Sunday, July 1, 2012

ಎತ್ತಣ ಮಾಮರ ಎತ್ತಣ ಕೋಗಿಲೆ...

    ರೀ ರಾಮಚಂದ್ರರಾವ್ ನಮ್ಮ ಮೊಮ್ಮೊಗಳು ಸಂಗೀತಾಳದು ಈ ವರ್ಷ ಬಿ. ಇ. (ಇ&ಸಿ) ಅದೂ ಡಿಸ್ಟಿಂಕ್ಷನ್ನಲ್ಲಿ ಮುಗಿತು. ಹಾಗೇ ಮೊಮ್ಮೊಗ ಶಶಿಧರನದು ಪಿಯುಸಿ ಮುಗಿದು ಆತನಿಗೆ ಐಐಟಿ ಖರಗಪುರ್ದಲ್ಲಿ ಇಂಜನಿಯರಿಂಗ್ ಸೀಟು ಸಿಕ್ಕಿದೆ ಎಂದು ತಿಳಿಸಲು ನನಗೆ ಬಹಳ ಖುಷಿ ಅನಿಸುತ್ತಿದೆ"
    ಹೌದು ನೋಡ್ರಿ. ಹುಡುಗರು ಮೊನ್ನೆ ಮೊನ್ನೆ ಮನೆಗೆ ಬಂದಂಗನಿಸುತ್ತಿದೆ ನನಗೆ. ನನಗೂ ಬಹಳ ಸಂತೋಷ ಆಗೆದ. 70 ವರ್ಷದ ಡಾಕ್ಟರ್ ಚಿದಾನಂದ ತನ್ನ ಗೆಳೆಯ 60 ವರ್ಷದ ನಿವೃತ್ತ ಇಂಜನಿಯರಿಗೆ ಹೇಳಿದಾಗ ಅವರ ಮಾತಿಗೆ ಇಂಜಿನಿಯರ್ ರಾಮಚಂದ್ರರಾವ್ ಪ್ರತಿಕ್ರಿಯಿಸುತ್ತಾ ತಮ್ಮ ಸಂತಸ ಹಂಚಿಕೊಂಡರು. ಆನಂದದ ಉಮ್ಮೇದಿಯಲ್ಲಿ ಡಾಕ್ಟರಿಗೆ ಕಣ್ಣಾಲಿಗಳು ತುಂಬಿ ಬಂದಿದ್ದವು. ತನ್ನ ಇಂಜನಿಯರ್ ಗೆಳೆಯಗೆ ಕಣ್ಣೀರು ತೋರಿಸಲಿಚ್ಛಿಸದ ಡಾಕ್ಟರರು ಪಕ್ಕಕ್ಕೆ ತಿರುಗಿ ಕಣ್ಣೀರೊರಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದರೂ ಅದು ರಾಮಚಂದ್ರರಾವ್ ಅವರ ಅಂತರಂಗದ ಅರಿವಿಗೆ ಬರದಿರುವುದು ಅಸಾಧ್ಯವಾಗಿತ್ತು.
    70ರ ಹರೆಯದ ಡಾಕ್ಟರ್ ಚಿದಾನಂದ ಮೆಡಿಕಲ್ ಆಫೀಸಿರ್ ಎಂದು ಆರೋಗ್ಯ ಇಲಾಖೆಯಿಂದ ನಿವೃತ್ತಿಯಾಗಿ 12 ವರ್ಷಗಳಾಗಿವೆ. ತಮ್ಮದೇ ದವಾಖಾನೆಯಲ್ಲಿ ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. 70ರ ಇಳಿವಯಸ್ಸಿನಲ್ಲಿಯೂ ಆರೋಗ್ಯ ಚೆನ್ನಾಗಿ ಕಾಯ್ದುಕೊಂಡು ಬಂದಿರುವುದರಿಂದ ತಕ್ಕ ಮಟ್ಟಿಗೆ ತಮ್ಮ ವೈದ್ಯಕೀಯ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
    ಮಗಳೇ, ರಾಮಚಂದ್ರರಾವ್ಗೆ ಸ್ವಲ್ಪ ಚಹ ಮಾಡಿಕೊಂಡು ಬಾರಮ್ಮಾ, ಹಾಗೇ ಮಕ್ಕಳಿಗೆ ಸ್ವೀಟು ತೆಗೆದುಕೊಂಡು ರಾಮಚಂದ್ರರಾವ್ಗೆ ಕೊಡಲು ಹೇಳು. ಏಯ್ ಮಕ್ಕಳೇ ಅಂಕಲ್ಗೆ ಸ್ವೀಟ್ಸ್ ಕೊಡ್ರಿ ಎಂದು ಡಾಕ್ಟರು ಹೇಳಿದಾಗ, ಸಂಗೀತಾ ಮತ್ತು ಶಶಿಧರ ಸಿಹಿಯ ಪೊಟ್ಟಣ ಹಿಡಿದು ಕೊಂಡು ಬಂದರು. ಪೋಲಿಯೋದಿಂದ ಪೀಡಿತನಾಗಿದ್ದ ಶಶಿ ಕಾಲು ಎಳೆಯುತ್ತಾ ಅಕ್ಕನೊಂದಿಗೆ ರಾಮಚಂದ್ರರಾವ್ಗೆ ಸಿಹಿಕೊಟ್ಟು ಅವರ ಆಶೀವರ್ಾದ ಪಡೆದರು. ಮಲ್ಲಮ್ಮ, ಸಂಗೀತಾ, ಶಶಿಧರ ಅವರನ್ನು ಒಟ್ಟಿಗೆ ನೋಡಿದ ಡಾಕ್ಟರ್ ಚಿದಾನಂದ್ ಅವರ ಚಿತ್ತ ಗತ ಜೀವನದ ಮೆಲುಕು ಹಾಕತೊಡಗಿತು.
    ಮಲ್ಲಮ್ಮ ತನ್ನ ಮಕ್ಕಳಾದ ಸಂಗೀತಾ ಮತ್ತು ಶಶಿಧರ ಅವರೊಂದಿಗೆ ಡಾಕ್ಟರರ ಮನೆ ಸೇರಿ 12ವರ್ಷಗಳ ಮೇಲೆ ಆಗಿದೆ. ಮಲ್ಲಮ್ಮ ಡಾಕ್ಟರರ ಸ್ವಂತ ಮಗಳೇನೂ ಅಲ್ಲ. ಸಂಗೀತಾ ಮತ್ತು ಶಶಿಧರ ಅವರ ಸ್ವಂತ ಮೊಮ್ಮಕ್ಕಳೂ ಅಲ್ಲ. ಕಳೆದ 11 ವರ್ಷಗಳಲ್ಲಿ ಮಲ್ಲಮ್ಮ ಸ್ವಂತ ಮಗಳಿಗಿಂತಲೂ ಹೆಚ್ಚಿಗೆ, ಸಂಗೀತಾ ಮತ್ತು ಶಶಿಧರ ಸ್ವಂತ ಮೊಮ್ಮಕ್ಕಳಿಗಿಂತಲೂ ಹೆಚ್ಚಿಗೆ ಆಗಿದ್ದಾರೆ ಚಿದಾನಂದ ಅವರಿಗೆ. ಒಂದು ವಿಚಿತ್ರ ಸಂಕೀರ್ಣ ಸಮಯದಲ್ಲಿ ಮೂವರೂ ಡಾಕ್ಟರರ ಮನೆ ಸೇರಿದ್ದರು.
