Friday, July 6, 2012

ಅರಿದಡೆ ಶರಣ, ಮರೆದಡೆ ಮಾನವ,

ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ,
ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿ ಎನಿಸಿತ್ತಯ್ಯಾ.
ಅರಿದಡೆ ಶರಣ, ಮರೆದಡೆ ಮಾನವ,
ಮರೆಯದೆ ಪೂಜಿಸು ಕೂಡಲಸಂಗನ.
-ಬಸವಣ್ಣನವರು
    ಮನ್ ಎಂದರೆ ವಿಚಾರ ಮಾಡು ಎಂದು ಅರ್ಥ. ವಿಚಾರ ಮಾಡುವ ಶಕ್ತಿಯುಳ್ಳವನು ಮಾನವನಾಗುತ್ತಾನೆ. ವಿಚಾರಗಳ ಉತ್ಪತ್ತಿಗೆ ಪ್ರಜ್ಞೆ ಮೂಲವಾಗಿರುತ್ತದೆ. ಪ್ರಜ್ಞೆಗೆ ವಸ್ತು ಮೂಲವಾಗಿರುತ್ತದೆ. ವಸ್ತು ಎಂದರೆ ಇಡೀ ವಿಶ್ವ. ಕಣ್ಣಿಗೆ ಕಾಣುವಂಥವುಗಳೆಲ್ಲ ವಸ್ತುಗಳೇ. ನಕ್ಷತ್ರ, ಸೂರ್ಯ, ಚಂದ್ರ, ಸಮುದ್ರ, ಅರಣ್ಯ, ಪಶು, ಪಕ್ಷಿ ಮತ್ತು ಮಾನವರು ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಮತ್ತು ಎಲ್ಲರೂ ನಿಜವಾದ ಅರ್ಥದಲ್ಲಿ ವಸ್ತುರೂಪದಲ್ಲೇ ಇದ್ದೇವೆ. ವಸ್ತುವಿನಿಂದ ಪ್ರಜ್ಞೆಯು ರೂಪ ತಾಳುತ್ತದೆ. ಆ ಪ್ರಜ್ಞೆಯು ವಿಶ್ವದ ಎಲ್ಲ ವಸ್ತುಗಳನ್ನು ಅವರವರ ಅನುಭವಕ್ಕೆ ತಕ್ಕಂತೆ ಅವರ ಮನದಲ್ಲಿ ಮೂಡಿಸುತ್ತದೆ.
    ಹೀಗೆ ಪ್ರಜ್ಞೆಯು ವಸ್ತುಗಳನ್ನು ಗ್ರಹಿಸುವ ಶಕ್ತಿಯಾಗಿದೆ. ಪ್ರಜ್ಞೆಯ ಅಸ್ತಿತ್ವಕ್ಕೆ ವಸ್ತು ಇರಲೇ ಬೇಕು. ವಸ್ತು ಇಲ್ಲದೆ ಮಾನವ ಕಲ್ಪಿಸಲಾರ. ನಿಜ ಅರ್ಥದಲ್ಲಿ ಕಲ್ಪನೆ ಎಂಬುದು ವಸ್ತು ಅಥವಾ ವಸ್ತುಗಳ ಸಹಾಯದಿಂದಲೇ ಮೂಡುವಂಥದ್ದು. ಸ್ಪಿಂಕ್ಸ್ ಕೆತ್ತಿದ ಶಿಲ್ಪಿ ಸಿಂಹವನ್ನು ಮತ್ತು ಹೆಣ್ಣನ್ನು ನೋಡಿದವನಾಗಿರುತ್ತಾನೆ. ಕರಿಯ ಬಣ್ಣ ಮತ್ತು ಹುಲಿಯ ಹಿನ್ನೆಲೆಯೊಂದಿಗೇನೆ ಕಲಾವಿದ ಕರಿಹುಲಿಯ ಚಿತ್ರವನ್ನು ಬಿಡಿಸಿರುತ್ತಾನೆ. ಹೆಣ್ಣು ಮತ್ತು ಮತ್ಸ್ಯದ ವಾಸ್ತವದ ಹಿನ್ನೆಲೆ ಇಲ್ಲದೆ ಮತ್ಸ್ಯಕನ್ಯೆ ಮೂಡಿ ಬರಲಾರಳು. ತೆಂಗಿನ ಮರವಿಲ್ಲದೆ ಕಲ್ಪವೃಕ್ಷವಿಲ್ಲ. ಗೋವು ಇಲ್ಲದೆ ಕಾಮಧೇನು ಇಲ್ಲ. ಆನೆ ಇಲ್ಲದೆ ಐರಾವತ ಇಲ್ಲ. ಹೀಗೆ ಮಾನವನ ಕಲ್ಪನೆಯ ಹಿಂದೆ ವಸ್ತುಗಳು ಅಡಕವಾಗಿವೆ.
    ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಭಿತ್ತಿಯಂಥ ಭೌತಿಕ ವಸ್ತುಗಳ ಸಹಾಯವಿಲ್ಲದೆ ಚಿತ್ರಗಳನ್ನು ಬಿಡಿಸಲಿಕ್ಕಾಗದು. ಭಿತ್ತಿಯು ಭೌತಿಕವಾದದ ಪ್ರತೀಕವಾದರೆ, ಚಿತ್ತಾರವು ಅನುಭಾವದ ಪ್ರತೀಕವಾಗಿದೆ. ಭಿತ್ತಿ ಇಲ್ಲದೆ ಚಿತ್ತಾರವಿಲ್ಲ. ಹಾಗೆಯೆ ಅನುಭವವಿಲ್ಲದೆ ಅನುಭಾವವಿಲ್ಲ. ವಸ್ತುವಿನ ಜೊತೆಗಿನ ಅನುಭವದ ಮೂಲಕ ಬರುವ ಪ್ರಜ್ಞೆಯು ಭೌತಿಕವಾದಕ್ಕೆ ಪುಷ್ಟಿ ಕೊಡುತ್ತದೆ. ಅನುಭವದ ಮೂಲಕ ಅನುಭಾವದ ಸೃಷ್ಟಿಯಾದಾಗ ಅರಿವು ಮೂಡುತ್ತದೆ. ಹೀಗೆ ಪ್ರಜ್ಞೆ ಎಂಬುದು ವಸ್ತುವಿನ ಗ್ರಹಿಕೆಯ ಮೂಲಕ ಬಂದರೆ, ಅರಿವು ಎಂಬುದು ವಸ್ತುವಿನ ಮೂಲ ಗ್ರಹಿಕೆಯ ಮೂಲಕ ಬರುವುದು. ಈ ಸತ್ಯವನ್ನು ಅರಿತವನೇ ಶರಣ. ಮರೆತವನೇ ಮಾನವ. ಅಂದರೆ ಗ್ರಹಿಕೆಯು ಸಾಮಾನ್ಯ ಮಾನವನ ಗುಣವಾಗಿದೆ. ವಸ್ತುವಿನ ಮೂಲಕ ಸೃಷ್ಟಿಯಾಗುವ ಪ್ರಜ್ಞೆಯೊಂದಿಗೆ ಭೌತಿಕ ಜೀವನ ಸಾಗುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬ ಮಾನವನು ಸಹಜವಾಗಿಯೆ ಇಂಥ ಪ್ರಜ್ಞೆಯಿಂದ ಬದುಕುತ್ತಾನೆ. ಆದರೆ ನೋಟದಿಂದ ಪ್ರಜ್ಞೆ ಪಡೆಯುವ ಶರಣ ಒಳನೋಟದಿಂದ ಅರಿವು ಪಡೆಯುತ್ತಾನೆ. ಹೀಗೆ ಒಳನೋಟವನ್ನು ಮರೆತವನು ಮಾನವನಾಗಿರುತ್ತಾನೆ. ಆದರೆ ಒಳನೋಟವನ್ನು ಅರಿತವನೇ ಶರಣನಾಗಿರುತ್ತಾನೆ ಎಂಬುದನ್ನು ಬಸವಣ್ಣನವರು ಮಾಮರ್ಿಕವಾಗಿ ಹೇಳಿದ್ದಾರೆ.
