Thursday, October 27, 2011

ನಾನು ನಿಮ್ಮ ಮಿತ್ರ ನನ್ನನೇಕೆ ಸಾಯಿಸುತ್ತೀರಿ.. Dr.Mavinkatti

ಉರಗ ಜಾತಿಗೆ ಸೇರಿದ ಪ್ರಾಣಿಯೊಂದನ್ನು ನಾವು ನೋಡಿದರೆ ಸಾಕು, ಅದನ್ನು ಹೊಡೆದು ಸಾಯಿಸುತ್ತೇವೆ.

ಊಸರವಳ್ಳಿ ಜೀವಂತವಿರುವಾಗ ಯಾರೊಬ್ಬರಿಗೂ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ, ಜನಸಾಮಾನ್ಯರು ಮಾತ್ರ ಅದನ್ನು ಕಂಡಲ್ಲಿಯೇ ಸಾಯಿಸಿಯೇ ಮುಂದೆ ಹೋಗುತ್ತಾರೆ.

ಆ ಪ್ರಾಣಿ ಹಾವು ಎಂದರೆ, ನಿಮ್ಮ ಊಹೆ ಖಂಡಿತ ತಪ್ಪಾಗುತ್ತದೆ.

ಇಲ್ಲಿ ನಾವುಗಳು ವಿವರಣೆ ನೀಡಬಯಸುತ್ತಿರುವ ಪ್ರಾಣಿ ಮೊದಲಿಗೆ ಹೇಳಿದಂತೆ ಉರಗ ಜಾತಿಗೆ ಸೇರಿರುವ ಗೋಸುಂಬಿ "ಊಸರವಳ್ಳಿ".

ಒಬ್ಬ ವ್ಯಕ್ತಿ ಮೋಸ ಮಾಡಿದಾಗ, ಆತನನ್ನು ನಾವುಗಳು ಗೋಸುಂಬಿಗೆ ಹೋಲಿಸುತ್ತೇವೆ. ಅಂತಹ ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿದರೆ ಊಸರವಳ್ಳಿಯನ್ನು ಯಾವ ಸಂದರ್ಭದಲ್ಲಿ, ಯಾರೊಬ್ಬರು ನೆನಪಿಸುವುದಿಲ್ಲ.

ಊಸರವಳ್ಳಿಯ ಕುರಿತು ಒಂದಿಷ್ಟು...

* ಪರಿಸರಕ್ಕೆ ತಕ್ಕಂತೆ, ವೈರಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಣ್ಣ ಬದಲಿಸುವ ಪ್ರಾಣಿ.

* ಸಾವಯುವ ಕೃಷಿಕರಿಗೆ ಬಹುಪಯೋಗಿ ಯಾಗಿರುವ ಊಸರವಳ್ಳಿ, ಹೊಲ (ರಸಾಯನಿಕ ಗೊಬ್ಬರಗಳನ್ನು ಹಾಕಿದ ಹೊಲಗದ್ದೆಗಳನ್ನು ಹೊರತುಪಡಿಸಿ) ಗಳಲ್ಲಿ ಬೆಳೆನಾಶ ಮಾಡುವಂತಹ ಕ್ರಿಮಿಕೀಟಗಳನ್ನು ಸೇವಿಸಿ ಬದುಕುತ್ತದೆ.

* ಬಹಳಷ್ಟು ನಿಧಾನವಾಗಿ ಈ ಪ್ರಾಣಿ ಚಲಿಸುತ್ತದೆ ಮತ್ತು ಇದಕ್ಕೆ ಹರಿತವಾದ ಹಲ್ಲುಗಳಿರುವುದಿಲ್ಲ. ಅಂದಮೇಲೆ ಇನ್ನೊಬ್ಬರಿಗೆ ಕಚ್ಚುವ ಪ್ರಶ್ನೆಯೇ ಬರುವುದಿಲ್ಲ. ಮರಗಿಡಗಳನ್ನು ಹತ್ತಲು ಸಣ್ಣದಾದ ಉಗುರುಗಳು ಮಾತ್ರ ಇರುತ್ತವೆ.

ಊಸರವಳ್ಳಿಗಿಂತ ಹಾವು ಎಷ್ಟೋ ವಿಷಕಾರಿ ಇದ್ದರೂ ಜನಮಾತ್ರ ಹಾವಿಗಿಂತ ಊಸರವಳ್ಳಿಯನ್ನೇ ಹೊಡೆದು ಸಾಯಿಸಿತ್ತಿರುವುದು ವಿಷಾದನೀಯ. ಮೂಡನಂಬಿಕೆಯ ಪರಮಾವಧಿಯಡಿ ಇದು ಜನಸಾಮಾನ್ಯರಿಗೆ ಬಲಿಯಾಗುತ್ತಿರುವುದು ಮಾತ್ರ ದುರಂತ.