    ಡಾಕ್ಟರ್ ಚಿದಾನಂದ್, ಶೈಲಜಾ ಅವರದು ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನೊಂದಿಗೆ ಕೂಡಿದ ಸುಖೀ ಸಂಸಾರವಾಗಿತ್ತು. ಹೆಣ್ಣುಮಕ್ಕಳಾದ ಸ್ನೇಹಲತಾ ಮತ್ತು ಪುಷ್ಪಲತಾ ಇಬ್ಬರೂ ಗಂಡು ಮಗನಾದ ರಾಹುಲ್ಗಿಂತಲೂ ದೊಡ್ಡವರು. ಡಾಕ್ಟರ್ ಚಿದಾನಂದ ತಮ್ಮ 55ನೇ ವಯಸ್ಸಿನಲ್ಲಿ ಇಬ್ಬರೂ ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಸ್ನೇಹಿಲತಾ ಎಂ. ಎ ಮುಗಿಸಿದ್ದರೆ, ಪುಷ್ಪಲತಾ ಬಿ.ಎ. ಮುಗಿಸಿದ್ದಳು.
    ಸ್ನೇಹಲತಾಗೆ ಪೂನಾದಲ್ಲಿ ಕೆಲಸ ಮಾಡುವ ಇಂಜನಿಯರ್ ಹುಡುಗ ಸಿಕ್ಕಿದ್ದರೆ, ಪುಷ್ಪಲತಾಳನ್ನು ಫಾರಿನ್ನಲ್ಲಿರುವ ಇಂಜನಿಯರ್ ವರನೇ ವರಿಸಿದ್ದ. ಇಬ್ಬರದೂ ಒಂದೇ ಬಾರಿಗೆ ಮದುವೆ ಮುಗಿದಿತ್ತು. ತಮ್ಮ ತಮ್ಮ ಭಾವೀ ಜೀವನದ ಸುಂದರ ಕನಸುಗಳ ಲೋಕದಲ್ಲಿ ವಿಹರಿಸುತ್ತಿದ್ದ ಇಬ್ಬರೂ ಮದುವೆಯಾಗುತ್ತಲೇ ತಮ್ಮ ತಮ್ಮ ಗಂಡಂದಿರೊಂದಿಗೆ ಹೆಜ್ಜೆ ಹಾಕಿದ್ದರು. ಆಗ ರಾಹುಲ್ ಎಂ.ಬಿ.ಬಿ.ಎಸ್. ಮುಗಿಸುವ ಹಂತದಲ್ಲಿದ್ದ.
    ರಾಹುಲ್ ಎಂ.ಬಿ.ಬಿ.ಎಸ್. ಮುಗಿಸಿ, ಎಂ.ಎಸ್.ಗೆ ಸೇರುವಷ್ಟರಲ್ಲಿ ಸ್ನೇಹಲತಾ & ಪುಷ್ಪಲತಾ ಇಬ್ಬರೂ ಮೊದಲನೇ ಹೆರಿಗೆಗಾಗಿ ತವರಿಗೆ ಬಂದು ಹೋಗಿದ್ದರು. ತಮಗೆ ತಮ್ಮ ಕಾಲದಲ್ಲಿ ಎಂ.ಬಿ.ಬಿ.ಎಸ್. ಮುಗಿಸುವುದೇ ದೊಡ್ಡ ಮಾತಾಗಿತ್ತು. ವೈದ್ಯಕೀಯ ವಿಜ್ಞಾನದಲ್ಲಿ ಅದೇ ದೊಡ್ಡ ಡಿಗ್ರಿಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಪಿ.ಜಿ. ಇದ್ದರೆ ಚೆನ್ನ ಅಂತ ಅನಿಸುತ್ತಿತ್ತು ಡಾಕ್ಟರ್ ಚಿದಾನಂದರಿಗೆ. ಹಾಗಾಗಿ ಅವರು ಮಗಗೆ ಜನರಲ್ ಸರ್ಜರಿಯಲ್ಲಿ ಎಂ.ಎಸ್. ಮಾಡಲು ಬೆಳಗಾವಿಯ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.
    ಇಬ್ಬರೂ ಹೆಣ್ಣುಮಕ್ಕಳ ನಂತರ ಜನಿಸಿದ ರಾಹುಲ್ ತಾಯಿಯ ಮುದ್ದಿನ ಮಗನಾಗಿದ್ದ. ಒಂದು ತರಹದ ಹಟಮಾರಿತನದಲ್ಲೇ ಅವನ ಬೆಳವಣಿಗೆ ಮುಂದುವರೆದಿತ್ತು. ಎಂ.ಬಿ.ಬಿ.ಎಸ್. ಕೋಸರ್ು ಮುಗಿದಿದ್ದರೂ ಅವನ ಹಟಮಾರಿತನದ ಧೋರಣೆ, ದುಂದು ವೆಚ್ಚಕ್ಕೆ ಕಡಿವಾಣವಿರಲಿಲ್ಲ. ಮಗನ ಮೇಲೆ ಅತಿಯಾದ ಪ್ರೀತಿ, ವ್ಯಾಮೋಹ ಇದ್ದ ತಾಯಿ ಶೈಲಜಾಗೆ ಮಗ ಮಾಡಿದ್ದಲ್ಲೆಲ್ಲಾ ಮಾನ್ಯವಾಗಿದ್ದರೆ, ತಂದೆಗೆ ಮಗನ ಎಲ್ಲಾ ನಡವಳಿಕೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ತಂದೆಯಿಂದ ಮಗನಿಗೆ ಆಗಾಗ್ಗೆ ಹಿತೋಪದೇಶ ಆಗುತ್ತಿತ್ತು. ಕೆಲವೊಂದು ಸಾರೆ ತಂದೆ-ಮಗನ ನಡುವಿನ ಚಚರ್ೆ, ಗಂಭೀರ ರೂಪ ತಳೆದು, ತಾರಕಕ್ಕೇರುತ್ತಿತ್ತು. ತಂದೆಯ ಹಿತವಚನದ ಮಾತುಗಳು ಮಗನಿಗೆ ರುಚಿಸುತ್ತಿರಲಿಲ್ಲ.