    ವಸ್ತು ಮತ್ತು ಮೂಲವಸ್ತುವಾದ ಚೈತನ್ಯ ಬೇರೆ ಬೇರೆ ಅಲ್ಲ. ಮ್ಯಾಟರ್ ಮತ್ತು ಎನಜರ್ಿ ಬೇರೆ ಬೇರೆ ಅಲ್ಲ ಎಂಬುದು ಇದರ ಅರ್ಥ. ವಿಜ್ಞಾನದ ಎನಜರ್ಿ ತತ್ತ್ವಜ್ಞಾನದಲ್ಲಿ ಸ್ಪಿರಿಟ್ ಎನಸಿಕೊಳ್ಳುತ್ತದೆ. ಮ್ಯಾಟರ್ ಎಂಬುದು ವಸ್ತುವಾದರೆ ಮೂಲವಸ್ತು ಎಂಬುದೇ ಎನಜರ್ಿ ಅಥವಾ ಸ್ಪಿರಿಟ್. ಮೂಲವಸ್ತುವಾದ ಚೈತನ್ಯದಿಂದಲೇ ವಸ್ತುವಿನ ನಿಮರ್ಾಣವಾಗಿದೆ ಎಂಬದರ ಕುರಿತು ಬಸವಣ್ಣನವರು ತಿಳಿಸಿದ್ದಾರೆ. ಇದನ್ನು ಅರಿತವನೇ ಶರಣನಾಗುತ್ತಾನೆ. ಈ ಜ್ಞಾನವಿಲ್ಲದವನು ಬರಿ ಮಾನವನಾಗಿ ಭೌತಿಕ ವಸ್ತುಗಳ ಜೊತೆಗೆ ಜೀವನ ಸಾಗಿಸುತ್ತಾನೆ.   
    ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ, ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿ ಎನಿಸಿತ್ತಯ್ಯಾ. ಎಂದು ಬಸವಣ್ಣನವರು ತಿಳಿಸಿದ್ದಾರೆ. ಉಣ್ಣುವ ಗಂಗಾಳವನ್ನು ಕಂಚಿನಂದ ಮಾಡುತ್ತಾರೆ. ಮುಖ ನೋಡಿಕೊಳ್ಳವ ಕನ್ನಡಿಯನ್ನು ಕೂಡ ಕಂಚಿನಿಂದಲೇ ತಯಾರಿಸುತ್ತಾರೆ. ಹೀಗೆ ಉಣ್ಣುವ ಗಂಗಾಳ ಮತ್ತು ಮುಖ ನೋಡಿಕೊಳ್ಳುವ ಕನ್ನಡಿ ಬೇರೆ ಬೇರೆ ವಸ್ತುಗಳಾದರೆ. ಮೂಲ ವಸ್ತುವಾದ ಕಂಚು ಒಂದೇ ಆಗಿದೆ. ಅಡುಗೆ ಮಾಡುವ ಪಾತ್ರೆಯನ್ನು ಕಂಚಿನಿಂದಲೇ ತಯಾರಿಸುತ್ತಾರೆ. ಅದೇ ರೀತಿ ಊಟದ ಗಂಗಾಳ ಕೂಡ ಕಂಚಿನಿಂದಲೇ ತಯಾರಿಸುತ್ತಾರೆ. ಅದೇ ಕಂಚಿನ ತುಕಡಿಯನ್ನು ತಿಕ್ಕಿ ತಿಕ್ಕಿ ನುಣುಪುಗೊಳಿಸಿ ಕನ್ನಡಿ ತಯಾರಿಸುತ್ತಾರೆ. ಹೀಗೆ ಮೂಲವಸ್ತುವಾದ ಕಂಚು ವಿವಿಧ ರೀತಿಯ ರೂಪು ಪಡೆಯುವುದರ ಮೂಲಕ ಅಡುಗೆ ಪಾತ್ರೆ, ಊಟದ ಗಂಗಾಳ ಮತ್ತು ಮುಖ ನೋಡಿಕೊಳ್ಳುವ ಕನ್ನಡಿಯಾಗುತ್ತದೆ.
