೀನಾಡಿದ ಮಾತುಗಳ್ನ ಮೆಲಕ ಹಾಕ್ತಿದ್ದೆ. ನಾ ಮಾಡಿದ್ದೆಲ್ಲಾ ತೆಪ್ಪು ಅಂತ ಅನಿಸ್ತು. ನಿನಗ ನಾ ಬಾಳ ತ್ರಾಸ ಕೊಟ್ಟೇನಿ. ನನ್ನ ಕ್ಷಮ್ಸಿ ಬಿಡು ಹನಿಮೀ. ನಿನ್ನ ಧೈಯರ್ಾನ ನಾ ಬಾಳ ಮೆಚ್ಕೋಂಡೀನಿ. ಇದಕ್ಕ ಮೊದ್ಲ ನೀ ಧೈರ್ಯ ಮಾಡ್ಬೇಕಾಗಿತ್ತು ಅಂತ ನನಗನಿಸ್ತೈತಿ.
ಇನ್ನೊಂದೆರ್ಡು ವಾರ್ದಾಗ ನಾ ಪೂರಾ ಕುಡೇದ ಬಿಟ್ಟಬಿಡ್ತೀನಿ. ಹಂಗ ಹೋದ ವಾರ್ದಾಗ ನಾ ಡಾಕ್ಟರರ ತಾಕ ನನ್ನ ರಕ್ತ ಪರೀಕ್ಷಾ ಕೂಡ ಮಾಡ್ಸೀನಿ. ಅವತ್ತ ನೀ ಅದೇನೋ ಏಡ್ಸು, ಗೀಡ್ಸು ಅಂತ ಹೇಳ್ದೆಲ್ಲಾ, ಅದಕ್ಕ, ನಾ ಪರೀಕ್ಷಾ ಮಾಡ್ಸಿದೆ. ಎಲ್ಲಾ ಸರಿ ಐತೆ ಅಂತ ಡಾಕ್ಟರು ಹೇಳ್ಯಾರ. ಈಗರ ನೀ ನನ್ನ ಕ್ಷಮಿಸ್ತೀ ಅಲ್ಲಾ ಹನುಮಿ? ಎಂದ ರಾಮಪ್ಪ ದೀನನಾಗಿ ಹನ್ಮವ್ವನ ನೋಡ್ತಾ. ಹನ್ಮವ್ವಗ ಗಂಡನ ಮಾತ ಕೇಳಿ ಬಾಳ ಖುಷಿ ಆಗ್ಲಿಕ್ಕತ್ತಿತ್ತು.
ಎಲ್ಲಾ ಕ್ಷಮಿಸೀನಿ ಬಾರೋ ಅಂತ ಹೇಳ್ತಾ ಹನ್ಮವ್ವ ಗಂಡನ ಮುಖಾನ ತನ್ನ ಎದಿಗೊತ್ಕೊಳ್ಳಕತ್ತಿದ್ಳು.
ಬ್ಯಾಡ, ಬ್ಯಾಡ ಹನಿಮಿ, ಮೊದಲ ನಿನ್ನ ಎದಿ ಬ್ಯಾನ್ಯಾಗದ ನಾ ಮಾಡಿದ ಗಾಯದಿಂದ ಅಂತ ಹೇಳ್ತಾ ರಾಮಪ್ಪ ದೂರ ಸರೀಲಕ್ಕ ಪ್ರಯತ್ನ ಮಾಡ್ದ.
ಎದಿ ಒಳಗಿನ ಬ್ಯಾನೀನ ಇಲ್ದಂಗಾದ ಮ್ಯಾಲೆ, ಎದಿ ಮ್ಯಾಲಿನ ಗಾಯ ಅದ್ಯಾವ ಲೆಕ್ಕ? ಅನಕೋತ ಹನ್ಮವ್ವ ಗಂಡನ್ನ ಮುಖ ತನ್ನ ಎದಿಗೆ ಒತ್ತಿ ಹಿಡ್ಕೊಳ್ತಾ, ಸಂಭ್ರಮಿಸತೊಡ್ಗಿದ್ಳು. ಧೈರ್ಯಂ ಸರ್ವತ್ರ ಸಾಧನಂ ಅಂತ ಹೇಳಿದ್ದ ಭೀಮವ್ವಜ್ಜಿ ಮಾತು ಆಕಿ ಎದಿಯೊಳಗೆ ಚಿಲಿಪಿಲಿಗುಟ್ತಿತ್ತು.

No comments:

Post a Comment

Thanku