    ರಾಹುಲ್ ಎಂ.ಎಸ್. 2ನೇ ವರ್ಷದಲ್ಲಿದ್ದ. ಒಂದು ಸಾರೆ ರಜೆಗೆಂದು ಊರಿಗೆ ಬಂದಿದ್ದ ರಾಹುಲ್ ಮತ್ತು ಚಿದಾನಂದ ಅವರ ನಡುವೆ ಯಾವುದೋ ಖಚರ್ಿನ ವಿಷಯಕ್ಕೆ ಭರ್ಜರಿ ವಾಗ್ವಾದವಾಯಿತು. ತಂದೆ, ಮಕ್ಕಳ ವಾಗ್ವಾದದ ರೀತಿ, ನೀತಿ, ಗಂಭೀರತೆಯನ್ನು ಅರಿತ ಶೈಲಜಾ ತಾನೂ ನಡುವೆ ಬಾಯಿ ಹಾಕಿ ತಂದೆ-ಮಕ್ಕಳಿಬ್ಬರ ನಡುವೆ ರಾಜಿ ಮಾಡಲು ಪ್ರಯತ್ನಸಿದ್ದಳು. ವಾಗ್ವಾದದ ಎರಡು ದಿನಗಳ ನಂತರ ತನ್ನ ಅಭ್ಯಾಸಕ್ಕೆಂದು ಬೆಳಗಾವಿಗೆ ಹೋದ ರಾಹುಲ್ ಪುನಃ ಊರಿಗೆ ಬರಲಿಲ್ಲ. ಅವನು ಕಾಲೇಜಿಗೆ ಹೋಗಿ ಹಾಜರಾದ ಬಗ್ಗೆಯೂ ತಿಳಿದು ಬರಲಿಲ್ಲ. ಅದಾದ ಒಂದು ವಾರದ ನಂತರವಷ್ಟೇ ಡಾಕ್ಟರ್ ಚಿದಾನಂದ್ ದಂಪತಿಗಳಿಗೆ ತಿಳಿದದ್ದು ತಮ್ಮ ಮಗ ಬೆಳಗಾವಿಗೆ ಹೋಗಿಲ್ಲವೆಂದು. ಎಲ್ಲಾ ನಿಟ್ಟಿನಂದ ಪ್ರಯತ್ನಿಸಿದರೂ ಅವನ ವಿಳಾಸದ ಸುಳಿವು ಪತ್ತೆಯಾಗಲಿಲ್ಲ.
    ಮಗ ಹೇಳದೇ ಕೇಳದೇ ನಾಪತ್ತೆಯಾದುದು ಚಿದಾನಂದ-ಶೈಲಜಾ ದಂಪತಿಗಳನ್ನು ಅಧೀರರನ್ನಾಗಿಸಿತು. ಚಿದಾನಂದ ಅವರ ಸವರ್ೀಸು ಇನ್ನೊಂದು ವರ್ಷ ಉಳಿದಿತ್ತು. ಮಗನ ಎಂ.ಎಸ್. ಮುಗಿಯುವಷ್ಟರಲ್ಲಿ ತಮ್ಮದೂ ರಿಟೈರ್ಮೆಂಟ್ ಆಗುತ್ತದೆ. ಇಬ್ಬರೂ ಸೇರಿ ನಸರ್ಿಂಗ್ ಹೋಮ್ ಒಂದರನ್ನು ಪ್ರಾರಂಭಿಸುವ ಕನಸು ಕಾಣುತ್ತಿದ್ದರು ಡಾಕ್ಟರ್ ಚಿದಾನಂದ್. ಅವರ ಕನಸಿನ ಬಲೂನಿಗೆ ಸೂಜಿ ಚುಚ್ಚಿದ್ದ ಮಗ ರಾಹುಲ್. ಮಗನೆಂದರೆ ಸರ್ವಸ್ವ ಎಂದು ಅಂದುಕೊಂಡಿದ್ದ ತಾಯಿ ಶೈಲಜಾಳಿಗೆ ಮಾನಸಿಕವಾಗಿ ಆಘಾತವಾಗಿತ್ತು, ಮಗನ ಚಿಂತೆಯಲ್ಲಿ ಊಟ, ನಿದ್ರೆ ಯಾವುದೂ ಬೇಡವಾಗಿತ್ತು ಆಕೆಗೆ. ಮಗ ನಾಪತ್ತೆಯಾಗಿ ವರ್ಷವೊಂದು ಗತಿಸಿದರೂ ಅವನ ಬಗ್ಗೆ ಸುಳಿವು ಸಿಗದಾದಾಗ ಆಕೆ ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದಳು. ಹೆಣ್ಣುಮಕ್ಕಳಿಬ್ಬರೂ ದೂರದ ಊರಿಂದ, ದೂರದ ದೇಶದಿಂದ ಒಂದು ಸಾರೆ ಬಂದು ತಂದೆ-ತಾಯಿಗಳಿಬ್ಬರಿಗೂ ಸಾಂತ್ವನ ಹೇಳಿ ಹೋಗಿದ್ದರು ಅಷ್ಟೇ. ಅವರಿಗಾದರೂ ಅವರ ಜೊತೆ ಬಹಳ ದಿನಗಳವರೆಗೆ ಇರಲು ಅನುಕೂಲವಿರ ಲಿಲ್ಲವಲ್ಲ. ಎಲ್ಲರಿಗೂ ಅವರವರ ಸಂಸಾರದ ಜವಾಬ್ದಾರಿ ಹೊರುವುದೇ ಸಾಕಾಗಿತ್ತು. ಮಕ್ಕಳು ಬಂದು ಹೋದ ನಂತರ ಪುನಃ ಗಂಡ-ಹೆಂಡತಿ ಇಬ್ಬರೇ.
    ಮಗನ ಚಿಂತೆಯಿಂದ ಹೊರಬರಲಾರದ ಶೈಲಜಾ ಡಾಕ್ಟರ್ ಚಿದಾನಂದ ಅವರನ್ನು ಒಂಟಿಮಾಡಿ ಒಂದು ದಿನ ಹೋರಟೇ ಬಿಟ್ಟಳು ಇಹಲೋಕದ ಯಾತ್ರೆ ಮುಗಿಸಿಕೊಂಡು. ಈಗ ಚಿದಾನಂದ ಅವರು ಜೀವನದಲ್ಲಿ ನಿಜವಾಗಿಯೂ ಏಕಾಂಗಿಯಾದರು. ಪತ್ನಿಯೆಂದರೆ ಅವರಿಗೆ ಸರ್ವಸ್ವ ಆಗಿದ್ದಳು. ಅವರಿಗೆ ಕೈಕಾಲೇ ಆಡದಂತಾಗಿತ್ತು. ಪುನಃ ಸ್ನೇಹಲತಾ, ಪುಷ್ಪಲತಾ ಬಂದು ನಾಲ್ಕು ದಿನ ಇದ್ದು ತಂದೆಗೆ ಸಮಾಧಾನ ಹೇಳಿ ಹೋಗಿದ್ದರು. ಹೋಗುವಾಗ ತಮ್ಮಲ್ಲಿಗೆ ಕರೆದುಕೊಂಡು ಹೋಗುವ ಅಭಿಲಾಷೆ ವ್ಯಕ್ತಪಡಿಸಿದರೂ ಡಾಕ್ಟರ ಚಿದಾನಂದ್ ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಲಿಲ್ಲ. ಹೆಂಡತಿ ಗತಿಸಿದ ತಿಂಗಳ ನಂತರ ಪುನಃ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು.