    ಈ ರೀತಿ ಜಗತ್ತು ರೂಪುಗೊಳ್ಳುವ ಕ್ರಮವನ್ನು ಬಸವಣ್ಣನವರು ಅರುಹಿದ್ದಾರೆ. ಬಸವಣ್ಣನವರ ಸಿದ್ಧಾಂತ ಬಯಲು ಸಿದ್ಧಾಂತವಾಗಿದೆ. ಬಯಲಿನಂದ ಸೃಷ್ಟಿಯಾದುದು ಬಯಲಲ್ಲೇ ಲಯವಾಗುತ್ತದೆ. ಬಯಲು ಎಂಬುದೇ ಮೂಲವಸ್ತು. ಈ ಬಯಲನ್ನು ಶೂನ್ಯ ಅಥವಾ ಚೈತನ್ಯ ಎಂದೂ ಕರೆಯುತ್ತಾರೆ. ಇದುವೆ ಸ್ಪಿರಿಟ್ ಅಥವಾ ಎನಜರ್ಿ. ಈ ಮೂಲವಸ್ತುವಿನಿಂದಲೇ ನಕ್ಷತ್ರಗಳು, ಸೂರ್ಯ, ಚಂದ್ರ, ಪೃಥ್ವಿ ಮುಂತಾದ ಆಕಾಶಕಾಯಗಳ ನಿಮರ್ಾಣವಾಗಿದೆ. ಮಾನವರು, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಗಿಡಮರಬಳ್ಳಿಗಳು, ನದಿ ಮತ್ತು ಸಮುದ್ರಗಳು ಹೀಗೆ ಪೃಥ್ವಿಯಲ್ಲಿ ಕಾಣುವುದೆಲ್ಲವೂ ಪೃಥ್ವಿಯಿಂದಲೇ ಜನ್ಮ ತಾಳಿದ್ದಾಗಿರುತ್ತವೆ. ಆದರೆ ಪೃಥ್ವಿ ಸಮೇತ ಇಡೀ ವಿಶ್ವವು ಬಯಲೆಂಬ ಚೈತನ್ಯದಿಂದ ಸೃಷ್ಟಿಯಾಗಿದೆ. ಸೂರ್ಯ, ಚಂದ್ರ ತಾರೆಗಳ ಸಮೇತ ಕಾಣುವುದೆಲ್ಲವೂ ಒಂದಿಲ್ಲ ಒಂದು ದಿನ ಲಯವಾಗಿ ಮೂಲವಸ್ತುವಾದ ಚೈತನ್ಯದಲ್ಲಿ ಒಂದಾಗಲೇ ಬೇಕು. ಇದನ್ನು ಅರಿತವನೇ ಶರಣ. ಮರೆತವನೇ ಮಾನವ. ಆದ್ದರಿಂದಲೇ ಮರೆಯದೆ ಪೂಜಿಸು ಕೂಡಲಸಂಗನ ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ಪೂಜೆಯು ಮೂಲವಸ್ತುವನ್ನು ಅರಿತುಕೊಳ್ಳುವ ಕ್ರಮವಾಗಿದೆ.
ಬಯಲ ರೂಪ ಮಾಡಬಲ್ಲಾತನೆ ಶರಣನು;
ಆ ರೂಪ ಬಯಲು ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು     ಶರಣನೆಂಬೆ?
ಆ ರೂಪ ಬಯಲ ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ.
    ಎಂದು ಬಸವಣ್ಣನವರು ಹೇಳುವಲ್ಲಿ ಈ ಅರಿವಿನ ವಿರಾಟ ಸ್ವರೂಪವನ್ನು ತೋರಿಸಿಕೊಟ್ಟಿದ್ದಾರೆ. ಚೈತನ್ಯದಿಂದ ವಸ್ತುವಾಗಿರುವುದನ್ನು ಅರಿತವನೇ ಶರಣ. ಆ ವಸ್ತು ಲಯವಾಗಿ ಮತ್ತೆ ಚೈತನ್ಯವಾಗುತ್ತದೆ ಎಂಬುದನ್ನು ಅರಿತವನೇ ಲಿಂಗತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡ ಲಿಂಗಾನುಭಾವಿ. ಚೈತನ್ಯವನ್ನು