ಮಾನವನು ಊಸರವಳ್ಳಿಯನ್ನು ಸತ್ತ ನಂತರ ಇನ್ನೊಬ್ಬರಿಗೆ ಹಾನಿ ಮಾಡಲು ಬಳಸುತ್ತಾನೆ. ಆದರೆ, ಈ ಪ್ರಾಣಿ ಜೀವಂತವಿರುವಾಗ ಯಾರೊಬ್ಬರಿಗೂ ಹಾನಿಯನ್ನುಂಟು ಮಾಡುವುದಿಲ್ಲ.

ಪ್ರಕೃತಿಯಲ್ಲಿ ಊಸರವಳ್ಳಿಯ ಸಂತತಿ ಕಡಿಮೆಯಾಗುತ್ತಿದೆ. ಅಪರೂಪಕ್ಕೊಮ್ಮೆ ಈ ಪ್ರಾಣಿ ಜನಸಾಮಾನ್ಯರಿಗೆ ಕಣ್ಣಿಗೆ ಬೀಳುತ್ತಿರುವದರಿಂದ ಇದರ ಮೇಲೆ ಹಲವು ಊಹಾಪೋಹಗಳು ಸೃಷ್ಟಿಯಾಗಿವೆ.

ಇದರ ನೆರಳು, ಉಸಿರು ಬಿದ್ದರೆ, ಮನುಷ್ಯ ಸಾಯುತ್ತಾನೆಂಬ ನಂಬಿಕೆ ಜನರಲ್ಲಿ ಉಳಿದುಕೊಂಡಿದೆ. ಅದನ್ನು ಹುಸಿಗೊಳಿಸಲೆಂದೆ, ಚಿತ್ರದಲ್ಲಿ ಖ್ಯಾತ ಅರವಳಿಕೆ ತಜ್ಞರಾದ ಡಾ.ರವೀಂದ್ರನಾಥ ಮಾವಿನಕಟ್ಟಿಯವರು ಊಸರವಳ್ಳಿಯನ್ನು ಕೈಯಲ್ಲಿ ಹಿಡಿದಿದ್ದಾರೆ.

ಜನಸಾಮಾನ್ಯರಿಗೆ ಊಸರವಳ್ಳಿಯ ಕುರಿತು ಸರಿಯಾದ ಮಾಹಿತಿ ಇಲ್ಲದಿದ್ದಕ್ಕೆ, ಅದರ ಸಂತತಿಯೂ ಕೂಡ ನಶಿಸಿ ಹೋಗುತ್ತಿದೆ.

ಊಸರವಳ್ಳಿಯಲ್ಲಿ ನಾನಾ ಪ್ರಭೇದಗಳಿದ್ದು, ಆಯಾ ಪ್ರಭೇದಗಳ ಊಸರವಳ್ಳಿಗಳು ಮಾತ್ರ ಕೆಲವು ಬಣ್ಣವನ್ನು ಬದಲಾಯಿಸುತ್ತವೆ.

ಇದರ ಎರಡು ಕಣ್ಣುಗಳು ಬೇರೆ ಬೇರೆ ದೃಶ್ಯಗಳನ್ನು ನೋಡುತ್ತವೆ. ಅದರ ಕಾಲುಗಳು ಗಿಳಿಯ ಪಾದಗಳನ್ನು ಹೋಲುತ್ತವೆ. ಬೇರೆ ಪ್ರಾಣಿಗಳಂತೆ ಇದು ವೇಗವಾಗಿ ಓಡುವುದಿಲ್ಲ. ಊಸರವಳ್ಳಿಯ ಮೆದುಳಿನಿಂದ ಸಂದೇಶ ಬಂದಾಗ ಮಾತ್ರ ಅದು ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸಿ, ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಇದರ ಚರ್ಮವು ಪಾರದರ್ಶಕವಾಗಿದ್ದು, ಈ ಚರ್ಮದ ಕೆಳಬಾಗದಲ್ಲಿ ಬಣ್ಣವನ್ನು ಬದಲಾಯಿಸುವ ಜೀವಕೋಶಗಳಿರುತ್ತವೆ. ಈ ಜೀವಕೋಶಗಳ ಆಕೃತಿ ಹೆಚ್ಚುಕಡಿಮೆ ಆಗುವುದರಿಂದ ತನ್ನಿಂದತಾನೇ ಬಣ್ಣ ಬದಲಾಯಿಸುತ್ತದೆ.

No comments:

Post a Comment

Thanku