    ಬೆಳಿಗ್ಗೆ ಏಳುತ್ತಲೇ ಪ್ರತಿಯೊಂದಕ್ಕೂ ಹೆಂಡತಿಯ ಮೇಲೆ ಅವಲಂಬಿತರಾಗಿದ್ದ ಚಿದಾನಂದ್ರಿಗೆ ಈಗ ಅವಳ ಅನುಪಸ್ಥಿತಿಯಲ್ಲಿ ಅವಳಿಲ್ಲದಿರುವಿಕೆ ಬಹಳಷ್ಟು ಗಮನಕ್ಕೆ ಬರತೊಡಗಿತ್ತು. ಕೆಲವೊಂದು ಸಲ ಅವಳಿಲ್ಲದ ತಮ್ಮ ಜೀವನ ವ್ಯರ್ಥ ಎಂದೂ ಅನಿಸತೊಡಗಿತ್ತು. ಚಿದಾನಂದ್ ಮೈನಸ್ ಶೈಲಜಾ = ಜೀರೋ ಎಂದು ಅರಿವಾಗತೊಡಗಿತ್ತು. ಯಾವುದೇ ಒಂದು ವಸ್ತು ನಮ್ಮ ಜೊತೆಗಿದ್ದಾಗ ಅದರ ಪ್ರಾಮುಖ್ಯತೆ ಬಹಳಷ್ಟು ಸಾರೆ ಗೊತ್ತಾಗುವುದಿಲ್ಲ. ಅದಿಲ್ಲದಿರುವಾಗ ಅದರ ಪ್ರಾಮುಖ್ಯತೆ ಪ್ರತಿ ಕ್ಷಣದಲ್ಲೂ ಅರಿವಿಗೆ ಬರುತ್ತದೆ ಎಂಬ ನಿರ್ಸಗದ ನಿಯಮ ಚಿದಾನಂದರಿಗೆ ಅರಿವಾಗತೊಡಗಿತ್ತು. 2 ತಿಂಗಳು ಕಳೆಯುವಷ್ಟರಲ್ಲಿ ಅವರು ಅರ್ಧ ಇಳಿದಿದ್ದರು. ಚಿದಾನಂದರ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಗಳನ್ನು ಕಣ್ಣಾರೆ ಕಂಡ ಅವರ ಕೆಲವೊಂದಿಷ್ಟು ಜನ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು ಅವರಿಗೆ ಇನ್ನೊಂದು ಮದುವೆ ಮಾಡಿಕೊಳ್ಳಲು ಸಲಹೆ ಸೂಚನೆ ನೀಡಿದ್ದರು. ಕೆಲವೊಬ್ಬರು ಬಹಳಷ್ಟು ಒತ್ತಾಯ ಮಾಡಿದ್ದರು.
    ಚಿದಾನಂದರಿಗೆ 58ನೇ ವಯಸ್ಸು ನಡೆಯುತ್ತಿತ್ತು. ಇನ್ನೂ ಆರೇಳು ತಿಂಗಳುಗಳ ಸವರ್ೀಸು ಇತ್ತು. ರಾತ್ರಿ ಏಕಾಂತದಲ್ಲಿದ್ದಾಗ ಯೋಚನೆಗಳು ಅವರ ಮನಸ್ಸನ್ನು ಮುತ್ತಿಕ್ಕಿ ಮನಸ್ಸಿನ ಶಾಂತಿಯನ್ನು ಕದಡುತ್ತಿದ್ದವು. ಹೆಂಡತಿಯಿದ್ದಾಗ ಶಾಂತ ಸರೋವರದಂತಿದ್ದ ಅವರ ಮನಸ್ಸು ಈಗ ಉಕ್ಕುತ್ತಿರುವ ಜ್ವಾಲಾಮುಖಿ ಯಂತಾಗಿತ್ತು. ಶಾಂತ ಸರೋವರದಂತಿದ್ದ ಅವರ ಮನಸ್ಸಿನಲ್ಲಿ ಪುಟಿದೇಳುತ್ತಿದ್ದ ದೊಡ್ಡ ದೊಡ್ಡ ಅಲೆಗಳ ಆರ್ಭಟದ ಹೊಡೆತಕ್ಕೆ ನುಜ್ಜು ಗುಜ್ಜಾಗಿದ್ದರು. ಇನ್ನೊಂದು ಮದುವೆಯ ಬಗ್ಗೆ ಅವರ ಹಿತೈಷಿಗಳು ನೀಡಿದ್ದ ಸಲಹೆಯನ್ನು ಪರಾಮಷರ್ಿಸಿ ಈ ಇಳಿ ವಯಸ್ಸಿನಲ್ಲಿ ಸರಿಕಾಣುವುದಿಲ್ಲವೆಂದು ತೀಮರ್ಾನಿಸಿ, ಅದರ ಕಡೆಗೆ ಚಿತ್ತ ಹರಿಸುವುದನ್ನು ಬಿಟ್ಟರು. ದೇಹ, ಮನಸ್ಸುಗಳೆರಡೂ ಹೆಣ್ಣಿನ ಸಾಂಗತ್ಯಕ್ಕಾಗಿ ಆವಾಗಾವಾಗ ಎಳಸುತ್ತಿದ್ದರೂ, ಮನೋನಿಗ್ರಹದಿಂದ ತಮ್ಮಷ್ಟಕ್ಕೆ ತಾವೇ ಕಂಟ್ರೋಲ್ ಮಾಡಿಕೊಳ್ಳುತ್ತಿದ್ದರು. ತಮಗೆ ಅಡಿಗೆ ಮಾಡಲಿಕ್ಕೆ ಮತ್ತು ಮನೆಯ ಕೆಲಸಕ್ಕಾದರೂ ಒಬ್ಬ ವಯಸ್ಸಾದ ಅನಾಥ ಹೆಂಗಸನ್ನು ನೇಮಿಸಿಕೊಳ್ಳಬೇಕೆಂದು ಆಗಾಗ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಅದಕ್ಕೂ ಜನರ ಮಾತುಗಳುಬರಬಹುದೆಂದೂ ಆಲೋಚಿಸುತ್ತಿದ್ದರು. ತಮಗೆ ಆಪ್ತರೆನಿಸಿದವರಲ್ಲಿ ತಮ್ಮ ಮನಸ್ಸಿನಲ್ಲಿದ್ದ ವಿಚಾರವನ್ನು ಹೇಳಿಕೊಂಡಿದ್ದರು. ಗೆಳೆಯ ರಾಮಚಂದ್ರರಾವ್ ಅವರಲ್ಲಿ ಹೇಳಿದ್ದರು. ಅವರೂ ಸಹ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು.