ವಸ್ತುರೂಪದಲ್ಲಿ ಕಂಡುಕೊಂಡು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವಾತನೇ ಶರಣ. ಶಿವ ಎಂಬುದೇ ಚೈತನ್ಯ. ಆ ಚೈತನ್ಯದಿಂದ ರೂಪ ತಳೆದ ಸಕಲ ಜೀವಾತ್ಮರು ಶಿವಸ್ವರೂಪಿಗಳೇ ಆಗಿದ್ದಾರೆ. ಆದ್ದರಿಂದ ಲೋಕದಲ್ಲಿ ಸರ್ವಸಮತ್ವವನ್ನು ಅರಿತವನು ಶರಣ ಎಂದು ಕರೆಯಿಸಿಕೊಳ್ಳುವನು. ಆತ ಹೀಗೆ ಬದುಕನ್ನು ಅಥರ್ೈಸಿಕೊಳ್ಳದಿದ್ದರೆ ಅವನಗೆ ಶರಣನೆಂದು ಕರೆಯಲಿಕ್ಕಾಗದು. ಈ ವಿಶ್ವ ಮತ್ತೆ ತನ್ನ ರೂಪವನ್ನು ಕಳೆದುಕೊಂಡು ಬಯಲಾಗುವುದು ಎಂಬ ಅಂತಿಮ ಸತ್ಯವನ್ನು ಅರಿತ ಶರಣನೇ ಲಿಂಗಾನುಭಾವಿಯಾಗುತ್ತಾನೆ. ಲಿಂಗತತ್ತ್ವವು ವಿಶ್ವದ ಆದಿ ಮತ್ತು ಅಂತ್ಯದ ಪರಿಜ್ಞಾನವನ್ನು ಕೊಡುವ ತತ್ತ್ವವಾಗಿದೆ. ಇವುಗಳ ಮಧ್ಯೆ ಇರುವ ಬದುಕನ್ನು ಲಿಂಗಾಂಗ ಸಾಮರಸ್ಯದೊಂದಿಗೆ ಅರ್ಥಪೂರ್ಣಗೊಳಿಸುವ ಕ್ರಮವನ್ನು ಲಿಂಗತತ್ತ್ವ ಸಾರುತ್ತದೆ. ಲಿಂಗವೇ ಚೈತನ್ಯ. ಅಂಗವೇ ನಮ್ಮ ದೇಹ ಎಂಬ ವಸ್ತು. ಇವುಗಳ ಮಧ್ಯದ ಅಂದರೆ ಶಿವ ಮತ್ತು ಜೀವರ ಮಧ್ಯದ ಸಾಮರಸ್ಯವೇ ಲಿಂಗಾಂಗ ಸಾಮರಸ್ಯ. ಹೀಗೆ ಲಿಂಗಾಂಗ ಸಾಮರಸ್ಯ ಹೊಂದಿದವರು ಪ್ರಸಾದಕಾಯರಾಗುತ್ತಾರೆ. ಇಂಥ ಲಿಂಗಾಂಗ ಸಾಮರಸ್ಯವನ್ನು ಹೊಂದಿದವರೇ ಲಿಂಗಾನುಭಾವಿಗಳು. ಎಲ್ಲವೂ ಲಯವಾಗುವ ಅಂತಿಮ ಸತ್ಯವನ್ನು ಅರಿಯಲು ಲಿಂಗಾಂಗಸಾಮರಸ್ಯ ಅವಶ್ಯವಾಗಿದೆ. ರೂಪ ಲಯವಾಗಿ ಬಯಲಾಗುವ ಅಂತಿಮ ಸತ್ಯವನ್ನು ಅರಿಯದವರು ಲಿಂಗಾನುಭಾವಿಗಳಾಗಲು ಸಾಧ್ಯವಿಲ್ಲ. ಇಂಥ ಬಯಲು ಮತ್ತು ರೂಪ ಒಂದಾಗಿರುವುದನ್ನು ಅರಿತುಕೊಂಡಾಗ ಶಿವ ಮತ್ತು ಜೀವರಲ್ಲಿ ಅಭೇದ್ಯ ಉಂಟಾಗುವುದು. ಈ ಸತ್ಯವನ್ನು ಅರಿತುಕೊಂಡವರು ಶರಣರಾಗುತ್ತಾರೆ; ಮರೆತವರು ಮಾನವರಾಗಿ ಸುಮ್ಮನೆ ಬದುಕಿ ಸತ್ತುಹೋಗುತ್ತಾರೆ.

ರಂಜಾನ್ ದಗರ್ಾ
ನಿದರ್ೇಶಕ,
ವಚನ ಅಧ್ಯಯನ ಕೇಂದ್ರ, ಬಸವ ಸೇವಾ ಪ್ರತಿಷ್ಠಾನ ಶರಣ ಉದ್ಯಾನ, ಶರಣ ನಗರ ಬೀದರ -585401
ಮೊಬೈಲ್: 9242470384

No comments:

Post a Comment

Thanku