    ಡಾಕ್ಟರ ಚಿದಾನಂದ್ ಇದೇ ವಿಚಾರದಲ್ಲಿದ್ದ ಒಂದು ದಿನ ಸಮೀಪದ ಹಳ್ಳಿಯ ಮಲ್ಲಮ್ಮ ಪೋಲಿಯೋ ಪೀಡಿತ ತನ್ನ ಮಗನನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಳು. ಹುಡುಗನಿಗೆ 105 ಡಿಗ್ರಿ ಜ್ವರ, ವಿಪರೀತ ಕೆಮ್ಮು, ಜೊತೆಗೆ ನಿಶ್ಯಕ್ತಿ. ಜ್ವರ ಬಂದು ಆಗಲೇ ಎರಡು ದಿನಗಳ ಮೇಲಾಗಿದ್ದವು. ಊರಲ್ಲಿಯೇ ನೋಡಿದ ವೈದ್ಯರಿಗೆ ಹುಡುಗನ ಜ್ವರ, ಕೆಮ್ಮು ಹತೋಟಿಗೆ ಬರದೇ ಇದ್ದುದರಿಂದ ಡಾಕ್ಟರ ಚಿದಾನಂದ್ ಅವರ ಹತ್ತಿರ ಕಳುಹಿಸಿದ್ದರು. ಹುಡುಗನಿಗೆ ಕೆಂಡದಂಥಹ ಜ್ವರ. 6ನೇಯ ವಯಸ್ಸಿನಲ್ಲಿ ಪೋಲಿಯೋದಿಂದ ಬಲಗಾಲುಊನವಾಗಿದೆ. ಜ್ವರ ಕಡಿಮೆಯಾಗದಿದ್ದರೆ ಅನಾಹುತ ಆಗಬಹುದೆಂದು ನೆರೆಹೊರೆಯವರು ಮಲ್ಲಮ್ಮನಿಗೆ ಹೇಳಿ ಹೆದರಿಸಿದ್ದರು. ಮೂವತ್ತೈದರ ಹರೆಯದ ಮಲ್ಲಮ್ಮ, ಮೂವತ್ತನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಳು. ಇದ್ದ ಎರಡು ಎಕರೆ ಹೊಲವನ್ನು ಸಂಬಂಧಿಕರಿಗೆ ಕೋರಿಗೆ ಕೊಟ್ಟು ಅವರಿವರ ಹೊಲ ಮನೆಗಳಲ್ಲಿ ಕೂಲಿ ನಾಲಿ ಮಾಡುತ್ತಾ ಹನ್ನೊಂದು ವರ್ಷದ ಮಗಳು ಸಂಗೀತಾ ಮತ್ತು 7 ವರ್ಷದ ಮಗ ಶಶಿಧರನನ್ನೂ ಸಲಹುತ್ತಿದ್ದಳು. ಊರಲ್ಲಿಯೇ ಇದ್ದ ಶಾಲೆಗೆ ಮಕ್ಕಳಿಬ್ಬರನ್ನೂ ಸೇರಿಸಿದ್ದಳು. ಸಂಬಂಧಿಕರ ಮನೆಯಲ್ಲಿ ಮಗಳನ್ನು ಬಿಟ್ಟು, ಮಗನನ್ನೂ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿ ಸಿದ್ದಳು. ಮಲ್ಲಮ್ಮ ತುಂಬಾ ಗಾಬರಿಯಲ್ಲಿದ್ದಳು.
    ಡಾಕ್ಟರ ಚಿದಾನಂದ್ ಅವರ ಸತತ ಶುಶ್ರೂಷೆಯಿಂದ 3ನೇ ದಿನ ಶಶಿಧರನ ಜ್ವರ ಕಡಿಮೆಯಾಗಿತ್ತು. ಅವನ ಆರೈಕೆಯಲ್ಲಿ ಅವರೂ ಎರಡು ದಿನ ನಿದ್ದೆಗೆಟ್ಟಿದ್ದರು. ಹುಡುಗನ ಆರೋಗ್ಯದ ಏರುಪೇರು ಅವರಿಗೊಂದು ರೀತಿಯ ಸವಾಲಾಗಿತ್ತು. ಆಸ್ಪತ್ರೆಗೆ ಬಂದಾಗಿನಿಂದ ಮಲ್ಲಮ್ಮ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲ. 4ನೇ ದಿನ ಮಗಗೆ ಜ್ವರ ಕಡಿಮೆಯಾದಾಗ ಮಲ್ಲಮ್ಮನ ಮುಖದಲ್ಲಿ ಕೊಂಚ ಗೆಲುವು ಮೂಡಿತ್ತು. ಆಗ ಅವಳಿಗೆ ಇನ್ನೊಂದು ಚಿಂತೆ ಕಾಡತೊಡಗಿತ್ತು. ಡಾಕ್ಟರರು ಎಷ್ಟು ದುಡ್ಡು ಕೇಳುತ್ತಾರೋ ಏನೋ ಎಂದು.
    ಮಲ್ಲಮ್ಮ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ದಿನದಿಂದ ಸೂಕ್ಷ್ಮವಾಗಿ ಅವಳನ್ನು ಅವಲೋಕಿಸುತ್ತಿದ್ದರು ಡಾಕ್ಟರರು. ಎಣ್ಣೆಗೆಂಪು ಬಣ್ಣದ ತೆಳು ಮೈಕಟ್ಟಿನ ಸಾಧಾರಣ ರೂಪಿನ ಹೆಂಗಸು ಆಕೆ. ಮಾನ, ಮಯರ್ಾದೆಗೆ ಅಂಜಿ, ಅಳುಕುವ ಹೆಂಗಸು ಆಕೆಯೆಂದು ಅವರಿಗೆ ಅನಿಸಿತ್ತು. ಮಗನಿಗಾಗಿ ಮಿಡಿಯುತ್ತಿದ್ದ ಆಕೆಯ ಮಾತೃ ಹೃದಯದ ಬಗ್ಗೆ ಅವರಿಗೆ ಅಭಿಮಾನವೆನ್ಸಿತ್ತು. ಶಶಿಧರನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ದಿನ ಮಲ್ಲಮ್ಮನನ್ನು ತಮ್ಮ ಚೇಂಬರಿಗೆ ಕರೆಸಿದ್ದರು ಡಾಕ್ಟರ್ ಚಿದಾನಂದ್. ದುಡ್ಡು ಕೇಳಲು ಕರೆಸಿರಬೇಕೆಂಬ ಚಿಂತೆಯಲ್ಲಿ ಮೈಯನ್ನು ಹಿಡಿಯನ್ನಾಗಿ ಮಾಡಿಕೊಂಡು ಹೋಗಿ ಡಾಕ್ಟರರ ಎದುರು ನಿಂತಿದ್ದಳು ಮಲ್ಲಮ್ಮ.
    ಡಾಕ್ಟರರು ತಮ್ಮ ಫೀಸಿನ ಬಗ್ಗೆ ಚಕಾರವೆತ್ತದೆ, ಆಕೆಯ ಬಗ್ಗೆ ವಿಚಾರಿಸಿದ್ದರು. ಆಕೆ ಚುಟುಕಾಗಿ ತನ್ನ ಬಗ್ಗೆ ವಿವರಿಸಿದ್ದಳು. ಅಡುಗೆ ಮಾಡುವುದರ ಬಗ್ಗೆ ವಿಚಾರಿಸಿದ್ದರು. ರೊಟ್ಟಿ, ಚಪಾತಿ, ಪಲ್ಲೆ, ಅನ್ನ, ಸಾರು ಚೆನ್ನಾಗಿ ಮಾಡುವುದಾಗಿ ತಿಳಿಸಿದಳು. ಏಳನೇ ಕ್ಲಾಸಿನವರೆಗೂ ಶಾಲೆ ಓದಿರುವುದಾಗಿ ಹೇಳಿದಳು. ತಮ್ಮ ಮನೆಯಲ್ಲಿ ಅಡುಗೆ, ಕಸ, ಮುಸುರೆ ಮಾಡಿಕೊಂಡಿರುವಂತೆ ತಮ್ಮ ಬೇಡಿಕೆ ಮುಂದಿಟ್ಟಿದ್ದರು ಚಿದಾನಂದ್ ನೇರವಾಗಿ. ಆಕೆಯ ಮಕ್ಕಳಿಗೆ ತಾವೇ ವಿದ್ಯಾಭ್ಯಾಸ ಕೊಡಿಸುವುದಾ ಗಿಯೂ ಹೇಳಿದರು. ಊರಿಗೆ ಹೋಗಿ ತನ್ನ ಮಗಳು ಹಾಗೂ ತನ್ನವರೆನ್ನುವವರ ಜೊತೆ ಮಾತಾಡಿ ಮೂರು ದಿನಗಳಲ್ಲಿ ತನ್ನ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಳು. ಬರುವುದಿದ್ದರೆ ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿದ್ದಳು ಮಲ್ಲಮ್ಮ ಯಾವುದೇ ಮುಚ್ಚುಮರೆಯಿಲ್ಲದೆ. ಅವಳಿಗೆ ಬರುವುದಕ್ಕೆ ಅನುಕೂಲವಾಗಲಿ ಎಂದು ತಾವೇ ಸ್ವಲ್ಪ ಹಣವನ್ನು ಮಲ್ಲಮ್ಮನಿಗೆ ಕೊಟ್ಟು ಕಳುಹಿಸಿದ್ದರು ಡಾಕ್ಟರ್ ಚಿದಾನಂದ್ ಅಂದು.
    ಆಸ್ಪತ್ರೆಯಿಂದ ಮಗನನ್ನು ಊರಿಗೆ ಕರೆದುಕೊಂಡು ಹೋದ ದಿನ ರಾತ್ರಿಯಿಡೀ ಮಲ್ಲಮ್ಮನಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಡಾಕ್ಡರರು ಹೇಳಿದ್ದ ಮಾತುಗಳೇ ಅವಳ ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ತಾನು ಅವರ ಮನೆಯಲ್ಲಿ ಕಸ, ಮುಸುರೆ, ಅಡುಗೆಗೆ ಹೋದರೆ, ತನಗೂ ತನ್ನ ಮಕ್ಕಳಿಗೂ ಒಂದು ನೆಲೆ ಸಿಕ್ಕಂತಾಗುತ್ತದೆ. ಹೇಗೂ ಮಕ್ಕಳ ವಿದ್ಯಾಭ್ಯಾಸವನ್ನು ಅವರು ನೋಡಿಕೊಳ್ಳುದಾಗಿ ತಿಳಿಸಿದ್ದಾರೆ. ಈಗಿನ ಮಳೆ, ಬೆಳೆ ನನ್ನ ಆದಾಯ ನೋಡಿದರೆ, ಬಹಳೆಂದರೆ ಹತ್ತನೇ ಕ್ಲಾಸಿನವರೆಗೆ ನಾ ಮಕ್ಕಳಿಗೆ ಓದಿಸಬಹುದು. ಡಾಕ್ಟರರ ಹೆಂಡತಿ ತೀರಿಕೊಂಡು ಸ್ವಲ್ಪ ದಿನಗಳಾಗಿರುವುದರಿಂದ ಮನೆಗೆಲಸದ ಜೊತೆಗೆ ತನ್ನನ್ನು ತಮ್ಮ ಭೋಗಕ್ಕೆ ಬಳಸಿಕೊಳ್ಳಬಹುದೇ? ಈ ಮನುಷ್ಯನನ್ನು ನೋಡಿದರೆ ಹಂಗ ಕಾಣುವುದಿಲ್ಲ. ನಾ ಆಸ್ಪತ್ರೆಯಲ್ಲಿದ್ದಾಗ ಅವರ ನೋಟದಲ್ಲಿ ಅಂಥಹದ್ದೇನು ಕಾಣಲಿಲ್ಲ. ಆದರೆ ಯಾವ ಹುತ್ತದೊಳಗೆ ಯಾವ ಹಾವೋ ಏನೋ? ನನ್ನದು ಅಂತ ಸ್ವಂತದ್ದು ಏನಿದೆ? ಈ 2 ಮಕ್ಕಳಿಗಾಗಿ ಅಂತ ಈ ನನ್ನ ದೇಹ ಕಟಿಪಿಟಿ ಪಡುತ್ತಿದೆ ಅಷ್ಟೇ. ನಾ ಮಾಡುವುದೆಲ್ಲಾ ಈಗ ಮಕ್ಕಳಿಗಾಗಿ ಅಲ್ಲವೇ? ಡಾಕ್ಟರರ ಮನೆಗೆ ಹೋದ ಮೇಲೆ ಅವರು ನನ್ನ ದೇಹದ ಮೇಲೆ  ಕಣ್ಣಾಕಿದರೆ ನಾ ನನ್ನನ್ನು ಸಂತೋಷದಿಂದ ಅವರಿಗೆ ಅಪರ್ಿಸಿಕೊಂಡರೆ ತಪ್ಪೇನೂ ಅನಿಸುವುದಿಲ್ಲ ಎಂದೆನ್ಸಿತ್ತಿದೆ. ಯಾಕೆಂದರೆ ಅವರು ನನ್ನ ಮಕ್ಕಳಿಗೆ ದಾರಿ ದೀಪವಾಗಲಿದ್ದಾರೆ. ಈಗಲೇ ಇಂಥಹ ವಿಚಾರಗಳನ್ನು ಮಾಡುವುದೇಕೆ? ಅಂಥಹ ಪ್ರಸಂಗ ಬಂದರೆ ಆವಾಗ ವಿಚಾರ ಮಾಡಿದರಾಯಿತು ಅಲ್ಲವೇ? ಸಧ್ಯಕ್ಕೆ ಮಕ್ಕಳೊಂದಿಗೆ ಡಾಕ್ಟರ ಮನೆಗೆ ಹೋಗಿ ಕೆಲಸಕ್ಕೆ ಸೇರಿಕೊಂಡರಾಯಿತು ಎಂದು ಮಲ್ಲಮ್ಮ ಅಂತಿಮ ನಿಧರ್ಾರಕ್ಕೆ ಬರುವುದರೊಳಗಾಗಿ ಪೂರ್ವ ದಿಕ್ಕಿನಲ್ಲಿ ನೇಸರ ತನ್ನ ಹೊಂಗಿರಣಗಳನ್ನು ಪಸರಿಸುತ್ತಾ ಮೇಲೇರತೊಡಗಿದ್ದ. ಬೆಳಿಗ್ಗೆ ಮಗಳು ಸಂಗೀತಾ ಮತ್ತು ಶಶಿಧರಗೆ ಡಾಕ್ಟರು ಹೇಳಿದ್ದನ್ನು ತಿಳಿಸಿ, ಒಪ್ಪಿಸಿ, ಗಂಟು ಮೂಟೆ ಕಟ್ಟಿಕೊಂಡು ಡಾಕ್ಟರರ ಮನೆ ಸೇರಿದ್ದಳು.
    ಸಂಗೀತಾ ಮತ್ತು ಶಶಿಧರ ಇಬ್ಬರನ್ನೂ ಒಳ್ಳೆಯ ಶಾಲೆಗೆ ಸೇರಿಸಿದ್ದರು ಡಾಕ್ಟರರು. ಮಲ್ಲಮ್ಮ ಡಾಕ್ಟರರ ಮನೆಯ ಶಿಷ್ಟಾಚಾರಗಳಿಗೆ ಹೊಂದಿಕೊಳ್ಳತೊಡ ಗಿದ್ದಳು. ಅವರ ಮನೆಯ ರೀತಿ, ರಿವಾಜುಗಳನ್ನು ರೂಢಿಸಿಕೊಳ್ಳುತ್ತಾ ರುಚಿ, ರುಚಿಯಾದ ಅಡುಗೆ ಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಳು. ತನ್ನ ವೇಷ, ಭೂಷಣಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಆಧುನಿಕತೆಗೆ ತನ್ನನ್ನು ಒಡ್ಡಿಕೊಳ್ಳತೊಡಗಿದ್ದಳು. ತನ್ನ ಆಡು ಭಾಷೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿ ಕೊಂಡಿದ್ದಳು. ಪಟ್ಟಣಕ್ಕೆ ಬಂದು ಪಟ್ಟಣದವಳಂತೆಯೇ ಆಗಲು ಸತತ ಪ್ರಯತ್ನ ನಡೆಸಿದ್ದಳು.
    ಮಲ್ಲಮ್ಮ ಡಾಕ್ಟರರ ಮನೆಗೆ ಬಂದು ಎರಡು ತಿಂಗಳು ಕಳೆದಿದ್ದವು. ಅವಳ ನಡತೆ, ಕೆಲಸದ ಪರಿ, ಕೆಲಸದಲ್ಲಿನ ಅಚ್ಚುಕಟ್ಟುತನ ಡಾಕ್ಟರರ ಮನಸ್ಸಿಗೆ ತುಂಬಾ ಹಿಡಿಸಿದ್ದವು. ಮಕ್ಕಳಿಬ್ಬರೂ ಸಾಮಾನ್ಯವಾಗಿ ತಮ್ಮ ದೈನಂದಿನ ಹೋಂವರ್ಕನ್ನು ಮುಗಿಸಿಕೊಂಡು ಊಟ ಮಾಡಿ ಒಂಭತ್ತುವರೆಗೆಲ್ಲಾ ಮಲಗಿ ಬಿಡುತ್ತಿದ್ದರು. ಡಾಕ್ಟರರು ಒಂಭತ್ತುವರೆಯ ನಂತರ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ನಂತರ ಮಲ್ಲಮ್ಮನ ಊಟ. ಊಟದ ನಂತರ ಅಡಿಗೆ ಮನೆಯಲ್ಲಿನ ಕೆಲಸ ಮುಗಿಸಿಕೊಂಡು ಹಾಸಿಗೆಗೆ ಬೆನ್ನು ಹಚ್ಚುವಷ್ಟರಲ್ಲಿ ರಾತ್ರಿ ಹತ್ತುವರೆ ಗಂಟೆಯಾಗುತ್ತಿತ್ತು ಆಕೆಗೆ.
    ಅಂದು ಮಲ್ಲಮ್ಮ ತನ್ನ ಕೆಲಸಗಳನ್ನೆಲ್ಲಾ ಮುಗಿಸಿದಾಗ ಹತ್ತುವರೆ ದಾಟಿತ್ತು. ಮಕ್ಕಳೊಂದಿಗೆ ಮಲಗುತ್ತಿದ್ದ ಆಕೆ ತಮ್ಮ ರೂಮಿಗೆ ಹೋಗದೇ, ಡಾಕ್ಟರರು ಮಲಗುವ ಕೋಣೆಯ ಬಾಗಿಲು ಬಡಿದಿದ್ದಳು. ಬಾಗಿಲನ್ನು ತೆಗೆದ ಡಾಕ್ಟರರು, ಏನು ಮಲ್ಲಮ್ಮ, ಆರಾಮ ಇದೆ ತಾನೆ? ಮಕ್ಕಳು ಹುಷಾರು ಇರುವವಲ್ಲವೇ? ಅವಳ ಮತ್ತು ಮಕ್ಕಳ ಕ್ಷೇಮ ಸಮಾಚಾರ ವಿಚಾರಿಸತೊಡಗಿದ್ದರು. ಎಲ್ಲರೂ ಚಿನ್ನಾಗಿಯೇ ಇದ್ದೇವೆ ಸಾಹೇಬ್ರೆ. ನನ್ನ ಕುಟುಂಬದ ಮೇಲೆ ನಿಮ್ಮ ಋಣದ ಭಾರ ಜಾಸ್ತಿಯಾಗುತ್ತಿದೆ. ಅದಕ್ಕೇ,... ಅದಕ್ಕೇ... ನಾನೊಂದು ತೀಮರ್ಾನಕ್ಕೆ ಬಂದಿದ್ದೇನೆ ಸಾಹೇಬ್ರೇ. ನನ್ನನ್ನೇ ತಮಗೆ ಅಪರ್ಿಸಿಕೊಂಡು ನಮ್ಮ ಮೇಲಿರುವ ಋಣದ ಭಾರ ಕಡಿಮೆ ಮಾಡಿಕೊಳ್ಳಬೇಕೆಂದಿದ್ದೇನೆ ಎಂದು ಮಲ್ಲಮ್ಮ ಉಸಿರು ಬಿಗಿ ಹಿಡಿದುಕೊಂಡು ಒಂದೊಂದೇ ಶಬ್ದ ಹೇಳಿದ್ದಳು.
    ಏನು? ನೀ ಏನು ಹೇಳ್ಲಿಕ್ಕತ್ತೀ ಅಂತ ನಿನಗೆ ಅರಿವು ಐತೆನು ಮಲ್ಲಮ್ಮ? ನೀ ನಮ್ಮ ಮನೆಗೆ ಬಂದಾಗಿನಿಂದ ನನ್ನ ಮನಸ್ಸು ದ್ವಂದ್ವದಲ್ಲಿತ್ತು. ನನಗ ಹೆಂಡ್ತಿ ಇಲ್ಲ. ನಿನಗೆ ಗಂಡ ಇಲ್ಲ. ಇಬ್ಬರೂ ದೈಹಿಕ ಕಾಮನೆಗಳನ್ನು ಯಾವ ನಿಭರ್ಿಡೆಯಿಲ್ಲದೇ ತಣಿಸಿ ಕೊಳ್ಳಬಹುದು ಎಂದು ನಾನೂ ಸಹ ಎಷ್ಟೋ ಸಾರೆ ಯೋಚಿಸಿರುವೆ. ಹೇಗೂ ನೀ ನಾ ಹೇಳಿದಂಗ ಕೇಳುವಿ ಎಂದು ನನಗೆ ಖಾತ್ರಿ ಇತ್ತು. ಆದ್ರ ಬಹಳ ಆಳವಾಗಿ ಯೋಚಿಸಿದ ಮೇಲೆ, ನಾ ಆ ರೀತಿ ಯೋಚಿಸುವುದು ಸರಿಯಲ್ಲ ಎಂದು ಅನಿಸ ತೊಡಗಿತು. ಭಾರತದ ನಾರಿಗೆ ತನ್ನತನ ಉಳಿಸಿಕೊ ಳ್ಳುವುದರಲ್ಲಿ ಹೆಚ್ಚಿನ ತೃಪ್ತಿ ಇದೆ ಎಂಬ ತಿಳುವಳಿಕೆ ಬರತೊಡಗಿತು. ನಿನ್ನ ಭಾವನೆಗಳಿಗೆ ಘಾಸಿ ಮಾಡುವುದಕ್ಕಿಂತಲೂ, ಪವಿತ್ರ ಸಂಬಂಧವನ್ನೇಕೆ ಹುಟ್ಟುಹಾಕಬಾರದು? ಎಂಬ ವಿಚಾರ ಗಟ್ಟಿಯಾಯಿತು ಮನದಲ್ಲಿ. ನನ್ನ ಗಂಡು ಮಗನ ಅಡ್ರೆಸ್ ಇದುವರೆಗೂ ಪತ್ತೆ ಆಗಿಲ್ಲ. ಹೆಣ್ಣು ಮಕ್ಕಳಿಬ್ಬರೂ ದೂರದ ದೇಶ, ದೂರದ ಊರಿನಲ್ಲಿ ಇದ್ದಾರೆ. ಇಳಿ ವಯಸ್ಸಿನಲ್ಲಿ ಅವರಿಂದ ನನಗೇನೂ ಕಿಂಚಿತ್ತು ಸಹಾಯ ಆಗಲಿಕ್ಕಿಲ್ಲ. ನಿನ್ನನ್ನೇ ನನ್ನ ಸ್ವಂತ ಮಗಳೆಂದೇಕೆ ತಿಳಿದುಕೊಳ್ಳಬಾರದು? ಸಂಗೀತಾ, ಶಶಿಧರ ಅವರನ್ನೇ ನನ್ನ ಸ್ವಂತ ಮೊಮ್ಮಕ್ಕಳೆಂದೇಕೇ ತಿಳಿದುಕೊಳ್ಳಬಾರದು? ಎಂದುಕೊಂಡೆ ನನ್ನಲ್ಲೇ. ನೋಡಮ್ಮಾ, ನಿನ್ನಿಂದ ನನ್ನ ಮೇಲೆ ಯಾವ ತರಹದ ಋಣದ ಭಾರವೂ ಇಲ್ಲ, ಇಬ್ಬರೂ ಪವಿತ್ರ ಸಂಬಂಧಕ್ಕೆ ನಾಂದಿ ಹಾಡೋಣ. ಇಂದಿನಿಂದ ನೀನೇ ನನ್ನ ಸ್ವಂತ ಮಗಳು, ನಿನ್ನ ಮಕ್ಕಳೇ ನನ್ನ ಸ್ವಂತ ಮೊಮ್ಮಕ್ಕಳು. ಈಗಾಗಲೇ ಬಹಳ ಹೊತ್ತಾಗಿದೆ. ಹೋಗಿ ಹಾಯಾಗಿ ಮಲಗು ಎಂದು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದರು ಡಾಕ್ಟರ್ ಚಿದಾನಂದ್.
    ಅಪ್ಪಾಜಿ, ನನ್ನ ಕ್ಷಮಿಸಿ ಬಿಡಿರಿ ಎಂದು ಮಲ್ಲಮ್ಮ ಡಾಕ್ಟರರ ಪಾದಗಳಿಗೆರಗಿ, ಅವರೆದೆಯಲ್ಲಿ ತನ್ನ ಮುಖ ಹುದುಗಿಸಿ ಸಾಂತ್ವನ ಪಡೆಯತೊಡಗಿದಳು. ಆಗ ಡಾಕ್ಟರ್ ಚಿದಾನಂದರಿಗೆ ನೆನಪಾದದ್ದು ಅಲ್ಲಮ ಪ್ರಭುರವರ ವಚನ. ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ.

ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)

No comments:

Post a Comment

Thanku